ಬೆಂಗಳೂರು: ಸೋಷಿಯಲ್ ಮೀಡಿಯಾ ತಾರೆ, ‘ಬಿಗ್ ಬಾಸ್ ಕನ್ನಡ ಒಟಿಟಿ 1’ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಅವರು 7 ವರ್ಷದ, ರಾಯಚೂರು ಮೂಲದ ಬಡ ಹುಡುಗಿಯನ್ನು ದತ್ತು ತೆಗೆದುಕೊಂಡಿರುವ ವಿಚಾರ ಸದ್ಯ ಭಾರಿ ವಿವಾದ ಹುಟ್ಟು ಹಾಕಿದೆ. ಸೋನು ಗೌಡ ಇದೀಗ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಇತ್ತ ಪೊಲೀಸ್ ವಿಚಾರಣೆಗಾಗಿ ಬೆಂಗಳೂರಿಗೆ ಆಗಮಿಸಿದ ಬಾಲಕಿಯ ಹೆತ್ತವರು ‘ವಿಸ್ತಾರ ನ್ಯೂಸ್’ನೊಂದಿಗೆ ಎಕ್ಸ್‌ಕ್ಲ್ಯೂಸಿವ್ ಆಗಿ ಮಾತನಾಡಿ, ಹಲವು ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮಗುವಿನ ತಂದೆ ಮುದ್ದಪ್ಪ ಮತ್ತು ತಾಯಿ ರಾಜೇಶ್ವರಿ ಈ ಬಗ್ಗೆ ಏನು ಹೇಳಿದ್ದಾರೆ ನೋಡೋಣ:
ನಾವು ದತ್ತು ಕೊಟ್ಟಿಲ್ಲ
ಮಗುವನ್ನು ತಾವು ದತ್ತು ಕೊಟ್ಟಿಲ್ಲ ಎಂದು ಹೇಳುವ ಮೂಲಕ ಮಗುವಿನ ಹೆತ್ತವರು ಪ್ರಕರಣಕ್ಕೆ ರೋಚಕ ಟ್ವಿಸ್ಟ್ ನೀಡಿದ್ದಾರೆ. ʼʼನಾವು ಮಗುವನ್ನು ದತ್ತು ಕೊಟ್ಟಿಲ್ಲ. ಶಾಲೆಗೆ ಸೇರಿಸುತ್ತೇನೆ ಎಂದು ಹೇಳಿ ಸೋನು ಗೌಡ ಮಗುವನ್ನು ಕರೆದುಕೊಂಡು ಬಂದಿದ್ದಾರೆ. ನಾವು ಬೆಂಗಳೂರಿನಲ್ಲಿ ಇದ್ದಾಗ ಸೋನು ಗೌಡ ಅವರ ಪರಿಚಯ ಆಗಿತ್ತು. ಅವರು ಮಗುವನ್ನು ಸುತ್ತಾಡಿಸಲು ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಕೆಲವು ದಿನಗಳ ಹಿಂದೆ ನಾವು ನಮ್ಮೂರಾದ ರಾಯಚೂರಿಗೆ ತೆರಳಲು ಹೊರಟು ನಿಂತಿದ್ದೆವು. ಆಗ ಸೋನು ಗೌಡ ಅವರು, ʼʼಮಗಳನ್ನು ಇಲ್ಲೇ ಬಿಟ್ಟು ಹೋಗಿʼʼ ಎಂದು ಒತ್ತಾಯಿಸಿದ್ದರು. ಮಗುವನ್ನು ಕರೆದುಕೊಂಡು ಬರುವುದಿದ್ದರೆ ಊರಿಗೆ ಬಂದು ಹಿರಿಯರ ಅನುಮತಿ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದೆʼʼ ಎಂದು ಮುದ್ದಪ್ಪ ಹೇಳಿದ್ದಾರೆ.
ʼʼಬಳಿಕ ನಾವು ಎಲ್ಲರೂ ಊರಿಗೆ ತೆರಳಿದ್ದೆವು. ಊರಲ್ಲಿ ಮಗಳು ಸೋನು ಅಕ್ಕ ಎಂದೇ ಕನವರಿಸುತ್ತಿದ್ದಳು. ಒಂದು ದಿನ ಮಗಳು ಸೋನು ಗೌಡ ಅವರಿಗೆ ಕರೆ ಮಾಡಿ ನನ್ನನ್ನು ಕರೆದುಕೊಂಡು ಹೋಗು ಎಂದಿದ್ದಳು. ಅದರಂತೆ ಸುಮಾರು ಒಂದು ತಿಂಗಳ ಹಿಂದೆ ಮನೆಗೆ ಬಂದು, ಮಗುವನ್ನು ಶಾಲೆಗೆ ಸೇರಿಸುತ್ತೇನೆ ಎಂದು ಹೇಳಿ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದರುʼʼ ಎಂದು ಅವರು ಘಟನೆಯನ್ನು ವಿವರಿಸಿದ್ದಾರೆ.
ರಾಜೇಶ್ವರಿ ಹೇಳಿದ್ದೇನು?
ಈ ಬಗ್ಗೆ ಮಗುವಿನ ತಾಯಿ ರಾಜೇಶ್ವರಿ ಮಾತನಾಡಿ, ʼʼಮಗುವನ್ನು ಚೆನ್ನಾಗಿ ಓದಿಸುತ್ತೇನೆ, ಬೆಳೆಸುತ್ತೇನೆ ಎಂದು ಹೇಳಿ ಸೋನು ಗೌಡ ಕರೆದುಕೊಂಡು ಬಂದಿದ್ದರು. ನಮ್ಮ ತಂಗಿ ರೀತಿಯಲ್ಲೇ ಆಕೆಯನ್ನೂ ನೋಡಿಕೊಳ್ಳುತ್ತೇವೆ ಎಂದಿದ್ದರು. ಅದು ಬಿಟ್ಟರೆ ನಾವು ದತ್ತು ಕೊಟ್ಟಿಲ್ಲ. ನಾವು ಕಷ್ಟುಪಟ್ಟು ದುಡಿಯುತ್ತೇವೆ. ಮಗುವನ್ನು ದತ್ತು ಕೊಡುವ ಅಗತ್ಯ ನಮಗೆ ಬಿದ್ದಿಲ್ಲ. ಒಟ್ಟು 4 ಮಕ್ಕಳಿದ್ದಾರೆ. ಅವರನ್ನು ಚೆನ್ನಾಗಿ ಸಾಕುತ್ತಿದ್ದೇವೆʼʼ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: Sonu Srinivas Gowda: ಪೊಲೀಸ್ ವಿಚಾರಣೆ ವೇಳೆ ಸೋನು ಗೌಡ ತಿಳಿಸಿದ್ದಾಳೆ ಹಲವು ಹೊಸ ಸಂಗತಿ!
ʼʼಸೋನು ಗೌಡ ನಮಗೆ ಒಂದು ರೂಪಾಯಿಯನ್ನೂ ಕೊಟ್ಟಿಲ್ಲ. ಹಿಂದೆಲ್ಲ ಅವರು ಪ್ರತಿದಿನ ಕರೆ ಮಾಡಿ ಮಗುವಿನ ಜತೆ ಮಾತನಾಡಲು ಅವಕಾಶ ಮಾಡಿಕೊಡುತ್ತಿದ್ದರು. ಈಗ ಮಗು ಎಲ್ಲಿದೆ ಎನ್ನುವುದೂ ನಮಗೆ ಗೊತ್ತಿಲ್ಲʼʼ ಎಂದು ರಾಜೇಶ್ವರಿ ಭಾವುಕರಾಗಿ ಹೇಳಿದ್ದಾರೆ. ʼʼಇತ್ತೀಚೆಗೆ ಸೋನು ಗೌಡ ಅವರು ಮಗುವನ್ನು ದತ್ತು ತೆಗೆದುಕೊಂಡಿರುವುದಾಗಿ ನೀಡಿದ್ದ ಹೇಳಿಕೆಯನ್ನು ಗಮನಿಸಿದ ನಮ್ಮ ಮನೆಯ ಹಿರಿಯರು ಅಸಮಾಧಾನ ವ್ಯಕ್ತಪಡಿಸಿದ್ದರು. ಆಕೆಗೆ ಕರೆ ಮಾಡಿ, ಪ್ರೀತಿನಿಂದ ನೋಡಿಕೊಳ್ಳುತ್ತೇನೆ ಎಂದು ಕರೆದುಕೊಂಡು ಹೋಗಿ ಈಗ ಈ ರೀತಿ ಹೇಳುತ್ತಿರುವುದು ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದರು. ಆಗ ಸೋನು ಅವರು, ನಾನು ಈ ರೀತಿ ಹೇಳಿಕೆ ಕೊಟ್ಟಿಲ್ಲ. ನನ್ನ ವಿರೋಧಿಗಳು ನನ್ನ ವಿರುದ್ಧ ಸಂಚು ಹೂಡಿ ಈ ರೀತಿಯ ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಹೇಳಿದ್ದರುʼʼ ಎಂದು ರಾಜೇಶ್ವರಿ ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ ಈ ಪ್ರಕರಣ ರೋಚಕ ತಿರುವು ಪಡೆದುಕೊಂಡಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ