ಬೆಂಗಳೂರು : ಸ್ಯಾಂಡಲ್‌ವುಡ್ ಅಂಗಳದಲ್ಲಿ ಹೊಸಬರ ಅಬ್ಬರ ಬಲು ಜೋರಾಗಿದೆ. ಅದರಲ್ಲೂ ಕೊರೊನಾ ಕಂಟಕ ತೊಲಗಿದ ನಂತರ ಚಂದನವನದ ಅಂಗಳದಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಿದ್ದು, ಕನ್ನಡಿಗರಿಗೆ ಹೊಸ ಬಗೆಯ ಸಿನಿಮಾಗಳನ್ನು ವೀಕ್ಷಿಸುವ ಅವಕಾಶ ದೊರೆಯುತ್ತಿದೆ. ಇದೇ ಸಾಲಿಗೆ ‘ತೂತು ಮಡಿಕೆ’ (Tootu Madike) ಚಿತ್ರ ಕೂಡ ಸೇರ್ಪಡೆಯಾಗಿದೆ. ಟೈಟಲ್ ಮೂಲಕವೇ ಗಮನ ಸೆಳೆದಿರುವ ಈ ಚಿತ್ರ ಜುಲೈ 8ರಂದು ರಿಲೀಸ್ ಆಗಲಿದೆ.
ಪೋಸ್ಟರ್, ಟ್ರೇಲರ್ ಮತ್ತು ಹಾಡುಗಳ ಮೂಲಕ ನಿರೀಕ್ಷೆಗಳ ಭಾರ ಹೊತ್ತಿರುವ ‘ತೂತು ಮಡಿಕೆ’ ರಾಜ್ಯಾದ್ಯಂತ 80 ಥಿಯೇಟರ್‌ಗಳಲ್ಲಿ ಜುಲೈ 8ರಂದು ರಿಲೀಸ್ ಆಗಲಿದೆ. ಕನ್ನಡದಲ್ಲಿ ವಿಭಿನ್ನ ಟೈಟಲ್ ಅಡಿ, ಟ್ರೆಂಡಿಂಗ್ ಕಥೆಯನ್ನು ಹಿಡಿದು ಬರುವ ಹೊಸಬರ ತಂಡಗಳು ಸಾಕಷ್ಟು ಯಶಸ್ಸು ಗಳಿಸುತ್ತಿದ್ದು, ಸದ್ಯ ‘ತೂತು ಮಡಿಕೆ’ ಕೂಡ ಅದೇ ರೀತಿ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ | ನನ್ನ ಗಮನ ಏನಿದ್ದರೂ ಸಿನಿಮಾಗಳತ್ತ: ರಾಜಕೀಯ ಸೇರುವ ವದಂತಿ ತಳ್ಳಿ ಹಾಕಿರುವ ನಟ ವಿಶಾಲ್
‘ತೂತು ಮಡಿಕೆ’ ಮೂಲಕ ರಂಗಭೂಮಿ ಕಲಾವಿದ ಚಂದ್ರಕೀರ್ತಿ ನಿರ್ದೇಶಕರಾಗಲಿದ್ದಾರೆ. ಜತೆಗೆ ಹೀರೋ ಆಗಿಯೂ ಪ್ರೇಕ್ಷಕರ ಮುಂದೆ ಹಾಜರಾಗಲಿದ್ದಾರೆ. ಸಿನಿಮಾ ಬಿಡುಗಡೆಗೆ ಕೌಂಟ್‌ಡೌನ್ ಶುರುವಾಗಿದ್ದು, ಚಿತ್ರತಂಡ ಒಂದಷ್ಟು ಮಾಹಿತಿ ಹಂಚಿಕೊಂಡಿದೆ. ರಾಜ್ಯದ ವಿವಿಧೆಡೆ ಭರ್ಜರಿಯಾಗಿ ಪ್ರಮೋಷನ್ ಕಾರ್ಯ ನಡೆಸುವುದರಲ್ಲಿ ಚಿತ್ರ ತಂಡ ಬಿಜಿಯಾಗಿದೆ.
ತಾರೆಗಳ ಸಾಥ್..!
‘ತೂತು ಮಡಿಕೆ’ ಸಿನಿಮಾ ಹೊಸಬರ ಹೊಸ ಪ್ರಯತ್ನವಾಗಿದ್ದರೂ, ಚಿತ್ರಕ್ಕೆ ದೊಡ್ಡ ತಾರಾಬಳಗವೇ ಸಾಥ್ ನೀಡಿದೆ. ‘ತೂತು ಮಡಿಕೆ’ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆಯನ್ನು ಚಂದ್ರಕೀರ್ತಿ ಅವರೇ ಬರೆದಿದ್ದಾರೆ. ಇನ್ನು ಚಂದ್ರಕೀರ್ತಿಗೆ ಜೋಡಿಯಾಗಿ ಗೊಂಬೆಗಳ ಲವ್ ಖ್ಯಾತಿಯ ಪಾವನಾ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಪ್ರಮೋದ್ ಶೆಟ್ಟಿ, ಉಗ್ರಂ ಮಂಜು, ಗಿರೀಶ್ ಶಿವಣ್ಣ, ಶಂಕರ್ ಅಶ್ವತ್ಥ್, ಸಿತಾರಾ ನರೇಶ್ ಭಟ್ ಸೇರಿದಂತೆ ದೊಡ್ಡ ತಾರಾಬಳಗ ಈ ಚಿತ್ರದಲ್ಲಿದೆ.
ನಿರ್ಮಾಪಕ ಶಿವಕುಮಾರ್ ಹೊಸಬರಿಗೆ ಈ ಚಿತ್ರ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಸರ್ವತ ಸಿನಿ ಗ್ಯಾರೇಜ್ & ಸ್ಪ್ರೆಡಾನ್ ಸ್ಟುಡಿಯೋ ನಿರ್ಮಾಣ ಮಾಡುತ್ತಿದೆ. ಮಧುಸೂದನ್ ಮತ್ತು ಗಿರಿಬಸವ ಪ್ರೊಡಕ್ಷನ್ಸ್ ಬಂಡವಾಳ ಹೂಡಿದ್ದಾರೆ. ನವೀನ್ ಚಲ್ಲ ಛಾಯಾಗ್ರಾಹಣ, ಉಜ್ವಲ್ ಚಂದ್ರ ಸಂಕಲನ ‘ತೂತು ಮಡಿಕೆ’ ಸಿನಿಮಾಗೆ ಇದೆ. ಜುಲೈ 8ಕ್ಕೆ ಕನ್ನಡಿಗರು ಹೊಸಬರ ಹೊಸ ಪ್ರಯತ್ನವನ್ನು ಕಣ್ತುಂಬಿಕೊಳ್ಳಬಹುದು.
ಇದನ್ನೂ ಓದಿ | ಎಂಗೇಜ್ ಆದ ತಿಥಿ ಸಿನಿಮಾ ಖ್ಯಾತಿಯ ಪೂಜಾ, ಡಿಸೆಂಬರ್‌ನಲ್ಲಿ ಮದುವೆ