Site icon Vistara News

Actress Leelavathi : ಹಿರಿಯ ನಟಿ ಲೀಲಾವತಿ ವಿಧಿವಶ; ಹೋರಾಟದಲ್ಲೇ ಬೆಳೆದ ಲೀಲಮ್ಮ ಇನ್ನಿಲ್ಲ

Actress Leelavati No More

ಬೆಂಗಳೂರು: ಕನ್ನಡದ ಕಲಾಸರಸ್ವತಿ ಲೀಲಾವತಿ (Actress Leelavathi) ಇನ್ನಿಲ್ಲ. ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಮೇರುನಟಿ ಶುಕ್ರವಾರ (ಡಿಸೆಂಬರ್‌ 8) ಸಂಜೆ ನೆಲಮಂಗಲದ ತೋಟದ ಮನೆಯಲ್ಲಿ (Leelavathi No More) ಕೊನೆಯುಸಿರೆಳೆದರು.

86 ವರ್ಷಗಳ ಸುದೀರ್ಘ ಜೀವನದಲ್ಲಿ ಹೋರಾಟದ ಕೆಚ್ಚಿನಿಂದಲೇ ಬದುಕಿನದ ಅವರು ಕೆಲವು ತಿಂಗಳಿಂದ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ನೆಲಮಂಗಲದ ತೋಟದ ಮನೆಯಲ್ಲಿಯೇ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆಯನ್ನು ಪಡೆಯುತ್ತಿದ್ದ ಅವರಿಗೆ ಶುಕ್ರವಾರ ಸಂಜೆ ಆರೋಗ್ಯ ತೀವ್ರವಾಗಿ ಕೈಕೊಟ್ಟಿತು.

ಊರಿಗೊಂದು ಪಶು ಆಸ್ಪತ್ರೆ ಕಟ್ಟಿಸಬೇಕು ಎಂಬ ಕೊನೆಯಾಸೆಯನ್ನು ಇತ್ತೀಚೆಗಷ್ಟೇ ಅವರು ತಮ್ಮ ಮಗ ವಿನೋದ್‌ ರಾಜ್‌ ಮೂಲಕ ನೆರವೇರಿಸಿಕೊಂಡಿದ್ದರು.

Dr Rajkumar and Leelavati

ಆರು ದಶಕಕ್ಕೂ ಅಧಿಕ ಕಲಾಸೇವೆ

1937ರಲ್ಲಿ ಲೀಲಾವತಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಜನಿಸಿದರು. 1949ರಲ್ಲಿ ನಾಗಕನ್ನಿಕೆ ಸಿನಿಮಾದಲ್ಲಿ ಸಖಿಯ ಪಾತ್ರದ ಮೂಲಕ ಚಂದನವನ ಪ್ರವೇಶಿಸಿದರು. ಅಲ್ಲಿಂದ ಬಳಿಕ ಸುಮಾರು 6 ದಶಕಗಳ ಕಲಾಸೇವೆ ಮಾಡಿದ್ದು 600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿದ್ದಾರೆ. ಕನ್ನಡದಲ್ಲಿಯೇ 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

Dr Rajkumar and Leelavati

ಬೆಳ್ತಂಗಡಿಯಲ್ಲಿ ಜನ್ಮ ತಳೆದ ರಂಗಭೂಮಿಯ ಶಕ್ತಿ

ಲೀಲಾವತಿ ಅವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ. ಚಿಕ್ಕಂದಿನಲ್ಲೇ ನಾಟಕ, ರಂಗಭೂಮಿಯ ಸೆಳೆತ ಅವರಿಗಿತ್ತು. ಮೈಸೂರಿನಲ್ಲಿ ಸುಬ್ಬಯ್ಯ ನಾಯ್ಡು ಅವರ ವೃತ್ತಿ ರಂಗಭೂಮಿಯಲ್ಲಿ ತಾಲೀಮು ಶುರುವಾಗಿ ಬಳಿಕ ಮಹಾಲಿಂಗ ಭಾಗವತರ್‌ ಅವರ ತಂಡದಲ್ಲಿ ಸಕ್ರಿಯರಾದರು.

ಚಿಕ್ಕಂದಿನಲ್ಲೇ ಹತ್ತಾರು ನಾಟಕಗಳಲ್ಲಿ ಅಭಿನಯಿಸಿದ್ದ ಲೀಲಾವತಿ ಅವರು 11ನೇ ವಯಸ್ಸಿನಲ್ಲೇ ಸಿನಿರಂಗಕ್ಕೆ ಕಾಲಿಟ್ಟಿದ್ದರು. 1949ರಲ್ಲಿ ತೆರೆಕಂಡ ನಾಗಕನ್ನಿಕಾ ಚಿತ್ರದಲ್ಲಿ ಸಖಿ ಚಂಚಲಕುಮಾರಿ ಎಂಬ ಪಾತ್ರದಿಂದ ಚಂದನವನಕ್ಕೆ ಎಂಟ್ರಿ ಪಡೆದರು. ಅಲ್ಲಿಂದ ಮುಂದೆ ಡಾ. ರಾಜ್‌ಕುಮಾರ್‌ ಸೇರಿದಂತೆ ಎಲ್ಲ ಹಿರಿಯ ನಟರ ಜತೆಗೆ ಸರಿಸಮನಾಗಿ ನಟಿಸಿ ದೊಡ್ಡ ಮಟ್ಟದ ಸಾಧಕಿ ಎನಿಸಿದರು.

Dr Rajkumar and Leelavati

ನಾಯಕಿಯಾಗಿ ಅವರು ನಟಿಸಿದ ಮೊದಲ ಚಿತ್ರ 1958ರಲ್ಲಿ ತೆರೆಕಂಡ ಮಾಂಗಲ್ಯ ಯೋಗ. ಡಾ.ರಾಜ್ ಕುಮಾರ್ ಅವರೊಂದಿಗೆ ನಟಿಸಿದ ಮೊದಲ ಚಿತ್ರ ರಣಧೀರ ಕಂಠೀರವ. ರಾಣಿ ಹೊನ್ನಮ್ಮ ಚಿತ್ರದಿಂದ ರಾಜ್-ಲೀಲಾವತಿ ಜೋಡಿ ಜನಪ್ರಿಯವಾಯಿತು. ಅಣ್ಣಾವ್ರ ಚಿತ್ರಗಳಲ್ಲಿ ನಾಯಕಿ, ಪೋಷಕ ನಟಿಯಾಗಿ ಅಭಿನಯಿಸಿದ ಅವರು, ಒಟ್ಟು 46 ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.

ಇದನ್ನೂ ಓದಿ: Actress Leelavathi: ನಟಿ ಲೀಲಾವತಿ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ

ಸಂತ ತುಕಾರಾಂ, ಕಣ್ತೆರೆದು ನೋಡು, ಕೈವಾರ ಮಹಾತ್ಮೆ, ಗಾಳಿ ಗೋಪುರ, ಕನ್ಯಾರತ್ನ, ಕುಲವಧು, ವೀರ ಕೇಸರಿ, ಮನ ಮೆಚ್ಚಿದ ಮಡದಿ ಸೇರಿದಂತೆ ಹಲವು ಚಿತ್ರಗಳಲ್ಲಿ ಅಣ್ಣಾವ್ರ ನಾಯಕಿಯಾದರು.

Dr Rajkumar and Leelavati

ರಾಜ್‌ಕುಮಾರ್‌, ಕಲ್ಯಾಣ್‌‌ಕುಮಾರ್‌, ಉದಯಕುಮಾರ್‌ ಮಾತ್ರವಲ್ಲ, ಮುಂದಿನ ಹಂತದ ನಾಯಕರಾದ ಅಂಬರೀಷ್‌, ಪ್ರಭಾಕರ್‌, ವಿಷ್ಣುವರ್ಧನ್‌, ಅನಂತ್‌ನಾಗ್‌, ಶಂಕರ್‌ನಾಗ್‌ ಸೇರಿ ಕನ್ನಡದ ಪ್ರಮುಖ ನಾಯಕರ ಚಿತ್ರಗಳಲ್ಲಿ ನಟನೆ ಮಾಡಿದರು. 201೦ರವರೆಗೂಗೂ ನಟಿಸಿದ ಲೀಲಾವತಿ ತಮ್ಮ ಮಗ ವಿನೋದ್‌ ರಾಜ್‌ ಅವರ ಕನ್ನಡದ ಕಂದ ಚಿತ್ರದಲ್ಲಿ ನಟಿಸಿದ್ದರು. ವಿನೋದ್‌ ರಾಜ್‌ ಅವರು ಅಮ್ಮನನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಂಡಿದ್ದಾರೆ.

Exit mobile version