ಬೆಂಗಳೂರು : ಜೊತೆ ಜೊತೆಯಲಿ ಧಾರಾವಾಹಿ (Jote Joteyali) ಖ್ಯಾತಿಯ ನಟ ಅನಿರುದ್ಧ್ ಅವರನ್ನು ಕಿರುತೆರೆ ನಿರ್ಮಾಪಕರ ಸಂಘ ಎರಡು ವರ್ಷಗಳ ಕಾಲ ಧಾರಾವಾಹಿ, ರಿಯಾಲಿಟಿ ಶೋಗಳಲ್ಲಿ ಆಯ್ಕೆ ಮಾಡಿಕೊಳ್ಳದಿರಲು ತೀರ್ಮಾನಿಸಿರುವ ಬಗ್ಗೆ ವೀಕ್ಷಕ ವಲಯದಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ʻಆರ್ಯವರ್ಧನ್ ಪಾತ್ರದಲ್ಲಿ ಅನಿರುದ್ಧ್ ಅವರು ಇಲ್ಲದೆ ಹೋದರೆ ಧಾರಾವಾಹಿಯನ್ನೇ ನೋಡುವುದಿಲ್ಲʼ ಎಂದು ಸೋಷಿಯಲ್ ಮೀಡಿಯಾದಲ್ಲಿ ಕೆಲವು ಪ್ರ್ರೇಕ್ಷಕರು ಕಮೆಂಟ್ ಮಾಡುತ್ತಿದ್ದಾರೆ.
ನಟ ಅನಿರುದ್ಧ್ ಅವರು “ಜೊತೆ ಜೊತೆಯಲಿʼ ಧಾರಾವಾಹಿಯಲ್ಲಿ ಆರ್ಯವರ್ಧನ್ ಎಂಬ ಪಾತ್ರದ ಮೂಲಕ ಜನಮನ್ನಣೆ ಪಡೆದಿದ್ದರು. ಇದೀಗ ಅವರನ್ನು ಬ್ಯಾನ್ ಮಾಡಿರುವುದು ಕಿರುತೆರೆ ವೀಕ್ಷಕ ವಲಯದಲ್ಲಿ ಸಂಚಲನ ಮೂಡಿಸಿದೆ.
ʻʻಈ ಧಾರಾವಾಹಿಯಲ್ಲಿ ಏನು ಬೆಳವಣಿಗೆ ಆಗಿದೆ ಎನ್ನುವುದು ಗೊತ್ತಿಲ್ಲ. ಆದರೆ ಮೂರು ವರ್ಷಗಳಿಂದ ಈ ಸೀರಿಯಲ್ ಬರುತ್ತಿದೆ. ಈ ರೀತಿಯ ಭಿನ್ನಾಭಿಪ್ರಾಯಗಳು ಬರುವುದು ಸಹಜ ಹಾಗೂ ಸ್ವಾಭಾವಿಕ. ಅದನ್ನು ಪ್ರೀತಿಯಿಂದ ಹಾಗೂ ಸಮಾಲೋಚನೆಯಿಂದ ಬಗೆಹರಿಸಿಕೊಳ್ಳುವುದು ಉತ್ತಮ. ಈ ಸೀರಿಯಲ್ ಭವಿಷ್ಯದ ಬಗ್ಗೆ ನಮಗೆ ನಂಬಿಕೆ ಇದೆʼʼ ಎಂದು ಪ್ರೇಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | Jote Joteyali | ಧಾರಾವಾಹಿ ಖ್ಯಾತಿಯ ಅನಿರುದ್ಧ್ ಕಿರುತೆರೆಯಿಂದ ಬ್ಯಾನ್ ಆಗುತ್ತಿದ್ದಾರಾ? ಹೇಳಿದ್ದೇನು?
ಆರ್ಯವರ್ಧನ್ ಪಾತ್ರದ ಅನಿರುದ್ಧ ಅವರನ್ನು ಕೈ ಬಿಟ್ಟರೆ ಈ ಧಾರಾವಾಹಿ ಕಳೆಗುಂದುತ್ತದೆ. ನಾವು ಈ ಧಾರಾವಾಹಿ ನೋಡುತ್ತಿರುವುದೇ ಅನಿರುದ್ಧ್ ಅವರ ನಟನೆಗಾಗಿ. ಅನಿರುದ್ಧ್ ಅವರೇ ಈ ಧಾರಾವಾಹಿಯ ಆಧಾರ ಸ್ತಂಭ. ಇದರಲ್ಲಿ ಬರುವ ಕಥೇ ಅಷ್ಟೇನೂ ಹೇಳುವಂತಿಲ್ಲ. ಕೇವಲ ಅನಿರುದ್ಧ್ ಅವರ ನಟನೆಗೆ ಅಂತಲೇ ಧಾರಾವಾಹಿ ನೋಡುತ್ತಿದ್ದೇವೆ ಎಂದು ಕೆಲವು ಪ್ರೇಕ್ಷಕರು ಬರೆದುಕೊಂಡಿದ್ದಾರೆ. ಈ ಪಾತ್ರಕ್ಕೆ ಅನಿರುದ್ಧ್ ಅವರನ್ನು ಬಿಟ್ಟರೆ ಬೇರೆ ಯಾರೂ ಸರಿ ಹೊಂದುವುದಿಲ್ಲ ಎಂದೂ ಕೆಲವು ವೀಕ್ಷಕರು ಕಮೆಂಟ್ ಮಾಡಿದ್ದಾರೆ.
ಆರೂರು ಜಗದೀಶ್ ಹೇಳಿದ್ದೇನು?
ಈ ವಿಚಾರಕ್ಕೆ ಸಂಬಂಧಿಸಿದಂತೆ ಆರೂರು ಜಗದೀಶ್ ಮಾತನಾಡಿ ʻʻನಮ್ಮ ಮಧ್ಯೆ ಯಾವುದೇ ಮನಸ್ತಾಪ ಇಲ್ಲ. ಅವರಿಂದ ಶೂಟಿಂಗ್‌ಗೆ ತುಂಬಾ ಅಡಚಣೆ ಆಗಿದೆ. ಈ ಧಾರಾವಾಹಿಗೆ ಸಾಕಷ್ಟು ದುಡ್ಡು ಹಾಕಿದ್ದೇನೆ. ಆದರೂ ಅನಿರುದ್ಧಗೆ ನಿರ್ಮಾಪಕರ ಸವಾಲಿಗೆ ಸಾಥ್ ಕೊಡಬೇಕು ಎಂದು ಅನಿಸಿಲ್ಲ. ಸಂಬಳದ ವಿಚಾರಕ್ಕೆ ಸೆಟ್‌ನಲ್ಲಿ ಅನಿರುದ್ಧ್ ಕೂಗಾಡಿದ್ದರು. ಈ ಬಗ್ಗೆ ಅವರು ನಮ್ಮ ಜತೆ ಪ್ರತ್ಯೇಕವಾಗಿ ಮಾತನಾಡಬಹುದಿತ್ತುʼʼ ಎಂದಿದ್ದಾರೆ.
ಇದನ್ನೂ ಓದಿ | Jote Joteyali | ಧಾರಾವಾಹಿಯಿಂದ ಅನಿರುದ್ಧ್‌ಗೆ ಗೇಟ್ ಪಾಸ್, ಎರಡು ವರ್ಷ ಬ್ಯಾನ್‌ಗೆ ನಿರ್ಮಾಪಕರ ನಿರ್ಧಾರ
ಧಾರಾವಾಹಿಯ ಪಾತ್ರದ ಬದಲಾವಣೆ ಸಾಧ್ಯತೆಗಳ ಬಗ್ಗೆ ಅವರು ಪ್ರತಿಕ್ರಿಯಿಸಿ ʻʻಬೇರೆ ಪಾತ್ರ ಬಂದರೆ ಮೊದಮೊದಲು ಪ್ರೇಕ್ಷಕರಿಗೆ ಹೊಂದಿಕೊಳ್ಳಲು ಸ್ವಲ್ಪ ಕಷ್ಟವಾಗುತ್ತದೆ. ನನಗಾಗಿರುವ ನೋವನ್ನು ನಾನು ಚಾನೆಲ್ ಗಮನಕ್ಕೆ ತಂದಿದ್ದೇನೆ. ಸೀರಿಯಲ್ ಮಧ್ಯ ಭಾಗದಲ್ಲಿ ಟಿಆರ್‌ಪಿ ಕಡಿಮೆ ಆಗಲು ಅವರೇ ಕಾರಣʼʼ ಎಂದು ಆರೋಪಿಸಿದ್ದಾರೆ.
ನಿರ್ಮಾಪಕರ ಸಂಘದ ಅಧ್ಯಕ್ಷರ ಹೇಳಿಕೆ ಏನು?
ಈಗಾಗಲೇ ನಿರ್ಮಾಪಕರ ಸಂಘ ಈ ಕುರಿತು ಎಲ್ಲ ವಾಹಿನಿಗಳಿಗೆ ಪತ್ರ ಬರೆದಿದ್ದು, ಎರಡು ವರ್ಷಗಳ ಕಾಲ ಅನಿರುದ್ಧ್ ಅವರನ್ನು ಬ್ಯಾನ್ ಮಾಡಬೇಕು ಎಂದು ಕೋರಿದೆ.
‘ಶೂಟಿಂಗ್ ಸೆಟ್‌ನಲ್ಲಿ ನಿರ್ದೇಶಕರಿಗೆ ಅನಿರುದ್ಧ್ ಅವರು ನಿಂದಿಸಿ ಸೆಟ್‌ನಿಂದ ಹೊರಗೆ ನಡೆದಿದ್ದಾರೆ. ಸೆಟ್‌ನಲ್ಲಿ ಸ್ಕ್ರಿಪ್ಟ್ ವಿಚಾರಕ್ಕೆ ಅವರು ಪದೇಪದೆ ಜಗಳವಾಡುತ್ತಿದ್ದರು. ಇದರಿಂದಾಗಿ ನಿರ್ಮಾಪಕ ಆರೂರು ಜಗದೀಶ್ ತೀವ್ರ ನೊಂದಿದ್ದಾರೆ’ ಎಂದು ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್ ಹೇಳಿಕೆ ನೀಡಿದ್ದಾರೆ.
ಇದೀಗ ನಿರ್ಮಾಪಕರ ಸಂಘ ಎರಡು ವರ್ಷಗಳ ಕಾಲ ಅವರನ್ನು ಬಹಿಷ್ಕರಿಸಲು ನಿರ್ಧರಿಸಿದೆ. ಈ ನಿರ್ಧಾರ ಅನಿರುದ್ಧ್ ವೃತ್ತಿ ಬದುಕಿನ ಮೇಲೆ ಯಾವ ಪರಿಣಾಮ ಬೀರಲಿದೆ ಎಂಬ ಬಗ್ಗೆ ಕುತೂಹಲ ಮೂಡಿದೆ. ಹಾಗೂ ಧಾರಾವಾಹಿಯಲ್ಲಿ ಪಾತ್ರ ಬದಲಾವಣೆ ಒಂದು ವೇಳೆ ಆದರೆ ವೀಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬುದು ಕಾದು ನೋಡಬೇಕಿದೆ.
ಇದನ್ನೂ ಓದಿ | Jote Joteyali | 3000 ಕೋಟಿ ಒಡೆಯನನ್ನು ಈ ಥರ ತೋರಿಸೋದಾ? ನಿರ್ದೇಶಕರ ವಿರುದ್ಧ ಅನಿರುದ್ಧ್ ಆಕ್ರೋಶ!