Site icon Vistara News

Indian 2 Audio Launch: ಅದ್ಧೂರಿಯಾಗಿ ನೆರವೇರಿತು ʼಇಂಡಿಯನ್‌ 2ʼ ಸಿನಿಮಾದ ಆಡಿಯೊ ಲಾಂಚ್‌!

Indian 2 Audio Launch Kamal Haasan Simbu Kajal Aggarwal

ಬೆಂಗಳೂರು: ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ `ಇಂಡಿಯನ್ 2 (Indian 2 Audio Launch) ಬಿಡುಗಡೆಗೆ ಮುಂಚಿತವಾಗಿ, ಜೂನ್ 1ರಂದು ಚೆನ್ನೈನ ನೆಹರು ಕ್ರೀಡಾಂಗಣದಲ್ಲಿ ಮೆಗಾ ಆಡಿಯೊ ಬಿಡುಗಡೆ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. ಕಾರ್ಯಕ್ರಮದಲ್ಲಿ `ಇಂಡಿಯನ್ 2′ ಸಿನಿಮಾದ ಸಂಪೂರ್ಣ ತಾರಾ ಬಳಗ ಇತ್ತು.

ಕಮಲ್ ಹಾಸನ್ ಅವರ ಪ್ರತಿಯೊಂದು ದೃಶ್ಯವೂ ಅಭಿಮಾನಿಗಳಿಗೆ ಟ್ರೀಟ್ ಆಗಿರುತ್ತದೆ ಎಂದು ನಿರ್ದೇಶಕ ಎಸ್.ಶಂಕರ್ ಹೇಳಿದರು. ಸಿನಿಮಾಗೆ ಅನಿರುದ್ಧ್ ರವಿಚಂದರ್ 6 ಉತ್ತಮ ಹಾಡುಗಳನ್ನು ನೀಡಿದ್ದಾರೆ ಎಂದರು. ಸದ್ಯ ರಜನಿಕಾಂತ್ ಜೊತೆಗಿನ ಮುಂಬರುವ ಚಿತ್ರದ ತಯಾರಿಯಲ್ಲಿ ಬ್ಯುಸಿಯಾಗಿರುವ ಲೋಕೇಶ್ ಕನಕರಾಜ್ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಲೋಕೇಶ್ ಕನಕರಾಜ್ ಮಾತನಾಡಿ ʻʻಈ ಚಿತ್ರ ಘೋಷಣೆಯಾದಾಗಿನಿಂದ ಬಿಡುಗಡೆಗೆ ಕಾಯುತ್ತಿದ್ದೆ. ನಾನು ಕಮಲ್ ಸರ್, ಶಂಕರ್ ಸರ್ ಅಥವಾ ಅನಿರುದ್ಧ್ ಅವರನ್ನು ಭೇಟಿಯಾದಾಗಲೆಲ್ಲ, ನಾನು ಯಾವಾಗಲೂ ಅಪೆಡೇಟ್‌ ಕೇಳುತ್ತಲೇ ಇದ್ದೆʼʼಎಂದರು. ಕಾರ್ಯಕ್ರಮದಲ್ಲಿ ರಕುಲ್ ಪ್ರೀತ್ ಸಿಂಗ್ ಮತ್ತು ಕಾಜಲ್ ಅಗರ್ವಾಲ್ ಕೂಡ ಭಾಗವಹಿಸಿದ್ದರು. ಇಂಡಿಯನ್ 2 ಸಿನಿಮಾ ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ವೇದಿಕೆಯಲ್ಲಿ ಪ್ರದರ್ಶನವನ್ನು ನೀಡಿದರು.

ಇದನ್ನೂ ಓದಿ: Indian 2: ಕಮಲ್‌ ಹಾಸನ್‌ ಅಭಿನಯದ ʼಇಂಡಿಯನ್‌ 2ʼ ಚಿತ್ರದ ಮೊದಲ ಹಾಡು ರಿಲೀಸ್‌; ಕುದುರೆ ಏರಿ ಬಂದ ಉಳಗನಾಯಗನ್‌

ಜುಲೈ 12ಕ್ಕೆ ಚಿತ್ರ ವಿಶ್ವಾದ್ಯಂತ ತೆರೆಗೆ ಬರಲಿದೆ. ಹೀಗಾಗಿ ಚಿತ್ರತಂಡ ಪ್ರಚಾರಕ್ಕೆ ಚಾಲನೆ ನೀಡಿದೆ. ಹಿರಿಯ ಸ್ವಾತಂತ್ರ‍್ಯ ಹೋರಾಟಗಾರ ಸೇನಾಪಾತಿಯು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕಥೆ ಈ ಸಿನಿಮಾದಲ್ಲಿದ್ದು, ಕಮಲ್ ಹಾಸನ್ ಜತೆಗೆ ಸಿದ್ಧಾರ್ಥ್, ರಕುಲ್ ಪ್ರೀತ್ ಸಿಂಗ್, ಕಾಳಿದಾಸ್ ಜಯರಾಮ್, ಪ್ರಿಯಾ ಭವಾನಿ ಶಂಕರ್, ಗುಲ್ಷನ್ ಗ್ರೊವರ್, ವಿವೇಕ್, ಸಮುದ್ರಖನಿ, ನೆಡುಮುಡಿ ವೇಣು, ಬಾಬಿ ಸಿಂಹ, ದೀಪಾ ಶಂಕರ್ ಮುಂತಾದವರು ನಟಿಸಿದ್ದಾರೆ.

ಅನಿರುದ್ಧ್ ರವಿಚಂದರ್ ಅವರು ಈ ಸಿನಿಮಾಗೆ ಸಂಗೀತ ಜವಾಬ್ದಾರಿ ಹೊತ್ತಿದ್ದು, ರವಿವರ್ಮನ್ ಹಾಗೂ ರತ್ನವೇಲು ಅವರು ಛಾಯಾಗ್ರಹಣ ಮಾಡಿದ್ದಾರೆ. ಎ. ಶ್ರೀಕರ್ ಪ್ರಸಾದ್ ಸಂಕಲನದ ಕೆಲಸ ನಿಭಾಯಿಸಿದ್ದಾರೆ.

1996ರಲ್ಲಿ ತೆರೆಕಂಡ ಎಸ್‌.ಶಂಕರ್‌ ನಿರ್ದೇಶನದ ʼಇಂಡಿಯನ್‌ʼ ತಮಿಳು ಚಿತ್ರದಲ್ಲಿ ಕಮಲ್‌ ಹಾಸನ್‌ ಜತೆಗೆ ಮನೀಶಾ ಕೊಯಿರಾಲ, ಊರ್ಮಿಳಾ ಮಾತೋಂಡ್ಕರ್‌, ಸುಕನ್ಯಾ, ಮನೋರಮಾ, ನಡುಮುಡಿ ವೇಣು, ಕಸ್ತೂರಿ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಭಾರತದ ಕ್ಲಾಸಿಕ್‌ ಚಿತ್ರಗಳಲ್ಲಿ ಇದೂ ಒಂದು ಎಂದು ಪರಿಗಣಿಸಲಾಗುತ್ತದೆ. ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿಯ ನಾಮನಿರ್ದೇಶನಕ್ಕೂ ಇದನ್ನು ಪರಿಗಣಿಸಲಾಗಿತ್ತು. ಮಾತ್ರವಲ್ಲ ಕಮಲ್‌ ಹಾಸನ್‌ ತಮ್ಮ ನಟನೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದರು. ಎ.ಆರ್‌.ರೆಹಮಾನ್‌ ಅವರ ಸಂಗೀತವೂ ಸಿನಿಪ್ರಿಯರ ಗಮನ ಸೆಳೆದಿತ್ತು.

Exit mobile version