ನವದೆಹಲಿ: ಆಸ್ಕರ್ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ ʻದಿ ಎಲಿಫೆಂಟ್ ವಿಸ್ಪರರ್ಸ್ʼ (The Elephant Whisperers) ಖ್ಯಾತಿಯ ದಂಪತಿ ಬೊಮ್ಮನ್ ಮತ್ತು ಬೆಳ್ಳಿ ಅವರು ಆರೈಕೆ ಮಾಡುತ್ತಿದ್ದ ಮರಿ ಆನೆಯೊಂದು ಮಾರ್ಚ್ 31ರಂದು ಶುಕ್ರವಾರ ನಸುಕಿನಲ್ಲಿ ಮೃತಪಟ್ಟಿದೆ. 4 ತಿಂಗಳ ವಯಸ್ಸಿನ ಆನೆ ಮರಿ ಎಂದು ವರದಿಯಾಗಿದೆ. ಸುಮಾರು ಎರಡು ವಾರಗಳ ಕಾಲ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರದಲ್ಲಿ ಮರಿ ಆನೆಯನ್ನು ಇರಿಸಲಾಗಿತ್ತು. ಆನೆ ಮರಿ ತಾಯಿ ಮತ್ತು ಹಿಂಡಿನಿಂದ ಬೇರ್ಪಟ್ಟಿರುವುದು ಗೊತ್ತಾಗುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಆನೆಮರಿಯನ್ನು ಶಿಬಿರಕ್ಕೆ ಸ್ಥಳಾಂತರಿಸಿದ್ದಾರೆ. ತನ್ನ ಹಿಂಡಿನಿಂದ ಬೇರ್ಪಟ್ಟ ಒತ್ತಡದ ಕಾರಣದಿಂದಾಗಿ ಮೃತಪಟ್ಟಿದೆ ಎಂದು ವರದಿಯಾಗಿದೆ.
ಈ ತಿಂಗಳ ಆರಂಭದಲ್ಲಿ, ರಾಜ್ಯ ಅರಣ್ಯ ಇಲಾಖೆಯ ಆದೇಶದಂತೆ, ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಬೆಲ್ಲನ್ ಎಂಬಲ್ಲಿನ ಬಾವಿಯಿಂದ ಮರಿ ಆನೆಯನ್ನು ರಕ್ಷಿಸಲಾಯಿತು. ಮಾರ್ಚ್ 16ರಿಂದ, ಮರಿ ಆನೆಗೆ ದ್ರವ ಆಹಾರವನ್ನು ನೀಡಲಾಗಿತ್ತು. ವೈದ್ಯಕೀಯ ಸಿಬ್ಬಂದಿ ಮತ್ತು ದಂಪತಿ ಬೊಮ್ಮನ್ ಮತ್ತು ಬೆಳ್ಳಿ ಅವರು ಮೇಲ್ವಿಚಾರಣೆ ಮಾಡುತ್ತಿದ್ದರು. ಅಧಿಕಾರಿಗಳ ಪ್ರಕಾರ, ಆನೆಮರಿಗೆ ಲ್ಯಾಕ್ಟೋಜೆನ್ ಅನ್ನು ನೀಡಲಾಗುತ್ತಿತ್ತು. ಮರಿ ಆನೆ ಲ್ಯಾಕ್ಟೋಜೆನ್ ಅನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗಿಲ್ಲ ಎನ್ನಲಾಗಿದೆ.
ಮಾರ್ಚ್ 30 ಮಧ್ಯಾಹ್ನದವರೆಗೆ ಆನೆ ಮರಿಯ ಆರೋಗ್ಯ ಸಾಮಾನ್ಯವಾಗಿತ್ತು ಎಂದು ಎಂಟಿಆರ್ ಕ್ಷೇತ್ರ ನಿರ್ದೇಶಕ ಡಿ.ವೆಂಕಟೇಶ್ ತಿಳಿಸಿದ್ದಾರೆ. ಆದರೆ ಸಂಜೆಯ ಹೊತ್ತಿಗೆ ಬೇಧಿ ಉಂಟಾಗಿದ್ದು, ರಾತ್ರಿಯವರೆಗೂ ಹಾಗೇ ಇತ್ತು. “ಪಶುವೈದ್ಯರ ತಂಡವು ಆನೆ ಮರಿಗೆ ಚಿಕಿತ್ಸೆ ನೀಡಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಮೃತಪಟ್ಟಿದೆ” ಎಂದು ವೆಂಕಟೇಶ್ ತಿಳಿಸಿದರು. ಕೆಲವು ಅಲರ್ಜಿಗಳಿಂದ ಅತಿಸಾರದಿಂದಾಗಿ ಸಾವು ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಆದರೆ ಅನೆ ಮರಿ ಸಾವಿಗೆ ನಿಖರವಾದ ಕಾರಣವನ್ನು ಅಧ್ಯಯನ ಮಾಡಲು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.
ಇದನ್ನೂ ಓದಿ: The Elephant Whisperers: ʻದಿ ಎಲಿಫೆಂಟ್ ವಿಸ್ಪರರ್ಸ್ʼನ ಬೊಮ್ಮನ್-ಬೆಳ್ಳಿ ದಂಪತಿಗೆ ವಿಮಾನದಲ್ಲಿ ಸಿಕ್ಕ ಗೌರವ ಹೇಗಿತ್ತು?
ಮೃತಪಟ್ಟ ಆನೆ ಮರಿ
ಲ್ಯಾಬ್ ಪರೀಕ್ಷೆಗಾಗಿ ಮೃತದೇಹದ ಪ್ರಮುಖ ಭಾಗಗಳ ಮಾದರಿಗಳನ್ನು ಸಂಗ್ರಹಿಸಲಾಗಿದೆ. ನಂತರ, ಬೊಮ್ಮನ್ ಮತ್ತು ಅರಣ್ಯ ಸಿಬ್ಬಂದಿ ಅರಣ್ಯ ಪ್ರದೇಶದಲ್ಲಿ ಶವವನ್ನು ಸುಡುವ ಮೊದಲು ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿದ್ದಾರೆ.
ಮುದುಮಲೈ ಹುಲಿ ಸಂರಕ್ಷಿತ ಪ್ರದೇಶ ಮತ್ತು ಮೀಸಲು ಪ್ರದೇಶದ ತೆಪ್ಪಕಾಡು ಆನೆ ಶಿಬಿರದಲ್ಲಿ ‘ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರವನ್ನು ಚಿತ್ರೀಕರಿಸಿದ ನಂತರ ಆನೆ ಪಾಲಕ ದಂಪತಿ ಬೊಮ್ಮನ್ ಮತ್ತು ಬೆಳ್ಳಿ ಪ್ರಾಮುಖ್ಯತೆ ಪಡೆದರು.