ಬೆಂಗಳೂರು: ಕಿರುತೆರೆಯಲ್ಲಿ ವಿಭಿನ್ನ ಕಥಾ ಹಂದರದೊಂದಿಗೆ ಪ್ರೇಕ್ಷಕರ ಮನ ಮೆಚ್ಚಿದ ಧಾರಾವಾಹಿ ‘ಜೊತೆ ಜೊತೆಯಲಿ’ (Jote Joteyali Serial) ಮುಕ್ತಾಯಗೊಳ್ಳುತ್ತಿದೆ. ಜೀ ವಾಹಿನಿಯಲ್ಲಿ ಕೆಲವು ಧಾರಾವಾಹಿಗಳು ಪ್ರಸಾರ ನಿಲ್ಲಿಸಿವೆ ಹಾಗೂ ಹೊಸ ಧಾರಾವಾಹಿಗಳು ಪ್ರಾರಂಭವಾಗುತ್ತಿದೆ. ಇದೇ ಕಾರಣಕ್ಕೆ ಅನೇಕ ಧಾರಾವಾಹಿಗಳು ವಿದಾಯ ಹೇಳುತ್ತಿವೆ. ಈ ವಾರವೇ ‘ಜೊತೆ ಜೊತೆಯಲಿ’ ಕಥೆ ಮುಗಿಯಲಿದ್ದು ಮುಂದಿನ ವಾರದಿಂದ ಆ ಸಮಯಕ್ಕೆ ವಾಹಿನಿಯಲ್ಲಿ ಹೊಸದೊಂದು ಕಥೆ ಶುರುವಾಗುತ್ತಿದೆ. ಈಗಾಗಲೇ ಅದರ ಪ್ರೋಮೊ ಕೂಡ ಜೀ ವಾಹಿನಿಯಲ್ಲಿ ರಿಲೀಸ್ ಆಗಿದೆ.
ಮೇಘಾ ಶೆಟ್ಟಿ ಅನು ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡರೆ, ಹರೀಶ್ ರಾಜ್ ಅವರು ಆರ್ಯವರ್ಧನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆರೂರು ಜಗದೀಶ್ ನಿರ್ದೇಶನದ ಈ ಧಾರಾವಾಹಿಯಲ್ಲಿ ಅನಿರುದ್ಧ ಅವರನ್ನು ಧಾರಾವಾಹಿ ತಂಡದಿಂದ ಹೊರಹಾಕಿದ ನಂತರ ಅವರ ಸ್ಥಾನಕ್ಕೆ ಹರೀಶ್ ರಾಜ್ ಅವರನ್ನು ಕರೆತರಲಾಗಿತ್ತು. ಅದಕ್ಕಾಗಿಯೇ ಕೆಲವು ಹೊಸ ಉಪಕಥೆಯನ್ನೂ ಪರಿಚಯಿಸಲಾಗಿತ್ತು. ಸತತ ನಾಲ್ಕು ವರ್ಷಗಳ ಕಾಲ ಪ್ರೇಕ್ಷಕರನ್ನು ರಂಜಿಸಿರುವ ಈ ಧಾರಾವಾಹಿ ಅಂತ್ಯ ಹಾಡುತ್ತಿದೆ.
ಮೊದಲಿಗೆ ರಾತ್ರಿ 8.30ಕ್ಕೆ ಪ್ರಸಾರ ಆರಂಭಿಸಿದ್ದ ‘ಜೊತೆ ಜೊತೆಯಲಿ’ ಧಾರಾವಾಹಿ ನಂತರ 9.30ಕ್ಕೆ ಶಿಫ್ಟ್ ಆಗಿತ್ತು. ಇತ್ತೀಚೆಗೆ ‘ಭೂಮಿಗೆ ಬಂದ ಭಗವಂತ’ ಧಾರಾವಾಹಿ ಬೇಗ ಪ್ರಸಾರ ಮಾಡುವಂತೆ ವೀಕ್ಷಕರು ಮನವಿ ಮಾಡಿದ ಮೇಲೆ ‘ಜೊತೆ ಜೊತೆಯಲಿ’ ಪ್ರಸಾರದ ಸಮಯ ಮತ್ತೆ ಬದಲಾಗಿತ್ತು.
ಇದನ್ನೂ ಓದಿ: Kannada Serial: 900 ಸಂಚಿಕೆ ಪೂರೈಸಿದ ಜೊತೆ ಜೊತೆಯಲಿ ಧಾರಾವಾಹಿ; ಸಂಭ್ರಮದಲ್ಲಿ ತಂಡ
‘ಜೊತೆ ಜೊತೆಯಲಿ’ ಕಥೆ ಮುಗಿತ್ತಿದ್ದು ಆ ಜಾಗಕ್ಕೆ ‘ಸೌಭಾಗ್ಯವತಿ ಭವ’ ಎನ್ನುವ ಹೊಸ ಕಥೆ ಬರಲಿದೆ. ಇದು ಹೊಸ ಕನ್ನಡ ಧಾರಾವಾಹಿ ಅಲ್ಲ. ಬದಲಿಗೆ ತೆಲುಗು ಧಾರಾವಾಹಿಯ ಡಬ್ಬಿಂಗ್ ವರ್ಷನ್.
‘ಮಿಸ್ಟರ್ ಆ್ಯಂಡ್ ಮಿಸಸ್ ರಂಗೇಗೌಡ’, ‘ನಮ್ಮನೆ ಯುವರಾಣಿ’ ಧಾರಾವಾಹಿಗಳಲ್ಲಿ ನಟಿಸಿದ್ದ ರಾಘವೇಂದ್ರ ಈ ಧಾರಾವಾಹಿಯಲ್ಲೂ ನಟಿಸಿದ್ದಾರೆ. ಜೀ ತೆಲುಗು ವಾಹಿನಿಯಲ್ಲಿ ‘ಚಿರಂಜೀವಿ ಲಕ್ಷ್ಮೀ ಸೌಭಾಗ್ಯವತಿ’ ಹೆಸರಿನಲ್ಲಿ ಈ ಧಾರಾವಾಹಿ ಪ್ರಸಾರವಾಗುತ್ತಿದೆ.