‘ಕಡೈಸಿ ವಿವಸಾಯಿ’ (Kadaisi Vivasayi) ಮತ್ತು ‘ಕಾಕ ಮೊಟ್ಟೈ’ (Kaaka Muttai) ಚಿತ್ರದ ನಿರ್ದೇಶಕ ಮಣಿಕಂದನ್ ಅವರ ಮಧುರೈನ ಉಸಿಲಂಪಟ್ಟಿ ನಿವಾಸದಲ್ಲಿ ಕಳ್ಳತನ ನಡೆದಿತ್ತು. ಮಣಿಕಂದನ್ ಅವರ ನಿವಾಸಕ್ಕೆ ನುಗ್ಗಿ ಕಳ್ಳರು ಚಿನ್ನಾಭರಣ ಮತ್ತು ಇತರ ವಸ್ತುಗಳನ್ನು ದೋಚಿದ್ದರು. ಬೆಲೆ ಬಾಳುವ ವಸ್ತುಗಳ ಜತೆಗೆ ರಾಷ್ಟ್ರಪ್ರಶಸ್ತಿಯನ್ನೂ ಕದ್ದಿದ್ದರು. ಆದರೀಗ ಕಳ್ಳರು ಮಣಿಕಾಂದನ್ ಅವರ ಅಮೂಲ್ಯ ವಸ್ತುವೊಂದನ್ನು ಮರಳಿಸಿದ್ದಾರೆ. ಜತೆಗೆ ಪತ್ರವೊಂದನ್ನು ಬರೆದಿಟ್ಟು ಹೋಗಿದ್ದಾರೆ.
ಮಣಿಕಂದನ್ ಅವರದ್ದು ಮೂಲತಃ ಮಧುರೈ ಜಿಲ್ಲೆಯ ಉಸಿಲಾಂಪಟ್ಟಿ ಗ್ರಾಮ. ಮಣಿಕಂದನ್ ಸಿನಿಮಾ ಕೆಲಸವಿಲ್ಲದಾಗ ಇಲ್ಲಿಯೇ ಇರುತ್ತಾರೆ. ಸಿನಿಮಾ ಕೆಲಸದ ಮೇಲೆ ಚೆನ್ನೈಗೆ ಬಂದಾಗ ಅವರ ಡ್ರೈವರ್ ಆ ಮನೆಯನ್ನು ನೋಡಿಕೊಳ್ಳುತ್ತಾರೆ. ಮಣಿಕಂದನ್ ಅವರ ಮನೆಯ ಸಾಕು ನಾಯಿಗೆ ಅವರ ಸ್ನೇಹಿತರು ನಿತ್ಯವೂ ಆಹಾರ ನೀಡುತ್ತಾರೆ. ಆದರೆ ಒಂದು ದಿನ ನಾಯಿಗೆ ಆಹಾರ ನೀಡುವ ಸಮಯದಲ್ಲಿ, ಅವರ ಸ್ನೇಹಿತರು ಮನೆಯ ಬಾಗಿಲು ಓಪನ್ ಆಗಿರುವುದನ್ನು ಕಂಡಿದ್ದಾರೆ. ಒಳಗೆ ಹೋಗಿ ನೋಡಿದಾಗ ಚಿನ್ನಾಭರಣ, ನಗದು ಸೇರಿದಂತೆ ಬೆಲೆ ಬಾಳುವ ವಸ್ತುಗಳು ಕಾಣೆಯಾಗಿರುವುದು ಕಂಡು ಬೆಚ್ಚಿಬಿದ್ದಿದ್ದಾರೆ. ಒಂದು ಲಕ್ಷ ರೂಪಾಯಿ ನಗದು, ಕೆಲವು ಗ್ರಾಂಗಳಷ್ಟು ಚಿನ್ನ ಹಾಗೂ ಅವರ ‘ಕಡೈಸಿ ವ್ಯವಸಾಯಿ’ ಸಿನಿಮಾಕ್ಕೆ ನೀಡಿದ ರಾಷ್ಟ್ರಪ್ರಶಸ್ತಿಯನ್ನು ಸಹ ಕದ್ದೊಯ್ದಿದ್ದರು.
ಇದಾದ ಮೇಲೆ ಮಣಿಕಂದನ್ ಉಸಿಲಂಪಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪೊಲೀಸರಿಗೆ ದೂರು ನೀಡಿದ ಕೆಲವು ದಿನಗಳ ನಂತರ, ಅವರ ಕುಟುಂಬ ಸದಸ್ಯರು ತಮ್ಮ ಕಾಂಪೌಂಡ್ ಗೋಡೆಗೆ ನೇತುಹಾಕಿದ್ದ ಚೀಲವನ್ನು ಪತ್ತೆ ಮಾಡಿದರು. ಚೀಲದಲ್ಲಿ ಮಣಿಕಾಂದನ್ ಅವರ ರಾಷ್ಟ್ರಪ್ರಶಸ್ತಿ ಪದಕಗಳ ಜತೆ ಒಂದು ಪತ್ರ ಬರೆದಿಟ್ಟಿದ್ದರು. ಪತ್ರದಲ್ಲಿ ʻʻಸರ್, ದಯವಿಟ್ಟು ನಮ್ಮನ್ನು ಕ್ಷಮಿಸಿ, ನಿಮ್ಮ ಶ್ರಮಕ್ಕೆ ಸಿಕ್ಕಿದ ಪ್ರತಿಫಲ ನಿಮ್ಮದು ಮಾತ್ರ’ ಎಂದು ಬರೆದಿದ್ದಾರೆ. ಆದರೆ ಚಿನ್ನಾಭರಣ ಮತ್ತು ಹಣವನ್ನು ಮಾತ್ರ ಕಳ್ಳರು ಹಿಂದಿರುಗಿಸಿಲ್ಲ. ಸದ್ಯ ಪೊಲೀಸ್ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: Toilet Cleaning : ಮಕ್ಕಳಿಂದ ಟಾಯ್ಲೆಟ್ ಕ್ಲೀನಿಂಗ್; ದಾವಣಗೆರೆಯಲ್ಲಿ ಮತ್ತೊಂದು ಅಮಾನವೀಯ ಕೃತ್ಯ ಬಯಲಿಗೆ
ಎಂ ಮಣಿಕಂದನ್ ತಮಿಳಿನ ಜನಪ್ರಿಯ ಸಿನಿಮಾ ನಿರ್ದೇಶಕರಲ್ಲಿ ಒಬ್ಬರು. ಈ ಹಿಂದೆ ಧನುಶ್ ನಿರ್ಮಾಣ ಮಾಡಿದ್ದ ‘ಕಾಕ ಮೊಟ್ಟೈ’ ಸಿನಿಮಾವನ್ನು ಅವರೇ ನಿರ್ದೇಶನ ಮಾಡಿದ್ದರು. ಆ ಸಿನಿಮಾಕ್ಕೂ ಸಹ ರಾಷ್ಟ್ರಪ್ರಶಸ್ತಿ ಬಂದಿತ್ತು. ಮಣಿಕಾಂದನ್ ನಿರ್ದೇಶನ ಮಾಡಿರುವ ‘ಕಡೈಸಿ ವ್ಯವಸಾಯಿ’ ಸಿನಿಮಾ 2022ರಲ್ಲಿ ಬಿಡುಗಡೆ ಆಗಿತ್ತು.