ಬೆಂಗಳೂರು: ಪೊಲೀಸ್ ಹುದ್ದೆಯಲ್ಲಿರುವಾಗ ತಮ್ಮ ಕಟ್ಟುನಿಟ್ಟಾದ ಕಾರ್ಯಶೈಲಿಯಿಂದ “ಸಿಂಗಂ ಅಣ್ಣ” ಎಂದು ಬಿರುದು ಪಡೆದ ನಿವೃತ್ತ ಪೊಲೀಸ್ ಅಧಿಕಾರಿ, ತಮಿಳುನಾಡಿನ ಬಿಜೆಪಿ ಮುಖ್ಯಸ್ಥ ಕೆ. ಅಣ್ಣಾಮಲೈ (k Annamalai) ಅವರು ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದರ ಮೂಲಕ ಲೋಕಸಭಾ ಚುನಾವಣೆಗೆ ಪದಾರ್ಪಣೆ ಮಾಡಿದ್ದಾರೆ. ಸದ್ಯ ಅಣ್ಣಾಮಲೈ ಕುರಿತು ತಮಿಳಿನಲ್ಲಿ ಬಯೋಪಿಕ್ ಸಿನಿಮಾ (Annamalai Biopic) ಮಾಡುವ ಬಗ್ಗೆ ಚರ್ಚೆ ಶುರುವಾಗಿದೆ. ತಮಿಳು ನಟ ವಿಶಾಲ್ ತೆರೆಮೇಲೆ ಅಣ್ಣಾಮಲೈ ಆಗಿ ನಟಿಸುತ್ತಾರೆ ಎನ್ನಲಾಗುತ್ತಿದೆ.
ಸದ್ಯ ವಿಶಾಲ್ ನಟನೆಯ ‘ರತ್ನಂ’ ಸಿನಿಮಾ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇತ್ತೀಚೆಗೆ ನಟ ವಿಶಾಲ್ ನಿರ್ದೇಶಕರಾಗಿಯೂ ಗುರ್ತಿಸಿಕೊಂಡಿದ್ದಾರೆ. ಇದೆಲ್ಲದರ ನಡುವೆ ಇದೀಗ ತೆರೆಮೇಲೆ ಅಣ್ಣಾಮಲೈ ಪಾತ್ರ ಮಾಡುತ್ತಾರೆ ಎನ್ನಲಾಗಿದೆ. 1984ರ ಜೂ.4ರಂದು ಹುಟ್ಟಿದ ಅಣ್ಣಾಮಲೈ ಮೂಲತಃ ತಮಿಳುನಾಡಿನ ಕೊಯಮತ್ತೂರಿನವರು. ಬಿಇ ಎಂಜಿನಿಯರಿಂಗ್ ಮಾಡಿ ಎಂಬಿಎ ಪೂರ್ಣಗೊಳಿಸಿದ ಅಣ್ಣಾಮಲೈ 2011ರ ಬ್ಯಾಚ್ನ ಐಪಿಎಸ್ ಅಧಿಕಾರಿ ಆಗಿದ್ದರು.
ಇತ್ತೀಚೆಗೆ ವಿಶಾಲ್ ಕೂಡ ರಾಜಕೀಯಕ್ಕೆ ಸೇರುವ ಸೂಚನೆ ನೀಡಿದ್ದಾರೆ. ಆದರೆ, ಯಾವ ಪಕ್ಷಕ್ಕೆ ಅವರು ಸೇರ್ಪಡೆ ಆಗುತ್ತಾರೆ ಎನ್ನುವ ಮಾಹಿತಿ ಸಿಕ್ಕಿಲ್ಲ.
ಇದನ್ನೂ ಓದಿ: K. Annamalai : ಪ್ರಚಾರ ಸಭೆಯಲ್ಲಿ ಅಣ್ಣಾಮಲೈ ಹೊಗಳಿದಾಗ ಕಣ್ಣೀರು ಹಾಕಿದ ವಿಜಯಪುರ ಅಭ್ಯರ್ಥಿ ಜಿಗಜಿಣಗಿ
ಅಣ್ಣಾಮಲೈ ಅವರ ಕುರಿತಾದ ಕೆಲವು ಕುತೂಹಲಕರ ಸಂಗತಿಗಳು ಇಲ್ಲಿವೆ
- ಅಣ್ಣಾಮಲೈ ಅವರಿಗೆ ಈಗ ಕೇವಲ 39 ವರ್ಷ. 2021ರಲ್ಲಿ ಅವರು ತಮಿಳುನಾಡಿನ ಅತ್ಯಂತ ಕಿರಿಯ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾದರು.
- ಕೆ. ಅಣ್ಣಾಮಲೈ ಅವರು 2020ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ತಮಿಳುನಾಡಿನಲ್ಲಿ ಅವರು ಯುವಜನತೆಯ ಅಪಾರ ಬೆಂಬಲ ಪಡೆದಿದ್ದಾರೆ. ಈ ಮೂಲಕ ಅವರು ತಮಿಳುನಾಡಿನಲ್ಲಿ ಬಿಜೆಪಿಗೆ ಶಕ್ತಿ ತುಂಬಿದ್ದಾರೆ. ಬಹಳ ವೇಗವಾಗಿ ಜನಪ್ರಿಯತೆ ಪಡೆಯುತ್ತಿದ್ದಾರೆ.
- ಕರ್ನಾಟಕ ಕೇಡರ್ನ 2011ರ ಬ್ಯಾಚ್ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ ಅಪಾರ ಜನಪ್ರಿಯತೆ ಪಡೆದಿದ್ದರು. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಅವರು ಜನರ ವಿಶ್ವಾಸ ಗಳಿಸಿದ್ದರು. ಬೆಂಗಳೂರು ದಕ್ಷಿಣ ಉಪ ಪೊಲೀಸ್ ಆಯುಕ್ತರಾಗಿಯೂ ಸೇವೆ ಸಲ್ಲಿಸಿದ್ದರು.
- ಕೆ ಅಣ್ಣಾಮಲೈ ಅವರು ಸೆಪ್ಟೆಂಬರ್ 2019ರಲ್ಲಿ ಪೊಲೀಸ್ ಸೇವೆಯನ್ನು ತೊರೆದು ಅಚ್ಚರಿ ಮೂಡಿಸಿದ್ದರು.
- ಇವರು ಎಂಜಿನಿಯರಿಂಗ್ ಪದವೀಧರರಾಗಿದ್ದು, ಐಐಎಂ ಲಕ್ನೋದಲ್ಲಿ ಎಂಬಿಎ ಓದಿದ್ದರು.
- ಪೊಲೀಸ್ ಫೋರ್ಸ್ನಲ್ಲಿ ಕೆಲಸ ಮಾಡುವಾಗ ಕೆ ಅಣ್ಣಾಮಲೈ ಅವರ ಕಟ್ಟುನಿಟ್ಟಾದ ಕಾರ್ಯಶೈಲಿಯನ್ನು ಕಂಡು ಅವರನ್ನು “ಸಿಂಗಂ ಅಣ್ಣ” ಎಂದೇ ಕರೆಯಲಾಗಿತ್ತು.
- ಅಣ್ಣಾಮಲೈ ಅವರು ಉಡುಪಿಯಲ್ಲಿ ಸೇವೆ ಸಲ್ಲಿಸುತ್ತಿರುವಾಗ ಧಾರ್ಮಿಕ ಗ್ರಂಥಗಳ ತಪ್ಪು ವ್ಯಾಖ್ಯಾನವನ್ನು ತಪ್ಪಿಸಲು ಮತ್ತು ಅವುಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಇಸ್ಲಾಂ ಧರ್ಮದ ಬಗ್ಗೆ ಅಧ್ಯಯನ ಮಾಡಿದ್ದರು. ಧಾರ್ಮಿಕ ವಿದ್ವಾಂಸರ ಸಹಾಯದಿಂದ ಖುರಾನ್ ಮತ್ತು ಹದೀಸ್ ಅನ್ನು ಅಧ್ಯಯನ ಮಾಡಿದ್ದರು.
- 2019ರಲ್ಲಿ ಪೊಲೀಸ್ ಅಧಿಕಾರಿ ಹುದ್ದೆಗೆ ರಾಜೀನಾಮೆ ನೀಡುವಾಗ ರಾಜೀನಾಮೆ ಪತ್ರದಲ್ಲಿ, ಇದು ನಾನು ತಕ್ಷಣ ತೆಗೆದುಕೊಂಡು ನಿರ್ಧಾರವಲ್ಲ. 2018ರಲ್ಲಿ ಕೈಗೊಂಡಿದ್ದ ಕೈಲಾಸ ಮಾನಸ ಸರೋವರ ಪ್ರವಾಸವು ನನ್ನ ಜೀವನವನ್ನು ಹಿಂತಿರುಗಿ ನೋಡುವಂತೆ ಮಾಡಿದೆ ಎಂದು ಬರೆದಿದ್ದರು.
- 2023ರಲ್ಲಿ ಅಣ್ಣಾಮಲೈ ಅವರು ‘ಎನ್ ಮನ್ ಎನ್ ಮಕ್ಕಳ್ (ನನ್ನ ಭೂಮಿ ನನ್ನ ಜನರು)’ ಯಾತ್ರೆಯನ್ನು ತಮಿಳುನಾಡು ರಾಜ್ಯಾದ್ಯಂತ ಯಶಸ್ವಿಯಾಗಿ ನಡೆಸಿದರು.
- ಅಣ್ಣಾಮಲೈ ಅವರನ್ನು ಬಿಜೆಪಿಯ ಭರವಸೆಯ ಉದಯೋನ್ಮುಖ ತಾರೆ ಎಂದು ವ್ಯಾಖ್ಯಾನಿಸಲಾಗಿದೆ. ಅವರು ವಾಕ್ಚಾತುರ್ಯಕ್ಕೆ ಹೆಸರುವಾಸಿಯಾದ ಕಾರಣ ಅವರ ಭಾಷಣಗಳು ಸಾಮಾನ್ಯವಾಗಿ ವೈರಲ್ ಆಗುತ್ತವೆ.