ಬೆಂಗಳೂರು: ಪಿಎಸ್ ಮಿತ್ರನ್ ಅವರ ಕಾರ್ತಿ ಅಭಿನಯದ ಸರ್ದಾರ್ 2ರ ( Sardar 2) ಸೆಟ್‌ನಲ್ಲಿ ಸ್ಟಂಟ್‌ಮ್ಯಾನ್ ಮೃತಪಟ್ಟಿದ್ದಾರೆ. ಚಿತ್ರೀಕರಣದಲ್ಲಿ ಅವಘಡ ಸಂಭವಿಸಿ ಈ ದುರ್ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ಎಲುಮಲೈ (Elumalai ) ಎಂಬ ಸ್ಟಂಟ್‌ಮ್ಯಾನ್ ಆಕ್ಷನ್ ಸೀಕ್ವೆನ್ಸ್ ಚಿತ್ರೀಕರಣ ಮಾಡುವಾಗ ರೋಸ್ಟ್ರಮ್‌ನಿಂದ 20 ಅಡಿ ಕೆಳಗೆ ಬಿದ್ದಿದ್ದಾರೆ. ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಚೆನ್ನೈನ ಸಾಲಿಗ್ರಾಮದಲ್ಲಿರುವ ಎಲ್ ವಿ ಪ್ರಸಾದ್ ಸ್ಟುಡಿಯೋದಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಅಪಘಾತದ ಬಗ್ಗೆ ವಿರುಗಂಬಕ್ಕಂ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ತನಿಖೆ ನಡೆಯುತ್ತಿದೆ. ಎಲುಮಲೈ ಅವರಿಗೆ 54 ವರ್ಷ ವಯಸ್ಸಾಗಿತ್ತು. ಅವರು ಬಿದ್ದ ನಂತರ ಗಂಭೀರ ಗಾಯಗೊಂಡರು. ರಾತ್ರಿ 11:30ಕ್ಕೆ ರಕ್ತಸ್ರಾವದಿಂದ ಅವರು ನಿಧನರಾದರು. ಇದೀಗ ಸರ್ದಾರ್ 2 ಚಿತ್ರೀಕರಣ ಸ್ಥಗಿತಗೊಂಡಿದೆ.
ಸರ್ದಾರ್ 2ರ ಪ್ರೊಡಕ್ಷನ್ ಹೌಸ್ ಪ್ರಿನ್ಸ್ ಪಿಕ್ಚರ್ಸ್ ಈ ಸುದ್ದಿಯನ್ನು ಖಚಿತಪಡಿಸಿದೆ, “ನಮ್ಮ ಸರ್ದಾರ್ 2 ಚಿತ್ರದ ಸೆಟ್‌ಗಳಲ್ಲಿ ಸ್ಟಂಟ್ ರಿಗ್ ಮ್ಯಾನ್ ಆಗಿ ಕೆಲಸ ಮಾಡಿದ ಸ್ಟಂಟ್ ಯೂನಿಯನ್ ಸದಸ್ಯ ಎಲುಮಲೈ ಅವರ ಸಾವಿನ ಬಗ್ಗೆ ತಿಳಿಸಲು ವಿಷಾದಿಸುತ್ತೇವೆ. ಜುಲೈ 16 ರ ಮಂಗಳವಾರ ಸಂಜೆ, ಸ್ಟಂಟ್ ಸೀಕ್ವೆನ್ಸ್ ಚಿತ್ರೀಕರಣದ ನಂತರ, ಎಲುಮಲೈ ಅವರು 20 ಅಡಿ ಎತ್ತರದ ರೋಸ್ಟ್ರಮ್ನಿಂದ ಆಕಸ್ಮಿಕವಾಗಿ ಬಿದ್ದು ಗಾಯಗೊಂಡರು. ನರಬಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಕೂಡಲೇ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗಿಲ್ಲ. ರಾತ್ರಿ 11.30 ರ ಸುಮಾರಿಗೆ ನಿಧನರಾದರು. ನಮ್ಮ ಇಡೀ ತಂಡವು ಎಲುಮಲೈ ಅವರ ಕುಟುಂಬಕ್ಕೆ ಸಂತಾಪವನ್ನು ಸೂಚಿಸುತ್ತದೆ ಎಂದುʼʼಬರೆದುಕೊಂಡಿದೆ. ಕಾರ್ತಿ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.
ಇದನ್ನೂ ಓದಿ: Kannada New Movie: ರಾಜವರ್ಧನ್ ‘ಹಿರಣ್ಯ’ ಸಿನಿಮಾದಲ್ಲಿ ಮೈ ಚಳಿ ಬಿಟ್ಟು ಡ್ಯಾನ್ಸ್ ಮಾಡಿದ ದಿವ್ಯಾ ಸುರೇಶ್!
ಜುಲೈ 12 ರಂದು ಮಿತ್ರನ್ ಮತ್ತು ಕಾರ್ತಿ ಈ ಸಿನಿಮಾ ಮುಹೂರ್ತ ನೆರವೇರಿಸಿದ್ದರು. ಕಾರ್ಯಕ್ರಮದಲ್ಲಿ ಕಾರ್ತಿ ಅವರ ತಂದೆ ನಟ ಶಿವಕುಮಾರ್ ಕೂಡ ಭಾಗವಹಿಸಿದ್ದರು. ಚಿತ್ರದ ಶೂಟಿಂಗ್ ಜುಲೈ 15 ರಂದು ಚೆನ್ನೈನಲ್ಲಿ ಪ್ರಾರಂಭವಾಯಿತು. ಈ ಚಿತ್ರವು ಮಿತ್ರನ್ ಮತ್ತು ಕಾರ್ತಿ ಅವರ 2022 ರ ಚಲನಚಿತ್ರ ಸರ್ದಾರ್‌ನ ಮುಂದುವರಿದ ಭಾಗವಾಗಿದೆ. ನಟನನ್ನು ದ್ವಿಪಾತ್ರಗಳಲ್ಲಿ ಕಂಡ ಸ್ಪೈ ಥ್ರಿಲ್ಲರ್ ಆಗಿದೆ.