ಹೈದರಾಬಾದ್: ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ವಿರುದ್ಧ ಮಾಲ್ಡೀವ್ಸ್ ಸರ್ಕಾರ (Maldives Government)ದ ಅಮಾನತುಗೊಂಡ ಸಚಿವರು ಅವಹೇಳನಕಾರಿಯಾಗಿ ಮಾತನಾಡಿದ್ದರ ಗಂಭೀರ ಪರಿಣಾಮವನ್ನು ಆ ದ್ವೀಪ ರಾಷ್ಟ್ರ ಅನುಭವಿಸುತ್ತಿದೆ. ಅನೇಕ ಭಾರತೀಯರು ಈಗಾಗಲೇ ಮಾಲ್ಡೀವ್ಸ್ ಪ್ರವಾಸವನ್ನು ರದ್ದುಪಡಿಸಿ ಲಕ್ಷದ್ವೀಪದತ್ತ ಹೊರಡಲು ತಯಾರಿಸಿ ನಡೆಸಿದ್ದಾರೆ (Boycott Maldives). ಇದಕ್ಕೆ ಸೆಲೆಬ್ರಿಟಿಗಳೂ ಹೊರತಲ್ಲ. ಇದೀಗ ತೆಲುಗು ಚಿತ್ರರಂಗದ ಹಿರಿಯ ನಟ ನಾಗಾರ್ಜುನ (Nagarjuna) ಮಾಲ್ಡೀವ್ಸ್ ಪ್ರವಾಸ ರದ್ದುಪಡಿಸಿರುವುದಾಗಿ ತಿಳಿಸಿದ್ದಾರೆ.
ನಾಗಾರ್ಜುನ ಹೇಳಿದ್ದೇನು?
ಕೆಲಸದಿಂದ ಸ್ವಲ್ಪ ಬಿಡುವು ಪಡೆದು ಜನವರಿ 17ರಿಂದ ಮಾಲ್ದೀವ್ಸ್‌ಗೆ ಪ್ರವಾಸ ಹೋಗುವುದಾಗಿ ಈ ಹಿಂದೆ ನಾಗಾರ್ಜುನ ತಿಳಿಸಿದ್ದರು. ಆದರೆ ಇದೀಗ ಮಾಲ್ಡೀವ್ಸ್ ಪ್ರಯಾಣದ ಟಿಕೆಟ್ ಕ್ಯಾನ್ಸಲ್ ಮಾಡಿದ್ದಾರೆ. ʼʼಪ್ರಧಾನಿ ಮೋದಿ ಅವರನ್ನು ಅಲ್ಲಿನ ಸಚಿವರು ಅವಹೇಳನ ಮಾಡಿದ್ದು ಸರಿಯಲ್ಲ. ಇದು ಎರಡು ದೇಶಗಳ ನಡುವಿನ ಸಂಬಂಧಕ್ಕೆ ಹುಳಿ ಹಿಂಡಲಿದೆʼʼ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
I am cancelling my trip to Maldives because what they said to our Prime Minister is not right – Tollywood Super Star #Nagarjuna 🔥
— Chandrakant Shinde (@Chandrakan76691) January 15, 2024
Massive Respect.. Country first 🇮🇳 pic.twitter.com/8Z2yy5G6KY
ಯೂ ಟ್ಯೂಬ್ ಚಾಲನ್‌ನಲ್ಲಿ ಮಾತನಾಡಿದ ಅವರು, ʼʼಬಿಗ್‌ಬಾಸ್ ಮತ್ತು ʼನಾ ಸಾಮಿ ರಂಗʼ ಚಿತ್ರಕ್ಕಾಗಿ ಬ್ರೇಕ್ ಪಡೆಯದೆ ಸುಮಾರು 75 ದಿನಗಳ ಕಾಲ ಕೆಲಸ ಮಾಡಿದ್ದೆ. ಹೀಗಾಗಿ ಬಿಡುವು ಪಡೆದು ಪ್ರವಾಸ ಹೋಗಲು ಚಿಂತನೆ ನಡೆಸಿದ್ದೆ. ಇದೀಗ ಮಾಲ್ಡೀವ್ಸ್ ವಿಮಾನ ಟಿಕೆಟ್ ರದ್ದು ಪಡಿಸಿದ್ದೇನೆ. ಮುಂದಿನ ವಾರ ಲಕ್ಷದ್ವೀಪಕ್ಕೆ ತೆರಳುವ ಚಿಂತನೆ ನಡೆಸಿದ್ದೇನೆʼʼ ಎಂದು ನಾಗಾರ್ಜುನ ವಿವರಿಸಿದ್ದಾರೆ.
“ಮಾಲ್ಡೀವ್ಸ್‌ನ ನಾಯಕರು ನೀಡಿದ ಹೇಳಿಕೆಗಳು ಸರಿಯಲ್ಲ. ಮೋದಿ ನಮ್ಮ ಪ್ರಧಾನಿ. ಅವರು 1.5 ಬಿಲಿಯನ್ ಜನರನ್ನು ಮುನ್ನಡೆಸುತ್ತಿದ್ದಾರೆ. ಅಂತಹ ನಾಯಕರ ವಿರುದ್ಧ ಹೇಳಿಕ ನೀಡಿದ್ದರ ಪರಿಣಾಮಗಳನ್ನು ಅವರು ಎದುರಿಸುತ್ತಿದ್ದಾರೆ. ಪ್ರತಿಯೊಂದು ಕ್ರಿಯೆಗೂ ಪ್ರತಿಕ್ರಿಯೆ ಇದ್ದೇ ಇರುತ್ತದೆʼʼ ಎಂದು ತಿಳಿಸಿದ್ದಾರೆ. ಜತೆಗೆ ಅವರು ಲಕ್ಷದ್ವೀಪದ ಬಂಗಾರಮ್ ಪ್ರದೇಶದ ಸೊಬಗನ್ನೂ ಬಣ್ಣಿಸಿದ್ದಾರೆ. ಅಲ್ಲಿಗೆ ಶೀಘ್ರವಾಗಿ ತೆರಳುವುದಾಗಿ ಹೇಳಿದ ಅವರು, ಲಕ್ಷದ್ವೀಪಕ್ಕೆ ಭೇಟಿ ನೀಡುವಂತೆ ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಅವರಿಗೂ ಸಲಹೆ ನೀಡಿದ್ದಾರೆ.
ಉತ್ತಮ ಪ್ರತಿಕ್ರಿಯೆ ಪಡೆದುಕೊಂಡ ʼನಾ ಸಾಮಿ ರಂಗʼ
ನಾಗಾರ್ಜುನ ಅಭಿನಯದ ʼನಾ ಸಾಮಿ ರಂಗʼ ಸಿನಿಮಾ ಜನವರಿ 14ರಂದು ತೆರೆ ಕಂಡಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಈ ಚಿತ್ರದಲ್ಲಿ ಕನ್ನಡತಿ ಆಶಿಕಾ ರಂಗನಾಥ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ನಾಗಾರ್ಜುನ-ಆಶಿಕಾ ಕೆಮಿಸ್ಟ್ರಿ ವೀಕ್ಷಕರ ಗಮನ ಸೆಳೆದಿದ್ದು, ಇಬ್ಬರ ಅಭಿನಯಕ್ಕೂ ಮೆಚ್ಚುಗೆ ಸೂಚಿಸಿದ್ದಾರೆ. ವಿಜಯ್ ಬಿನ್ನಿ ನಿರ್ದೇಶನದ ಈ ಚಿತ್ರ 2019ರಲ್ಲಿ ಬಿಡುಗಡೆಯಾದ ಮಲಯಾಳಂನ ʼಪೊರಿಂಜು ಮರಿಯಮ್ ಜೋಸ್ʼ ಸಿನಿಮಾದ ರಿಮೇಕ್. ಅಲ್ಲರಿ ನರೇಶ್, ರಾಜ್ ತರುಣ್ ಮತ್ತಿತರರು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಇದನ್ನೂ ಓದಿ: Boycott Maldives: ಮಾಲ್ಡೀವ್ಸ್ ಸರ್ಕಾರದ ವಿರುದ್ಧವೇ ತಿರುಗಿ ಬಿದ್ದ ಅಲ್ಲಿನ ಪ್ರವಾಸೋದ್ಯಮ ಸಂಘ ಹೇಳಿದ್ದೇನು?
ಏನಿದು ವಿವಾದ?
ಇತ್ತೀಚೆಗೆ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದ ಮೋದಿ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಹೊಗಳಿದ್ದರು. ಇದರ ಬೆನ್ನಲ್ಲೇ ಮಾಲ್ಡೀವ್ಸ್ ಸರ್ಕಾರದ ಅಮಾನತುಗೊಂಡ ಸಚಿವರು ಮೋದಿ ಅವರನ್ನು ಲೇವಡಿ ಮಾಡಿದ್ದರು. ಇದರಿಂದ ಕೆರಳಿದ ಭಾರತೀಯರು ತಮ್ಮ ಮಾಲ್ಡೀವ್ಸ್ ಪ್ರವಾಸಗಳನ್ನು ರದ್ದು ಮಾಡಿ ಲಕ್ಷದ್ವೀಪಕ್ಕೆ ತೆರಳಲು ಯೋಜನೆ ರೂಪಿಸುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ