ಬೆಂಗಳೂರು: ಈ ವರ್ಷದ 95ನೇ ಸಾಲಿನ ಅಕಾಡೆಮಿ ಅವಾರ್ಡ್‌ನಲ್ಲಿ ‘ದಿ ಎಲಿಫೆಂಟ್ ವಿಸ್ಪರರ್ಸ್ʼ (The Elephant Whisperers ) ಸಾಕ್ಷ್ಯಚಿತ್ರ ಆಸ್ಕರ್ ಪ್ರಶಸ್ತಿ ಗೆದ್ದಿತು. ಇದೀಗ ತಮಿಳುನಾಡು ಸರ್ಕಾರ ಬೆಳ್ಳಿಗೆ ಸರ್ಕಾರಿ ನೌಕರಿಯನ್ನು ನೀಡಿದೆ. ನೀಲಗಿರಿ ಪ್ರದೇಶದ ತೆಪ್ಪಕಾಡು ಆನೆ ಶಿಬಿರದಲ್ಲಿ ಮೊದಲ ಸರ್ಕಾರಿ ಕಾವಾಡಿಯಾಗಿ (Elephant Care Taker) ಬೆಳ್ಳಿ ಇದೀಗ ನೇಮಕಗೊಂಡಿದ್ದಾರೆ. ಈ ಹಿಂದೆ ತಾತ್ಕಾಲಿಕ ಉಸ್ತುವಾರಿಯಾಗಿ ಕೆಲಸ ಮಾಡುತ್ತಿದ್ದ ಬೆಳ್ಳಿ ಅವರ ಕೌಶಲ ಮತ್ತು ಸಮರ್ಪಣಾ ಮನೋಭಾವವನ್ನು ಗುರುತಿಸಿ ಈ ಪ್ರತಿಷ್ಠಿತ ಸ್ಥಾನವನ್ನು ನೀಡಲಾಗಿದೆ ಎಂದು ತಮಿಳುನಾಡು ರಾಜ್ಯ ಅರಣ್ಯ ಇಲಾಖೆ ಹೇಳಿಕೆ ನೀಡಿದೆ.
ಬೆಳ್ಳಿ ಮತ್ತು ಅವರ ಪತಿ ಬೊಮ್ಮನ್ ಅವರು ಆಸ್ಕರ್-ವಿಜೇತ ನೆಟ್‌ಫ್ಲಿಕ್ಸ್ ಸಾಕ್ಷ್ಯಚಿತ್ರ ದಿ ಎಲಿಫೆಂಟ್ ವಿಸ್ಪರರ್ಸ್ ಮೂಲಕ ಜಾಗತಿಕ ಮೆಚ್ಚುಗೆಯನ್ನು ಗಳಿಸಿದರು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪರಿಸರ ಹವಾಮಾನ ಬದಲಾವಣೆ ಮತ್ತು ಅರಣ್ಯ, ಸುಪ್ರಿಯಾ ಸಾಹು ಟ್ವಿಟರ್‌ನಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ʻʻಮುದುಮಲೈ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕೌ ಆನೆ ಶಿಬಿರದಲ್ಲಿ ಅಮೂಲ್ಯ ಆನೆ ಮರಿಗಳನ್ನು ಉಳಿಸುವಲ್ಲಿ ನಿಸ್ವಾರ್ಥ ಮತ್ತು ಸಮರ್ಪಿತ ಸೇವೆಗಾಗಿ ಬೆಳ್ಳಿ ತಮಿಳುನಾಡು ಸರ್ಕಾರದಿಂದ ಕಾಯಂ ಮಹಿಳಾ ಕಾವಾಡಿ (ಆನೆ ಪಾಲಕಿ) ಆಗಿ ನೇಮಕಗೊಂಡ ಮೊದಲ ಮಹಿಳೆಯಾಗಿದ್ದಾರೆʼʼಎಂದು ಬರೆದುಕೊಂಡಿದ್ದಾರೆ. ವಿಶೇಷ ಸಮಾರಂಭದಲ್ಲಿ ಬೆಳ್ಳಿ ಅವರನ್ನು ಅರಣ್ಯ ಸಚಿವ ಎಂ ಮತಿವೆಂಥನ್, ಮುಖ್ಯ ಕಾರ್ಯದರ್ಶಿ ಶಿವ ದಾಸ್ ಮೀನಾ ಮತ್ತು ಸುಪ್ರಿಯಾ ಸಾಹು ಅವರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಬೆಳಗ್ಗೆ ನೇಮಕಾತಿ ಆದೇಶವನ್ನು ನೀಡಿದರು.
ಇದನ್ನೂ ಓದಿ: IPL 2023: ʻದಿ ಎಲಿಫೆಂಟ್ ವಿಸ್ಪರರ್ಸ್ʼನ ಬೊಮ್ಮನ್-ಬೆಳ್ಳಿ ದಂಪತಿಗೆ ಸಿಎಸ್ಕೆ ಜೆರ್ಸಿ ನೀಡಿ ಗೌರವಿಸಿದ ಎಂ.ಎಸ್ ಧೋನಿ
ದಿ ಎಲಿಫೆಂಟ್ ವಿಸ್ಪರರ್ಸ್ ಡಾಕ್ಯುಮೆಂಟರಿ ಆಸ್ಕರ್ ಅವಾರ್ಡ್ ಗೆಲ್ಲುವ ಮೂಲಕ ಭಾರತೀಯರು ಹೆಮ್ಮೆಪಡುವಂತೆ ಮಾಡಿತ್ತು. ಇದರಲ್ಲಿ ಪ್ರಮುಖವಾಗಿ ನಟಿಸಿದ್ದ ಬೊಮ್ಮನ್- ಬೆಳ್ಳಿ ಅವರಿಗೆ ಈ ಹಿಂದೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸನ್ಮಾನ ಮಾಡಿದ್ದರು. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಕೂಡ ಭೇಟಿ ಮಾಡಿ ಅಭಿನಂದಿಸಿದ್ದರು. ಬೊಮ್ಮನ್-ಬೆಳ್ಳಿ ಅವರು ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತ ಅರಣ್ಯದ ತೆಪ್ಪಕಾಡು ಆನೆ ಶಿಬಿರದಲ್ಲಿ ವಾಸವಾಗಿದ್ದಾರೆ. ಇಲ್ಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 9ರಂದು ಭೇಟಿ ನೀಡಿದ್ದರು. ಬೆಳ್ಳಿ ಮತ್ತು ಬೊಮ್ಮನ್ ದಂಪತಿ ಜೊತೆ ಭೇಟಿಯಾದ ಮೋದಿ ಅವರ ಫೋಟೋ ಸಖತ್ ವೈರಲ್ ಆಗಿತ್ತು. ಸಾಕ್ಷ್ಯಚಿತ್ರವನ್ನು ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶಿಸಿದ್ದರು.