Site icon Vistara News

Rave party: ರೇವ್ ಪಾರ್ಟಿಯ ಕುರಿತು ತೆಲುಗು ನಟಿ ಆಶಿ ರಾಯ್ ಸ್ಫೋಟಕ ಹೇಳಿಕೆ!

Rave party telugu actress Ashi Roy in party

ಬೆಂಗಳೂರು: ತಡರಾತ್ರಿ ಎಲೆಕ್ಟ್ರಾನಿಕ್‌ ಸಿಟಿಯ (electronic city) ಫಾರಂ ಹೌಸ್‌ನಲ್ಲಿ (Farm house) ನಡೆದ ರೇವ್‌ ಪಾರ್ಟಿಯಲ್ಲಿ (Rave party) ತೆಲುಗು ನಟಿ ಹೇಮಾ (telugu actress Hema) ಭಾಗಿಯಾಗಿದ್ದು, ಪೊಲೀಸ್‌ ವಶದಲ್ಲಿದ್ದರು. ಆದರೆ ಅಲ್ಲಿ ತಾನಿರಲಿಲ್ಲ ಎಂದು ಹೇಮಾ ವಿಡಿಯೋ ಸಂದೇಶ ಹರಿಬಿಟ್ಟಿದ್ದರು. ಬಳಿಕ ಪೊಲೀಸರು, ಆಕೆ ಪಾರ್ಟಿಯಲ್ಲಿ ಭಾಗಿಯಾಗಿದ್ದನ್ನು ಖಚಿತಪಡಿಸಿದ್ದರು. ಈಗಾಗಲೇ ಪಾರ್ಟಿ ಆಯೋಜಿಸಿದ್ದ ಐವರನ್ನು ಬಂಧಿಸಲಾಗಿದೆ. ಈಗ ಬೆಂಗಳೂರಿನ ರೇವ್ ಪಾರ್ಟಿಯಲ್ಲಿ ಮತ್ತೊಬ್ಬ ನಟಿ ಹೆಸರು ಕೇಳಿ ಬಂದಿದೆ. ತೆಲುಗಿನ ನಟಿ ಆಶಿ ರಾಯ್ ತಾನು ಪಾರ್ಟಿಯಲ್ಲಿ ಇದ್ದೆ ಎಂದು ವಿಡಿಯೊ ಮೂಲಕ ಹೇಳಿಕೊಂಡಿದ್ದಾರೆ.

ರೇವ್‌ ಪಾರ್ಟಿಯಲ್ಲಿ ಹೇಮಾ ಮತ್ತು ಶ್ರೀಕಾಂತ್‌ ಹೆಸರು ಪ್ರಮುಖವಾಗಿ ಕೇಳಿ ಬಂದಿತ್ತು. ಇದೀಗ ಈ ಪಾರ್ಟಿಯಲ್ಲಿ ಆಶಿ ರಾಯ್‌ ಇದ್ದರು ಎಂಬುದು ತಡವಾಗಿ ಬೆಳಕಿಗೆ ಬಂದಿದೆ. ಆಶಿ ರಾಯ್‌ ವಿಡಿಯೊದಲ್ಲಿ ಮಾತನಾಡಿ ʻʻಅದೊಂದು ಬರ್ತ್‌ಡೇ ಪಾರ್ಟಿಯಾಗಿತ್ತು. ಒಳಗೆ ಏನು ನಡೀತಿತ್ತು ಎಂದು ಗೊತ್ತಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ. ದಯವಿಟ್ಟು ನೀವೆಲ್ಲ ನನ್ನ ಬೆಂಬಲಿಸಿ. ನಾನು ಕಷ್ಟಪಟ್ಟು ಉದ್ಯಮದಲ್ಲಿ ಬೆಳೆಯುತ್ತಿರುವ ಹುಡುಗಿ. ದಯವಿಟ್ಟು ನನಗೆ ಸಹಾಯ ಮಾಡಿʼʼ ಎಂದು ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಆಶಿ ರಾಯ್‌ ಹಲವು ಸಂದರ್ಶನದಲ್ಲಿ ಪಾರ್ಟಿಯಲ್ಲಿ ಹೇಮಾ ಅವರನ್ನು ನೋಡಿಲ್ಲ ಎಂದಿದ್ದಾರೆ. ಆಶಿರಾಯ್‌ ಅವರು ಹಲವು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: Drone Prathap: ಡಿಫರೆಂಟ್‌ ಆಗಿ ಬರ್ತ್‌ಡೇ ಸೆಲೆಬ್ರೇಷನ್‌ಗೆ ಡ್ರೋನ್ ಪ್ರತಾಪ್ ಪ್ಲ್ಯಾನ್‌: ವೋಟ್‌ ಹಾಕಿದ್ದು ಸಾರ್ಥಕ ಅಂದ್ರು ಫ್ಯಾನ್ಸ್‌!

ರೇವ್‌ ಪಾರ್ಟಿಯಲ್ಲಿ ನಾನಿಲ್ಲ ಎಂದಿದ್ದ ತೆಲುಗು ನಟಿ ಹೇಮಾ

ಮೂಲಗಳ ಪ್ರಕಾರ, ಮುಜುಗರ ತಪ್ಪಿಸಲು ಅದೇ ಫಾರಂ ಹೌಸ್‌ನಲ್ಲೇ ವಿಡಿಯೋ ಚಿತ್ರೀಕರಿಸಿ ಹೇಮಾ ಅವರು ಹರಿಬಿಟ್ಟಿದ್ದರು. ಹೆಬ್ಬಗೋಡಿ ಫಾರ್ಮ್ ಹೌಸ್ ಒಳಗಡೆಯೇ ವಿಡಿಯೋ ಮಾಡಿ, ತಾನು ಹೈದರಾಬಾದ್‌ ಫಾರ್ಮ್ ಹೌಸ್‌ನಲ್ಲಿದ್ದೀನಿ ಎಂದು ಹೇಳಿದ್ದರು. ಆದರೆ ಪೊಲೀಸರು ಆಕೆಯ ತಪ್ಪು ಮಾಹಿತಿಯನ್ನು ಬಯಲು ಮಾಡಿದ್ದರು.

ಪೊಲೀಸರು ಬಲವಂತವಾಗಿ ಡೋರ್ ತೆಗಿಸಿ ಒಳಹೋಗಿದ್ದು, ಸದ್ಯ ಫಾರ್ಮ್ ಹೌಸಿನ ಇಂಚಿಂಚನ್ನೂ ಬಿಡದೆ ಜಾಲಾಡುತ್ತಿದ್ದಾರೆ. 3 ಜನ ಡ್ರಗ್ ಪೆಡ್ಲರ್‌ಗಳು, ಆಯೋಜಕ ವಾಸು ಸೇರಿ ಐದು ಜನರನ್ನು ಬಂಧಿಸಲಾಗಿದೆ. ಪಾರ್ಟಿಯಲ್ಲಿ ಡ್ರಗ್ ಪೆಡ್ಲರ್‌ಗಳೂ ಭಾಗಿಗಳಾಗಿದ್ದರು. ಇವರು ಯಥೇಚ್ಛವಾಗಿ ಮಾದಕ ವಸ್ತುಗಳನ್ನು ಪೂರೈಸುತ್ತಿದ್ದರು. ವಾಸು ಹುಟ್ಟಿದ ಹಬ್ಬಕ್ಕೆ ಪಾರ್ಟಿ ಆಯೋಜಿಸಿದ ಆರ್ಗನೈಸರ್ ಅರುಣ್, ಸಿದ್ಧಿಕಿ, ರಣಬೀರ್, ನಾಗಬಾಬುರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮಾದಕ ವಸ್ತು ಸಿಕ್ಕಿದಂತಹ ಐಷಾರಾಮಿ ಮರ್ಸಿಡಿಸ್‌ ಬೆಂಜ್‌, ರೇಂಜ್ ರೋವರ್, ಆಡಿ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ಪೊಲೀಸರು ರೇವ್‌ ಪಾರ್ಟಿಯಲ್ಲಿದ್ದ 101 ಮಂದಿಯನ್ನೂ ಕೂರಿಸಿಕೊಂಡು, ಯಾರ್ಯಾರು ಡ್ರಗ್ಸ್‌ ತೆಗೆದುಕೊಂಡಿದ್ದಾರೆ ಎಂಬುದಕ್ಕೆ ವೈದ್ಯಕೀಯ ಪರೀಕ್ಷೆ ಮಾಡಿಸುತ್ತಿದ್ದಾರೆ. ಮೆಡಿಕಲ್‌ ಟೀಮನ್ನು ಫಾರಂ ಹೌಸ್‌ಗೆ ಕರೆಸಲಾಗಿದ್ದು, ಮೆಡಿಕಲ್‌ ಮುಗಿಯುವವರೆಗೆ ಎಲ್ಲ ಅತಿಥಿಗಳನ್ನೂ ಫಾರಂ ಹೌಸ್‌ ತೊರೆಯದಂತೆ ನಿರ್ಬಂಧಿಸಲಾಗಿದೆ. ಸದ್ಯ 30 ಜನ ಹುಡುಗಿಯರು, 71 ಜನ ಪುರುಷರು ಹೀಗೆ ಒಟ್ಟು 101 ಜನರ ವಿಚಾರಣೆ ನಡೆಯುತ್ತಿದೆ.

Exit mobile version