ಬೆಂಗಳೂರು : ಕೋವಿಡ್ ಬಂದ ಸಂದರ್ಭದಲ್ಲಿ ಚಿತ್ರರಂಗ ಕಥೆ ಮುಗಿದೇ ಬಿಟ್ಟಿತು ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಕೆಜಿಎಫ್-2, ಪುಷ್ಟ ಹಾಗೂ ಆರ್‌ಆರ್‌ಆರ್ ಚಿತ್ರಗಳು ತೆರೆಗೆ ಬಂದು ಅಬ್ಬರದಿಂದ ಪ್ರದರ್ಶಿತಗೊಂಡವು. ಪ್ರೇಕ್ಷಕರಲ್ಲಿ ಉತ್ಸಾಹ ತುಂಬಿದವು. ಆದರೆ ಕಳೆದ ನಾಲ್ಕು ವಾರಗಳಿಂದ ಚಿತ್ರಮಂದಿರಗಳತ್ತ ಪ್ರೇಕ್ಷಕರು ಮುಖ ಮಾಡುತ್ತಿಲ್ಲ. ಹೌಸ್ ಫುಲ್ ಎಂಬ ಬೋರ್ಡ್ ಮೂಲೆ ಸೇರಿದೆ. ʼಶೋ ರದ್ದಾಗಿದೆʼ ಎಂದು ಬೋರ್ಡ್‌ಗಳು ಮಾತ್ರ ಕಾಣುತ್ತಿವೆ.
ಕೆಜಿಎಫ್ -2 ನಂತರ ಹಲವಾರು ಸಿನಿಮಾಗಳು ರಿಲೀಸ್ ಆಗಿದ್ದರೂ ಯಾವುದನ್ನೂ ಪ್ರೇಕ್ಷಕರು ಕೈ ಹಿಡಿದಿಲ್ಲ. ಬಹಳಷ್ಟು ಸಿನಿಮಾಗಳು ಎರಡನೇ ಬಾರಿ ಕೂಡ ಪ್ರದರ್ಶನ ಕಂಡಿಲ್ಲ. ಅಂತಹ ಸಂದರ್ಭದಲ್ಲಿ ಶೋ ರದ್ದು ಮಾಡುವ ಸ್ಥಿತಿ ಚಿತ್ರರಂಗಕ್ಕೆ ಬಂದಿದೆ. ಕನಿಷ್ಠ 5 ಪ್ರೇಕ್ಷಕರು ಬಾರದಿದ್ದರೆ ಅಂಥ ಶೋಗಳನ್ನು ರದ್ದು ಮಾಡುತ್ತಾರೆ ಥಿಯೇಟರ್ ಮಾಲಿಕರು. ಅವರಿಗೇನೂ ನಷ್ಟವಿಲ್ಲ. ಯಾಕೆಂದರೆ ಸಿನಿಮಾ ನಿರ್ಮಾಪಕ, ವಿತರಕರು ಥಿಯೇಟರ್‌ಗೆ ಆ ವಾರದ ಇಡೀ ಬಾಡಿಗೆ ಕಟ್ಟಿರುತ್ತಾನೆ.
ಕೋವಿಡ್‌ನಿಂದಾಗಿ ಅದಾಗಲೇ ಎಷ್ಟೋ ಸಿನಿಮಾಗಳು ಪೆಂಡಿಂಗ್‌ನಲ್ಲಿತ್ತು. ಕೋವಿಡ್ ನಂತರ ಜನರೇ ಸಾಕಷ್ಟು ಸಿನಿಮಾಗಳಿಗೆ ಕಾದು ಕುಳಿತಿದ್ದರು. ಇದೀಗ ಸಿನಿಮಾಗಳನ್ನು ಜನರು ಥಿಯೇಟರ್‌ಗೆ ಬಂದು ನೋಡದೇ ಇರುವ ಸ್ಥಿತಿ ನಿರ್ಮಾಣವಾಗಿದೆ.
ಟಿಕೇಟ್ ದರ ಜಾಸ್ತಿ ಆಯ್ತಾ ?
ಕೆಜಿಎಫ್ ನಂತರ, ʼಸರ್ಕಾರಿ ವಾರಿ ಪಾಠʼ, ʼಜನ ಗಣ ಮನʼ ಕೇರಳದಲ್ಲಿ , ತಮಿಳಿನಲ್ಲಿ ʼಡಾನ್ʼ ಸಿನಿಮಾ ಯಶಸ್ಸು ಕಂಡವು. ಮುಖ್ಯವಾಗಿ ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಟಿಕೇಟ್ ದರ ಜಾಸ್ತಿ ಎಂಬುದು ನಮಗೆಲ್ಲ ತಿಳಿದೇ ಇದೆ.
ಇದನ್ನೂ ಓದಿ | ದಿಶಾ ಸಿನಿಮಾ ಹೆಸರಲ್ಲಿ ವಂಚನೆ; ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿರುದ್ಧ ಕೇಸ್
ದಕ್ಷಿಣ ಭಾರತದಲ್ಲಿ ಒಂದು ಚಿತ್ರಕ್ಕೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಐದು ನೂರು, ಆರುನೂರು ರೂಪಾಯಿ ಕೊಡಬೇಕು. ಸಿಂಗಲ್ ಸ್ಕ್ರೀನ್‌ಗಳಲ್ಲಿ ನೂರೈವತ್ತು ರೂಪಾಯಿಗಿಂತ ಕಡಿಮೆಯಿಲ್ಲ. ಮಧ್ಯಮವರ್ಗದ ಒಂದು ಫ್ಯಾಮಿಲಿ ಅಷ್ಟು ದುಡ್ಡು ಕೊಟ್ಟು ನೋಡಲು ಸಾದ್ಯವೇ ಇಲ್ಲ. ಇನ್ನೂ ಹೆಚ್ಚಾಗಿ ಸಿನಿಮಾಗಳು ಓಟಿಟಿಯಲ್ಲಿ ಬಿಡುಗಡೆಯಾಗುತ್ತಿರುವುದರಿಂದ ಯಾಕೆ ಥಿಯೇಟರ್‌ನಲ್ಲಿ ಸಿನಿಮಾ ನೋಡಬೇಕು ಎಂಬ ಮನಸ್ಥಿತಿ ಅದಾಗಲೇ ಪ್ರೇಕ್ಷಕರ ಮನದಲ್ಲಿ ಬಂದು ಬಿಟ್ಟಂತಿದೆ. ಇನ್ನೂ ಕೆಲವರು ಟಿವಿಯಲ್ಲಿ ಬಂದರೆ ನೋಡಿದರಾಯ್ತು ಎಂದು ಥಿಯೇಟರ್‌ನತ್ತ ಮುಖ ಮಾಡುವುದೇ ಇಲ್ಲ.
ದೊಡ್ಡ ಚಿತ್ರದ ಹ್ಯಾಂಗೋವರ್
ಇನ್ನು ನೋಡುಗರು ದೊಡ್ಡ ದೊಡ್ಡ ಸಿನಿಮಾಗಳು ರಿಲೀಸ್ ಅದ ಕೂಡಲೇ ಅದೇ ಗುಂಗಿನಲ್ಲಿ ಮುಂಬರುವ ಸಿನಿಮಾಗಳನ್ನು ಕಂಪ್ಯಾರಿಸನ್ ಮಾಡುವುದರ ಮೂಲಕ ಇತರ ಸಿನಿಮಾಗಳನ್ನು ನೋಡುವುದೇ ಇಲ್ಲ. ಹಾಗೇ ಮುಂದಿನ ವಾರ ದೊಡ್ಡದೊಂದು ಫಿಲಂ ಬರುವುದಿದ್ದರೆ, ತಮ್ಮ ಹಣ ಮತ್ತು ಸಮಯವನ್ನು ಅದಕ್ಕಾಗಿ ಕಾದಿಡುತ್ತಾರೆ ಹಾಗೂ ಆವರೇಜ್ ಫಿಲಂಗಳನ್ನು ನೋಡಲು ಮುಂದಾಗುವುದೇ ಇಲ್ಲ. ಈಗ ವಿಕ್ರಾಂತ್ ರೋಣ ಫಿಲಂನ ಆಗಮನದ ನಿರೀಕ್ಷೆಯಲ್ಲಿ ಇತರ ಫಿಲಂಗಳು ಹಾಗೇ ಹೊಡೆತ ತಿನ್ನುತ್ತಿವೆ. ಹಾಗೇ ತಾವೇ ಸಿನಿಮಾಗಳನ್ನು ಖುದ್ದಾಗಿ ನೋಡದೇ ನೋಡಿ ಬಂದವರ ನೆಗೆಟಿವ್ ಕಮೆಂಟ್‌ಗಳಿಗೆ ತಲೆಕೆಡಿಸಿಕೊಂಡು ಹೋಗದೇ ಇರುವವರು ತುಂಬಾ ಜನ.
ಇದನ್ನೂ ಓದಿ | ಶುಕ್ರವಾರವೇ ಸಿನಿಮಾ ರಿಲೀಸ್ ಆಗೋದು ಯಾಕೆ?
‘ಎಲ್ಲ ಚಿತ್ರಗಳನ್ನು ‘ಕೆಜಿಎಫ್ 2’ ರೀತಿಯಲ್ಲೇ ನೋಡಬೇಡಿ. ಇಂಥ ಚಿತ್ರಗಳನ್ನೂ ಪರಿಗಣಿಸಿ’ ಎಂದು ಚಿತ್ರದ ಪತ್ರಿಕಾಗೋಷ್ಟಿಯಲ್ಲಿ ಸಾಧು ಕೋಕಿಲ ಹೇಳಿದ ಮಾತಿನಲ್ಲಿ ವಾಸ್ತವ ಕೂಡ ಇದೆ. ಹೀಗಾಗಿ ಹೌಸ್‌ಫುಲ್ ಎನ್ನುವ ಬೋರ್ಡ್ ಹಾಕಬೇಕಾದ ಚಿತ್ರಮಂದಿರಗಳು, ಸಿನಿಮಾ ಬಿಡುಗಡೆ ದಿನವೇ ‘ಶೋ ರದ್ದಾಗಿದೆ’ ಎನ್ನುವ ಬೋರ್ಡ್‌ಗಳನ್ನು ಹಾಕುತ್ತಿವೆ.
ಹಣದ ಸಮಸ್ಯೆ
ಒಟಿಟಿಯಲ್ಲಿಯೇ ಕೆಜಿಎಫ್ ಸಿನಿಮಾ ರೆಂಟ್ ಕೊಟ್ಟು ನೋಡುವ ಸಂದರ್ಭ ಇದಾಗಲೇ ಬಂದಿದೆ. ಇನ್ನು ಸಿನಿಮಾ ರಿಲೀಸ್ ಆದಾಗ 600-800 ರೂಪಾಯಿ ಕೊಟ್ಟು ಚಿತ್ರ ನೋಡಬೇಕು ಎಂದರೆ ಜನರು ಹಿಂದೆ ಸರಿಯುವುದು ಸಾಮಾನ್ಯ. ಜನ ಮಾಸ್ ಸಿನೆಮಾಗಳ ಹಾಗೆಯೇ ಉತ್ತಮ ಸಾಮಾಜಿಕ, ಸಾಂಸಾರಿಕ ಕಟೆಂಟ್ ಇರುವ ಫಿಲಂಗಳನ್ನು ಎದುರು ನೋಡುತ್ತಿದ್ದು, ಆ ತರಹದ ಸಿನಿಮಾಗಳು ಬರುತ್ತಿಲ್ಲ, ಹಾಗಾಗಿ ಜನ ಬರುತ್ತಿಲ್ಲ ಎಂಬ ಅಭಿಪ್ರಾಯವೂ ಇದೆ.
ಕಟೆಂಟ್ ಕೊರತೆ
ಸಿನಿಪ್ರಿಯರು ಫಸ್ಟ್ ಡೇ ಫಸ್ಟ್ ಶೋ ಸಿನಿಮಾಗೆ ಹೋಗಿದ್ದರೂ, ಕೆಲವೊಂದು ಸಿನಿಮಾಗಳು 10 ನಿಮಿಷ ಕೂಡಾ ಕುಳಿತುಕೊಳ್ಳಲು ಕಷ್ಟಕರ ಎಂದು ಹೇಳುತ್ತಾರೆ. ಚಿತ್ರತಂಡದವರೇ ಸಿನಿಮಾ ಟಿಕೇಟ್ ಕೊಂಡು ಕುಳಿತುಕೊಂಡಿದ್ದರೂ, ಅವರೇ 10 ನಿಮಿಷದಲ್ಲಿ ಮಾಯವಾಗಿ ಬಿಡುತ್ತಾರೆ ಎನ್ನುತ್ತಾರೆ ಪ್ರಚಾರಕರು.
ಒಟ್ಟಿನಲ್ಲಿ ಕಟೆಂಟ್ ಫಿಲ್ಮ್ ಬರಬೇಕೆಂದು ಜನರು ಎದುರು ನೋಡುತ್ತಿದ್ದು, ಸಾಕಷ್ಟು ಸಿನಿಮಾಗಳು ಒಮ್ಮೆಲೆ ರಿಲೀಸ್ ಆಗುತ್ತಿವೆ. ಈ ವಾರವೂ 9 ಸಿನಿಮಾಗಳು ರಿಲೀಸ್ ಆಗುತ್ತಿದ್ದು, ಅವುಗಳಿಗೂ ಅದೇ ಸಮಸ್ಯೆ ಎದುರಾಗಿದೆ.
ಸಾಕಷ್ಟು ದೊಡ್ಡ ದೊಡ್ಡ ಸಿನಿಮಾಗಳು , ಹಲವಾರು ಭಾಷೆಗಳಲ್ಲಿ ಒಂದೇ ಬಾರಿಗೆ ರಿಲೀಸ್ ಆಗುತ್ತಿದ್ದು, ಘಟಾನುಘಟಿಗಳ ಚಿತ್ರವನ್ನು ಯಾವುದು ನೋಡಬೇಕು ಬಿಡಬೇಕು ಎನ್ನುವ ಕನ್ಫ್ಯೂಸ್‌ನಲ್ಲಿಯೂ ಜನ ಹಿಂದೇಟು ಹಾಕುತ್ತಿದ್ದಾರೆ.
ಇದನ್ನೂ ಓದಿ | ಬಾಕ್ಸ್ ಆಫೀಸ್ ವಾರ್: ಫ್ಯಾನ್‌ಗಳು ಫುಲ್ ಕನ್ಫ್ಯೂಸ್