ಬೆಂಗಳೂರು: ಕಾರ್ತಿಕಿ ಗೋನ್ಸಾಲ್ವಿಸ್ (Kartiki Gonsalves) ನಿರ್ದೇಶನದಲ್ಲಿ ಮೂಡಿಬಂದ ‘ದಿ ಎಲಿಫೆಂಟ್ ವಿಸ್ಪರರ್ಸ್’ (The Elephant Whisperers) ಸಾಕ್ಷ್ಯಚಿತ್ರಕ್ಕೆ ಈ ವರ್ಷ ಆಸ್ಕರ್ ಅವಾರ್ಡ್ ಸಿಕ್ಕಿದೆ. ನಿರ್ದೇಶಕಿ ಕಾರ್ತಿಕಿ ಅವರಿಗೆ ಇದೀಗ ಬೊಮ್ಮನ್ ಹಾಗೂ ಬೆಳ್ಳಿ ದಂಪತಿ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. 2 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಕೋರಲಾಗಿದೆ.
ಸಾಕ್ಷ್ಯಚಿತ್ರ ಶೂಟ್ ಮಾಡುವ ಸಂದರ್ಭದಲ್ಲಿ ಒಂದು ಮನೆ ಕಟ್ಟಿಕೊಡುವ ಭರವಸೆ ನೀಡಲಾಗಿತ್ತು. ಒಂದು ವಾಹನ ಹಾಗೂ ಆರ್ಥಿಕ ಸಹಾಯದ ಭರವಸೆಯನ್ನೂ ಇವರಿಗೆ ಕಾರ್ತಿಕಿ ನೀಡಿದ್ದರು. ಆದರೆ, ಅದಾವುದೂ ನೆರವೇರಿಲ್ಲ ಎಂದು ಯಟ್ಯೂಬ್ ಸಂದರ್ಶನದಲ್ಲಿ ಈ ಬಗ್ಗೆ ದಂಪತಿ ಮಾತನಾಡಿದ್ದಾರೆ.
ದಂಪತಿ ಆರೋಪವೇನು?
‘ನಮ್ಮನ್ನು ರಿಯಲ್ ಹೀರೊಗಳು ಎಂದು ಎಲ್ಲ ಕಡೆಗಳಲ್ಲೂ ಪರಿಚಯಿಸಲಾಯಿತು. ಆದರೆ, ತಂಡದವರ ಕಡೆಯಿಂದ ನಮಗೆ ಹಣದ ಸಹಾಯ ಸಿಕ್ಕಿಲ್ಲ. ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಹಾಗೂ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ದೇಣಿಗೆಗಳನ್ನು ತಂಡದವರು ಸ್ವೀಕರಿಸಿದ್ದಾರೆ. ಆದರೆ, ನಮಗೆ ಯಾವುದೇ ಪರಿಹಾರ ನೀಡದೆ ತಂಡದವರು ಎಲ್ಲಾ ಹಣಕಾಸಿನ ಲಾಭಗಳನ್ನು ಪಡೆದರು’ ಎಂದು ದಂಪತಿ ಆರೋಪಿಸಿದ್ದಾರೆ.
ಇದನ್ನೂ ಓದಿ: The Elephant Whisperers : ‘ದಿ ಎಲಿಫೆಂಟ್ ವಿಸ್ಪರರ್ಸ್ʼ ಖ್ಯಾತಿಯ ಬೆಳ್ಳಿಗೆ ಸರ್ಕಾರಿ ನೌಕರಿ!
ದಂಪತಿಯೇ ಹಣ ಖರ್ಚು ಮಾಡಿದ್ದರಂತೆ.
ಬೊಮ್ಮನ್ ಹಾಗೂ ಬೆಳ್ಳಿಯ ಮದುವೆ ದೃಶ್ಯವೊಂದು ಸಾಕ್ಷ್ಯಚಿತ್ರದಲ್ಲಿ ಬರುತ್ತದೆ. ಇದಕ್ಕಾಗಿ ಈ ದಂಪತಿಯೇ ಹಣ ಖರ್ಚು ಮಾಡಿದ್ದರಂತೆ. ‘ನಿರ್ದೇಶಕಿ ಕಾರ್ತಿಕಿ ಅವರು ನಮ್ಮ ಮದುವೆಯ ದೃಶ್ಯವನ್ನು ಮರುಸೃಷ್ಟಿ ಮಾಡಲು ಬಯಸಿದ್ದರು. ಹೀಗಾಗಿ ಆ ದೃಶ್ಯವನ್ನು ಸೇರಿಸಲಾಗಿದೆ. ಈ ದೃಶ್ಯದ ಶೂಟ್ಗೆ ಬೇಕಿರುವ ಸಿದ್ಧತೆಯನ್ನು ನಾವೇ ಮಾಡಿಕೊಂಡಿದ್ದೆವು. ಇದಕ್ಕಾಗಿ ನಮ್ಮ ಉಳಿತಾಯ ಖಾತೆಯಿಂದ ಹಣ ಬಳಕೆ ಮಾಡಿಕೊಳ್ಳಲಾಗಿದೆ. ಈ ಹಣವನ್ನು ಮರಳಿ ನೀಡುವುದಾಗಿ ಅವರು ಹೇಳಿದ್ದರು. ಆದರೆ, ಅದು ಭರವಸೆಯಾಗಿಯೇ ಉಳಿದಿದೆ’ ಎಂದಿದ್ದಾರೆ ಬೊಮ್ಮನ್ ಹಾಗೂ ಬೆಳ್ಳಿ.‘
ಬುಡಕಟ್ಟು ಜನಾಂಗ ಇವರದು
ಬೊಮ್ಮನ್ ಮತ್ತು ಬೆಳ್ಳಿ ಇಬ್ಬರಿಗೂ ಈಗ ವಯಸ್ಸು 54. ಅವರು ಕೇರಳ ಮತ್ತು ತಮಿಳುನಾಡಿನಲ್ಲಿ ವಾಸವಾಗಿರುವ ಕಾಟ್ಟು ನಾಯಕನ್ ಎಂಬ ಆದಿವಾಸಿ ಜನಾಂಗಕ್ಕೆ ಸೇರಿದವರು. ಅಂದರೆ ಇವರು ಕಾಡಿನ ನಾಯಕರು. ನೀಲಗಿರಿಯ ಮುದುಮಲೈ ಅರಣ್ಯ ಭಾಗದ ಸಾಂಪ್ರದಾಯಿಕ ಬುಡಕಟ್ಟು ಜನಾಂಗ ಇವರದು.
ಬೊಮ್ಮನ್ ಆನೆಗಳನ್ನು ಪಳಗಿಸುವ ಮಾಹುತರ ಕುಟುಂಬದಿಂದ ಬಂದವನು. ಅಪ್ಪ ತೀರಿಕೊಂಡ ಮೇಲೆ ಆ ಕೆಲಸಕ್ಕೆ ಬೊಮ್ಮನ್ ತಲೆ ಕೊಟ್ಟ. ಬೊಮ್ಮನ್‌ಗೆ ಒಂದು ವಿಶೇಷವಾದ ಗ್ರಹಣ ಶಕ್ತಿ ಇತ್ತು. ಅವನಿಗೆ ಆನೆಗಳ ಪುಟ್ಟ ಮರಿಗಳು ಎಲ್ಲದರೂ ಸಿಕ್ಕಿ ಹಾಕಿಕೊಂಡಿದ್ದರೆ, ಹಿಂಡಿನಿಂದ ಬೇರೆಯಾಗಿದ್ದರೆ ಗೊತ್ತಾಗುತ್ತಿತ್ತು. ಅದೆಷ್ಟೋ ಮರಿಗಳನ್ನು ಅವನು ರಕ್ಷಿಸಿದ್ದ. ಹೀಗಾಗಿ ಅವನು ತಮಿಳುನಾಡಿನ ಅರಣ್ಯ ಇಲಾಖೆಯ ಫೇವರಿಟ್!
ಇದನ್ನೂ ಓದಿ: The Elephant Whisperers: ಆಸ್ಕರ್ ಪ್ರಶಸ್ತಿ ವಿಜೇತ ಬೊಮ್ಮನ್-ಬೆಳ್ಳಿ ಆರೈಕೆ ಮಾಡುತ್ತಿದ್ದ ಆನೆ ಮರಿ ಅನಾರೋಗ್ಯದಿಂದ ಸಾವು
ಆನೆ ಮರಿಗಳ ಜತೆ ಇವರ ಪ್ರೀತಿಯೂ ಬೆಳೆಯಿತು
2017ರಲ್ಲಿ ಬಂದ ರಘುವನ್ನು ಬೊಮ್ಮನ್ ಮತ್ತು ಬೆಳ್ಳಿ ಪ್ರೀತಿಯಿಂದ ನೋಡಿಕೊಂಡರು. ಬೆಳ್ಳಿ ಆನೆಯ ಆರೈಕೆಯಲ್ಲಿ ತನ್ನೆಲ್ಲ ದುಃಖ ಮರೆತರೆ ಬೊಮ್ಮನ್ ಪಾಲಿಗೆ ರಘುವೇ ಮಗ ಎಲ್ಲ. ಅದರ ನಡುವೆ 2019ರಲ್ಲಿ ಅಮ್ಮು ಎಂಬ ಇನ್ನೊಂದು ಆನೆ ಮರಿ ಈ ಕುಟುಂಬವನ್ನು ಸೇರಿಕೊಳ್ಳುತ್ತದೆ. ರಘು ಮತ್ತು ಅಮ್ಮುವನ್ನು ಮಕ್ಕಳಂತೆ ಪ್ರೀತಿಸುತ್ತಾ ಇರುವ ನಡುವೆಯೇ ಇತ್ತ ಬೊಮ್ಮನ್ ಮತ್ತು ಬೆಳ್ಳಿ ನಡುವೆಯೂ ಪ್ರೀತಿ ಹುಟ್ಟಿಕೊಳ್ಳುತ್ತದೆ. ಹಾಗೆ ಅದು ಬೆಳೆಯುತ್ತಾ ಮದುವೆಯಾಗುತ್ತಾರೆ.