ಚೆನ್ನೈ: ತಮಿಳು ನಟ ಚಿಯಾನ್ ವಿಕ್ರಮ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಸದ್ಯ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಇದ್ದಾರೆ. ವಿಕ್ರಮ್‌ಗೆ ಜುಲೈ 7ರಂದು ಹೃದಯಾಘಾತವಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರಿಗೆ ಆ್ಯಂಜಿಯೋಪ್ಲಾಸ್ಟಿ ಮಾಡಲಾಗಿದ್ದು ಇದೀಗ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಲಾಗಿದೆ. ಆದರೆ ಇನ್ನೊಂದು ವರದಿಯ ಪ್ರಕಾರ ವಿಕ್ರಮ್‌ಗೆ ಹೃದಯಾಘಾತವಾಗಿಲ್ಲ. ಅವರಿಗೆ ತುಂಬ ಜ್ವರ ಬಂದಿತ್ತು. ಹಾಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.
ಇಂದು (ಜುಲೈ 8) ಸಂಜೆ 6ಗಂಟೆಗೆ ಚೆನ್ನೈನಲ್ಲಿ ಚಿಯಾನ್ ವಿಕ್ರಮ್ ಅಭಿನಯದ ಪೊನ್ನಿಯಿನ್ ಸೆಲ್ವನ್ ಸಿನಿಮಾ ಟೀಸರ್ ಬಿಡುಗಡೆ ಇದೆ. ಈ ಕಾರ್ಯಕ್ರಮದಲ್ಲಿ ವಿಕ್ರಮ್ ಭಾಗವಹಿಸಲಿದ್ದರು. ಆದರೆ ನಿನ್ನೆಯೇ (ಜು.7) ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಿದ್ದಾರೆ. ಟೀಸರ್ ಬಿಡುಗಡೆಗೂ ಮೊದಲು ಅವರು ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಗುವ ಸಾಧ್ಯತೆ ಇದ್ದರೂ, ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಲಾಗಿದೆ. ಹಾಗೇ, ಇದೇ ವರ್ಷ ಆಗಸ್ಟ್‌ನಲ್ಲಿ ಬಿಡಗಡೆಯಾಗಲಿರುವ ಕೋಬ್ರಾ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮ ಜುಲೈ 11ರಂದು ನಡೆಯಲಿದ್ದು, ಅದರಲ್ಲಿ ವಿಕ್ರಮ್ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.
ಚಿಯಾನ್ ವಿಕ್ರಮ್ ತಮಿಳು ಚಿತ್ರರಂಗದಲ್ಲಿ ಜನಪ್ರಿಯ ನಟ. ಇವರು ಅಭಿನಯಿಸಿರುವ, ಕಾರ್ತೀಕ್ ಸುಬ್ಬಾರಾಜ್ ನಿರ್ದೇಶನದ ಮಹಾನ್ ಚಿತ್ರ ಫೆಬ್ರವರಿಯಲ್ಲಿ ಅಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿತ್ತು. ಇವರ ಪೊನ್ನಿಯಿನ್ ಸೆಲ್ವನ್ ಇದೇ ವರ್ಷ ಸೆಪ್ಟೆಂಬರ್‌ನಲ್ಲಿ ರಿಲೀಸ್ ಆಗಲಿದೆ.
ಇದನ್ನೂ ಓದಿ: ನನ್ನ ಗಮನ ಏನಿದ್ದರೂ ಸಿನಿಮಾಗಳತ್ತ: ರಾಜಕೀಯ ಸೇರುವ ವದಂತಿ ತಳ್ಳಿ ಹಾಕಿರುವ ನಟ ವಿಶಾಲ್