Site icon Vistara News

Kamal Haasan: ತಮಿಳಿಗನೊಬ್ಬ ದೇಶ ಆಳುವ ದಿನ ಏಕೆ ಬರಬಾರದು? ಕಮಲ್‌ ಹಾಸನ್‌ ಪ್ರಶ್ನೆ!

Kamal Haasan gives a fiery speech at Indian 2 event

ಚೆನ್ನೈ: ಕಮಲ್‌ ಹಾಸನ್‌ (Kamal Haasan) ಅಭಿನಯದ ʻಇಂಡಿಯನ್ 2ʼ ಸಿನಿಮಾ ಆಡಿಯೊ ಲಾಂಚ್‌ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿದೆ. ನಿರ್ದೇಶಕ ಶಂಕರ್, ಕಮಲ್ ಹಾಸನ್, ಅನಿರುದ್ಧ್ ರವಿಚಂದರ್, ರಕುಲ್ ಪ್ರೀತ್ ಸಿಂಗ್ ಮತ್ತು ಕಾಜಲ್ ಅಗರ್ವಾಲ್, ಸಿಲಂಬರಸನ್ ಟಿಆರ್, ಲೋಕೇಶ್ ಕನಕರಾಜ್, ನೆಲ್ಸನ್ ದಿಲೀಪ್‌ಕುಮಾರ್, ಬಾಬಿ ಸಿಂಹ ಮತ್ತು ಬ್ರಹ್ಮಾನಂದಂ ಹಾಜರಿದ್ದರು. ಕಾರ್ಯಕ್ರಮದಲ್ಲಿ ಅತ್ಯಂತ ಖಡಕ್‌ ಆಗಿ ಭಾಷಣ ಮಾಡಿದರು ಕಮಲ್‌ ಹಾಸನ್‌.

ಕಮಲ್‌ ಭಾಷಣದಲ್ಲಿ ʻʻನಾನು ತಮಿಳಿಗ ಮತ್ತು ಭಾರತೀಯ. ನಾನು ಒಮ್ಮೆ ತಮಿಳಿಗ ಹಾಗೂ ಒಮ್ಮೆ ಭಾರತೀಯ ಎರಡೂ ಆಗಬಲ್ಲೆ. ಒಡೆದು ಆಳುವುದು ಬ್ರಿಟಿಷ್ ಪರಿಕಲ್ಪನೆಯಾಗಿತ್ತು. ಅವರು ಹಾಗೆ ಮಾಡಿದರು. ಏಕೆಂದರೆ ಭಾರತೀಯರು ಒಗ್ಗಟ್ಟಾದಾಗ ಓಡಿಹೋಗಲು ಅವರಿಗೆ ಒಂದು ಮನೆ ಎಂಬುದಿತ್ತು. ಆದರೆ ಇಂದು ಒಡೆದು ಆಳುತ್ತಿರುವವರು ಎಲ್ಲಿಗೆ ಓಡಿಹೋಗುತ್ತಾರೆ?’ ಎಂದು ಅವರು ಪ್ರಶ್ನೆ ಮಾಡಿದರು. ಭಾರತವನ್ನು ಒಡೆದು ಆಳುತ್ತಿರುವವರ ವಿರುದ್ಧ ಭಾರತೀಯರು ಒಂದಲ್ಲ ಒಂದು ದಿನ ದಂಗೆ ಏಳುತ್ತಾರೆ ಎಂದರು.

“ಪ್ರತಿಯೊಂದು ನಗರವೂ ​​ನಿಮ್ಮ ನಗರವೇ, ಎಲ್ಲರೂ ನಿಮ್ಮ ಬಂಧುಗಳೇ. ನಮ್ಮ ಈ ತಮಿಳು ರಾಜ್ಯಕ್ಕೆ ಬಂದವರಿಗೆ ನಾವು ಜೀವ ಕೊಡುವುದರಲ್ಲಿಯೂ ಹೆಸರುವಾಸಿಯಾಗಿದ್ದೇವೆ. ತಮಿಳಿಗನೊಬ್ಬ ದೇಶವನ್ನು ಆಳುವ ದಿನ ಏಕೆ ಬರಬಾರದು? ಇದು ನನ್ನ ದೇಶ, ಮತ್ತು ನಾವು ಏಕತೆಯನ್ನು ಕಾಪಾಡಬೇಕುʼʼಎಂದರು.  ಕಮಲ್ ಹಾಸನ್ ನಟರಾಗಿರುವ ಜೊತೆಗೆ ರಾಜಕಾರಣಿಯೂ ಹೌದು, ‘ಮಕ್ಕಳ್ ನಿಧಿ ಮಯಂ’ ಹೆಸರಿನ ಪಕ್ಷ ಕಟ್ಟಿ ನಡೆಸುತ್ತಿದ್ದಾರೆ.

ಇದನ್ನೂ ಓದಿ: Dolly Dhananjay: ದಾವಣಗೆರೆಯಲ್ಲಿ ‘ಕೋಟಿ’ ಅಬ್ಬರ; ಜೂನ್ 14ರಂದು ಸಿನಿಮಾ ತೆರೆಗೆ!

ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ `ಇಂಡಿಯನ್ 2‘ (Indian 2 Audio Launch) ಬಿಡುಗಡೆಗೆ ಮುಂಚಿತವಾಗಿ, ಜೂನ್ 1ರಂದು ಚೆನ್ನೈನ ನೆಹರು ಕ್ರೀಡಾಂಗಣದಲ್ಲಿ ಮೆಗಾ ಆಡಿಯೊ ಬಿಡುಗಡೆ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು.

ಜುಲೈ 12ಕ್ಕೆ ಚಿತ್ರ ವಿಶ್ವಾದ್ಯಂತ ತೆರೆಗೆ ಬರಲಿದೆ. ಹೀಗಾಗಿ ಚಿತ್ರತಂಡ ಪ್ರಚಾರಕ್ಕೆ ಚಾಲನೆ ನೀಡಿದೆ. ಹಿರಿಯ ಸ್ವಾತಂತ್ರ‍್ಯ ಹೋರಾಟಗಾರ ಸೇನಾಪಾತಿಯು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕಥೆ ಈ ಸಿನಿಮಾದಲ್ಲಿದ್ದು, ಕಮಲ್ ಹಾಸನ್ ಜತೆಗೆ ಸಿದ್ಧಾರ್ಥ್, ರಕುಲ್ ಪ್ರೀತ್ ಸಿಂಗ್, ಕಾಳಿದಾಸ್ ಜಯರಾಮ್, ಪ್ರಿಯಾ ಭವಾನಿ ಶಂಕರ್, ಗುಲ್ಷನ್ ಗ್ರೊವರ್, ವಿವೇಕ್, ಸಮುದ್ರಖನಿ, ನೆಡುಮುಡಿ ವೇಣು, ಬಾಬಿ ಸಿಂಹ, ದೀಪಾ ಶಂಕರ್ ಮುಂತಾದವರು ನಟಿಸಿದ್ದಾರೆ.

ಅನಿರುದ್ಧ್ ರವಿಚಂದರ್ ಅವರು ಈ ಸಿನಿಮಾಗೆ ಸಂಗೀತ ಜವಾಬ್ದಾರಿ ಹೊತ್ತಿದ್ದು, ರವಿವರ್ಮನ್ ಹಾಗೂ ರತ್ನವೇಲು ಅವರು ಛಾಯಾಗ್ರಹಣ ಮಾಡಿದ್ದಾರೆ. ಎ. ಶ್ರೀಕರ್ ಪ್ರಸಾದ್ ಸಂಕಲನದ ಕೆಲಸ ನಿಭಾಯಿಸಿದ್ದಾರೆ.

1996ರಲ್ಲಿ ತೆರೆಕಂಡ ಎಸ್‌. ಶಂಕರ್‌ ನಿರ್ದೇಶನದ ʼಇಂಡಿಯನ್‌ʼ ತಮಿಳು ಚಿತ್ರದಲ್ಲಿ ಕಮಲ್‌ ಹಾಸನ್‌ ಜತೆಗೆ ಮನೀಶಾ ಕೊಯಿರಾಲ, ಊರ್ಮಿಳಾ ಮಾತೋಂಡ್ಕರ್‌, ಸುಕನ್ಯಾ, ಮನೋರಮಾ, ನೆಡುಮುಡಿ ವೇಣು, ಕಸ್ತೂರಿ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಭಾರತದ ಕ್ಲಾಸಿಕ್‌ ಚಿತ್ರಗಳಲ್ಲಿ ಇದೂ ಒಂದು ಎಂದು ಪರಿಗಣಿಸಲಾಗುತ್ತದೆ. ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿಯ ನಾಮನಿರ್ದೇಶನಕ್ಕೂ ಇದನ್ನು ಪರಿಗಣಿಸಲಾಗಿತ್ತು. ಮಾತ್ರವಲ್ಲ ಕಮಲ್‌ ಹಾಸನ್‌ ತಮ್ಮ ನಟನೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದರು. ಎ.ಆರ್‌.ರೆಹಮಾನ್‌ ಅವರ ಸಂಗೀತವೂ ಸಿನಿಪ್ರಿಯರ ಗಮನ ಸೆಳೆದಿತ್ತು.

Exit mobile version