Site icon Vistara News

Thalaiva 169: 12 ವರ್ಷದ ಬಳಿಕ ಮತ್ತೆ ರೊಮ್ಯಾನ್ಸ್‌ಗೆ ರೆಡಿಯಾದ ಲೋಕ ಸುಂದರಿ-ಸೂಪರ್‌ ಸ್ಟಾರ್

ಸೂಪರ್‌ ಸ್ಟಾರ್‌

ಬೆಂಗಳೂರು: ಹೊಸ ಇತಿಹಾಸವನ್ನೇ ಸೃಷ್ಟಿಸಿದ ʼರೋಬೊʼ ಸಿನಿಮಾ ಯಾರಿಗೆ ನೆನಪಿಲ್ಲ ಹೇಳಿ? 12 ವರ್ಷಗಳ ಹಿಂದೆ ಬಿಡುಗಡೆಯಾದ ಈ ಸಿನಿಮಾ ದೊಡ್ಡ ಹಿಟ್‌ ಆಗಿತ್ತು. ಅದರಲ್ಲಿನ ಸೂಪರ್‌ ಸ್ಟಾರ್‌ ರಜನಿಕಾಂತ್‌ ಮತ್ತು ಭುವನ ಸುಂದರಿ ಐಶ್ವರ್ಯಾ ರೈ ಜೋಡಿ ಗಮನ ಸೆಳೆದಿತ್ತು. ಇದೀಗ ಅದೇ ಜೋಡಿ ಮತ್ತೊಮ್ಮೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದು, ಅಭಿಮಾನಿಗಳಿಗೆ ಹಬ್ಬವಾಗಲಿದೆ. ರಜನೀಕಾಂತ್‌ ಅವರ ಹೊಸ ಸಿನಿಮಾಕ್ಕೆ ಸದ್ಯ Thalaiva 169 ಎಂದು ಹೆಸರು ಇಡಲಾಗಿದೆ. ಇದು ರಜನೀಕಾಂತ್‌ ಅವರ 169ನೇ ಸಿನಿಮಾ. ಈ ಚಿತ್ರದಲ್ಲಿ ರಜನಿ ಅವರಿಗೆ ನಾಯಕಿಯಾಗಿ ಐಶ್ವರ್ಯ ರೈ ಆಯ್ಕೆಯಾಗಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ವಿಜಯ್‌ ದಳಪತಿ ಅಭಿನಯದ ʼಬೀಸ್ಟ್‌ʼ ಚಿತ್ರದ ನಿರ್ದೇಶಕ ನೆಲ್ಸನ್‌ ದಿಲೀಪ್‌ ಕುಮಾರ್‌ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ರಮ್ಯಾಕೃಷ್ಣ ಮತ್ತು ಪ್ರಿಯಾಂಕ ಅರುಲ್‌ ಮೋಹನ್‌ ಸಹ ಇತರ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ | Director ಉಪೇಂದ್ರ Returns: ಪಾನ್‌ ಇಂಡಿಯಾ ಸಿನಿಮಾಕ್ಕೆ ಜೂ.3ರಂದು ಮುಹೂರ್ತ

ಬ್ಯಾಕ್‌ ಟು ಬ್ಯಾಕ್‌ ಐಶ್ವರ್ಯ ರೈ
ಐಶ್ವರ್ಯ ರೈ ಮತ್ತು ತಮಿಳು ಚಿತ್ರರಂಗದ ನಂಟು ಜೋರಾಗಿಯೇ ಇದೆ. 1994ರಲ್ಲಿ ಲೋಕ ಸುಂದರಿಯಾಗಿ ಜಗತ್ತಿನ ಮನ ಸೆಳೆದ ಐಶ್ವರ್ಯ ಸಿನಿಮಾ ಜರ್ನಿ ಆರಂಭವಾಗಿದ್ದೇ ತಮಿಳು ಚಿತ್ರದ ಮೂಲಕ. ಮಣಿರತ್ನಂ ನಿರ್ದೇಶನದ ʼಇರುವರ್‌ʼ ಅವರ ಮೊದಲ ಚಿತ್ರ. ಬಳಿಕ ʼಕಂಡುಕೊಂಡೇನ್‌ ಕಂಡುಕೊಂಡೇನ್‌ʼ, ʼಜೀನ್ಸ್‌ʼ, ʼರಾವಣನ್‌ʼ, ʼಎಂಥಿರನ್‌ʼ, ʼಗುರುʼ, ʼರೋಬೊʼ ಹೀಗೆ ಸಾಲು ಸಾಲು ಚಿತ್ರಗಳಲ್ಲಿ ಐಶ್ವರ್ಯ ನಟಿಸಿದ್ದರು. ಒಟ್ಟು 46 ಚಿತ್ರಗಳಲ್ಲಿ ನಟಿಸಿರುವ ಅವರ ಬದುಕಿನ ಹೆಚ್ಚು ಹಿಟ್ ಚಿತ್ರಗಳು ತಮಿಳು.

ಅಂಥ ಐಶ್ವರ್ಯ ರೈ ಈಗಷ್ಟೇ ಬಹು ನಿರೀಕ್ಷೆಯ ತಮಿಳು ಚಿತ್ರವೊಂದನ್ನು ಮುಗಿಸಿ ಕೂತಿದ್ದಾರೆ. ಅದುವೇ ʼಪೊನ್ನಿಯನ್‌ ಸೆಲ್ವನ್‌.ʼ ಮಣಿರತ್ನಂ ನಿರ್ದೇಶಿಸಿರುವ ಐತಿಹಾಸಿಕ ಕಥಾನಕವನ್ನು ಹೊಂದಿರುವ ಈ ಚಿತ್ರ ಈಗಾಗಲೇ ಭಾರಿ ನಿರೀಕ್ಷೆ ಹುಟ್ಟಿಸಿದೆ. ವಿಕ್ರಂ, ಜಯಂ ರವಿ, ಕಾರ್ತಿ, ಆರ್‌. ಪಾರ್ತಿಬನ್‌, ತೃಷಾ ಸೇರಿ ಘಟಾನುಘಟಿಗಳೇ ಇದರಲ್ಲಿ ನಟಿಸಿದ್ದಾರೆ. ಆಗಸ್ಟ್‌ ವೇಳೆಗೆ ಈ ಚಿತ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ. ಅದರ ನಡುವೆ ಸಿಕ್ಕಿದ್ದೇ ʼತಲೈವಾ 169!

ರಜನಿಗೊಂದು ಹಿಟ್‌ ಬೇಕು

ರಜನಿಕಾಂತ್ ಅವರ ಸಿನಿಮಾಗಳ ಬಗ್ಗೆ ವ್ಯಾಪಕ ಕುತೂಹಲವಿದೆಯಾದರೂ ಇತ್ತೀಚಿನ ವರ್ಷಗಳಲ್ಲಿ ಅವರು ದೊಡ್ಡ ಮಟ್ಟದ ಯಶಸ್ಸನ್ನು ಕಂಡಿಲ್ಲ. ಕಬಾಲಿ, ಕಾಲಾ, 2.0, ಪೆಟ್ಟಾ, ದರ್ಬಾರ್‌, ಅಣ್ಣಾತ್ತೆ ಸಿನಿಮಾಗಳು ರಜನಿ ವೈಭವದ ಮಟ್ಟಕ್ಕೆ ಇರಲಿಲ್ಲ. ಹೀಗಾಗಿ ರಜನೀಕಾಂತ್‌ಗೂ ಒಂದು ದೊಡ್ಡ ಹಿಟ್‌ ಬೇಕಾಗಿದೆ. ಯಶಸ್ವಿ ಪೇರ್‌ ಆಗಿರುವ ರಜನಿ ಮತ್ತು ಐಶ್ವರ್ಯ ರೈ ಜೋಡಿ ಈ ಚಿತ್ರವನ್ನು ಗೆಲ್ಲಿಸಬಹುದು ಎನ್ನುವ ನಿರೀಕ್ಷೆ ಚಿತ್ರರಂಗದಲ್ಲಿದೆ. ಯುವ ನಿರ್ದೇಶಕ ನೆಲ್ಸನ್‌ ದಿಲೀಪ್‌ ಕುಮಾರ್‌ ರಜನಿಗೆ ಯಾವ ವೇಷ ತೊಡಿಸಲಿದ್ದಾರೆ ಎಂದು ಕಾದು ನೋಡಬೇಕು. ಐಶ್ವರ್ಯ ಅಂತೂ ಅವರ ಪತ್ನಿಯ ರೋಲ್‌ನಲ್ಲಿರುತ್ತಾರೆ. ಆಗಸ್ಟ್‌ನಲ್ಲಿ ಚಿತ್ರದ ಶೂಟಿಂಗ್‌ ಆರಂಭವಾಗಲಿದೆ.

ರಜನಿ ಮುಂದಿನ ಸಿನಿಮಾ: ರಜನಿಕಾಂತ್​ ಅವರ 170ನೇ ಸಿನಿಮಾಗೆ ಅರುಣ್​ ರಾಜ ಆ್ಯಕ್ಷನ್​ ಕಟ್​ ಹೇಳುವುದು ಬಹುತೇಕ ಫಿಕ್ಸ್‌ ಆಗಿದೆ.

ಇದನ್ನೂ ಓದಿ | ಮಿಸ್ ಮಾಡಬೇಡಿ, ವೇಶ್ಯೆಯರ ಬದುಕಿನ ಕಥಾನಕದ ಟಾಪ್ 5 ಸಿನಿಮಾ

Exit mobile version