Site icon Vistara News

ನಾವೆಲ್ಲರೂ ಭಾರತೀಯರೇ ಅಲ್ವಾ ಸರ್‌ !: ಹಿಂದಿಗೇಕೆ ಡಬ್‌ ಮಾಡುತ್ತೀರ ಎಂದ ಅಜಯ್‌ ದೇವಗನ್‌ಗೆ ಕಿಚ್ಚ ಉತ್ತರ

ಬೆಂಗಳೂರು: ಊಟ, ಬಟ್ಟೆಯಂತೆಯೇ ಭಾಷೆಯಲ್ಲೂ ವೈವಿಧ್ಯತೆ ಹೊಂದಿರುವ ಭಾರತದಲ್ಲಿ ಇದೀಗ ಮತ್ತೊಮ್ಮೆ ಹಿಂದಿ ವರ್ಸಸ್‌ ಕನ್ನಡ ಚರ್ಚೆ ನಡೆಯುತ್ತಿದ್ದು, ಬಾಲಿವುಡ್‌ ನಟ ಅಜಯ್‌ ದೇವಗನ್‌ ಮಾತು ವಿವಾದಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿರುವಾಗಲೇ, ಕಿಚ್ಚ ಸುದೀಪ್‌ ಅವರು ದೇವಗನ್‌ ಮಾತಿಗೆ ಅತ್ಯಂತ ವಿನಯದಿಂದ ಹಾಗೂ ಅಷ್ಟೇ ಖಡಕ್ಕಾಗಿ ಉತ್ತರ ನೀಡಿರುವುದು ಜಾಲತಾಣದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

ಭಾರತದ ಸಂವಿಧಾನದ ಪ್ರಕಾರ ಹಿಂದಿ ನಮ್ಮ ರಾಷ್ಟ್ರ ಭಾಷೆಯೇ? ಎಂಬ ಚರ್ಚೆ ಆಗಾಗ್ಗೆ ನಡೆಯುತ್ತಲೇ ಇರುತ್ತದೆ. ಇತ್ತೀಚಿಗೆ ಸಂದರ್ಶನವೊಂದರಲ್ಲಿ, ಹಿಂದಿ ನಮ್ಮ ರಾಷ್ಟ್ರಭಾಷೆ ಅಲ್ಲ ಎಂದು ಕಿಚ್ಚ ಸುದೀಪ್‌ ಹೇಳಿದ್ದರು. ಅದು ಉದ್ದೇಶಪೂರ್ವಕವಾಗಿಲ್ಲದೆ, ಸಂದರ್ಶನದ ಯಾವುದೋ ಭಾಗದಲ್ಲಿ, ಸಂದರ್ಭಕ್ಕೆ ಬಂದಿದ್ದ ಮಾತು. ಇದನ್ನು ವೀಕ್ಷಿಸಿದ ಬಾಲಿವುಡ್‌ ನಟ ಅಜಯ್‌ ದೇವಗನ್‌ ಬುಧವಾರ ಮಾಡಿದ ಟ್ವೀಟ್‌ನಲ್ಲಿ ಕಿಚ್ಚ ಸುದೀಪ್‌ರನ್ನು ಟ್ಯಾಗ್‌ ಮಾಡಿದ್ದರು. ಸಂಪೂರ್ಣವಾಗಿ ಹಿಂದಿಯಲ್ಲಿ ಬರೆದ ಟ್ವೀಟ್‌ನಲ್ಲಿ “ನನ್ನ ಸಹೋದರ ಕಿಚ್ಚ ಸುದೀಪ್‌, ನಿಮ್ಮ ಪ್ರಕಾರ ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ ಎಂದಾದರೆ ನಿಮ್ಮ ಮಾತೃಭಾಷೆಯ ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಿ ಏಕೆ ಬಿಡುಗಡೆ ಮಾಡುತ್ತೀರಿ? ಹಿಂದಿ ನಮ್ಮ ಮಾತೃಭಾಷೆ ಮತ್ತು ರಾಷ್ಟ್ರಭಾಷೆ ಆಗಿದೆ, ಇಂದೂ ಮತ್ತು ಎಂದೆಂದಿಗೂ ಇರುತ್ತದೆ” ಎಂದು ಬರೆದಿದ್ದರು.

ಅಜಯ್‌ ದೇವಗನ್‌ ಮಾತಿಗೆ ಕನ್ನಡಿಗರಿಂದ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ಇದು ಹಿಂದಿ ಹೇರಿಕೆ, ಅಜಯ್‌ ಸಿನಿಮಾಗಳನ್ನು ನೋಡಬಾರದು ಎಂದೆಲ್ಲ ಅನೇಕರು ತಿಳಿಸಿದ್ದಾರೆ. ಆದರೆ ಕಿಚ್ಚ ಸುದೀಪ್‌ ಮಾತ್ರ ಬೇರೆಯದೇ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

“ಹೆಲೋ ಅಜಯ್‌ ದೇವಗನ್‌ ಸರ್‌.. ನಾನು ಈ ಮಾತನ್ನು ಹೇಳಿದ ಸಂದರ್ಭಕ್ಕೂ ಅದು ನಿಮಗೆ ತಲುಪಿದ ರೀತಿಗೂ ಸಾಕಷ್ಟು ವ್ಯತ್ಯಾಸವಿದೆ ಎಂದು ನಾನು ಭಾವಿಸುತ್ತೇನೆ. ಈ ಮಾತನ್ನು ನಾನು ಏಕೆ ಹೇಳಿದೆ ಎನ್ನುವುದನ್ನು ನಿಮಗೆ ವೈಯಕ್ತಿಕವಾಗಿ ಭೇಟಿಯಾದಾಗ ತಿಳಿಸುತ್ತೇನೆ. ಇದು ಯಾರನ್ನು ನೋಯಸುವುದಕ್ಕೊ, ಪ್ರಚೋದನೆ ನೀಡುವುದಕ್ಕೊ ಅಥವಾ ಚರ್ಚೆಯನ್ನು ಹುಟ್ಟು ಹಾಕುವುದಕ್ಕೋ ನೀಡಿದ ಹೇಳಿಕೆ ಅಲ್ಲ. ನಾನೇಕೆ ಹಾಗೆ ಮಾಡುತ್ತೇನೆ ಅಲ್ಲವೇ ಸರ್‌?” ಎಂದು ಹೇಳಿದ್ದರು.

ಮತ್ತೊಂದು ಟ್ವೀಟ್‌ನಲ್ಲಿ ಮಾತು ಮುಂದುವರಿಸಿದ ಸುದೀಪ್‌, ನಮ್ಮ ದೇಶದ ಎಲ್ಲ ಭಾಷೆಗಳನ್ನೂ ನಾನು ಪ್ರೀತಿಸುತ್ತೇನೆ ಹಾಗೂ ಗೌರವಿಸುತ್ತೇನೆ. ಇದು ಇಲ್ಲಿಗೇ ಮುಕ್ತಾಯವಾಗಲಿ ಎಂದು ನಾನು ಭಾವಿಸುತ್ತೇನೆ. ಈಗಾಗಲೆ ಹೇಳಿದಂತೆ ನಾನು ಆ ಮಾತನ್ನು ಸಂಪೂರ್ಣ ವಿಭಿನ್ನ ಸಂದರ್ಭದಲ್ಲಿ ಹೇಳಿದ್ದೆ. ನಿಮ್ಮ ಮೇಲೆ ಅಪಾರ ಪ್ರೀತಿಯಿದೆ. ಶೀಘ್ರದಲ್ಲೇ ಭೇಟಿಯಾಗುತ್ತೇನೆ” ಎಂದರು.

ಯಾಕೊ ಈ ವಿವಾದ ಮತ್ತಷ್ಟು ಹೆಚ್ಚಾಗುತ್ತಿದೆ ಎಂದು ಅರಿತ ಕಿಚ್ಚ ಮತ್ತೊಂದು ಟ್ವೀಟ್‌ ಮಾಡಿದರು: “ಮತ್ತು ಅಜಯ್‌ ದೇವಗನ್‌ ಸರ್‌, ನೀವು ಕಳಿಸಿದ ಹಿಂದಿ ವಾಕ್ಯವನ್ನು ನಾನು ಅರ್ಥ ಮಾಡಿಕೊಂಡೆ. ಏಕೆಂದರೆ ನಾವು ಆ ಭಾಷೆಯನ್ನು ಗೌರವಿಸಿದ್ದೇವೆ, ಪ್ರೀತಿಸಿದ್ದೇವೆ ಹಾಗೂ ಕಲಿತಿದ್ದೇವೆ. ಇದರಲ್ಲಿ ತಪ್ಪೇನೂ ಇಲ್ಲ ಸರ್‌. ಆದರೆ ನಾನು ನನ್ನ ಪ್ರತಿಕ್ರಿಯೆಯನ್ನು ಕನ್ನಡದಲ್ಲಿ ನೀಡಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತೋ ಗೊತ್ತಿಲ್ಲ !!. ನಾವೆಲ್ಲರೂ ಭಾರತಕ್ಕೇ ಸೇರಿದವರಲ್ಲವೇ ಸರ್‌.” ಎಂದು ಹೇಳಿದರು

ಕಿಚ್ಚ ಸುದೀಪ್‌ ಮಾತಿಗೆ ಪ್ರತಿಕ್ರಿಯೆ ನೀಡಿದ ಅಜಯ್‌ ದೇವಗನ್‌, “ಕಿಚ್ಚ ಸುದೀಪ್‌, ನೀವು ನನ್ನ ಸ್ನೇಹಿತ. ನನ್ನ ತಪ್ಪು ತಿಳುವಳಿಕೆಯನ್ನು ನಿವಾರಿಸಿದ್ದಕ್ಕೆ ಧನ್ಯವಾದಗಳು. ಇಡೀ ಚಿತ್ರರಂಗ ಒಂದೇ ಎಂದು ನಾನು ಭಾವಿಸುತ್ತೇನೆ. ನಾವು ಎಲ್ಲ ಭಾಷೆಗಳನ್ನೂ ಗೌರವಿಸುತ್ತೇವೆ ಹಾಗೂ ನಮ್ಮ ಭಾಷೆಯನ್ನು ಎಲ್ಲರೂ ಗೌರವಿಸಬೇಕು ಎಂದು ನಿರೀಕ್ಷಿಸುತ್ತೇವೆ. ಆದರೆ ಬಹುಶಃ ಅನುವಾದದಲ್ಲಿ ಏನೋ ಲೋಪವಾಗಿರಬೇಕು” ಎಂದಿದ್ದಾರೆ.

ಚರ್ಚೆಯು ಗೌರವಯುತವಾಗಿ ನಡೆಯುತ್ತಿರುವುದನ್ನು ಗಮನಿಸಿದ ಕಿಚ್ಚ, ಅಷ್ಟೇ ಆತ್ಮೀಯವಾಗಿ ಮತ್ತೊಂದು ಟ್ವೀಟ್‌ ಮಾಡಿದರು. “ಅನುವಾದಗಳು ಹಾಗೂ ವ್ಯಾಖ್ಯಾನಗಳು ದೃಷ್ಟಿಕೋನಕ್ಕೆ ಅನುಗುಣವಾಗಿರುತ್ತವೆ ಸರ್‌. ಅದಕ್ಕಾಗಿಯೇ, ಸಂಪೂರ್ಣ ಮಾಹಿತಿಯನ್ನು ತಿಳಿಯದೇ ಪ್ರತಿಕ್ರಿಯೆ ನೀಡಬಾರದು. ಇದಕ್ಕಾಗಿ ನಾನು ನಿಮ್ಮನ್ನು ದೂಷಣೆ ಮಾಡುವುದಿಲ್ಲ ಸರ್‌. ಆದರೆ, ಒಂದು ಸೃಜನಶೀಲ ವಿಚಾರದಲ್ಲಿ ನಿಮ್ಮಿಂದ ಒಂದು ಟ್ವೀಟ್‌ ನನಗಾಗಿ ಬಂದಿದ್ದರೆ ನಾನು ಸಂತೋಷ ಪಡುತ್ತಿದ್ದೆ” ಎಂದು ತಣ್ಣಗೆ ಉತ್ತರ ನೀಡಿದ್ದಾರೆ.

ಇಡೀ ಪ್ರಕರಣದಲ್ಲಿ ಕಿಚ್ಚ ಸುದೀಪ್‌ ಅವರು ಅಜಯ್‌ ದೇವಗನ್‌ ಅವರ ವಿರದ್ಧ ಹರಿಹಾಯದೆ ಅತ್ಯಂತ ಸಂವೇದನೆಯಿಂದ ಉತ್ತರ ನೀಡಿರುವುದು ಹಾಗೂ ವಿಚಾರವನ್ನು ಮನವರಿಕೆ ಮಾಡಿರುವ ರೀತಿಗೆ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ.

ಅಜಯ್‌ ದೇವಗನ್‌ ವಿರುದ್ಧ ಪ್ರತಿಭಟನೆ

ಅಜಯ್ ದೇವಗನ್ ವಿರುದ್ಧ ರಾಜ್ಯದ ವಿವಿಧೆಡೆ ಪ್ರತಿಭಟನೆಗಳು ಗುರುವಾರ ನಡೆದವು. ಈ ಕುರಿತು ಉಡುಪಿಯಲ್ಲಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಶ್‌ ಶೆಟ್ಟಿ, “22 ಭಾಷೆಗಳಿಗೆ ರಾಷ್ಟ್ರೀಯ ಭಾಷೆಯ ಸ್ಥಾನಮಾನ ಇದೆ. ಅದರಲ್ಲಿ ಹಿಂದಿಯೂ ಕೂಡ ಒಂದು ಅಷ್ಟೇ. ಯಾವುದೇ ಕಾರಣಕ್ಕೆ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಒಪ್ಪಲು ಸಾಧ್ಯವಿಲ್ಲ. ಕನ್ನಡಕ್ಕೂ ರಾಷ್ಟ್ರೀಯ ಭಾಷೆಯ ಸ್ಥಾನಮಾನ ಇದೆ. ನಮಗೆ ಕನ್ನಡವೇ ರಾಷ್ಟ್ರೀಯ ಭಾಷೆ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕದ ಕೊಡುಗೆ ಅಪಾರ. ಕರ್ನಾಟಕ ಕನ್ನಡಿಗರನ್ನು ಬಿಟ್ಟು ಯಾವತ್ತೂ ಭಾರತದೇಶ ಆಗಿಲ್ಲ. ಕನ್ನಡಿಗರನ್ನು ಕೆಣಕಲು ಬಂದರೆ ರಕ್ಷಣಾ ವೇದಿಕೆ ಕೈಕಟ್ಟಿ ಕೊರಲ್ಲ. ಅಜಯ್ ದೇವಗನ್ ವಿರುದ್ಧ ತೀವ್ರ ಹೋರಾಟ ಮಾಡುತ್ತೇವೆ. ಅಜಯ್ ದೇವಗನ್ ಕನ್ನಡಿಗರಲ್ಲಿ ಕ್ಷಮೆ ಕೇಳಬೇಕು, ಅಜಯ್ ದೇವಗನ್ ಸಿನಿಮಾ ಕರ್ನಾಟಕಕ್ಕೆ ಕಾಲಿಡಲು ಬಿಡಲ್ಲ. ಸರಕಾರ ಕನ್ನಡಿಗರ ಪರವಾಗಿ ಗಮನಹರಿಸಬೇಕು ಹಾಗೆ ನಾವೆಲ್ಲ ಕನ್ನಡಿಗರು ಒಗ್ಗಟಾಗಿ ಹಿಂದಿಯನ್ನು ವಿರೋಧಿಸುವ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ.

ಬೆಂಗಳೂರಿನ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಸುದೀಪ್ ಅವರ ಬೆಂಬಲಕ್ಕೆ ನಿಂತಿದ್ದೇವೆ. ಅಜಯ್ ದೇವಗನ್ ಗೆ ನಾವು ಎಚ್ಚರಿಕೆ ಕೊಡುತ್ತೇವೆ. ಹಿಂದಿಯಲ್ಲಿ ಡಬ್ ಮಾಡಿ ಬಿಡ್ತೀರಾ ಎಂದು ಅಜಯ್ ದೇವಗನ್ ಕೇಳಿದ್ದಾರೆ. ಹಿಂದಿಯನ್ನು ನಮ್ಮ ಮೇಲೆ ಹೇರಿ ಉದ್ಯೋಗ ಬದುಕು ಕಿತ್ತುಕೊಳ್ಳುವ ಕೆಲಸ ಮಾಡಬಾರದು. ಎಲ್ಲಾ ರಾಜಕೀಯ ಮುಖಂಡರು, ನಟರೂ ಧ್ವನಿ ಎತ್ತಬೇಕು. ಕನ್ನಡದ ಸಿನಿಮಾಗಳು ರಾಷ್ಟ್ರವನ್ನು ಮೀರಿ ಹೋಗುತ್ತಿವೆ ಎಂದರು. ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆಗೆ ಅನುಮತಿ ಇಲ್ಲದ ಕಾರಣ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.

ಇದನ್ನೂ ಓದಿ: Explainer: ಹಿಂದಿ ರಾಷ್ಟ್ರಭಾಷೆ ಹೌದೋ, ಅಲ್ಲವೋ?

Exit mobile version