ಬೆಂಗಳೂರು: ಟಿ.ಎನ್. ಸೀತಾರಾಮ್ ಅವರ ನಿರ್ದೇಶನಡಿಯಲ್ಲಿ ಪ್ರಸಾರವಾಗುತ್ತಿದ್ದ ಮುಕ್ತ ಮುಕ್ತ ಧಾರಾವಾಹಿ 1204 ಸಂಚಿಕೆ ಪೂರೈಸಿತ್ತು. ಆ ಕಾಲದ ಪ್ರಸ್ತುತ ವಿಷಯಗಳನ್ನು ಸಾಮಾಜಕ್ಕೆ ತೋರಿಸಿತ್ತು. ಅಕ್ರಮ ಭೂ ಒತ್ತುವರಿ, ಜಾಗತೀಕರಣದ ಪರಿಣಾಮಗಳು, ರೈತರ ಸಮಸ್ಯೆ ಮುಂತಾದ ಸಮಸ್ಯೆಗಳನ್ನು ಈ ಧಾರಾವಾಹಿಯಲ್ಲಿ ಎಳೆಎಳೆಯಾಗಿ ತೋರಿಸುತ್ತಿದ್ದರು. ಅಂದು ಕಿರುತೆರೆ ವೀಕ್ಷಕರನ್ನು ರಂಜಿಸಿದ್ದ ‘ಮುಕ್ತ ಮುಕ್ತ’ ಧಾರಾವಾಹಿಯನ್ನು ಇದೀಗ ಮತ್ತೊಮ್ಮೆ ನೋಡುವ ಸುವರ್ಣಾವಕಾಶ ವೀಕ್ಷಕರಿಗೆ ದೊರಕಿದೆ.
ಸಿ.ಎಸ್.ಪಿ ಪಾತ್ರದ ಜೊತೆಗೆ ಶಾಂಭವಿ ಟೀಚರ್, ಕಲ್ಯಾಣಿ, ಶಶಿ, ಶಂಕರಮೂರ್ತಿ, ನಿರ್ಮಲಾ ಕೊಂಡಹಳ್ಳಿ, ಮಂಗಳತ್ತೆ, ಮಿಶ್ರ, ದೇಶಪಾಂಡೆ ಪಾತ್ರಗಳು ವೀಕ್ಷಕರಲ್ಲಿ ಇನ್ನು ನೆನಪಿನಲ್ಲಿ ಇದೆ. ಇದೀಗ ಈ ಧಾರಾವಾಹಿ ಮರುಪ್ರಸಾರ ಕಾಣಿಸುತ್ತಿದೆ. ಆದರೆ ಟಿವಿಯಲ್ಲಿ ಅಲ್ಲ, ಬದಲಿಗೆ ಯೂಟ್ಯೂಬ್ ಚಾನೆಲ್‌ನಲ್ಲಿ. ಟಿ.ಎನ್. ಸೀತಾರಾಮ್ ಅವರ ಭೂಮಿಕಾ ಟಾಕೀಸ್ ಯೂಟ್ಯೂಬ್ ಚಾನೆಲ್‌ನಲ್ಲಿ ‘ಮುಕ್ತ ಮುಕ್ತ’ ಧಾರಾವಾಹಿಯು ಮರು ಪ್ರಸಾರಗೊಳ್ಳಲಿದೆ.ಇದೇ ಆಗಸ್ಟ್29ರಿಂದ ಗುರುವಾರ, ಶುಕ್ರವಾರ ವಾರದ ಎರಡು ದಿನ ಎರಡು ಕಂತುಗಳಲ್ಲಿ ಧಾರಾವಾಹಿಯನ್ನು ನೋಡುವ ಅವಕಾಶ ಕಿರುತೆರೆ ವೀಕ್ಷಕರಿಗೆ ಕಲ್ಪಿಸಲಾಗಿದೆ.
ದಶಕಗಳ ಹಿಂದೆಯೇ ಕಿರುತೆರೆಯಲ್ಲಿ ಧಾರಾವಾಹಿಗಳ ಮೂಲಕ ಸಂಚಲನ ಹುಟ್ಟುಹಾಕಿದವರು ಟಿ.ಎನ್. ಸೀತಾರಾಮ್. ‘ಮಾಯಾಮೃಗ’, ‘ಜ್ವಾಲಾಮುಖಿ’, ‘ಮನ್ವಂತರ’, ‘ಮಳೆಬಿಲ್ಲು’, ‘ಮುಕ್ತ’, ‘ಮುಕ್ತ ಮುಕ್ತ’, ‘ಮಹಾಪರ್ವ’ ಮುಂತಾದ ಧಾರಾವಾಹಿಗಳಿಂದ ಮನೆಮಾತಾಗಿರುವ ನಿರ್ದೇಶಕ. ಧಾರವಾಹಿ ಶೀರ್ಷಿಕೆ, ಶೀರ್ಷಿಕೆ ಗೀತೆ, ಸಂಭಾಷಣೆಯಲ್ಲಿ ಸಾಹಿತ್ಯದ ಸ್ಪರ್ಶವನ್ನು ನೀಡಿದವರು ಟಿ.ಎನ್ ಸೀತಾರಾಮ್. ವಕೀಲರಾಗಿ ಕಟಕಟೆಯಲ್ಲಿ ಗೋಪಾಲಕೃಷ್ಣ ಅಡಿಗರ, ಕುವೆಂಪು ಅವರ ಕವನದ ಸಾಲುಗಳನ್ನು ಕೋಟ್ ಮಾಡುತ್ತಿದ್ದವರು ಅವರು. ೨೦೦೫ನೇ ಸಾಲಿನ ಕರ್ನಾಟಕ ರಾಜ್ಯ ಸರ್ಕಾರದ ಆರ್ಯಭಟ ಪ್ರಶಸ್ತಿಗಳಲ್ಲಿ ʼಮುಕ್ತʼ ಧಾರಾವಾಹಿಯ ನಿರ್ದೇಶನಕ್ಕಾಗಿ ‘ಶ್ರೇಷ್ಠ ನಿರ್ದೇಶಕ’ ಪ್ರಶಸ್ತಿ ಪಡೆದುಕೊಂಡಿದ್ದರು.
ಇದನ್ನೂ ಓದಿ: Shiva Rajkumar: ವರಮಹಾಲಕ್ಷ್ಮಿ ಹಬ್ಬದ ದಿನದಂದೇ ಸೆಟ್ಟೇರಿತು ಶಿವರಾಜ್ ಕುಮಾರ್ 131ನೇ ಸಿನಿಮಾ!
ಮುಕ್ತ ಮುಕ್ತ ಹಾಡಿಗೆ ಭರ್ಜರಿ ಡಿಮ್ಯಾಂಡ್
‘ಮುಕ್ತ ಮುಕ್ತ’. ಶೀರ್ಷಿಕೆ ಗೀತೆಯಾಗಿ ಅಳವಡಿಸಿಕೊಂಡಿರುವ ಈ ರಚನೆಯನ್ನು ಬಲು ಸೊಗಸಾಗಿ ಹಾಡಿರುವವರು ವಿಜಯ್ ಪ್ರಕಾಶ್. ಹಾಡಿನ ಸಂಗೀತ ಸಿ. ಅಶ್ವಥ್ ಅವರಿಂದ. ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ ನೀಡಿ ನೀಡಿ ಮುಕ್ತ, ಬೇವ ಅಗಿವ ಸವಿ ಗಾನದ ಹಕ್ಕಿ ಹಾಡಿ ಮುಕ್ತ ಮುಕ್ತ ಸಾಲು ಭಾರಿ ಸಂಚಲನ ಸೃಷ್ಟಿಸಿತ್ತು.
ಮಾಯಾಮೃಗ
ಟಿ.ಎನ್.ಸೀತಾರಾಮ್ ಪ್ರಧಾನ ನಿರ್ದೇಶನದ, ಪಿ.ಶೇಷಾದ್ರಿ ಹಾಗೂ ನಾಗೇಂದ್ರ ಶಾ ನಿರ್ದೇಶನದ ‘ಮಾಯಾಮೃಗ’ (Mayamruga)ಧಾರಾವಾಹಿ ವೆಬ್ ಸರಣಿ ರೂಪದಲ್ಲಿ ಯೂಟ್ಯೂಬ್ ಮುಖಾಂತರ ಪ್ರಸಾರಗೊಳ್ಳುತ್ತಿದೆ. ‘ಮಾಯಾಮೃಗ’ ಧಾರಾವಾಹಿ ಮೊದಲು ಪ್ರಸಾರ ಕಂಡಿದ್ದು 1998ರಲ್ಲಿ ಡಿಡಿ ಚಂದನ ವಾಹಿನಿಯಲ್ಲಿ. ಕಿರುತೆರೆ ವೀಕ್ಷಕರ ಮನ ಗೆದ್ದಿದ್ದ ‘ಮಾಯಾಮೃಗ’ ಧಾರಾವಾಹಿ 2014ರಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಮರು ಪ್ರಸಾರ ಕಂಡಿತ್ತು.