Site icon Vistara News

Actor Tabassum | ಫೂಲ್‌ ಖಿಲೆ ಹೈ ಗುಲ್ಶನ್‌ ಗುಲ್ಶನ್‌ ಖ್ಯಾತಿಯ ನಟಿ ತಬಸ್ಸುಮ್‌ ನಿಧನ

Actor Tabassum Passes Away

ಮುಂಬೈ: ಫೂಲ್‌ ಖಿಲೆ ಹೈ ಗುಲ್ಶನ್‌ ಗುಲ್ಶನ್‌ (Phool Khile Hain Gulshan Gulshan) ಖ್ಯಾತಿಯ ಬಾಲಿವುಡ್‌ ನಟಿ ತಬಸ್ಸುಮ್‌ (78) (Actor Tabassum) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಬಾಲ ಕಲಾವಿದೆಯಾಗಿ ಬಾಲಿವುಡ್‌ ಸಿನಿಮಾ ರಂಗ ಪ್ರವೇಶಿಸಿ, ಹಲವು ಸಿನಿಮಾಗಳಲ್ಲಿ ನಟಿಸಿದ್ದ ಅವರು ದೂರದರ್ಶನದ ಫೂಲ್‌ ಖಿಲೆ ಹೈ ಗುಲ್ಶನ್‌ ಗುಲ್ಶನ್‌ ಟಾಕ್‌ ಶೋ ಮೂಲಕವೂ ದೇಶಾದ್ಯಂತ ಮನೆಮಾತಾಗಿದ್ದರು.

“ನನ್ನ ತಾಯಿಗೆ ಹಲವು ದಿನಗಳಿಂದ ಅನಾರೋಗ್ಯ ಬಾಧಿಸುತ್ತಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಗುಣಮುಖರಾಗಿರಲಿಲ್ಲ. ಶುಕ್ರವಾರ ರಾತ್ರಿ ಎರಡು ಬಾರಿ ಹೃದಯಾಘಾತ ಉಂಟಾಗಿ ನಮ್ಮನ್ನೆಲ್ಲ ಅಗಲಿದ್ದಾರೆ” ಎಂದು ತಬಸ್ಸುಮ್‌ ಅವರ ಪುತ್ರ ಹೊಶಾಂಗ್‌ ಗೋವಿಲ್‌ ತಿಳಿಸಿದ್ದಾರೆ.

1944ರಲ್ಲಿ ಮುಂಬೈನಲ್ಲಿ ಜನಿಸಿದ ತಬಸ್ಸುಮ್‌ ತಮ್ಮ ಮೂರನೇ ವಯಸ್ಸಿನಲ್ಲಿ ಅಂದರೆ 1947ರಲ್ಲಿ ನರ್ಗಿಸ್‌ ಚಿತ್ರದ ಮೂಲಕ ಬಾಲನಟಿಯಾಗಿ ಸಿನಿಮಾ ರಂಗ ಪ್ರವೇಶಿಸಿದರು. ಮೇರಾ ಸುಹಾಗ್‌, ಬಾರಿ ಬೆಹೆನ್‌, ಸರ್ಗಮ್‌, ದೀದಾರ್‌ ಸೇರಿ ಹಲವು ಸಿನಿಮಾಗಳಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡ ಅವರು “ಬೇಬಿ ತಬಸ್ಸುಮ್”‌ ಎಂದೇ ಖ್ಯಾತಿಯಾಗಿದ್ದರು.

ಅದರಲ್ಲೂ, 1960ರಲ್ಲಿ ಬಿಡುಗಡೆಯಾದ ಐತಿಹಾಸಿಕ ಮುಘಲ್‌ ಎ ಅಜಂ ಚಿತ್ರದಲ್ಲಿ ನಟಿಸಿದ್ದು ಅವರ ಖ್ಯಾತಿಯನ್ನು ಹೆಚ್ಚಿಸಿತು. ಹಲವು ಸಿನಿಮಾಗಳ ಬಳಿಕ ಕಿರುತೆರೆಗೂ ಕಾಲಿಟ್ಟ ಅವರು ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಫೂಲ್‌ ಖಿಲೆ ಹೈ ಗುಲ್ಶನ್‌ ಗುಲ್ಶನ್‌ ಟಾಕ್‌ ಶೋ ಮೂಲಕ ಜನಮನ್ನಣೆಗೆ ಪಾತ್ರವಾದರು. 1972ರಿಂದ 1993ರವರೆಗೆ ತಬಸ್ಸುಮ್‌ ಈ ಶೋ ನಡೆಸಿಕೊಟ್ಟರು. 1990ರಲ್ಲಿ ರಾಜೇಶ್‌ ಖನ್ನಾ ಹಾಗೂ ಗೋವಿಂದ ನಟನೆಯ ‘ಸ್ವರ್ಗ್’‌ ಅವರ ಕೊನೆಯ ಸಿನಿಮಾವಾಗಿದೆ.

ಇದನ್ನೂ ಓದಿ | Nishi Singh | ಜನ್ಮದಿನದ ಖುಷಿ ಮಾಸುವ ಮೊದಲೇ ಹಿಂದಿ ನಟಿ ನಿಶಿ ಸಿಂಗ್‌ ನಿಧನ

Exit mobile version