Site icon Vistara News

WPL 2024: ಬೀದಿಗಿಳಿದು ಆರ್​ಸಿಬಿ ಅಭಿಮಾನಿಗಳ ಸಂಭ್ರಮ: ʻಭಾರತ ಪುರುಷ ಪ್ರಧಾನʼ ಎಂದ ತಮಿಳು ನಟ!

Siddharth

ಬೆಂಗಳೂರು: ಮಹಿಳೆಯರ ಪ್ರೀಮಿಯರ್‌ ಲೀಗ್‌ನಲ್ಲಿ (WPL 2024) ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡವು ಗೆಲುವು ಸಾಧಿಸಿದ್ದು, 16 ವರ್ಷಗಳ ಕಪ್‌ ಬರವನ್ನು ನೀಗಿಸಿದೆ. ಇದರಿಂದಾಗಿ ಆರ್‌ಸಿಬಿ ಆಟಗಾರ್ತಿಯರು, ಅಭಿಮಾನಿಗಳ ಸಂತಸ ಮುಗಿಲುಮುಟ್ಟಿದೆ. ಸ್ಮೃತಿ ಮಂಧಾನ (Smriti Mandhana) ಪಡೆಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಆದರೆ ಕಾಲಿವುಡ್‌ ನಟ  ಸಿದ್ಧಾರ್ಥ್ ಭಾನುವಾರ ಸಂಜೆ (ಮಾ.17) ತಮ್ಮ ಎಕ್ಸ್ ಖಾತೆಯಲ್ಲಿ ʻʻಬೆಂಗಳೂರಿನಲ್ಲಿ ಆರ್‌ಸಿಬಿ ಆಟಗಾರ್ತಿಯರು ಗೆದ್ದ ಕೂಡಲೇ ಪುರುಷರು ಸ್ಟ್ರೀಟ್‌ನಲ್ಲಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಆದರೆ ಒಬ್ಬ ಹೆಣ್ಣು ಮಗಳು ಅಲ್ಲಿ ಕಾಣ ಸಿಗಲಿಲ್ಲ. ಇದರಲ್ಲೆ ಗೊತ್ತಾಗುತ್ತದೆ. ಭಾರತ ಪುರುಷ ಪ್ರಧಾನ ಎಂಬುದುʼʼ ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ.

ಇನ್ನು ಆರ್‌ಸಿಬಿ ಮಹಿಳೆಯರ ತಂಡವು ಗೆಲುವು ಸಾಧಿಸುತ್ತಲೇ ಬೆಂಗಳೂರಿನ ಸ್ಟ್ರೀಟ್‌ಗಳಲ್ಲಿ ಪುರುಷರು ಸಂಭ್ರಮಿಸಿರುವ ವೀಡಿಯೊವನ್ನು ಸಿದ್ಧಾರ್ಥ್ ಹಂಚಿಕೊಂಡಿದ್ದಾರೆ. ಹಲವು ವರ್ಷಗಳಿಂದ ಪುರುಷರ ತಂಡಕ್ಕೆ ಸಾಧ್ಯವಾಗದ ಸಾಧನೆಯನ್ನು ಮಹಿಳಾ ತಂಡ ಸಾಧಿಸಿದೆ ಎಂದು ಹಲವರು ಹರ್ಷ ವ್ಯಕ್ತಪಡಿಸಿದರು. ಆದರೆ ಸಂಭ್ರಮಾಚರಣೆಯಲ್ಲಿ ಮಹಿಳೆಯರೇ ಇಲ್ಲ ಎಂದು ಈ ರೀತಿ ಟ್ವೀಟ್‌ ಮಾಡಿದ್ದಾರೆ.

ನಟ ಸಿದ್ಧಾರ್ಥ್ ಟ್ವೀಟ್‌ನಲ್ಲಿ ʻʻಮಹಿಳೆಯರ ತಂಡ ಕಪ್‌ ಗೆದ್ದಿದೆ. ಆದರೆ ಆಚರಿಸಲು ಒಬ್ಬ ಮಹಿಳೆ ಕೂಡ ಸ್ಟ್ರೀಟ್‌ಗೆ ಇಳಿಯಲಿಲ್ಲ. ಇದರಲ್ಲೆ ಗೊತ್ತಾಗುತ್ತದೆ. ಭಾರತ ಪುರುಷ ಪ್ರಧಾನ ಎಂಬುದು. ಅಷ್ಟೇ ಅಲ್ಲ ವಿಶೇಷವಾಗಿ ರಾತ್ರಿಯ ಸಮಯದಲ್ಲಿ ಮಹಿಳೆಗೆ ಸ್ವತಂತ್ರವಾಗಿ ಇರಲು ಸಾಧ್ಯವಾಗುತ್ತಿಲ್ಲ ʼʼ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Actor Dhanush: ರಾಜ್‌ಕುಮಾರ್ ಪೆರಿಯಸಾಮಿ ಹೊಸ ಸಿನಿಮಾಗೆ ಈ ಸೂಪರ್‌ಸ್ಟಾರ್‌ ನಾಯಕ?

ನಟ ಸಿದ್ಧಾರ್ಥ್ ಟ್ವೀಟ್‌

ಸಿದ್ಧಾರ್ಥ್ ಕೊನೆಯದಾಗಿ 2023ರಲ್ಲಿ ʻಚಿತ್ತಾʼದಲ್ಲಿ ಕಾಣಿಸಿಕೊಂಡಿದ್ದರು. ಕಮಲ್ ಹಾಸನ್, ಕಾಜಲ್ ಅಗರ್ವಾಲ್ ಮತ್ತು ರಾಕುಲ್ ಪ್ರೀತ್ ಸಿಂಗ್ ನಟಿಸಿರುವ ಶಂಕರ್ ಅವರ ಇಂಡಿಯನ್ 2 ನಲ್ಲಿ ಸಿದ್ಧಾರ್ಥ್ ಶೀಘ್ರದಲ್ಲೇ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ.

ಅಭಿಮಾನಿಗಳಿಗೆ ಫುಲ್ ಖುಷಿ

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಅಭಿಮಾನಿಗಳ ಪಾಲಿಗೆ ಭಾನುವಾರ ಅತ್ಯಂತ ಸಂತೋಷದಾಯಕ ದಿನ. 17 ವರ್ಷಗಳ ನಿಯತ್ತಿಗೆ ಸಿಕ್ಕ ಗೌರವ. 2008ರಲ್ಲಿ ಪುರುಷರ ಟೂರ್ನಿ (ಐಪಿಎಲ್​) ಮೂಲಕ ಆರಂಭಗೊಂಡ ಫ್ರಾಂಚೈಸಿ ಮೊಟ್ಟ ಮೊದಲ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಈ ಫ್ರಾಂಚೈಸಿ ಪಾಲಿಗೆ ಐತಿಹಾಸಿಕ ದಿನವಾಗಿದೆ. ಮಹಿಳೆಯರ ಪ್ರೀಮಿಯರ್ ಲೀಗ್​ನ (WPL 2024) ಎರಡನೇ ಆವೃತ್ತಿಯಲ್ಲಿ ಸ್ಮೃತಿ ಮಂಧಾನಾ ನೇತೃತ್ವದ ತಂಡ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಆರ್​ಸಿಬಿ ಅಭಿಮಾನಿಗಳಿಗೆ ಸಮಾಧಾನ ಹೇಳಿದೆ. ಅದಕ್ಕೆ ಪೂರಕವಾಗಿ ವಿಶ್ವದ ಮೂಲೆಮೂಲೆಗಳಲ್ಲಿರುವ ಆರ್​ಸಿಬಿ ಅಭಿಮಾನಿಗಳು ಬೀದಿಗಿಳಿದು ಸಂಭ್ರಮಾಚರಣೆ ಮಾಡಿದ್ದಾರೆ.

Exit mobile version