Site icon Vistara News

Spandana Vijy Raghavendra : ನಾಳೆ ಸ್ಪಂದನಾ ಉತ್ತರಕ್ರಿಯೆ, ಮಲ್ಲೇಶ್ವರಂ ಆಟದ ಮೈದಾನದಲ್ಲಿ ಭೋಜನ ವ್ಯವಸ್ಥೆ

Spandana Vijaya Raghavendra

ಬೆಂಗಳೂರು: ಬ್ಯಾಂಕಾಕ್‌ ಪ್ರವಾಸ (Bangkok tour) ವೇಳೆ ಹಠಾತ್‌ ಹೃದಯಾಘಾತದಿಂದ (Sudden Cardiac arrest) ನಿಧನರಾದ ಸ್ಪಂದನಾ ವಿಜಯ ರಾಘವೇಂದ್ರ (Spandana vijay Raghavendra) ಅವರ ಉತ್ತರ ಕ್ರಿಯೆ ಆಗಸ್ಟ್‌ 16ರಂದು ಮಲ್ಲೇಶ್ವರದಲ್ಲಿರುವ (Malleshwara house) ಸ್ಪಂದನಾ ಅವರ ತವರು ಮನೆಯಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಸ್ಪಂದನಾ ಅವರು ಆಗಸ್ಟ್‌ 6ರಂದು ರಾತ್ರಿ ಬ್ಯಾಂಕಾಕ್‌ನ ಹೋಟೆಲ್‌ನಲ್ಲಿರುವ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದರು. ಆಗಸ್ಟ್‌ 8ರಂದು ರಾತ್ರಿ ಅವರ ಪಾರ್ಥಿವ ಶರೀರವನ್ನು ವಿಮಾನ ಮೂಲಕ ತರಲಾಗಿತ್ತು. ಆಗಸ್ಟ್‌ 9ರಂದು ಮಲ್ಲೇಶ್ವರದ ಮನೆಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ನೀಡಿದ ಬಳಿಕ ಸಂಜೆ ಶ್ರೀರಾಂಪುರದ ಹರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯಕ್ರಿಯೆ ನಡೆಸಲಾಗಿತ್ತು.

ಕಳೆದ ಶುಕ್ರವಾರ (ಆಗಸ್ಟ್‌ 11) ಮಲ್ಲೇಶ್ವರದಲ್ಲಿರುವ ತಂದೆ, ನಿವೃತ್ತ ಪೊಲೀಸ್‌ ಅಧಿಕಾರಿ ಬಿ.ಕೆ. ಶಿವರಾಂ ಅವರ ಮನೆಯಲ್ಲಿ ಹಾಗೂ ಹರಿಶ್ಚಂದ್ರ ಘಾಟ್‌ನಲ್ಲಿ ಹಾಲು ತುಪ್ಪದ ಕಾರ್ಯಕ್ರಮವನ್ನು ನೆರವೇರಿಸಲಾಗಿತ್ತು. ಅಲ್ಲಿಂದ ಸ್ಪಂದನಾ ಅವರ ಅಸ್ಥಿಗಳನ್ನು ಮಂಡ್ಯದ ತ್ರಿವೇಣಿ ಸಂಗಮದಲ್ಲಿ ಕಾವೇರಿ ನದಿಯಲ್ಲಿ ವಿಲೀನ ಮಾಡಲಾಯಿತು. ಈ ವೇಳೆ ಪುತ್ರ ಶೌರ್ಯನಿಗೆ ಕೇಶ ಮುಂಡನ ಮಾಡಲಾಗಿತ್ತು. ಸ್ಪಂದನಾ ಅವರ ಪತಿ ವಿಜಯ ರಾಘವೇಂದ್ರ, ತಂದೆ ಬಿ.ಕೆ. ಶಿವರಾಂ, ಸಹೋದರ ರಕ್ಷಿತ್‌ ಶಿವರಾಂ, ಮಾವ ಚಿನ್ನೇಗೌಡರು, ವಿಜಯ ರಾಘವೇಂದ್ರ ಅವರ ಸೋದರ ಶ್ರೀಮುರುಳಿ ಸೇರಿದಂತೆ ಹಲವರು ಪಾಲ್ಗೊಂಡರು.

ಉತ್ತರ ಕ್ರಿಯೆಯ ದಿನ ಏನೇನು ಕಾರ್ಯಕ್ರಮ?

  1. ಮಲ್ಲೇಶ್ವರದ ಬಿ.ಕೆ. ಶಿವರಾಂ ಅವರ ಮನೆಯಲ್ಲಿ ಆಗಸ್ಟ್‌ 16ರಂದು ಬೆಳಗ್ಗೆ 8 ಗಂಟೆಯಿಂದ ಶಾಂತಿ ಹೋಮ ನಡೆಯಲಿದೆ.
  2. ಮಧ್ಯಾಹ್ನ ಒಂದು ಗಂಟೆಯಿಂದ ಕೋದಂಡರಾಮಪುರದ ಯಂಗ್‌ ಸ್ಟರ್ಸ್‌ ಕಬಡ್ಡಿ ಆಟದ ಮೈದಾನದಲ್ಲಿ ಭೋಜನ ವ್ಯವಸ್ಥೆ ಮಾಡಲಾಗಿದೆ ಎಂದು ಬಿ.ಕೆ. ಶಿವರಾಂ ಮತ್ತು ಎಸ್‌.ಎ. ಚೆನ್ನೇಗೌಡರ ಕುಟುಂಬಿಕರು ತಿಳಿಸಿದ್ದಾರೆ.

ಇದನ್ನೂ ಓದಿ: Spandana Vijay Raghavendra: ಸ್ಪಂದನಾ ಬಾಲ್ಯ ಹೇಗಿತ್ತು? ಹಳೆಯ ಫೋಟೊಗಳು ವೈರಲ್‌!

spandana

ಕಣ್ಣೀರ ಕೋಡಿಗೆ ಕಾರಣವಾದ ಸ್ಪಂದನಾ ನಿರ್ಗಮನ

    ವಿಜಯ ರಾಘವೇಂದ್ರ ಮತ್ತು ಸ್ಪಂದನಾ ಅವರ ಅನುರೂಪ ದಾಂಪತ್ಯ ಎಲ್ಲರ ಗಮನ ಸೆಳೆದಿತ್ತು. ಇಬ್ಬರೂ ಹೃದಯವಂತರಾಗಿ, ಸೌಜನ್ಯದ ನಡವಳಿಕೆಯಿಂದ ಪ್ರೀತಿಪಾತ್ರರಾಗಿದ್ದರು. ಹೀಗಾಗಿ ಬ್ಯಾಂಕಾಕ್‌ನಲ್ಲಿ ಸಂಭವಿಸಿದ ಸ್ಪಂದನಾ ಸಾವು ಎಲ್ಲರ ಮನಸ್ಸನ್ನು ಕಲಕಿತ್ತು. ಅದರ ಜತೆಗೆ ಇಷ್ಟು ಸಣ್ಣ ವಯಸ್ಸಿನಲ್ಲಿ ಹೃದಯಾಘಾತವಾಗಿದ್ದು ಎಲ್ಲರ ಹೃದಯ ಹಿಂಡಿತ್ತು. ಅದರ ಜತೆಗೆ ರಾಜ್‌ ಕುಟುಂಬ ಮತ್ತು ಬಂಧುಗಳ ಕುಟುಂಬದಲ್ಲಿ ಬೆನ್ನು ಬೆನ್ನಿಗೆ ಸಂಭವಿಸಿದ ದುರಂತಗಳು ಎಲ್ಲರನ್ನೂ ಕಾಡಿದ್ದವು. ಈ ಹಿನ್ನೆಲೆಯಲ್ಲಿ ಸ್ಪಂದನಾ ಸಾವಿಗೆ ನಾಡಿಗೆ ನಾಡೇ ಕಂಬನಿ ಮಿಡಿದಿತ್ತು. ವಿಜಯ ರಾಘವೇಂದ್ರ, ಮಗ ಶೌರ್ಯ ಅವರು ಈ ನೋವನ್ನು ಹೇಗೆ ಭರಿಸಿಕೊಳ್ಳುತ್ತಾರೆ ಎಂದು ಜನರೇ ಮರುಗಿದ್ದರು.

    Exit mobile version