ತಮಿಳು ಕಿರುತೆರೆ ನಟಿ ಶಾಲಿನಿ (Actress Shalini) ಅವರು ತಮಗೆ ವಿಚ್ಛೇದನ ಸಿಕ್ಕ ಖುಷಿಯಲ್ಲಿ ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ. ಇವರು ‘ಸೂಪರ್ ಮೊಮ್’ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಜನಪ್ರಿಯತೆ ಗಳಿಸಿದ್ದರು.
ಶಾಲಿನಿ ಅವರು ರಿಯಾಜ್ ಜತೆ ಮದುವೆಯಾಗಿದ್ದರು. ದಂಪತಿಗೆ ಮಗಳೂ ಇದ್ದಾಳೆ. ಒಂದೆರಡು ತಿಂಗಳ ಹಿಂದೆ ಶಾಲಿನಿ ತಮ್ಮ ಪತಿ ರಿಯಾಜ್ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಬಳಿಕ ವಿಚ್ಛೇದನಕ್ಕೆ ಮುಂದಾಗಿದ್ದರು.
ಮಗಳೊಂದಿಗೆ ತಾನು ಒಂಟಿಯಾಗಿ ಇದ್ದೇನೆ ಎಂದು ಹಲವಾರು ಸಲ ಹೇಳಿಕೊಂಡಿದ್ದರು. ಇದೀಗ ಡಿವೋರ್ಸ್ ವಿಚಾರವನ್ನು ಫೋಟೊಗಳ ಮೂಲಕ ಹಂಚಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ನಟಿಯ ಫೋಟೊಗಳು ವೈರಲ್ ಆಗುತ್ತಿದ್ದು, ಮೆಚ್ಚುಗೆಯ ಜತೆ ನೆಟ್ಟಿಗರು ಟೀಕೆ ಮಾಡಿದ್ದಾರೆ. ಪತಿಯೊಂದಿಗೆ ಇರುವ ಫೋಟೊಗಳನ್ನು ಹರಿದು ಹಾಕುವ ಹಾಗೂ ಗಂಡನ ಫೋಟೊವನ್ನು ಕಾಲಿನಿಂದ ತುಳಿಯುವಂತೆ ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ.
ʻʻಕೆಟ್ಟ ದಾಂಪತ್ಯವನ್ನು ಬಿಡುವುದು ತಪ್ಪಲ್ಲ, ನಿಮ್ಮ ಜೀವನದ ಮೇಲೆ ಹಿಡಿತ ಸಾಧಿಸಿ ಮತ್ತು ನಿಮ್ಮ ಮತ್ತು ನಿಮ್ಮ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ರೂಪಿಸಬೇಕಾದಲ್ಲಿ ಬದಲಾವಣೆಗಳನ್ನು ತಂದುಕೊಳ್ಳಿ. ನಿಮಗೆ ಒಂದು ಮಹತ್ವದ ತಿರುವು ಮತ್ತು ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ. ಮದುವೆಯನ್ನು ಬಿಟ್ಟು ಒಬ್ಬಂಟಿಯಾಗಿ ನಿಲ್ಲಲು ತುಂಬಾ ಧೈರ್ಯ ಬೇಕು. ಎಲ್ಲ ಧೈರ್ಯಶಾಲಿ ಮಹಿಳೆಯರಿಗೆ ನಾನು ಇದನ್ನು ಅರ್ಪಿಸುತ್ತೇನೆʼʼ ಎಂದು ನಟಿ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.
ಇದೇ ಮೊದಲ ಬಾರಿಗೆ ನಟಿಯೊಬ್ಬರು ಈ ರೀತಿಯಲ್ಲಿ ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ. ಜೀವಕ್ಕೆ ಅಂತ್ಯ ಹಾಡುವ ಬದಲು ದಾಂಪತ್ಯ ಜೀವನಕ್ಕೆ ಅಂತ್ಯ ಹಾಡುವುದು ಒಳ್ಳೆಯದು ಎಂಬ ಸಲಹೆಯನ್ನೂ ನೀಡಿದ್ದಾರೆ.