ಬೆಂಗಳೂರು: ಕನ್ನಡಿಗರಿಗೆ ಸ್ವಾದಿಷ್ಟ ಮನರಂಜನೆಯನ್ನು ಉಣಬಡಿಸುತ್ತಾ ಬಂದಿರುವ ಕಲರ್ಸ್ ಕನ್ನಡ (Colors Kannada) ಚಾನಲ್ ತನ್ನ ಜನಪ್ರಿಯ ಅಡುಗೆ ಕಾರ್ಯಕ್ರಮ ‘ಸವಿರುಚಿ’ (Saviruchi)ಯನ್ನು ಮತ್ತೆ ಆರಂಭಿಸಲಿದೆ.
ಯುಗಾದಿಯ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುವಂತೆ ‘ಸವಿರುಚಿ’ಯ ಹೊಸ ಕಂತುಗಳು ಮೂಡಿ ಬರಲಿವೆ. ಏಪ್ರಿಲ್ 9ರಂದು ಆರಂಭವಾಗಲಿರುವ ‘ಸವಿರುಚಿ’ಯ ಹೊಸ ಸೀಸನ್‌ನ ನೀವು ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ಮಧ್ಯಾಹ್ನ 12 ಗಂಟೆಗೆ ವೀಕ್ಷಿಸಬಹುದು.
ಹೊಸ ಸೀಸನ್ ‘ಸವಿರುಚಿ’ಯಲ್ಲಿ ಹಲವು ಹೊಸ ಅಂಶಗಳು ಇರಲಿವೆ. ಕರ್ನಾಟಕದ ಮೂಲೆಮೂಲೆಗಳ ಪಾಕ ಪ್ರವೀಣರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯದ ಮೂಲೆಮೂಲೆಗಳಿಗೆ ತೆರಳಿ ಅಲ್ಲಿನ ಸಾಂಪ್ರದಾಯಿಕ ಅಡುಗೆಯನ್ನು ಪರಿಚಯಿಸುವುದರಿಂದಾಗಿ ಈ ಸೀಸಸ್ ಅನ್ನು ವೀಕ್ಷಕರಿಗೆ ಮತ್ತಷ್ಟು ಹತ್ತಿರವಾಗಲಿದೆ.
ಯುಗಾದಿ ಹಬ್ಬದ ದಿನವೇ ಹೊಸ ಸೀಸನ್ ಶುರುವಾಗುತ್ತಿರುವುದರ ಬಗ್ಗೆ ಮಾತನಾಡಿದ ಕಲರ್ಸ್ ಕನ್ನಡದ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್, ʼ‘ಹಬ್ಬ ಅಂದರೆ ಕುಟುಂಬದ ಎಲ್ಲರೂ ಒಟ್ಟಿಗೆ ಸೇರಿ ರುಚಿರುಚಿಯಾದ ಅಡುಗೆಯನ್ನು ಆನಂದಿಸುವುದು. ಈ ಯುಗಾದಿಯ ಸಡಗರವನ್ನು ‘ಸವಿರುಚಿ’ಯ ಹೊಸ ಸೀಸನ್ ಇನ್ನಷ್ಟು ರಸವತ್ತಾಗಿಸಲಿದೆʼ’ ಎಂದರು. ‘ʼನಮ್ಮ ವೀಕ್ಷಕರೆಲ್ಲರೂ ನಮ್ಮ ಕುಟುಂಬದವರೇ, ಅವರೆಲ್ಲರಿಗೂ ಯುಗಾದಿಯ ಶುಭಾಶಯ ಕೋರುತ್ತಾ ಉಡುಗೊರೆಯಾಗಿ ‘ಸವಿರುಚಿ’ಯ ಹೊಸ ಸೀಸನ್ನನ್ನು ಅವರಿಗೆ ನೀಡುತ್ತಿದ್ದೇವೆʼ’ ಎಂದು ಅವರು ಹೇಳಿದರು.
‘ನನ್ನಮ್ಮ ಸೂಪರ್ ಸ್ಟಾರ್’ ಖ್ಯಾತಿಯ ಜಾಹ್ನವಿ ಕಾರ್ಯಕ್ರಮವನ್ನು ನಿರೂಪಿಸುತ್ತಿದ್ದಾರೆ. ಅವರ ಜತೆಗೆ ಇತ್ತೀಚೆಗೆ ʼಬೆಳ್ಳುಳ್ಳಿ ಕಬಾಬ್ʼ ಮೂಲಕ ಎಲ್ಲೆಡೆ ಜನಪ್ರಿಯರಾಗಿರುವ ಬಿ.ಕೆ.ಚಂದ್ರು ಕೂಡ ಇರುವುದು ಮಜವನ್ನು ಮತ್ತೊಂದು ಹಂತಕ್ಕೆ ಏರಿಸಲಿದೆ.
ಇದನ್ನೂ ಓದಿ: Sonu Srinivas Gowda: ಸೋನು ಗೌಡ ದತ್ತು ಪಡೆದ ಪ್ರಕರಣ; ಮಗುವಿನ ಪಾಲಕರಿಗೂ ಸಂಕಷ್ಟ; ಕಾನೂನು ಏನು ಹೇಳುತ್ತದೆ?
‘ಸವಿರುಚಿ’ಯಲ್ಲಿ ಬರೀ ಅಡುಗೆ ಮಾಡುವುದಷ್ಟೇ ಅಲ್ಲದೆ, ಅದರ ಪೌಷ್ಟಿಕತೆಯ ಕುರಿತು ತಜ್ಞರ ಅಭಿಪ್ರಾಯಗಳೂ ಇರುವುದು ಈ ಕಾರ್ಯಕ್ರಮವನ್ನು ವಿಶೇಷಗೊಳಿಸಲಿವೆ. ಈಗಾಗಲೇ ಒಂದು ಚೆಂದದ ಕಾರ್ಯಕ್ರಮದ ಪರಿಮಳ ನಿಮ್ಮ ಮೂಗಿಗೆ ಬರತೊಡಗಿದ್ದರೆ ಏಪ್ರಿಲ್ 9ರ ಮಧ್ಯಾಹ್ನ 12 ಗಂಟೆಗೆ ಕಲರ್ಸ್ ಕನ್ನಡ ನೋಡಲು ಮರೆಯಬೇಡಿ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ