Site icon Vistara News

SS Rajamouli: ಜಪಾನ್‌ ಭೂಕಂಪದಲ್ಲಿ ಬದುಕುಳಿದ ರಾಜಮೌಳಿ, ಮಗ ಕಾರ್ತಿಕೇಯ!

SS Rajamouli and son Karthikeya

ಬೆಂಗಳೂರು: ನಿರ್ದೇಶಕ ಎಸ್‌ಎಸ್ ರಾಜಮೌಳಿ (SS Rajamouli ), ಅವರ ಮಗ ಕಾರ್ತಿಕೇಯ ಮತ್ತು ನಿರ್ಮಾಪಕ ಶೋಬು ಯರ್ಲಗಡ್ಡ ಅವರು ಮಾರ್ಚ್ 21ರ ಗುರುವಾರ ಆರ್‌ಆರ್‌ಆರ್‌ನ ವಿಶೇಷ ಪ್ರದರ್ಶನಕ್ಕಾಗಿ ಜಪಾನ್‌ನಲ್ಲಿದ್ದರು. ಈ ವೇಳೆ ಜಪಾನ್‌ನಲ್ಲಿ ನಡೆದ ತಮ್ಮ ಭೂಕಂಪನದ ಅನುಭವವನ್ನು ಹಂಚಿಕೊಂಡಿದ್ದಾರೆ. ತಮ್ಮ ಸ್ಮಾರ್ಟ್ ವಾಚ್‌ನಲ್ಲಿ ಭೂಕಂಪನದ ಬಗ್ಗೆ ಎಚ್ಚರಿಕೆ ನೀಡಿದ ಮೆಸೇಜ್‌ಅನ್ನು ಎಕ್ಸ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಭೂಕಂಪ ಸಂಭವಿಸಿದಾಗ ನಮ್ಮ ಆರ್‌ಆರ್‌ಆರ್ ತಂಡ 28ನೇ ಮಹಡಿಯಲ್ಲಿ ಇತ್ತು ಎಂದು ಬಹಿರಂಗಪಡಿಸಿದರು.

ಕಾರ್ತಿಕೇಯ ಅವರು ತಮ್ಮ ವಾಚ್‌ ಚಿತ್ರವನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡು ಭೂಕಂಪದ ತುರ್ತು ಎಚ್ಚರಿಕೆಯ ಮೆಸೇಜ್‌ ಶೇರ್‌ ಮಾಡಿಕೊಂಡಿದ್ದಾರೆ. ಜತೆಗೆ ಹೀಗೆ ಬರೆದುಕೊಂಡಿದ್ದಾರೆ. “ಇದೀಗ ಜಪಾನ್‌ನಲ್ಲಿ ಭೂಕಂಪನದ ಅನುಭವ ಆಯ್ತು. ನಾವು 28ನೇ ಮಹಡಿಯಲ್ಲಿ ಇದ್ದೆವು. ಇದು ಭೂಕಂಪನ ಎಂದು ತಿಳಿದುಕೊಳ್ಳಲು ನಮಗೆ ಸ್ವಲ್ಪ ಸಮಯ ಹಿಡಿಯಿತು. ನಾವೆಲ್ಲ ಭಯಭೀತರಾದರೂ ಜಪಾನಿಯರು ಸ್ವಲ್ಪವೂ ಕದಲಲಿಲ್ಲ!!ʼʼಎಂದು ಪೋಸ್ಟ್‌ನಲ್ಲಿ ರಾಜಮೌಳಿ ಮತ್ತು ಶೋಬು ಅವರನ್ನು ಟ್ಯಾಗ್ ಮಾಡಿದ್ದಾರೆ.

ಈ ಪೋಸ್ಟ್‌ಗೆ ಫ್ಯಾನ್ಸ್‌ ಕೂಡ ʻʻಮೂವರು ಸುರಕ್ಷಿತವಾಗಿದ್ದರೆ ಸಾಕುʼʼಎಂದು ಕಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು ʻʻಭೂಕಂಪ ಮುಂದುವರಿಯಬಹುದು, ಆದ್ದರಿಂದ ದಯವಿಟ್ಟು ಜಾಗರೂಕರಾಗಿರಿʼʼಎಂದು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: IPL 2024: ಮೊಹಮ್ಮದ್ ಶಮಿ ಬದಲಿಗೆ ಗುಜರಾತ್​ ಸೇರಿದ ಸಂದೀಪ್ ವಾರಿಯರ್

ಮಹೇಶ್‌ ಬಾಬು ಸಿನಿಮಾ ಬಗ್ಗೆ ಜಪಾನ್‌ನಲ್ಲಿ ಬಿಗ್‌ ಅಪ್‌ಡೇಟ್‌ ಕೊಟ್ಟ ರಾಜಮೌಳಿ!

ಎಸ್‌ಎಸ್ ರಾಜಮೌಳಿ (SS Rajamouli) ಅವರು ಪತ್ನಿ ರಮಾ ರಾಜಮೌಳಿ ಅವರೊಂದಿಗೆ ಮಾರ್ಚ್ 18ರಂದು ಜಪಾನ್‌ನಲ್ಲಿ ‘ಆರ್‌ಆರ್‌ಆರ್’ ಪ್ರದರ್ಶನಕ್ಕೆ ಹಾಜರಾಗಿದ್ದರು. ಮತ್ತೊಮ್ಮೆ ಸಿನಿಮಾ ಸ್ಕ್ರೀನಿಂಗ್‌ಗಾಗಿ ನಿರ್ದೇಶಕ ರಾಜಮೌಳಿ ಅಲ್ಲಿಗೆ ಹೋಗಿದ್ದರು.

ಜಪಾನ್‌ನಲ್ಲಿ ನಡೆದ ಸ್ಕ್ರೀನಿಂಗ್‌ನಲ್ಲಿ ಮಾತನಾಡಿದ ಎಸ್‌ಎಸ್ ರಾಜಮೌಳಿ, “ನಮ್ಮ ಮುಂದಿನ ಚಿತ್ರದ ಸ್ಕ್ರಿಪ್ಟ್‌ ಕೆಲಸ ಮಗಿಸಿದ್ದೇವೆ. ಚಿತ್ರ ಪ್ರಿ-ಪ್ರೊಡಕ್ಷನ್ ಪ್ರಕ್ರಿಯೆಯಲ್ಲಿದೆ. ಇನ್ನೂ ಕಾಸ್ಟಿಂಗ್ ಪೂರ್ಣಗೊಂಡಿಲ್ಲ. ಮುಖ್ಯ ನಾಯಕ, ಅಂದರೆ ಮಹೇಶ್‌ ಬಾಬು ಅವರು ಮಾತ್ರ ಫಿಕ್ಸ್‌ ಆಗಿದ್ದಾರೆ. ಆತ ತುಂಬಾ ಒಳ್ಳೆಯ ನಟ. ಸುಂದರ ಕೂಡ. ಸಿನಿಮಾ ಬಿಡುಗಡೆ ಸಮಯದಲ್ಲಿ ಅವರನ್ನು ಇಲ್ಲಿಗೆ ಕರೆತಂದು ನಿಮಗೆ ಪರಿಚಯಿಸುತ್ತೇನೆʼʼ ಎಂದರು.

ಸದ್ಯ ಚಿತ್ರಕ್ಕೆ ʼಎಸ್‌.ಎಸ್‌.ಬಿ.ಎಂ. 29ʼ (SSMB 29) ಎನ್ನುವ ತಾತ್ಕಾಲಿಕ ಶೀರ್ಷಿಕೆ ಇಡಲಾಗಿದೆ. ಮೊದಲ ಬಾರಿಗೆ ಇಬ್ಬರು ಚಿತ್ರಕ್ಕಾಗಿ ಒಂದಾಗುತ್ತಿರುವುದು ಕೂಡ ನಿರೀಕ್ಷೆ ಹೆಚ್ಚಲು ಮತ್ತೊಂದು ಮುಖ್ಯ ಕಾರಣ.

Exit mobile version