ಬೆಂಗಳೂರು: ‘ಸೂಪರ್ ಸ್ಟಾರ್’ ಮಹೇಶ್ ಬಾಬು (Mahesh Babu) ಮತ್ತು ನಮ್ರತಾ ಶಿರೋಡ್ಕರ್ (Namrata Shirodkar) ಅವರ ಪುತ್ರಿ ಸಿತಾರಾ ಘಟ್ಟಮನೇನಿ (Sitara Ghattamaneni) ಈಗಾಗಲೇ ಜಾಹೀರಾತಿನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಸೋಶಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಆದರೀಗ ಸಿತಾರಾ ಘಟ್ಟಮನೇನಿ ಹೆಸರಲ್ಲಿ ಹಣ ಕೇಳಲು ಶುರು ಮಾಡಿದ್ದಾರೆ ವಂಚಕರು. ಸಾಮಾಜಿಕ ಮಾಧ್ಯಮದಲ್ಲಿ ಮಹೇಶ್ ಬಾಬು ಪುತ್ರಿಯ ಹೆಸರಲ್ಲಿ ವಂಚಕರು ದುರುಪಯೋಗಪಡಿಸಿಕೊಂಡ ಬಗ್ಗೆ ಮಹೇಶ್ ಬಾಬು ಅವರ ನಿರ್ಮಾಣ ಸಂಸ್ಥೆ GMB ಎಂಟರ್ಟೈನ್ಮೆಂಟ್ ಪೋಸ್ಟ್ ಮುಖಾಂತರ ಮಾಹಿತಿ ನೀಡಿದೆ. ಮಹೇಶ್ ಅವರ ಪುತ್ರಿಯ ಹೆಸರಲ್ಲಿ ನಕಲಿ ಖಾತೆ ತೆಗೆದು ಲಕ್ಷ ಲಕ್ಷ ಹಣ ಪಡೆದು ಜನರಿಗೆ ವಂಚನೆ ಮಾಡುತ್ತಿದ್ದಾರೆ. ಇದೀಗ ಮಹೇಶ್ ಅವರು ಈ ಬಗ್ಗೆ ದೂರು ಸಹ ದಾಖಲಿಸಿದ್ದಾರೆ.
ಸಿತಾರಾ ಎಂಬ ನಕಲಿ ಖಾತೆಯನ್ನು ರಚಿಸಿ, ಹಣ ಕೇಳಲು ಶುರು ಮಾಡಿದ್ದಾರೆ ಎಂದು ಪತ್ರದ ಮೂಲಕ ತಿಳಿಸಿದ್ದಾರೆ. ʻʻಮಾದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿತಾರಾ ಘಟ್ಟಮನೇನಿ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಯಾಗಿದ್ದು, ವಂಚಕರು ಹಣ ಕೇಳುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಜಾಗರೂಕರಾಗಿರಬೇಕು. ಯಾವುದೇ ಅನುಮಾನಾಸ್ಪದ ಚಟುವಟಿಕೆ ಸಂಭವಿಸಿದ್ದಲ್ಲಿ ದಯವಿಟ್ಟು ತಿಳಿಸಿ. ವಂಚಕರನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ. ಟೀಮ್ GMBʼʼಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಟಿಪ್ಪಣಿಯಲ್ಲಿ ಸಿತಾರಾ ಘಟ್ಟಮನೇನಿ ಅವರ ಅಧಿಕೃತ ಖಾತೆಯ ಲಿಂಕ್ ಕೂಡ ಹಾಕಿದ್ದಾರೆ. ಈ ಖಾತೆಯನ್ನು ಒಂದನ್ನು ಹೊರತುಪಡಿಸಿ ಬೇರೆ ಯಾವುದೇ ಹ್ಯಾಂಡಲ್ವನ್ನು ನಂಬಬೇಡಿ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಸಿತಾರಾ ಘಟ್ಟಮನೇನಿ ಅವರು ಸೋಷಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಆಗಾಗ ಡ್ಯಾನ್ಸ್ ವಿಡಿಯೊಗಳನ್ನು ಹಂಚಿಕೊಂಡು ಸಖತ್ ಸುದ್ದಿಯಲ್ಲಿ ಇರುತ್ತಾರೆ. ಇತ್ತೀಚೆಗಷ್ಟೇ, ಸಿತಾರಾ ಅವರು ಮಹೇಶ್ ಬಾಬು ಅವರ ಇತ್ತೀಚಿನ ಬಿಡುಗಡೆಯಾದ ʻಗುಂಟೂರು ಖಾರಂʼ ಸಿನಿಮಾ ಟೈಟಲ್ ಟ್ರ್ಯಾಕ್ಗೆ ಸಖತ್ ಸ್ಟೆಪ್ಸ್ ಹಾಕಿದ್ದರು. ಅಭಿಮಾನಿಗಳು ಕೂಡ ಸಿತಾರಾ ಡ್ಯಾನ್ಸ್ಗೆ ಮೆಚ್ಚುಗೆ ಸೂಚಿಸಿದ್ದರು.
ಇದನ್ನೂ ಓದಿ: Mahesh Babu: ರಾಜಮೌಳಿ ನಿರ್ದೇಶನದ ಚಿತ್ರಕ್ಕಾಗಿ ಮಹೇಶ್ ಬಾಬು ಪಡೆಯುವ ಸಂಭಾವನೆ ಎಷ್ಟು?
ಸಿತಾರಾ ಘಟ್ಟಮನೇನಿ ಈಗ ಪ್ರೀಮಿಯಂ ಆಭರಣ ಬ್ರ್ಯಾಂಡ್ನ ರಾಯಭಾರಿಯಾಗಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಅತಿ ದೊಡ್ಡ ಜಾಹೀರಾತು ಒಪ್ಪಂದಕ್ಕೆ ಸಹಿ ಮಾಡಿದ ಮೊದಲ ಭಾರತೀಯ ಸ್ಟಾರ್ ಕಿಡ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸಿತಾರಾ ಅವರು ಪ್ರತಿಷ್ಠಿತ ಆಭರಣ ಬ್ರ್ಯಾಂಡ್ ಪಿಎಂಜೆ ಜ್ಯುವೆಲರಿಯ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ.