Site icon Vistara News

Tamil Producers Council: ತಮಿಳು ನಿರ್ಮಾಪಕರು ಗರಂ; ನಟ ಧನುಷ್‌ ಸೇರಿ ಕಾಲಿವುಡ್‌ ಸ್ಟಾರ್‌ ನಟರು ಬ್ಯಾನ್‌!

Dhanush Simbu, Vishal atharva

ಬೆಂಗಳೂರು: ಚೆನ್ನೈನಲ್ಲಿರುವ ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿಯು (Tamil Producers Council) ನಿರ್ಮಾಪಕರೊಂದಿಗಿನ ದುರ್ವರ್ತನೆಗಾಗಿ ನಾಲ್ವರು ಪ್ರಮುಖ ನಟರಿಗೆ ರೆಡ್ ಕಾರ್ಡ್ ನೀಡಿದೆ. ಕಾರ್ಯಕಾರಿ ಸಮಿತಿ ಈ ನಿರ್ಧಾರ ಇಡೀ ತಮಿಳು ಚಿತ್ರರಂಗವನ್ನು ಬೆಚ್ಚಿ ಬೀಳಿಸಿದೆ. ಹೆಸರಾಂತ ನಟ ಧನುಷ್ ಸೇರಿದಂತೆ ನಾಲ್ವರು ಸ್ಟಾರ್ ನಟರಿಗೆ ಅಲ್ಲಿನ ನಿರ್ಮಾಪಕರ ಸಂಘವು ರೆಡ್ ಕಾರ್ಡ್ ನೀಡಿ ಬ್ಯಾನ್‌ ಮಾಡಿದೆ.

ವಿಶಾಲ್ (actor Vishal), ಧನುಷ್ (Actor Dhanush), ಅಥರ್ವ್ (Actor Atharv) ಮತ್ತು ಸಿಂಬುಗೆ (Actor Simbu) ರೆಡ್ ಕಾರ್ಡ್ ನೀಡಿದ್ದು, ಕಠಿಣ ಕ್ರಮದ ಒಮ್ಮತದ ನಿರ್ಧಾರವನ್ನು ನಿರ್ಮಾಪಕರ ಮಂಡಳಿಯು ತೆಗೆದುಕೊಂಡಿದೆ. ಈ ನಾಲ್ವರು ಕಲಾವಿದರು ನಿರ್ಮಾಪಕರಿಂದ ಹಣ ಪಡೆದುಕೊಂಡು ಮೋಸ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ರೆಡ್ ಕಾರ್ಡ್‌ ನಟರಿಗೆ ಕಠಿಣ ಶಿಕ್ಷೆಯಾಗಿದ್ದು, ಮುಂದಿನ ಸೂಚನೆ ಬರುವವರೆಗೂ ಅವರು ತಮಿಳು ಚಿತ್ರರಂಗದಲ್ಲಿ ಯಾವುದೇ ನಿರ್ಮಾಪಕರೊಂದಿಗೆ ಕೆಲಸ ಮಾಡುವಂತಿಲ್ಲ.

ಅಪಾರ ಜನಪ್ರಿಯತೆ ಹೊಂದಿರುವ ನಟರು ಹೆಚ್ಚಿನ ಪ್ರಾಜೆಕ್ಟ್‌ಗಳಲ್ಲಿ ಮುಂಗಡ ಹಣ ಪಡೆದು ಸೂಕ್ತ ಡೇಟ್ಸ್ ನೀಡದೇ ಇರುವ ಅಭ್ಯಾಸ ಹೊಂದಿರುತ್ತಾರೆ. ಕೆಲವು ನಟರು ಈ ಮುಂಗಡಗಳನ್ನು ಹಿಂದಿರುಗಿಸಿದರೂ, ಎಷ್ಟೋ ಪ್ರಾಜೆಕ್ಟ್‌ಗಳು ಕಾರ್ಯರೂಪಕ್ಕೆ ಬರದಿದ್ದರೂ ಸಹ, ಈ ಪ್ರಮುಖ ನಟರೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಬೇಕೆಂದ ಹಣವನ್ನು ಮರಳಿ ಕೇಳುವುದನ್ನೇ ನಿರ್ಮಾಪಕರು ಬಿಟ್ಟುಬಿಡುತ್ತಾರೆ. ಕಾಲಿವುಡ್‌ ನಟ ಧನುಷ್‌ ಚಿತ್ರೀಕರಣಕ್ಕೆ ಹಾಜರಾಗದ ಕಾರಣ ನಿರ್ಮಾಪಕರ ಸಂಘ ಧನುಷ್‌ (Actor Dhanush) ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಈ ಹಿಂದೆಯೇ ನೋಟಿಸ್ ಜಾರಿ ಮಾಡಿತ್ತು.

ಇದನ್ನೂ ಓದಿ: Rashmika Mandanna: ಧನುಷ್‌ ಜತೆ ರಶ್ಮಿಕಾ ರೊಮ್ಯಾನ್ಸ್‌!

ನಟರು ತಮ್ಮ ಬಾಕಿಯನ್ನು ತೀರಿಸುವವರೆಗೆ ಅಥವಾ ನಿರ್ಮಾಪಕರೊಂದಿಗಿನ ವಿವಾದಗಳನ್ನು ಇತ್ಯರ್ಥಗೊಳಿಸುವವರೆಗೆ, ಈ ರೆಡ್ ಕಾರ್ಡ್‌ನೊಂದಿಗೆ ಯಾವುದೇ ತಮಿಳು ಚಿತ್ರದಲ್ಲಿ ಕೆಲಸ ಮಾಡಲು ಅವರಿಗೆ ಅನುಮತಿಸಲಾಗುವುದಿಲ್ಲ. ನಟರ ವೃತ್ತಿಜೀವನಕ್ಕೆ ಈ ರೆಡ್ ಕಾರ್ಡ್‌ ತೀವ್ರವಾಗಿ ಪರಿಣಾಮ ಬೀರಬಹುದು, ಏಕೆಂದರೆ ಅದು ಅವರ ಖ್ಯಾತಿ ಮತ್ತು ಭವಿಷ್ಯದ ಅವಕಾಶಗಳ ಮೇಲೆ ಪರಿಣಾಮ ಬೀರುತ್ತದೆ.

ತೇನಾಂಡಾಲ್ ಫಿಲ್ಮ್ ಸಂಸ್ಥೆಯು ಧನುಷ್‌ ಅವರ ಚಿತ್ರವೊಂದನ್ನು ನಿರ್ಮಾಣ ಮಾಡುತ್ತಿದೆ. ಒಂದು ತಿಂಗಳ ಕಾಲ ಶೂಟಿಂಗ್ ಕೂಡ ನಡೆದಿದೆ. ಕಾರಣಾಂತರಗಳಿಂದ ಶೂಟಿಂಗ್ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಶೂಟಿಂಗ್ ಮಾಡುವಂತೆ ಧನುಷ್ ಅವರಿಗೆ ಮನವಿ ಮಾಡಲಾಗಿದೆ. ಆದರೆ, ಅವರು ಸ್ಪಂದಿಸುತ್ತಿಲ್ಲ ಎಂದು ದೂರಿನಲ್ಲಿದೆ. ಈ ಸಿನಿಮಾಗಾಗಿ ಸಂಸ್ಥೆಯು 20 ಕೋಟಿ ರೂಪಾಯಿಯನ್ನು ಧನುಷ್‌ ಅವರಿಗೆ ನೀಡಿದೆ ಎಂದು ವರದಿಯಾಗಿದೆ.

ಸಂಕಷ್ಟದಲ್ಲಿರುವ ಈ ತಾರೆಯರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವಿಶಾಲ್ ಅವರ ಮಾರ್ಕ್ ಆಂಟನಿ ಸಿನಿಮಾ ಈಗಾಗಲೇ ಬಿಡುಗಡೆಯಾಗಿದೆ. ಧನುಷ್ ಅವರ ಕ್ಯಾಪ್ಟನ್ ಮಿಲ್ಲರ್‌ ಬಿಡುಗಡೆಗೆ ತೊಂದರೆಯಾಗಬಹುದು ಎಂದು ವರದಿಯಾಗಿದೆ.

Exit mobile version