ಬೆಂಗಳೂರು: ರಾಜೇಶ್ ನಟರಂಗ ಹಾಗೂ ಛಾಯಾ ಸಿಂಗ್ (Chaya Singh) ನಟನೆಯ ‘ಅಮೃತಧಾರೆ’ ಧಾರಾವಾಹಿ (Amruthadhare Kannada Serial) ಈ ಬಾರಿ ಟಿಆರ್‌ಪಿಯಲ್ಲಿಯೂ ಒಳ್ಳೆಯ ಸ್ಥಾನ ಪಡೆದುಕೊಂಡಿದೆ. ಮದುವೆ ಆಗದೇ ಇರುವ ಹೆಣ್ಣನ್ನು ಸಮಾಜ ಹೇಗೆ ದೂಷಿಸುತ್ತದೆ ಎನ್ನುವ ಬಗ್ಗೆ ಜೂನ್ 23ರಂದು ಧಾರಾವಾಹಿ ಎಪಿಸೋಡ್ ಪ್ರಸಾರ ಕಂಡಿತ್ತು. ಛಾಯಾ ಸಿಂಗ್ ನಟನೆ ಕೂಡ ಅದ್ಭುತವಾಗಿತ್ತು. ಈ ಬಗ್ಗೆ ಪ್ರೇಕ್ಷಕರು ಛಾಯಾ ಸಿಂಗ್ ಅವರ ನಟನೆಯನ್ನು ಕೊಂಡಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ.
ಏನದು ಸನ್ನಿವೇಶ?
ಭೂಮಿಕಾಗೆ (ಛಾಯಾ ಸಿಂಗ್) ಈಗ ವಯಸ್ಸು 35 ವರ್ಷ. ಮನೆಯವರು ಎಷ್ಟೇ ಪ್ರಯತ್ನ ಮಾಡಿದರೂ ಆಕೆಗೆ ಮದುವೆ ಆಗಿರುವುದಿಲ್ಲ. ಕೊನೆಗೂ ಒಂದು ಹುಡುಗನನ್ನು ಗೌತಮ್ ದಿವಾನ್ (ರಾಜೇಶ್ ನಟರಂಗ) ಕರೆದು ತರುತ್ತಾನೆ. ಎಂಗೇಜ್ಮೆಂಟ್ ದಿನ ಆ ಹುಡುಗ ಫ್ರಾಡ್ ಎನ್ನುವುದು ಗೊತ್ತಾಗುತ್ತದೆ. ಮತ್ತೆ ಮದುವೆ ಮರಿದು ಬೀಳುತ್ತದೆ. ಮದುವೆಯ ಕನಸು ಕಂಡ ಭೂಮಿಕಾಗೆ ಮತ್ತದೇ ನೋವು. ಕುಟುಂಬದ ಒತ್ತಡ. ಆ ನೋವಿನಲ್ಲಿ ಆಕೆ ʼʼಅನೇಕ ಹೆಣ್ಣುಮಕ್ಕಳು ಗಂಡನ ಮನೆಗೆ ತೆರಳಿ ಕಷ್ಟ ಪಟ್ಟವರಿದ್ದಾರೆ. ಅಲ್ಲಿ ಟಾರ್ಚರ್ ಪಡೆದು ವಿಚ್ಛೇದನ ಪಡೆದವರಿದ್ದಾರೆ. ಮದುವೆ ಆಗದೇ ಇದ್ದವರಿಗೆ ಮದುವೆ ಆಗಿಲ್ಲ ಎನ್ನುವ ಚಿಂತೆ. ಮದುವೆ ಆಗಿ ಗಂಡನ ಮನೆಗೆ ತೆರಳಿದವರಿಗೆ ಬೇರೆಯದೇ ಚಿಂತೆ. ಈ ವಿಚಾರಕ್ಕೆ ನನ್ನ ಸ್ವಾಭಿಮಾನ ಕುಗ್ಗಿಲ್ಲʼʼ ಎಂಬ ಈ ಎಲ್ಲಾ ವಿಚಾರಗಳನ್ನು ಕಣ್ಣೀರು ಹಾಕುತ್ತಲೇ ಹೇಳುತ್ತಾರೆ ನಟಿ. ಛಾಯಾ ಸಿಂಗ್ ಆಡುವ ಈ ಎಲ್ಲ ಮಾತುಗಳು ನೋಡುಗರ ಗಮನ ಸೆಳೆದಿದೆ.
ಇದನ್ನೂ ಓದಿ: Amruthadhare Kannada Serial : ʻಅಮೃತಧಾರೆʼಗೂ ಮುಂಚೆ ಅಣ್ಣ-ತಂಗಿಯಾಗಿ ನಟಿಸಿದ್ರಂತೆ ರಾಜೇಶ್-ಛಾಯಾ!
ನೆಟ್ಟಿಗರು ಹೇಳಿದ್ದೇನು?
ʻʻಏನೋ ಗೊತ್ತಿಲ್ಲ. ಇಷ್ಟು ದಿನ ಈ ಧಾರಾವಾಹಿ ನೋಡಿ ನಗುತ್ತಿದ್ದೆ. ಎಂಥಾ ಸಿರಿಯಸ್ ನಟನೆ ನೋಡಿದ್ದರೂ ಓವರ್ ಡ್ರಾಮ ಎಂದು ನಗು ಬರುತ್ತಿತ್ತು. ಇದೆ ಮೊದಲ ಬಾರಿಗೆ ಕಣ್ಣಲ್ಲಿ ನೀರು ಬಂತು. ಡೈಲಾಗ್ ನಿಜಕ್ಕೂ ಅದ್ಭುತ..! ನಟನೆ ಕೂಡ ಅಷ್ಟೇ ಮನೋಜ್ಞ..! ಅದಕ್ಕೆ ತಕ್ಕಂತೆ ಹಿನ್ನೆಲೆ ಸಂಗೀತ..! ನನ್ನ ತಾಯಿ ನೆನಪಾಗಿ ಅಳು ಬಂತು….! ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.
ʻʻಇದು ಎಷ್ಟೋ ಹೆಣ್ಣುಮಕ್ಕಳ ನಿಜ ಜೀವನದ ಸತ್ಯವಾಗಿದೆ. ಛಾಯಾ ಮೇಡಂ ನಿಮ್ಮ ಈ ಅಭಿನಯ ನಮ್ಮ ಹೃದಯ ಮುಟ್ಟಿದೆʼʼ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಛಾಯಾ ಸಿಂಗ್ ಹೇಳುವ ‘ನಾವು ಪೂಜೆ ಮಾಡುವ ಯಾವ್ ದೇವರಿಗೂ ಹೆಣ್ಣುಮಕ್ಕಳೇ ಹುಟ್ಟಿಲ್ಲ’ ಎಂಬ ಮಾತು ಎಲ್ಲರ ಗಮನ ಸೆಳೆದಿದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
ಅಮೃತಧಾರೆ ಧಾರಾವಾಹಿ ʻಬಢೇ ಅಚ್ಚೇ ಲಗತೇ ಹೈʼ(Bade Acche Lagte Hain) ಹಿಂದಿ ಧಾರಾವಾಹಿಯ ರಿಮೇಕ್ ಆಗಿದೆ. ಈಗಾಗಲೇ ಪ್ರೇಕ್ಷಕರು ಮೊದಲ ಎಪಿಸೋಡ್‌ಗೆ ಮೆಚ್ಚುಗೆ ಸೂಚಿಸಿದ್ದಾರೆ. ಅಮೃತಧಾರೆ ಧಾರಾವಾಹಿಯಲ್ಲಿ ನಟಿ ಛಾಯಾ ಸಿಂಗ್ ಜತೆ ನಟ ರಾಜೇಶ್ ಕಾಣಿಸಿಕೊಂಡಿದ್ದಾರೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: Amruthadhare Kannada Serial: ಕಿರುತೆರೆಗೆ ರಾಜೇಶ್ ನಟರಂಗ ಗ್ರ್ಯಾಂಡ್ ಎಂಟ್ರಿ; ಒಲವಿನ ಅಮೃತಧಾರೆಯ ಹರಿವು ಆರಂಭ!
ಗೌತಮ್ ಹಾಗೂ ಭೂಮಿಕಾ ಬದುಕು ಬೇರೆಬೇರೆ. ಗೌತಮ್ನದ್ದು ಐಷಾರಾಮಿ ಜೀವನ. ಭೂಮಿಕಾ ಮಧ್ಯಮ ವರ್ಗದ ಹುಡುಗಿ. ಗೌತಮ್ ದೊಡ್ಡ ಉದ್ಯಮಿ. ಭೂಮಿಕಾ ಟ್ಯೂಷನ್ನಲ್ಲಿ ಪಾಠ ಹೇಳಿಕೊಡುವವಳು. ಇಬ್ಬರ ಮಧ್ಯೆ ಅನೇಕ ಸಾಮ್ಯತೆ ಇದೆ. ಇವರು ಕುಟುಂಬದಲ್ಲಿ ಹಿರಿ ಮಕ್ಕಳು. ಇಬ್ಬರಿಗೂ ಮದುವೆ ಆಗಿಲ್ಲ. ಎಲ್ಲಕಿಂತ ಮುಖ್ಯವಾಗಿ ಇವರು ಕುಟುಂಬಕ್ಕೆ ಎಷ್ಟೇ ಪ್ರೀತಿ ತೋರಿಸಿದರೂ ಕುಟುಂಬ ಇವರಿಗೆ ಪ್ರೀತಿ ತೋರಿಸುತ್ತಿಲ್ಲ. ಇದೀಗ ಇವರಿಬ್ಬರು ಒಂದಾಗುತ್ತಾರಾ ಎಂಬುದೇ ಪ್ರೇಕ್ಷಕರಿಗೆ ಕುತೂಹಲವಾಗಿದೆ. ಈ ಧಾರಾವಾಹಿಗೆ ಉತ್ತಮ್ ಮಧು ಅವರ ನಿರ್ದೇಶನವಿದೆ.