Site icon Vistara News

Spandana Vijay Raghavendra: ತಮ್ಮಂದಿರಿಗೆ ಧೈರ್ಯ ತುಂಬಿಯೂ ಬಿಕ್ಕಿ ಬಿಕ್ಕಿ ಅತ್ತ ದೊಡ್ಮನೆ ಸೊಸೆ ಅಶ್ವಿನಿ

ashwini puneeth rajkumar

ಬೆಂಗಳೂರು: ರಾಜ್‌ಕುಮಾರ್‌ ಕುಟುಂಬದ ಸೊಸೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ (ashwini puneeth rajkumar) ಅವರು ಮಲ್ಲೇಶ್ವರಂನ ನಿವಾಸಕ್ಕೆ ಆಗಮಿಸಿ ಪತ್ನಿಯನ್ನು ಕಳೆದುಕೊಂಡ (Spandana Vijay Raghavendra) ಚಿನ್ನಾರಿ ಮುತ್ತನಿಗೆ ಅಕ್ಕನ ಸ್ಥಾನದಲ್ಲಿ ನಿಂತು ಧೈರ್ಯ ತುಂಬಿದರು.

ಮಕ್ಕಳು ಧೃತಿ ಹಾಗೂ ವಂದಿತಾರೊಂದಿಗೆ ಸ್ಪಂದನ ಅಂತಿಮ ದರ್ಶನಕ್ಕೆ ಅಶ್ವಿನಿ ಹಾಜರಾದರು. ಇಂಥದೇ ದುರಂತದಲ್ಲಿ ತಮ್ಮ ಪತಿ ಪುನೀತ್‌ ಅವರನ್ನು ಕಳೆದುಕೊಂಡ ಅಶ್ವಿನಿ, ಸ್ಪಂದನ ಅವರನ್ನು ನೋಡಿ ಕಂಬನಿ ಮಿಡಿದರು. ನಂತರ ವಿಜಯ್ ರಾಘವೇಂದ್ರ ಹಾಗೂ ಶ್ರೀಮುರಳಿ ಕೈ ಹಿಡಿದು ಸಾಂತ್ವನ ಹೇಳಿದರು. ಸ್ವಂತ ಅಕ್ಕನಂತೆ ತಮ್ಮಂದಿರಿಗೆ ಧೈರ್ಯ ತುಂಬಿದರು. ಒಂದೇ ಬಗೆಯ ದುಃಖಕ್ಕೆ ತುತ್ತಾಗಿರುವ ಈ ಎರಡು ಜೀವಗಳ ಮುಖಾಮುಖಿ ಹೃದಯಸ್ಪರ್ಶಿಯಾಗಿತ್ತು. ದೊಡ್ಮನೆ ಕುಡಿಗಳಾದ ಯುವ ಹಾಗೂ ಗುರು ರಾಜ್‌ಕುಮಾರ್ ಕೂಡ ಅಶ್ವಿನಿ ಜೊತೆಗೇ ಆಗಮಿಸಿ ವಿಜಯ್‌ಗೆ ಸಾಂತ್ವನ ನೀಡಿದರು.

ಭಾವುಕರಾದ ಬಿ.ಕೆ ಹರಿಪ್ರಸಾದ್

ಸ್ಪಂದನಾ ಅಂತ್ಯಕ್ರಿಯೆ ಬಗ್ಗೆ ವಿವರ ನೀಡುತ್ತಾ ಬಿ.ಕೆ ಹರಿಪ್ರಸಾದ್ ಭಾವುಕರಾದರು. ʼಸ್ಪಂದನಾ ಅವರ ಪಾರ್ಥಿವ ಶರೀರ 2 ಗಂಟೆ ತನಕ ಇಲ್ಲೇ ಇರುತ್ತದೆ. ಅಂತಿಮ ಯಾತ್ರೆ 2 ಗಂಟೆಗೆ ಆರಂಭ ಮಾಡುತ್ತೇವೆ. ಅವರ ಅಂತ್ಯಕ್ರಿಯೆ ಹರಿಶ್ಚಂದ್ರ ಘಾಟ್‌ನಲ್ಲಿ 2.30ರಿಂದ 3.30ರ ಒಳಗೆ ಮಾಡುತ್ತೇವೆʼ ಎಂದು ಹರಿಪ್ರಸಾದ್‌ ನುಡಿದರು.

ಮಾಸ್ಟರ್ ಆನಂದ್ ಹಾಗೂ ಪತ್ನಿ ಯಶಸ್ವಿನಿ ಸ್ಪಂದನ ಅಂತಿಮ ದರ್ಶನಕ್ಕೆ ಆಗಮಿಸಿದರು. ಗೆಳೆಯನಿಗೆ ಹೆಗಲ ಮೇಲೆ ಕೈ ಹಾಕಿ ಆನಂದ್‌ ಧೈರ್ಯ ತುಂಬಿದರು. ರಾಘುವಿಗೆ ಇನ್ನು ಕುಟುಂಬದ ಜವಾಬ್ದಾರಿ ತುಂಬಾ ಇದೆ. ಇನ್ನು ಮೇಲೆ ಆತ ತಂದೆಯಾಗಿ.. ತಾಯಿಯಾಗಿ.. ಮನೆ ಜವಾಬ್ದಾರಿ ತೆಗೆದುಕೊಳ್ಳಬೇಕಿದೆ. ಸ್ಪಂದನ ಮುಖ ನೋಡಿದಾಗ ಮುತ್ತೈದೆ ಕಳೆ, ಲಕ್ಷ್ಮಿ ಕಳೆ ಎದ್ದು ಕಾಣಿಸುತ್ತಿದೆ ಎಂದು ಆನಂದ್‌ ಹೇಳಿದರು.

ಸ್ಪಂದನ ಅಂತಿಮ ದರ್ಶನ ಪಡೆದ ನಟ ಜಯರಾಂ ಕಾರ್ತಿಕ್, ಪಾರ್ಥಿವ ಶರೀರವನ್ನು ನೋಡಿ ಬಿಕ್ಕಿ ಬಿಕ್ಕಿ ಅತ್ತರು. ವಿಜಯ್ ರಾಘವೇಂದ್ರ ಅವರಿಗೆ ಬಿಗಿ ಅಪ್ಪುಗೆ ಕೊಟ್ಟು ದುಃಖ ಹೊರಹಾಕಿದರು.

ದೃಷ್ಟಿ ಬಿತ್ತು ಅನಿಸುತ್ತದೆ: ವಿನೋದ್‌ ರಾಜ್‌

ಮುದ್ದಾದ ಚಂದ್ರನಂತೆ ಇದ್ದ ಜೋಡಿ ಇವರದು. ಅಂಥ ಚಂದ್ರನಿಗೆ ದೃಷ್ಟಿ ಬಿತ್ತೇ ಎಂದು ಆಶ್ಚರ್ಯ ಆಗುತ್ತಿದೆ. ನಾನು ಇರಲಿ ಇಲ್ಲದಿರಲಿ, ನನ್ನ ಪ್ರೀತಿ ನಿನ್ನ ಜೊತೆ ಇರಲಿ ಎಂದು ಹೇಳಿ ಹೋಗಿದ್ದಾರೆ ಸ್ಪಂದನ ಎಂದು ಪಾರ್ಥಿವ ಶರೀರ ದರ್ಶನದ ಬಳಿಕ ನಟ ವಿನೋದ್‌ ರಾಜ್‌ ಹೇಳಿದರು. ʼಪ್ರಪಂಚ ಬಿಟ್ಟು ಎಲ್ಲರೂ ಒಂದು ದಿನ ಹೋಗಬೇಕು. ಆದರೆ ಅದಕ್ಕೂ ಒಂದು ನಿಗದಿತ ವಯಸ್ಸು ಇತ್ತು. ಆದರೆ ಇತ್ತೀಚೆಗೆ ಕಾರಣವಿಲ್ಲದ ಅಕಾಲಿಕ ಮರಣ ಹೆಚ್ಚಾಗಿದೆʼ ಎಂದರು.

ಚಿತ್ರರಂಗದ ಇನ್ನಷ್ಟು ಗಣ್ಯರು, ಸ್ಪಂದನ ಕುಟುಂಬ ಬಳಗದವರು ಹಾಗೂ ಸ್ನೇಹಿತರು ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ. ಶೋಕಸಾಗರದಲ್ಲಿ ಚಿನ್ನಾರಿಮುತ್ತ ಕುಟುಂಬಕ್ಕೆ ಧೈರ್ಯ ಹೇಳಲು ಸಾರ್ವಜನಿಕರು ಕೂಡ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.

ಇದನ್ನೂ ಓದಿ: Spandana Vijay Raghavendra : ರಾಜ್‌ ಕುಟುಂಬದಲ್ಲೇಕೆ ಪದೇಪದೆ ದುರಂತ; ಅಷ್ಟಮಂಗಳ ಪ್ರಶ್ನೆ ಇಡಲು ಚಿಂತನೆ

Exit mobile version