Site icon Vistara News

Anjali Menon: ʻಬೆಂಗಳೂರು ಡೇಸ್’ ಖ್ಯಾತಿಯ ನಿರ್ದೇಶಕಿ ಅಂಜಲಿ ಮೆನನ್ ತಮಿಳು ಸಿನಿಮಾಗೆ ಕೆಆರ್‌ಜಿ ಸ್ಟುಡಿಯೋಸ್‌ ಸಾಥ್‌!

Anjali Menon announces her Tamil film with KRG Studios

ಬೆಂಗಳೂರು: ಕೆ ಆರ್ ಜಿ ಸ್ಟುಡಿಯೋಸ್ ಇದೀಗ ಖ್ಯಾತ ಮಲಯಾಳಂ ನಿರ್ದೇಶಕಿ ಅಂಜಲಿ‌ ಮೆನನ್ (Anjali Menon) ಅವರೊಂದಿಗೆ ಹೊಸ ತಮಿಳು ಚಿತ್ರಕ್ಕಾಗಿ ಕೈ ಜೋಡಿಸಿದೆ. “ಬೆಂಗಳೂರು ಡೇಸ್”, “ಉಸ್ತಾದ್ ಹೊಟೇಲ್”, “ಮಂಜಡಿಕುರು”, “ಕೂಡೆ” ಮತ್ತು ಇತ್ತೀಚಿನ “ವಂಡರ್ ವುಮನ್” ಅಂತಹ ಹಿಟ್‌ ಚಿತ್ರಗಳನ್ನು ಕೊಡುಗೆಯಾಗಿ ನೀಡಿರುವ ನಿರ್ದೇಶಕಿ ಅಂಜಲಿ‌ ಮೆನನ್ ಇದೀಗ ತಮಿಳು‌ ಚಿತ್ರವನ್ನು ನಿರ್ದೇಶಿಸಲು ಸಜ್ಜಾಗಿದ್ದಾರೆ.

ಕೆ ಆರ್ ಜಿ ಸ್ಟುಡಿಯೋಸ್ ಈ ಸಹಯೋಗದ‌ ಮೂಲಕ ಕನ್ನಡ ಚಿತ್ರರಂಗಕ್ಕೂ ಹಾಗೂ ಇನ್ನಿತರ ಚಿತ್ರರಂಗಕ್ಕೂ ಇರುವ ಅಂತರವನ್ನು ಕಡಿಮೆ ಮಾಡಿ, ಸಮಗ್ರ ನಿರ್ಮಾಣದ ಮೂಲಕ ಹೊಸ ಮೈಲುಗಲ್ಲನ್ನು ಸಾಧಿಸುತ್ತಿದೆ ಎಂದರೆ ತಪ್ಪಾಗಲಾರದು. ಕೆ ಆರ್ ಜಿ ಸ್ಟುಡಿಯೋಸ್ ತನ್ನ ಸಿನಿಮಾ ವಿತರಣೆಯನ್ನು 2017ರಲ್ಲಿ‌ ಆರಂಭಿಸಿ, ಇಲ್ಲಿಯ ವರೆಗೂ ಸರಿಸುಮಾರು 100 ಚಿತ್ರಗಳನ್ನು ವಿತರಿಸಿದೆ.

ಈ ಸಂಸ್ಥೆ 2020ರಲ್ಲಿ, “ರತ್ನನ್ ಪ್ರಪಂಚ” ಚಿತ್ರದ ಮೂಲಕ ಚಿತ್ರ ನಿರ್ಮಾಣವನ್ನು ಆರಂಭಿಸಿತು. ರೋಹಿತ್ ಪದಕಿಯವರ ನಿರ್ದೇಶನದಲ್ಲಿ, ಡಾಲಿ‌ ಧನಂಜಯ್ ಅಭಿನಯದಲ್ಲಿ ಮೂಡಿ‌ಬಂದ ಈ‌ ಚಿತ್ರ ಅಮೆಜಾನ್‌ ಪ್ರೈಂನಲ್ಲಿ ಬಿಡುಗಡೆಗೊಂಡು ಎಲ್ಲರ ಮನೆ ಮಾತಾಗಿತ್ತು‌. ನಂತರದಲ್ಲಿ , ಮಾರ್ಚ್ 2023ರಲ್ಲಿ ತೆರೆ ಕಂಡ “ಗುರುದೇವ್ ಹೊಯ್ಸಳ” ಬಹಳ ದೊಡ್ಡ ಮಟ್ಟದಲ್ಲಿ ಮೆಚ್ಚುಗೆಯನ್ನು ಗಳಿಸಿತ್ತು. ಕೆ ಆರ್ ಜಿ ಸ್ಟುಡಿಯೋಸ್‌ನ‌ ಈ ಸಹಯೋಗ ವಿಭಿನ್ನ ಕಥಾ ವಸ್ತುವನ್ನು ಒಳಗೊಂಡಿರುವ ಚಿತ್ರಗಳನ್ನು ಸಿನಿ ಪ್ರೇಮಿಗಳಿಗೆ ಉಣಬಡಿಸುವ ಮುಖ್ಯ ಉದ್ದೇಶವನ್ನು ಹೊಂದಿದೆ. ಅಷ್ಟೇ ಅಲ್ಲದೆ, ದಕ್ಷಿಣ ಭಾರತದ 4 ಭಾಷೆಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ: Actor Dhanush: ಧನುಷ್ ಎರಡನೇ ನಿರ್ದೇಶನದ ಸಿನಿಮಾಗೆ ಟೈಟಲ್‌ ಫಿಕ್ಸ್‌; ಫಸ್ಟ್ ಲುಕ್ ಔಟ್‌!

ಈ ಕುರಿತು ನಿರ್ದೇಶಕಿ ಅಂಜಲಿ‌ ಮೆನನ್ ಮಾತನಾಡಿ, ʻʻಸಿನಿಮಾಗಳು ಭಾಷೆ ಎಂಬ ಗೋಡೆಯನ್ನು ದಾಟಿ ಎಲ್ಲರನ್ನೂ ತಲುಪುತ್ತಿರುವ‌ ಈ ಕಾಲದಲ್ಲಿ ಕೆ ಆರ್ ಜಿ ಸ್ಟುಡಿಯೋಸ್ ಅಂತಹ ಸಂಸ್ಥೆಯೊಡನೆ ನಾನು ಕೈ ಜೋಡಿಸಿರುವುದು ಸೂಕ್ತ ಎನಿಸುತ್ತಿದೆ. ನಮ್ಮ ಈ ಸಹಯೋಗದಲ್ಲಿ ಉನ್ನತ ಮಟ್ಟದ ಚಿತ್ರ ನಿರ್ಮಾಣ ಹಾಗೂ ನಿರ್ದೇಶನವನ್ನು ಎದುರು ನೋಡುತ್ತಿದ್ದೇನೆʼʼ ಎಂದರು‌.

ಕೆ ಆರ್ ಜಿ ಸ್ಟುಡಿಯೋಸ್ ಸಂಸ್ಥಾಪಕರು ಮತ್ತು ನಿರ್ಮಾಪಕರು ಆದ ಕಾರ್ತಿಕ್ ಗೌಡ ಮಾತನಾಡಿ, ʻʻಅಂಜಲಿ ಮೆನನ್ ಮತ್ತು ನಮ್ಮ ಸಹಯೋಗ ಕೆ ಆರ್ ಜಿ ಸ್ಟುಡಿಯೋಸ್‌ನಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ ಎಂದರೆ ಉತ್ಪ್ರೇಕ್ಷೆಯಲ್ಲ. “ಸಿನಿಮಾ”ಗೆ ಇರುವ‌ ಶಕ್ತಿಯನ್ನು ನಾವು ನಂಬುತ್ತೇವೆ. ಅದು ತೆರೆಯ ಮೇಲೆ ಯಾವ ರೀತಿಯ ಜಾದುವನ್ನಾದರೂ ಸೃಷ್ಟಿಸಬಲ್ಲದು. ಈ ನಿಟ್ಟಿನಲ್ಲಿ ನಮ್ಮ ಸಹಯೋಗ ಬಹಳ ಅರ್ಥಪೂರ್ಣವಾಗಲಿದೆ ಎಂದು ನಂಬಿದ್ದೇನೆʼʼ ಎಂದರು.

ʻʻಕೆ ಆರ್ ಜಿ ಸ್ಟುಡಿಯೋಸ್ ಸಂಸ್ಥೆಯ ಈ‌ ಸಹಯೋಗ ಕೇವಲ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸುವುದಷ್ಟೇ ಅಲ್ಲದೆ, ಕಥಾ ನಿರೂಪಣೆಯಲ್ಲಿ‌ ಹೊಸ ಆವಿಷ್ಕಾರಗಳನ್ನು ಸ್ಥಳೀಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ತರಲಿದೆ ಎಂಬ ಭರವಸೆಯನ್ನು ನಾವು ಹೊಂದಿದ್ದೇವೆ. ದಕ್ಷಿಣ ಭಾರತೀಯ ಸಿನಿಮಾದ ಭವಿಷ್ಯವನ್ನು ರೂಪಿಸಲು ಸಜ್ಜಾಗಿರುವ‌ ಕೆ ಆರ್ ಜಿ ಸ್ಟುಡಿಯೋಸ್ ಸಂಸ್ಥೆಗೆ ಗುಣಮಟ್ಟದ ಕಥಾ ವಸ್ತು ಹಾಗೂ ನವೀನ ಕಥಾ ನಿರೂಪಣೆಗೆ ಅಂಜಲಿ ಮೆನನ್ ಜೊತೆಗಿನ ಸಹಯೋಗ ಬಲು ದೊಡ್ಡ ಉದಾಹರಣೆ ಮತ್ತು ಮಾದರಿಯಾಗಲಿದೆʼʼ ಎಂದರು.

Exit mobile version