ಬೆಂಗಳೂರು: ‘ಬಿಗ್ ಬಾಸ್ ಕನ್ನಡ ಒಟಿಟಿ 1’ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಅವರು ಸೇವಂತಿ ಎನ್ನುವ ಬಡ ಹುಡುಗಿಯನ್ನು ಸಾಕಲು ಪಡೆದಿರೋದು ಕಾನೂನು ಬಾಹೀರ ಆಗಿದೆ. ಈ ಸಂಬಂಧ ಅವರ ವಿರುದ್ಧ ದೂರು ದಾಖಲಾಗಿತ್ತು. ಈ ದೂರನ್ನು ಆಧರಿಸಿ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸರು ನಟಿಯನ್ನು ಬಂಧಿಸಿದ್ದಾರೆ. ಇದೀಗ ಸೋನು ಗೌಡ ವಿಚಾರಣೆ ವೇಳೆ ನೀಡಿರುವ ಹೇಳಿಕೆ ಹೀಗಿದೆ:
ವಿಚಾರಣೆ ವೇಳೆ ಸೋನು ಗೌಡ ʻʻನಮ್ಮ ಅಪಾರ್ಟ್‌ಮೆಂಟ್ ಬಳಿ ಗಾರೆ ಕೆಲಸ ಮಾಡುತ್ತಿದ್ದ ದಂಪತಿಯ ಮಗಳು ಅವಳು. ಮನೆಗೆ ಬಂದು ಆಟ ಆಡುತ್ತಿತ್ತು. ಊರಿಗೆ ಹೋದಾಗ ಹುಷಾರಿಲ್ಲದಾಗ ಕೂಡ ಕರೆ ಮಾಡಿದ್ದಳು. ಹೀಗಾಗಿ ಆ ಮಗುವನ್ನ ನಾನೇ ಸಾಕಿಕೊಳ್ಳುವುದಾಗಿ ಹೇಳಿ ರಾಯಚೂರಿನಿಂದ ಕರೆ ತಂದೆ. ದತ್ತು ತೆಗೆದುಕೊಳ್ಳಲು ಸಿದ್ಧತೆ ಕೂಡ ಮಾಡಿದೆ. ಸೋಷಿಯಲ್ ಮೀಡಿಯಾದಲ್ಲಿ ಬಂದ ಹಣವನ್ನ ಆಕೆಯ ಜೀವನ ರೂಪಿಸಲು ಉಪಯೋಗಿಸಬೇಕೆಂದು ಇದ್ದೆ. ಆದರೆ ದತ್ತು ತೆಗೆದುಕೊಳ್ಳುವ ಪ್ರೋಸೆಸ್ ಇಷ್ಟು ದೊಡ್ಡದು ಎಂದು ಗೊತ್ತಿರಲಿಲ್ಲ” ಎಂದು ಹೇಳಿಕೆ ನೀಡಿದ್ದಾರೆ.
ರೂಲ್ಸ್ ಏನು ಹೇಳುತ್ತವೆ?
ದತ್ತು ತೆಗೆದುಕೊಳ್ಳಬೇಕಾದರೆ ಕೆಲವೊಂದು ನಿಯಮ ಪಾಲಿಸಬೇಕಾಗುತ್ತದೆ. ದತ್ತು ತೆಗೆದುಕೊಳ್ಳುವ ತಾಯಿ ಮತ್ತು ಮಗುವಿಗೆ 25 ವರ್ಷಗಳ ಅಂತರವಿರಬೇಕು. ಆದರೆ ಇಲ್ಲಿ ಮಗುವಿಗೆ 8 ವರ್ಷ ಮತ್ತು ಆಕೆಗೆ 26 ವರ್ಷ. ಹೀಗಾಗಿ ಅದು ನಿಯಮ ಉಲ್ಲಂಘನೆ ಮಾಡಿದಂತಾಗತ್ತದೆ. ಇನ್ನು ರೀಲ್ಸ್ ಮಾಡುವ ಉದ್ದೇಶದಿಂದ ಸೋನು ಮಗುವನ್ನು ತನ್ನಿಷ್ಟ ಬಂದಂತೆ ಬಳಸಿಕೊಂಡಿದ್ದಾಳೆಂಬ ಆರೋಪ ಕೂಡ ಇದೆ. ಮಕ್ಕಳ ಕಲ್ಯಾಣ ಸಮಿತಿ ಈ ಎಲ್ಲ ಆಧಾರದ ಮೇಲೆ ಸೋನು ವಿರುದ್ಧ ದೂರು ದಾಖಲಿಸಿದೆ.
ಇದನ್ನೂ ಓದಿ: Sonu Srinivas Gowda: ದತ್ತು ಪ್ರಕರಣದಲ್ಲಿ ಸೋನು ಗೌಡ ಅರೆಸ್ಟ್; ರೂಲ್ಸ್ ಏನು ಹೇಳುತ್ತವೆ?
ಸೇವಂತಿ ಪರಿಚಯವಾಗಿದ್ದು ಹೇಗೆ?
ಕೆಲ ತಿಂಗಳುಗಳಿಂದ ಸೋನು ಗೌಡ (Sonu Srinivas Gowda) ಅವರು ಸೇವಂತಿ ಎನ್ನುವ ಹುಡುಗಿಗೆ ಮನೆಯಲ್ಲಿ ಊಟ ಹಾಕಿಸೋದು, ಮೂಗು ಚುಚ್ಚಿಸಿ ಮೂಗುತಿ ಹಾಕೋದು, ಊಟ ಮಾಡಿಸುವ ವಿಡಿಯೊ ಮಾಡಿ, ಅದನ್ನು ಯುಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದರು. “ಮನೆಯ ಸುತ್ತ ಇರುವ ನಾಯಿಗಳಿಗೆ ಬಿಸ್ಕಟ್ ಹಾಕುವಾಗ ನನಗೆ ಸೇವಂತಿ ಎನ್ನುವ 7 ವರ್ಷದ ಮಗುವಿನ ಪರಿಚಯ ಆಯ್ತು ಎಂದು ಸೋನು ಹೇಳಿಕೊಂಡಿದ್ದರು. ಮಾತ್ರವಲ್ಲ ಈ ಮುಂಚೆ ಸೇವಂತಿಯನ್ನು ದತ್ತು ತೆಗೆದುಕೊಳ್ಳುತ್ತೇನೆ ಎಂದರೆ ಅವರ ತಾಯಿ ಒಪ್ಪಿಲ್ಲ. ಬಳಿಕ ಕಾನೂನ ಪ್ರಕಾರ ಸೇವಂತಿಯನ್ನು ಪಡೆದೆ. ಅದಕ್ಕೆ 3 ತಿಂಗಳುಗಳೇ ತೆಗೆದುಕೊಂಡಿದೆ. ಬಡ ಹುಡುಗಿಯನ್ನು ಮನೆಗೆ ಕರೆದುಕೊಂಡು ಬಂದಿದ್ದೀನಿ ಅಂತ ಅಂದ್ರೆ ಮೆಚ್ಚುಗೆ ಸೂಚಿಸಿ, ಇಲ್ಲ ಅಂದ್ರೆ ಸುಮ್ಮನೆ ಇರಿ. ನೆಗೆಟಿವ್ ಕಮೆಂಟ್ ಮಾಡುವರ ವಿರುದ್ಧ ನಾನು ಸೈಬರ್ ಕ್ರೈಂಗೆ ದೂರು ಕೊಡ್ತೀನಿʼʼ ಎಂದು ಸೋನು ಈ ಹಿಂದೆ ವಿಡಿಯೊ ಮೂಲಕ ಹೇಳಿಕೊಂಡಿದ್ದರು.