ಬೆಂಗಳೂರು: ʻಕ್ಯಾಪ್ಟನ್ ಮಿಲ್ಲರ್ʼ (Captain Miller) ಜನವರಿ 12ಕ್ಕೆ ರಿಲೀಸ್ ಆಗಿತ್ತು. ಅರುಣ್ ಮಾಥೇಶ್ವರನ್ ನಿರ್ದೇಶನ ಈ ಚಿತ್ರ 140 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಹೇಳಲಾಗುತ್ತಿದೆ. ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾ ಕನ್ನಡಕ್ಕೂ ಡಬ್ ಆಗಿ ಬಿಡುಗಡೆಯಾಗಿತ್ತು. ಈ ಸಿನಿಮಾ ದೊಡ್ಡಮಟ್ಟದಲ್ಲಿ ಸದ್ದು ಮಾಡಲಿಲ್ಲ. ಇದೀಗ ಫೆಬ್ರವರಿ 9ರಂದು ಅಮೇಜಾನ್ ಪ್ರೈಂ ವಿಡಿಯೋದಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ.
ಬ್ರಿಟೀಷ್ ಕಾಲದಲ್ಲಿ ನಡೆಯುವ ಕತೆ ಇದಾಗಿದ್ದು, ತನ್ನ ಗ್ರಾಮವನ್ನು ಕಬಳಿಸಲು ಬರುವ ಬ್ರಿಟೀಷ್ ಆಡಳಿತದ ಸೈನಿಕರು ಹಾಗೂ ಅಧಿಕಾರಿಗಳನ್ನು ಸಂಹರಿಸುವ ಲುಕ್‌ನಲ್ಲಿ ಧನುಷ್ ಕಾಣಿಸಿಕೊಂಡಿದ್ದರು. ಶಿವರಾಜ್‌ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ ಎನ್ನುವ ಕಾರಣಕ್ಕೆ ಸಿನಿಮಾ ಕರ್ನಾಟಕದಲ್ಲೂ ನಿರೀಕ್ಷೆ ಹುಟ್ಟು ಹಾಕಿತ್ತು.
ರಕ್ತಸಿಕ್ತ ಅಧ್ಯಾಯದ ʼಕ್ಯಾಪ್ಟನ್ ಮಿಲ್ಲರ್ʼ ಸಿನಿಮಾದ ಟ್ರೈಲರ್ ಭರಪೂರ ಆಕ್ಷನ್ ಗಳಿಂದ ಕೂಡಿತ್ತು. ʻಕ್ಯಾಪ್ಟನ್ ಮಿಲ್ಲರ್’ ಚಿತ್ರದಲ್ಲಿ ಧನುಷ್ ಪ್ರಿಯಾಂಕಾ ಅರುಲ್ ಮೋಹನ್, ಶಿವ ರಾಜ್‌ಕುಮಾರ್, ಕಿಶನ್, ಜಾನ್ ಕೊಕ್ಕೆನ್ ಮತ್ತು ಎಡ್ವರ್ಡ್ ಸೊನ್ನೆನ್‌ಬ್ಲಿಕ್ ಪ್ರಮುಖ ಪಾತ್ರಗಳಲ್ಲಿದ್ದರು.
ಜಿವಿ ಪ್ರಕಾಶ್ ಕುಮಾರ್ ಸಂಗೀತ ನೀಡಿದ್ದಾರೆ. ಸತ್ಯ ಜ್ಯೋತಿ ಫಿಲಮ್ಸ್ ಚಿತ್ರ ನಿರ್ಮಾಣ ಮಾಡಿದ್ದಾರೆ. ‘ಜೈಲರ್’ ಚಿತ್ರದ ಅತಿಥಿ ಪಾತ್ರದಲ್ಲಿ ಕಾಲಿವುಡ್ ಪ್ರವೇಶಿಸಿದ್ದ ಶಿವಣ್ಣ ‘ಕ್ಯಾಪ್ಟನ್ ಮಿಲ್ಲರ್’ ಚಿತ್ರದಲ್ಲಿ ಮತ್ತೆ ಅಬ್ಬರಿಸಿದ್ದರು.
ಇದನ್ನೂ ಓದಿ: Captain Miller: `ಕ್ಯಾಪ್ಟನ್ ಮಿಲ್ಲರ್’ ಸಿನಿಮಾಗೆ ʻಭೇಷ್ʼ ಎಂದ ಪ್ರೇಕ್ಷಕರು!
ಭಿಕ್ಷುಕನ ಅವತಾರದಲ್ಲಿ ʻನಟ ಧನುಷ್ʼ
ಸೂಪರ್ ಸ್ಟಾರ್ ಧನುಷ್ (Actor Dhanush) ಅವರು ಇತ್ತೀಚೆಗೆ ತಿರುಪತಿಗೆ ಭೇಟಿ ನೀಡಿದ್ದರು. ನಿರ್ದೇಶಕ ಶೇಖರ್ ಕಮ್ಮುಲ ಜತೆ ಧನುಷ್ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ ‘D 51’ ಎಂದು ಶೀರ್ಷಿಕೆ ಇಡಲಾಗಿದೆ. ತಿರುಪತಿಯಲ್ಲಿ ಈ ಸಿನಿಮಾದ ಶೂಟಿಂಗ್ ವೇಳೆ ದೇವಸ್ಥಾನಕ್ಕೆ ದರ್ಶನಕ್ಕೆ ಬರುವ ಭಕ್ತರು ಪರದಾಡಿದ್ದರು. ಪೊಲೀಸರು ಶೂಟಿಂಗ್ಗೆ ನೀಡಿದ್ದ ಅನುಮತಿಯನ್ನು ರದ್ದು ಮಾಡಿದ್ದರು. ಮಾತ್ರವಲ್ಲ, ಧನುಷ್ ಅವರ ಅವತಾರ ಯಾರೂ ಗುರುತು ಹಿಡಿಯಲಾಗಿರಲಿಲ್ಲ. ವಿಡಿಯೊ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಶ್ರೀವೆಂಕಟೇಶ್ವರ ಸಿನಿಮಾಸ್ ಮತ್ತು ಒಮಿಗೋಸ್ ಕ್ರಿಯೇಷನ್ಸ್ ಬ್ಯಾನರ್ ಮೂಲಕ ಈ ಚಿತ್ರ ನಿರ್ಮಾಣ ಆಗಲಿದೆ. ಧನುಷ್ ಮತ್ತು ರಶ್ಮಿಕಾ ಮಂದಣ್ಣ ಅವರನ್ನು ಹೊರತುಪಡಿಸಿ ಬೇರೆ ಯಾವೆಲ್ಲ ಕಲಾವಿದರು ನಟಿಸುತ್ತಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ತಾಂತ್ರಿಕ ವರ್ಗದ ಬಗ್ಗೆಯೂ ಹೆಚ್ಚಿನ ಮಾಹಿತಿ ಹೊರಬರುವುದು ಬಾಕಿ ಇದೆ.