ಬೆಂಗಳೂರು: ಬ್ಯಾಂಕಾಕ್ ಪ್ರವಾಸದ ಸಂದರ್ಭದಲ್ಲಿ ಹಠಾತ್ ಹೃದಯ ಸ್ತಂಭನದಿಂದ (Sudden Cardiac arrest) ಮೃತಪಟ್ಟ ಸ್ಪಂದನಾ ವಿಜಯ ರಾಘವೇಂದ್ರ (Spandana vijay Raghavendra) ಅವರ ಪಾರ್ಥಿವ ಶರೀರವನ್ನು (Dead body) ಮಂಗಳವಾರ ಸಂಜೆಯ ವೇಳೆಗೆ ಆಸ್ಪತ್ರೆಯಿಂದ ಬಿಟ್ಟು ಕೊಡುವ ನಿರೀಕ್ಷೆ ಇದೆ. ಮಂಗಳವಾರ ರಾತ್ರಿ 11 ಗಂಟೆಯ ಹೊತ್ತಿಗೆ ಪಾರ್ಥಿವ ಶರೀರ ಬೆಂಗಳೂರು ತಲುಪಲಿದ್ದು, ಬುಧವಾರ ಬೆಂಗಳೂರಿನಲ್ಲೇ ಅಂತ್ಯಕ್ರಿಯೆ ನಡೆಯಲಿದೆ.
ತಮ್ಮ ಕುಟುಂಬದ ಸೋದರ ಸಂಬಂಧಿಗಳ ಜತೆ ಎಂಟು ದಿನಗಳ ಹಿಂದೆ ಬ್ಯಾಂಕಾಕ್‌ಗೆ ತೆರಳಿದ್ದ ಸ್ಪಂದನಾ ಅವರು ಭಾನುವಾರ ಸಂಜೆ ಶಾಪಿಂಗ್ ಮುಗಿಸಿದ ಬಳಿಕ ಲೋ ಬಿಪಿಗೆ ಒಳಗಾಗಿ ಕುಸಿದುಬಿದ್ದಿದ್ದರು. ಈ ಮಾಹಿತಿಯನ್ನು ಪಡೆದ ನಟ ವಿಜಯ ರಾಘವೇಂದ್ರ ಅವರು ತುರ್ತಾಗಿ ಬ್ಯಾಂಕಾಕ್‌ಗೆ ತೆರಳಿದ್ದರು. ಅವರು ತಲುಪುವ ಹೊತ್ತಿಗೆ ಸ್ಪಂದನಾ ಪ್ರಾಣಪಕ್ಷಿ ಹಾರಿ ಹೋಗಿತ್ತು. ಈ ನಡುವೆ ಅವರನ್ನು ಬ್ಯಾಂಕಾಕ್‌ನ ಕೆಸಿಎಂಎಚ್ ಹಾಸ್ಪಿಟಲ್ (king chulalongkoran hospital)ಗೆ ಕರೆದುಕೊಂಡು ಹೋಗಲಾಗಿತ್ತು. ಸೋಮವಾರ ಸ್ಪಂದನಾ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದೆ. ಆದರೆ, ಮೃತದೇಹ ಹಸ್ತಾಂತರ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ಹೇಳಲಾಗಿದೆ. ಈ ಪ್ರಕ್ರಿಯೆ ಮಂಗಳವಾರ ಸಂಜೆ 4 ಗಂಟೆಯ ವೇಳೆಗೆ ಮುಕ್ತಾಯವಾಗುವ ನಿರೀಕ್ಷೆ ಇದೆ.
ಮಂಗಳವಾರ ಮಲ್ಲೇಶ್ವರದ ನಿವಾಸದ ಬಳಿ ಮಾತನಾಡಿದ ಸ್ಪಂದನಾ (Vijay Raghavendra wife) ಅವರ ದೊಡ್ಡಪ್ಪ ಬಿ.ಕೆ. ಹರಿಪ್ರಸಾದ್ ಅವರು, ಬ್ಯಾಂಕಾಕ್‌ನಲ್ಲಿ ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದೆ. ಬ್ಯಾಂಕಾಕ್‌ನಲ್ಲಿ ಮೃತದೇಹದ ಹಸ್ತಾಂತರ ಪ್ರಕ್ರಿಯೆ ಮಧ್ಯಾಹ್ನ 1 ಗಂಟೆಗೆ ಮುಗಿಯಲಿದೆ. ರಾತ್ರಿ ರಾತ್ರಿ 11ಕ್ಕೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮೃತದೇಹ ಆಗಮಿಸುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಬುಧವಾರ ಬೆಳಗ್ಗಿನಿಂದ ಮನೆಯ ಬಳಿ ಮೃತದೇಹದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಬಳಿಕ ಶ್ರೀರಾಂಪುರದ ಹರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: Spandana Vijay Raghavendra : ಸ್ಪಂದನಾಗೆ ಕಂಟಕವಿತ್ತಾ? ನಾಲ್ಕು ತಿಂಗಳ ಮೊದಲೇ ಸೂಚನೆ ಸಿಕ್ಕಿತ್ತಾ?
ಹೋಟೆಲ್‌ನಲ್ಲೇ ಸಾವು ಸಂಭವಿಸಿದ್ದರಿಂದ ವಿಳಂಬ
ಬ್ಯಾಂಕಾಕ್‌ನಲ್ಲಿನ ಹೋಟೆಲ್‌ನಲ್ಲಿ ಸ್ಪಂದನಾ ಸಾವು ಸಂಭವಿಸಿರುವುದರಿಂದ ಕಾನೂನಾತ್ಮಕ ಪ್ರಕ್ರಿಯೆಗಳು ವಿಳಂಬವಾಗುತ್ತಿವೆ ಎಂದು ಹೇಳಲಾಗಿದೆ. ಮೃತದೇಹವನ್ನು ಹೋಟೆಲ್‌ನಿಂದ ಆಸ್ಪತ್ರೆಗೆ ತಂದಿರುವುದರಿಂದ ಸಾವಿನ ಕಾರಣವನ್ನು ಆಸ್ಪತ್ರೆಯವರು ಕೂಡಾ ಪತ್ತೆ ಹಚ್ಚಬೇಕಾಗಿರುವುದರಿಂದ ವಿಳಂಬವಾಗಿದೆ. ಒಂದೊಮ್ಮೆ ಕುಸಿದು ಬಿದ್ದು ಆಸ್ಪತ್ರೆಗೆ ಸೇರಿಸಲ್ಪಟ್ಟು ಅಲ್ಲೇ ಸಾವು ಸಂಭವಿಸಿದ್ದರೆ ಸಾವಿನ ನಿಖರ ಕಾರಣ ಅಲ್ಲೇ ಸ್ಪಷ್ಟವಾಗುತ್ತಿತ್ತು.
ಈ ನಡುವೆ ಆಸ್ಪತ್ರೆಯ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿದರೂ ಮೃತದೇಹ ರವಾನೆಗೆ ಇನ್ನಷ್ಟು ಸಮಯಾವಕಾಶ ಬೇಕಾಗುತ್ತದೆ. ಅಲ್ಲಿನ ಎಲ್ಲ ದಾಖಲೆಗಳು ಥಾಯ್ ಭಾಷೆಯಲ್ಲಿರುತ್ತವೆ. ಅದನ್ನು ಇಂಗ್ಲಿಷ್‌ಗೆ ಭಾಷಾಂತರಿಸಿ ಅದನ್ನು ಭಾರತೀಯ ದೂತಾವಾಸಕ್ಕೆ ರವಾನಿಸಬೇಕಾಗುತ್ತದೆ. ಅಲ್ಲಿ ಎಲ್ಲ ಕಾನೂನಾತ್ಮಕ ಪ್ರಕ್ರಿಯೆಗಳನ್ನು ನಡೆಸಿದ ಬಳಿಕ ಮೃತದೇಹ ರವಾನೆಗೆ ಅವಕಾಶ ಕೊಡಲಾಗುತ್ತದೆ.
ಆದರೆ, ಈ ಪ್ರಕ್ರಿಯೆ ವಿಳಂಬವಾದಷ್ಟು ಮೃತದೇಹ ರವಾನೆಗೆ ವಿಳಂಬವಾಗುತ್ತದೆ. ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ವಿಮಾನ ಇರುವುದು ಒಂದು ಮಧ್ಯಾಹ್ನ ಎರಡು ಗಂಟೆಗೆ, ಇನ್ನೊಂದು ರಾತ್ರಿ 9.30ಕ್ಕೆ. ಈಗಿನ ಲೆಕ್ಕಾಚಾರದ ಪ್ರಕಾರ ರಾತ್ರಿ 9.30ರ ವಿಮಾನದಲ್ಲಿ ಶವವನ್ನು ತರಬಹುದಾಗಿದೆ.