Site icon Vistara News

The Kerala Story Review : ಲವ್‌ ಜಿಹಾದ್‌, ಭಯೋತ್ಪಾದನೆಯ ಕ್ರೂರ ಮುಖದ ಮನಮುಟ್ಟುವ ಚಿತ್ರಣ

The Kerala Story Review

ʻದಿ ಕೇರಳ ಸ್ಟೋರಿʼ ಸಿನಿಮಾ (The Kerala Story Review) ಮುಗಿದ ಮೇಲೂ ಸೀಟಿನಿಂದ ಮೇಲೇಳಲು ಮನಸ್ಸಾಗಲಿಲ್ಲ! ಹತ್ತು ಹನ್ನೆರಡು ನಿಮಿಷ ಸುಮ್ಮನೆ ನನ್ನದೇ ಉಸಿರಾಟದ ಶಬ್ದವನ್ನು ಕೇಳಿಸಿಕೊಳ್ಳುತ್ತ ಮೌನವಾಗಿಬಿಟ್ಟೆ. ಒತ್ತರಿಸಿಕೊಂಡು ಬರುತ್ತಿದ್ದ ಕಣ್ಣೀರನ್ನು ಬಲವಂತವಾಗಿ ತಡೆದಿದ್ದಕ್ಕೆ ಗಂಟಲು ಉಬ್ಬಿತ್ತು. ನನ್ನದೇ ಹೃದಯ ಬಡಿತ ಕೇಳಿಸುತ್ತಿತ್ತು. ಕೈಗಳಲ್ಲಿ ಸಣ್ಣಗಿನ ನಡುಕ. ಇಡೀ ದೇಹ ಬೆಚ್ಚಗಾದ ಅನುಭವ. ದಿಗ್ಮೂಢನಾಗಿ ಕುಳಿತುಬಿಟ್ಟಿದ್ದೆ. ಇಡೀ ಥಿಯೇಟರ್ ಖಾಲಿಯಾದ ಮೇಲೆಯೇ, ನಿರ್ದೇಶಕರೊಡನೆ ಮಾತನಾಡುತ್ತಿದ್ದ ಹದಿನೈದು ಇಪ್ಪತ್ತು ಜನರೊಡನೆ ಹೊರಬಂದಿದ್ದೆ. ನಿರ್ದೇಶಕರ ಕೈ ಹಿಡಿದು “ಅದ್ಭುತವನ್ನು ಮಾಡಿದ್ದೀರಿ. ಸತ್ಯವನ್ನು ಬೆತ್ತಲೆಯಾಗಿ ತೋರಿಸಿ ಅಕ್ಷರಶಃ ಅಳುವಂತೆ ಮಾಡಿದ್ದೀರಿ.” ಎಂದೆ. ಅವರದನ್ನು ಶ್ಲಾಘನೆ ಎಂದು ತೆಗೆದುಕೊಂಡರೋ ಅಥವಾ ತಮ್ಮದೇ ಹೃದಯದ ಭಾವನೆಯ ಪ್ರತಿರೂಪ ನನ್ನಲ್ಲೂ ಕಂಡರೋ ಗೊತ್ತಿಲ್ಲ. ಆದರೆ ನನ್ನಷ್ಟೇ ಅವರೂ ಭಾವುಕರಾಗಿದ್ದರೆಂಬುದು ಬೆಚ್ಚಗಾಗಿದ್ದ ಅವರ ಕೈ ಸ್ಪರ್ಶದಿಂದ ತಿಳಿಯುತ್ತಿತ್ತು.

ಹೌದು! ಇದು ಕೇವಲ ಒಂದು ಸಿನಿಮಾವಲ್ಲ. ಕೇರಳದ 30,000ಕ್ಕೂ ಹೆಚ್ಚು ನಿಷ್ಪಾಪಿ ಹೆಣ್ಣುಮಕ್ಕಳ, ಅವರಷ್ಟೇ ಸಂಖ್ಯೆಯ ಕುಟುಂಬಗಳ ದುರದೃಷ್ಟದ ಸತ್ಯ ಕಥೆ. ಇಡೀ ಕೇರಳವನ್ನು ಇಸ್ಲಾಮಿನ ತೆಕ್ಕೆಗೆ ತರಲು ಬಳಸುತ್ತಿರುವ ಮೋಸ್ಟ್ ಡೇಂಜರಸ್ ಅಂಡ್ ಸೈಲೆಂಟ್ ವೆಪನ್ “ಲವ್ ಜಿಹಾದ್”ನ ಆಳ ಅಗಲಗಳನ್ನು ಶೋಧಿಸಿ ಇಂಚಿಂಚನ್ನೂ ಜನರ ಮುಂದೆ ತೆರೆದಿಟ್ಟಿರುವ ಸತ್ಯಶೋಧನೆ ಇದು. ಜಿಹಾದಿಗಳ ವಂಚನೆಗೆ ಬಲಿಯಾದ ನತದೃಷ್ಟ ಹಿಂದೂ ಮತ್ತು ಕ್ರಿಶ್ಚಿಯನ್ನರ ಕಣ್ಣೀರಿನ ಕಥೆ. ಐದು ವರ್ಷಗಳ ಹಿಂದೆ ಲವ್ ಜಿಹಾದ್ ಕೇಸೊಂದಕ್ಕೆ ಕೈ ಹಾಕಿ ಮೂರು ಬಾರಿ ಕೇರಳಕ್ಕೆ ಹೋಗಿ ಬಂದಿದ್ದ ನನಗೆ, ಸಿನಿಮಾ ನೋಡುವಾಗ, ನಾನು ನೋಡಿದ್ದೇ, ಅನುಭವಿಸಿದ್ದೇ, ತೆರೆಯ ಮೇಲೆ ಪುನರಾವರ್ತನೆಯಾಗಿ, ಭೂತ ಮತ್ತು ವರ್ತಮಾನಗಳೆರಡರ ಸಂಯೋಗವಾಗಿಬಿಟ್ಟಿತೇನೋ ಎನಿಸುತ್ತಿತ್ತು. ಸಿನಿಮಾ ಮುಗಿಯುವ ವೇಳೆಗೆ ನಮ್ಮದೇ ದೇಶದ ಮುಗ್ಧ ಹೆಣ್ಣುಮಕ್ಕಳನ್ನು ರಕ್ಷಿಸಲಾಗದ ನಮ್ಮ ಸಮಾಜದ ಹೇಡಿತನದ ಬಗ್ಗೆ, ಅಸಹಾಯಕತೆಯ ಬಗ್ಗೆ ಹಿಂದಿಗಿಂತಲೂ ಸ್ವಲ್ಪ ಹೆಚ್ಚೇ ಅಸಹ್ಯವಾಯಿತು.

ಇದನ್ನೂ ಓದಿ: The Kerala Story: ಕೇರಳದಿಂದ ಕಾಣೆಯಾದ 32 ಸಾವಿರ ಹುಡುಗಿಯರ ನೈಜ ಕಥೆ: ʻದಿ ಕೇರಳ ಸ್ಟೋರಿʼ ಟ್ರೈಲರ್‌ ಔಟ್‌

ಒಂದು ಸಮಾಜ ಸಂಘಟಿತವಲ್ಲದಿದ್ದರೆ, ಒಗ್ಗಟ್ಟು, ಜವಾಬ್ದಾರಿ ಮತ್ತು ಹೊಣೆಗಾರಿಕೆಯನ್ನು ಸಕಾಲದಲ್ಲಿ ಪ್ರದರ್ಶಿಸದಿದ್ದರೆ, ಹೇಗೆ ನಲುಗಿಹೋಗುತ್ತದೆ ಎಂಬುದನ್ನು ಈ ಚಿತ್ರ ನೋಡಿ ಅರಿಯಬೇಕು. ಸ್ವರ್ಗ ಬಯಸಿದ ಮುಗ್ಧ ಹೆಣ್ಣುಮಕ್ಕಳನ್ನು ರೌರವ ನರಕಕ್ಕೆ ಸೇರಿಸುವ ಈ ಪ್ರೇಮಾಸ್ತ್ರವನ್ನು, ಹಿಂದುಗಳ ಮೇಲೆ ಮುಸಲ್ಮಾನರು ಪ್ರಯೋಗಿಸಿದ ಇತಿಹಾಸಕ್ಕೆ ಸಾವಿರ ವರ್ಷಗಳು ಕಳೆದರೂ, ಹಿಂದು ಜನಾಂಗದಲ್ಲಿ ಅದರ ಬಗ್ಗೆ ಅರಿವಿಲ್ಲದಿರುವುದು, ಎಚ್ವರವಿಲ್ಲದಿರುವುದು ನಿಜಕ್ಕೂ ಆತ್ಮಹತ್ಯಾಕಾರಕವಲ್ಲದೇ ಮತ್ತೇನು? ಇಂತಹ ಆತ್ಮಘಾತುಕ‌ ಜಡ ನಿದ್ರೆಯ ಮಧ್ಯೆ, ನಿರ್ವೀರ್ಯತೆಯ ಮಧ್ಯೆ, ಈ ಸಿನಿಮಾ ಬಂದಿರುವುದು ನಿಜಕ್ಕೂ ಮರುಭೂಮಿಯಲ್ಲಿ ಓಯಸಿಸ್ ಸಿಕ್ಕಂತಾಗಿದೆ. ಸಿನಿಮಾ ಬಿಡುಗಡೆಯಾಗೋದು ಮೇ 5 ಆದ್ದರಿಂದ ಟ್ರೈಲರ್ನಲ್ಲಿ ಹೇಳುವಷ್ಟು ಕಥೆಯನ್ನಷ್ಟೇ ಹೇಳಬಲ್ಲೆ. ಉಳಿದದ್ದನ್ನು ಸಿನಿಮಾ ಮಂದಿರದಲ್ಲೇ ನೋಡುವಿರಂತೆ‌. ಬನ್ನಿ ಈಗ ಕೇರಳದ ಕಥೆ ಕೇಳುವಿರಂತೆ!

ಚಿತ್ರದ ಟ್ರೈಲರ್‌

ದೇವರ ಸ್ವಂತ ನಾಡು ಎಂದು ಹೆಸರುವಾಸಿಯಾದ ಕೇರಳದಲ್ಲಿ ವಾಸಿಸುವ ನಾಲ್ಕು ಹೆಣ್ಣು ಮಕ್ಕಳ ಕಥೆ ಇದು. ಇಬ್ಬರು ಹಿಂದು, ಒಬ್ಬಳು ಮುಸ್ಲಿಂ, ಇನ್ನೊಬ್ಬಳು ಕ್ರಿಶ್ಚಿಯನ್. ನಾಲ್ವರೂ ನರ್ಸಿಂಗ್ ಕಾಲೇಜೊಂದಕ್ಕೆ ಸೇರಿಕೊಂಡು ಹಾಸ್ಟೆಲ್ ರೂಮ್ ಮೆಟ್‌ಗಳಾಗಿ ವಾಸಿಸಲು ಆರಂಭಿಸುತ್ತಾರೆ. ಮುಸ್ಲಿಂ ಹುಡುಗಿ ಕೇವಲ ಓದಲು ಮಾತ್ರವಲ್ಲದೇ ಇಡೀ ಪ್ರಪಂಚವನ್ನು ಇಸ್ಲಾಂಮಯ ಮಾಡುವ ಅಂತಾರಾಷ್ಟ್ರೀಯ ಷಡ್ಯಂತ್ರದ ಭಾಗವಾಗಿ ಬಂದಿರುತ್ತಾಳೆ‌. ಸ್ಥಳೀಯ ಮುಸ್ಲಿಂ ಮೂಲಭೂತವಾದಿ ಸಂಘಟನೆಗಳ ಪ್ರಮುಖರ ಜೊತೆ ಸಂಪರ್ಕ ಹೊಂದಿರುವ ಈಕೆ ತನ್ನ ಮೂರು ಜನ ಸಹಪಾಠಿಗಳನ್ನು ಪ್ರತಿ ದಿನ ಬ್ರೇನ್ ವಾಷ್ ಮಾಡುತ್ತಾ ಮತಾಂತರ ಮಾಡಲು ಪ್ರಯತ್ನಿಸುತ್ತಾಳೆ. ಅದಕ್ಕಾಗಿ ಆಕೆ ಹಿಡಿಯುವ ಮಾರ್ಗಗಳು, ಬಳಸುವ ಉಪಾಯಗಳು, ಮೋಸದ ತಂತ್ರಗಳು, ಪ್ರೇಮದ ನಾಟಕಗಳು, ನಿರ್ದಯ ನಡೆಗಳು ಭಯಾನಕವಾಗಿರುತ್ತವೆ. ಇದೆಲ್ಲದರ ಬಲೆಗೆ ಬೀಳುವ ಆ ಮೂವರು ಹೆಣ್ಣು ಮಕ್ಕಳ ಮುಂದಿನ ಕಥೆ ಏನಾಗುತ್ತದೆ ಎಂಬುದೇ ಟ್ರೈಲರ್‌ನಲ್ಲಿ ಹೇಳಿರುವ ಸಿನಿಮಾದ ಕಥೆ.

ಲವ್ ಜಿಹಾದ್ ಅನ್ನು ಬಲ್ಲವರಿಗೆಲ್ಲಾ ಇದು ಗೊತ್ತಿರುವ ಕಥೆಯೇ. ಆದರೆ ಈ ಕಥೆಗೆ ನಮಗೆ ಅಷ್ಟಾಗಿ ಗೊತ್ತಿರದ ಐಎಸ್ಐಎಸ್ ನಂಟು ಬೆಳೆದ ನಂತರ ಆಗುವ ತಿರುವು ರಣಭೀಕರ‌ ಮತ್ತು ಭಯಾನಕ. ಲವ್ ಜಿಹಾದ್ ಬಗ್ಗೆ ಗೊತ್ತೇ ಇರದ ಜನರಿಗಂತೂ ಇದು ಭಯಾನಕ ಶಾಕ್ ಕೊಡುವುದರಲ್ಲಿ ಅನುಮಾನವಿಲ್ಲ. ಧರ್ಮದ ಬಗ್ಗೆ ಅರಿವಿಲ್ಲದ ಮತ್ತು ಬೇರೆ ಧರ್ಮದವರ ಷಡ್ಯಂತ್ರಗಳ ಬಗ್ಗೆ ಗೊತ್ತಿಲ್ಲದ ಅಮಾಯಕ ಹುಡುಗಿಯರನ್ನು ಭಯೋತ್ಪಾದಕ ಸಂಘಟನೆಯ ಸೂಸೈಡ್ ಬಾಂಬರ್‌ಗಳನ್ನಾಗಿ ತಯಾರು ಮಾಡುವ ನಿರ್ದಯ ಪ್ರಕ್ರಿಯೆ ಸ್ವತಂತ್ರ ಭಾರತದಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಎಂಬುದು ಭಾರತೀಯರಾದ ನಾವೆಲ್ಲಾ ತಲೆತಗ್ಗಿಸಬೇಕಾದ ಸಂಗತಿ. ಸತ್ಯ ಏನೆಂದು ಗೊತ್ತಿದ್ದರೂ ಅದನ್ನು ಸಾಬೀತು ಮಾಡಲಾಗದ ಅಸಹಾಯಕ ಸ್ಥಿತಿಗೆ ಸಮಾಜ ಬಂದು ನಿಂತಿರುವುದು ಇನ್ನೊಂದು ಘೋರ ವ್ಯಥೆ. ಅದಕ್ಕಾಗಿ ನಮ್ಮವರ ಹೇಡಿತನವನ್ನು ಹಳಿಯಬೇಕೋ ಅಥವಾ ಶತ್ರುಗಳ ಸಂಚನ್ನು ಶ್ಲಾಘಿಸಬೇಕೋ ಅರ್ಥವಾಗುವುದಿಲ್ಲ. ಕಡೇ ಪಕ್ಷ ಈ ಸಿನಿಮಾ ಬಿಡುಗಡೆಯಾದ ನಂತರವಾದರೂ ಜನರಿಗೆ ಸಂಘಟಿತರಾಗಬೇಕೆನ್ನುವ ಮನಸ್ಥಿತಿ ನಿರ್ಮಾಣವಾದರೆ ಸಂತೋಷ.

ಕೇರಳದಲ್ಲಿ ವ್ಯಾಪಕವಾಗಿ ನಡೆದಿರುವ ಲವ್ ಜಿಹಾದ್ ದಂಧೆ ನಡೆಯುವ ಪ್ರಕ್ರಿಯೆ ಹೀಗಿರುತ್ತದೆ. ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳ ಜತೆ ಸಂಪರ್ಕ ಹೊಂದಿ ಜಗತ್ತನ್ನೇ ಮುಸ್ಲಿಂಮಯ ಮಾಡುವ ಮತಾಂಧತೆಯನ್ನು ತುಂಬಿಕೊಂಡ ಕೆಲವು ಮುಸ್ಲಿಂ ಜಿಹಾದಿ ನಾಯಕರು, ಧೂರ್ತ ಬುದ್ಧಿಯ ಆದರೆ ಸುಂದರವಾಗಿರುವ ಸ್ಥಳೀಯ ಮುಸ್ಲಿಂ ಯುವಕರನ್ನು ದುಡ್ಡು ಕೊಟ್ಟು ಕೊಂಡುಕೊಂಡು, ಅವರಿಗೆ ಮುಗ್ಧ ಹಿಂದು ಮತ್ತು ಕ್ರಿಶ್ಚಿಯನ್ ಹೆಣ್ಣು ಮಕ್ಕಳ ಮೇಲೆ ಪ್ರೇಮದ ಹೆಸರಲ್ಲಿ ಕಾಮದ ಅಸ್ತ್ರ ಎಸೆದು, ಅವರನ್ನು ಪಾಪ ಪ್ರಜ್ಞೆಗೆ ನೂಕಿ, ಬ್ರೇನ್ ವಾಶ್ ಮಾಡಿ, ಒಪ್ಪಿಗೆಯಿಂದ, ಬಲವಂತದಿಂದ ಅಥವಾ ಮತ್ತು ಬರುವ ಔಷಧ ನೀಡಿ ಮೋಸದಿಂದ ಲೈಂಗಿಕ ದೌರ್ಜನ್ಯ ನಡೆಸಿ ಗರ್ಭಿಣಿಯರನ್ನಾಗಿಸಿ, ಮದುವೆಯಾಗಬೇಕೆಂದರೆ ಮತಾಂತರವಾಗಲೇಬೇಕೆಂಬ ಅನಿವಾರ್ಯತೆ ಸೃಷ್ಟಿಸಿ, ನಂತರ ಅವರನ್ನು ಮದುವೆಯಾಗಿ ಹನಿಮೂನ್ ಅಥವಾ ಕೆಲಸದ ನೆಪದಲ್ಲಿ ಪರದೇಶಕ್ಕೆ ಕರೆದೊಯ್ಯುತ್ತಾರೆ. ಇವರ ಬಲೆಗೆ ಬಿದ್ದ ಹೆಣ್ಣುಮಕ್ಕಳನ್ನು ಅಲ್ಲಿಂದ ಸಿರಿಯಾದ ಐಸ್ಎಸ್ಐಎಸ್‌ಗೆ ಮಾರಾಟ ಮಾಡಿ, ಅಲ್ಲಿ ಅವರನ್ನು ಲೈಂಗಿಕ ಜೀತದಾಳು(ಸೆಕ್ಸ್ ಸ್ಲೇವ್)ಗಳನ್ನಾಗಿಸುತ್ತಾರೆ. ಆ ಬಳಿಕ ಅವರನ್ನು ಆತ್ಮಾಹುತಿ ಬಾಂಬರ್‌ಗಳನ್ನಾಗಿ ಬಳಸಿ ಅವರ ಕಥೆ ಮುಗಿಸಿಬಿಡಲಾಗುತ್ತದೆ.

ಇದನ್ನೂ ಓದಿ: The Kerala Story: ದಿ ಕೇರಳ ಸ್ಟೋರಿ ಸಿನಿಮಾ ತೆರೆಗೆ ಬರಲು ಬಿಡಬೇಡಿ: ಕಾಂಗ್ರೆಸ್‌ ಹುಯಿಲು

ಈ ಕಷ್ಟಕರವಾದ ಮತ್ತು ಬಹುದೀರ್ಘವಾದ ಪ್ರಕ್ರಿಯೆಯನ್ನು ಅದೆಷ್ಟು ವ್ಯವಸ್ಥಿತವಾಗಿ ಮತ್ತು ಅಷ್ಟೇ ನಿಶ್ಯಬ್ದವಾಗಿ ಮಾಡುತ್ತಾರೆಂಬುದೇ ಹಾಗೆ ಮಾಡುವವರ ಮನದೊಳಗಿನ ತಣ್ಣಗಿನ ಕ್ರೌರ್ಯವನ್ನು ಸಾಬೀತುಪಡಿಸುತ್ತದೆ. ಮೇಲೆ ಮೇಲೆ ತೋರುವ ಮುಗ್ಧತೆಯ, ಬಡತನದ ಮುಖಗಳ ಹಿಂದೆ ಶುದ್ಧ ಕಪಟದ, ಸೇಡಿನ, ಮತಾಂಧತೆಯ ಕಾಳ ಸರ್ಪ ಅವಿತಿರುವುದು ಮುಗ್ಧರ ಅನುಭವಕ್ಕೆ ನಿಲುಕದ ಸಂಗತಿಯಾಗಿದೆ.

ಈ ಸಿನಿಮಾದಲ್ಲಿ ಮುಖ್ಯ ಪಾತ್ರವಾಗಿರುವ ಶಾಲಿನಿ ಉನ್ನಿಕೃಷ್ಣನ್, ದೀಪಾಂಜಲಿ ಥರದ ಅದೆಷ್ಟೋ ಹೆಣ್ಣುಮಕ್ಕಳು ಈ ಜಾಲಕ್ಕೆ ಸಿಲುಕಿ ಬಲಿಪಶುಗಳಾಗಿದ್ದಾರೆ. ಅಧಿಕೃತವಾಗಿ 30,000ಕ್ಕೂ ಹೆಚ್ಚು ಹೆಣ್ಣುಮಕ್ಕಳು, ಅನಧಿಕೃತವಾಗಿ 50,000ಕ್ಕೂ ಹೆಚ್ಚು ಹಿಂದೂ ಮತ್ತು ಕ್ರಿಶ್ಚಿಯನ್ ಹೆಣ್ಣುಮಕ್ಕಳು ಈ ಕೂಪಕ್ಕೆ ಬಿದ್ದು ಜೀವ ಮತ್ತು ಭವಿಷ್ಯ ಎರಡನ್ನೂ ಹಾಳು ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ದೇಶದ ರಾಷ್ಟ್ರೀಯ ಸುರಕ್ಷತೆಯನ್ನೂ ಹಾಳು ಮಾಡಿದ್ದಾರೆ‌. ಇಷ್ಟಾದರೂ ಎಲ್ಲೂ ಕೇಸುಗಳು ದಾಖಲಾಗುವುದಿಲ್ಲ, ಸಾಕ್ಷಿ ಸಿಗುವುದಿಲ್ಲ, ತಪ್ಪಿತಸ್ಥರಿಗೆ ಶಿಕ್ಷೆ ಆಗುವುದಿಲ್ಲ. ಅದರ ಬದಲಾಗಿ ತೊಂದರೆಗೊಳಗಾದವರೇ ಮತ್ತಷ್ಟು ತೊಂದರೆಗೆ ಸಿಕ್ಕಿಹಾಕಿಕೊಳ್ಳುತ್ತಾರೆ. ದುಷ್ಟರು ತಮ್ಮ ಕೆಲಸವನ್ನು‌ ಇನ್ನೂ ಪ್ರಭಾವಶಾಲಿಯಾಗಿ ಮುಂದುವರಿಸುತ್ತಾರೆ. ವೋಟ್ ಬ್ಯಾಂಕ್ ಪಾಲಿಟಿಕ್ಸ್ ಈ ದೇಶಕ್ಕೆ ಒಡ್ಡಿರುವ ಭೀಕರ ಸಮಸ್ಯೆಗಳಲ್ಲಿ ಇದೂ ಒಂದು.

ಇಡೀ ಸಿನಿಮಾ ಎಲ್ಲೂ ಬೋರ್ ಹೊಡೆಸುವುದಿಲ್ಲ. ಅದಕ್ಕೆ ಬದಲಾಗಿ ವೇಗವಾಗಿ ಸಾಗುವ ಈ ಸಿನಿಮಾ ಇಡೀ ಕಥೆ ಮತ್ತು ಅದರೊಳಗಿನ ವಿಷಯವನ್ನು ಪ್ರೇಕ್ಷಕನಿಗೆ ಸಂಪೂರ್ಣವಾಗಿ‌ ಮನವರಿಕೆ ಮಾಡಿಕೊಡುತ್ತದೆ. ತಾಲಿಬಾನ್ ಮತ್ತು ಇಸ್ಲಾಮಿಕ್ ಸ್ಟೇಟ್‌ಗಳಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುವ ಭೀಕರ ದೌರ್ಜನ್ಯ ಹಾಗೂ ಅತ್ಯಾಚಾರಗಳ ಕ್ರೌರ್ಯವನ್ನು ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ. ಯೌವನದ ಉತ್ಸಾಹದಲ್ಲಿ, ಹುಡುಗಾಟಿಕೆಯ ವಯಸ್ಸಿನಲ್ಲಿ ಮಾಡುವ ಸಣ್ಣದೊಂದು ತಪ್ಪು ಇಡೀ ಜೀವನವನ್ನು ಮತ್ತು ಅವರ ಕುಟುಂಬವನ್ನು ಹೇಗೆ ಆಪೋಶನ ತೆಗೆದುಕೊಳ್ಳಬಹುದು ಎಂಬುದರ ಸ್ಪಷ್ಟ ಚಿತ್ರಣ ಕಣ್ಮುಂದೆ ನಿಲ್ಲುತ್ತದೆ. ಪೋಷಕರು ತಮ್ಮ ಮಕ್ಕಳನ್ನು ಬೆಳೆಸಬೇಕಾದರೆ ಇಡುವ ಸಣ್ಣ ಸಣ್ಣ ತಪ್ಪು ಹೆಜ್ಜೆಗಳು ಹೇಗೆ ಅವರನ್ನು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡುತ್ತದೆಂಬುದರ ಬಗ್ಗೆ ಮನೋಜ್ಞವಾಗಿ ಚಿತ್ರಿಸಲಾಗಿದೆ. ಲವ್ ಜಿಹಾದ್‌ಗೆ ಪರೋಕ್ಷವಾಗಿ ಸಹಕಾರ ನೀಡುವವರಿಗೂ ನಿರ್ದೇಶಕರು ಪಾದರಕ್ಷೆಗೆ ಶಾಲು ಸುತ್ತಿ ಹೊಡೆದಿದ್ದಾರೆ. ಸೂಕ್ಷ್ಮ ಸಂಗತಿಗಳನ್ನು ಬಿಟ್ಟುಹೋಗದಂತೆ ಅಚ್ಚುಕಟ್ಟಾಗಿ ಕತೆ ಪೋಣಿಸಿದ್ದಾರೆ. ಕೇರಳದ ಸಂತ್ರಸ್ತ ಯುವತಿಯರ ಜತೆ ತಿಂಗಳುಗಳಗಟ್ಟಲೆ ಉಳಿದು ಅವರ ಕಥೆಯನ್ನು ಕೇಳಿ ಸಂಶೋಧನೆ ಮಾಡಿ ಬರೆದಿರುವ ಸತ್ಯ ಕಥೆ ಇದು.

ಇದನ್ನೂ ಓದಿ: ವಿಸ್ತಾರ Explainer: The Kerala Story: ದಿ ಕಾಶ್ಮೀರ್ ಫೈಲ್ ಬಳಿಕ ಮತ್ತೊಂದು ಸಿನಿ ಸಂಚಲನ: ದಿ ಕೇರಳ ಸ್ಟೋರಿ

ಕಾಶ್ಮೀರ ಫೈಲ್ಸ್‌ ನಂತರ ಜನಮಾನಸದಲ್ಲಿ ಅದ್ಭುತ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇದೊಂದು ಅದ್ಭುತ ಪ್ರಯತ್ನ. ಲವ್ ಜಿಹಾದ್‌ ಕುರಿತಂತೆ ಸಾವಿರ ಪುಸ್ತಕ, ಹತ್ತು ಸಾವಿರ ಭಾಷಣಗಳು ಮಾಡಬಹುದಾದ ಕೆಲಸವನ್ನು‌ ಈ ಸಿನಿಮಾ ಒಂದೇ ಮಾಡಿದೆ ಎಂದರೆ ತಪ್ಪಾಗಲಾರದು. ಸಿನಿಮಾದಂಥ ಪ್ರಭಾವಶಾಲಿ ಮಾಧ್ಯಮಗಳು ಬಳಕೆಯಾಗಬೇಕಿರುವುದೇ ಇಂಥ ಉದ್ದೇಶಕ್ಕೆ. ಕುಟುಂಬ ಸಮೇತ ನೋಡಲೇಬೇಕಾದ ಚಿತ್ರ ಇದು.

ಇಂಥದೊಂದು ಜನಜಾಗೃತಿಯ ಸಿನಿಮಾವನ್ನು ಮನಮುಟ್ಟುವಂತೆ ಚಿತ್ರಿಸಿರುವ ನಿರ್ದೇಶಕ ಸುದಿಪ್ತೊ ಸೇನ್‌ ಅಭಿನಂದನಾರ್ಹರು. ಸೂರ್ಯಪಾಲ್‌ ಸಿಂಗ್‌ ಪರಿಣಾಮಕಾರಿಯಾದ ಕತೆ ಕಟ್ಟಿ ಕೊಟ್ಟಿದ್ದಾರೆ. ಈ ಚಿತ್ರ ನಿರ್ಮಿಸಿರುವ ವಿಪುಲ್‌ ಅಮೃತ್‌ಲಾಲ್‌ ಶಾ ಅವರ ಸಾಹಸವನ್ನೂ ಮೆಚ್ಚಲೇಬೇಕು. ಇನ್ನು ಶಾಲಿನಿ ಉನ್ನಿಕೃಷ್ಣನ್‌ ಪಾತ್ರದಲ್ಲಿ ಅದಾ ಶರ್ಮಾ ಮನೋಜ್ಞವಾಗಿ ನಟಿಸಿದ್ದಾರೆ. ಉಳಿದ ಮೂವರು ಯುವತಿಯರ ಪಾತ್ರವನ್ನು ಯೋಗಿತಾ ಬಿಹಾನಿ, ಬೆನೆಡಿಕ್ಟ್‌ ಭಾವನಾ ಮಕಿಜಾ, ಸಿದ್ಧಿ ಇದ್ನಾನಿ ಚೆನ್ನಾಗಿ ನಿಭಾಯಿಸಿದ್ದಾರೆ.

Exit mobile version