ಬೆಂಗಳೂರು: 2023 ದಕ್ಷಿಣ ಭಾರತದ ಚಿತ್ರರಂಗಕ್ಕೆ ಅತ್ಯುತ್ತಮ ವರ್ಷಗಳಲ್ಲಿ ಒಂದು. ಅದೇ ರೀತಿ 2024 ಕೂಡ ಸೌತ್ ಸಿನಿಮಾಗಳಿಗೆ ಹಬ್ಬದ ವರ್ಷವೇ ಸರಿ. 2024ರಲ್ಲಿ ಹಲವು ಸೌತ್ ಸ್ಟಾರ್‌ಗಳ ಸೀಕ್ವೆಲ್ ಸಿನಿಮಾಗಳು ತೆರೆ ಕಾಣುತ್ತಿವೆ. ಶಂಕರ್ ನಿರ್ದೇಶನದ ಕಮಲ್ ಹಾಸನ್ ಅವರ ಇಂಡಿಯನ್ 2 ಸಿನಿಮಾದಿಂದ ಆರಂಭಗೊಂಡು, ಸುಕುಮಾರ್ ನಿರ್ದೇಶನದ ಅಲ್ಲು ಅರ್ಜುನ್ ಅವರ ಪುಷ್ಪ 2 ವರೆಗೆ ಟಾಪ್ 5 ಸೀಕ್ವೆಲ್ ಸಿನಿಮಾಗಳ (Top Film Sequels 2024) ಪಟ್ಟಿ ಇಲ್ಲಿದೆ.
ಪುಪ್ಪ 2
ಅಲ್ಲು ಅರ್ಜುನ್ ಅಭಿನಯದ 2021ರ ಬ್ಲಾಕ್‌ಬಸ್ಟರ್ ಚಿತ್ರ ಅಂದರೆ ಅದು ಪುಷ್ಪ ಸಿನಿಮಾ. ಸುಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಅಲ್ಲು ಅರ್ಜುನ್‌ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದು, ಫಹಾದ್ ಫಾಸಿಲ್, ಅನುಸೂಯ, ಸುನಿಲ್ ಮತ್ತು ಇತರರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪುಷ್ಪ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ ಎಂದು ಪುಷ್ಪ 1 ಬಿಡುಗಡೆಯಾಗಿದ್ದಾಗಲೇ ಚಿತ್ರತಂಡ ಮಾಹಿತಿ ಹಂಚಿಕೊಂಡಿತ್ತು. ಚಿತ್ರದ ಮುಂದುವರಿದ ಭಾಗವು ಪುಷ್ಪ 2- ದಿ ರೂಲ್ ಆಗಿರುತ್ತದೆ ಎಂದು ಸಹ ಬಹಿರಂಗಪಡಿಸಲಾಯಿತು. ಪುಷ್ಪ 2: ದಿ ರೂಲ್ ಚಿತ್ರ 2024ರ ಆಗಸ್ಟ್ 15ರಂದು ಥಿಯೇಟರ್‌ಗೆ ಬರಲು ಸಿದ್ಧವಾಗಿದೆ. ಕೆಲವು ದಿನಗಳ ಹಿಂದೆ ಫಹಾದ್ ಫಾಸಿಲ್ (Fahadh Faasil) ತಮ್ಮ ಭಾಗದ ಶೂಟಿಂಗ್ ಪೂರ್ಣಗೊಂಡಿರುವುದಾಗಿ ಹೇಳಿಕೊಂಡಿದ್ದರು. ʻಭನ್ವರ್ ಸಿಂಗ್ ಶೇಖಾವತ್ʼ ಪಾತ್ರದ ಚಿತ್ರೀಕರಣ ಪೂರ್ಣಗೊಳಿಸಿದೆ ಎಂದು ನಟ ಇನ್‌ಸ್ಟಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಚಿತ್ರದ ನಿರ್ಮಾಣ ಸಂಸ್ಥೆಯಾದ ಮೃತ್ರಿ ಮೂವಿ ಮೇಕರ್ಸ್ ಚಿತ್ರದ ಕುರಿತು ಈ ಬಗ್ಗೆ ಅಪ್‌ಡೇಟ್ ಹಂಚಿಕೊಂಡಿತ್ತು. ಬಹು ನಿರೀಕ್ಷಿತ ಸೀಕ್ವೆಲ್ 2024ರಲ್ಲಿ ಬಿಡುಗಡೆಯಾಗುತ್ತಿದೆ.
ಇದನ್ನೂ ಓದಿ: Year Ender 2023: ಈ ವರ್ಷ ಕಲಿತ ಆರೋಗ್ಯ ಪಾಠಗಳ ಮುಖ್ಯಾಂಶಗಳೇನು?
ಯಾತ್ರಾ 2
ಮಮ್ಮುಟ್ಟಿಯವರ 2019ರ ಚಲನಚಿತ್ರ ಯಾತ್ರಾ ಆ ವರ್ಷ ಹೊರಬಂದ ಅತ್ಯಂತ ಪ್ರಸಿದ್ಧ ಚಲನಚಿತ್ರಗಳಲ್ಲಿ ಒಂದಾಗಿದೆ. ಸಿನಿಮಾ ಬಿಡುಗಡೆಯಾದಾಗ ವಿಮರ್ಶಾತ್ಮಕ ಮತ್ತು ವಾಣಿಜ್ಯಾತ್ಮಕವಾಗಿ ಮೆಚ್ಚುಗೆಯನ್ನು ಪಡೆಯಿತು. ಸುಹಾಸಿನಿ ಮಣಿರತ್ನಂ, ಜಗಪತಿ ಬಾಬು, ಅನಸೂಯಾ ಭಾರದ್ವಾಜ್, ಸಚಿನ್ ಖೇಡ್ಕರ್ ಸೇರಿದಂತೆ ಅನೇಕರು ನಟಿಸಿದ್ದಾರೆ.
ಮಮ್ಮುಟ್ಟಿ ನಟನೆಯ ‘ಯಾತ್ರ’ ಸಿನಿಮಾ 2019ರಲ್ಲಿ ತೆರೆಕಂಡಿತ್ತು. ಅಖಂಡ ಆಂಧ್ರದ ಮಾಜಿ ಸಿಎಂ ವೈ. ಎಸ್ ರಾಜಶೇಖರ್ ರೆಡ್ಡಿ ಜೀವನಾಧರಿತ ಈ ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ಇದೀಗ ಅವರ ಪುತ್ರ ವೈ. ಎಸ್ ಜಗನ್ ಮೋಹನ್ ರೆಡ್ಡಿ ಕುರಿತು ‘ಯಾತ್ರ’-2 ಸಿನಿಮಾ ನಿರ್ಮಾಣವಾಗುತ್ತಿದೆ.ಮಮ್ಮುಟಿ ಪುತ್ರ ದುಲ್ಕರ್ ಸಲ್ಮಾನ್ ‘ಯಾತ್ರ’-2 ಚಿತ್ರದಲ್ಲಿ ಜಗನ್ ಪಾತ್ರ ಮಾಡುತ್ತಾರೆ ಎನ್ನುವ ಚರ್ಚೆ ನಡೆದಿತ್ತು. ಆದರೆ ಆ ಅವಕಾಶ ತಮಿಳು ನಟ ಜೀವಾ ಪಾಲಾಗಿದೆ. ಸದ್ಯ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು ರಾಜಶೇಖರ್ ರೆಡ್ಡಿ ಹಾಗೂ ಜಗನ್ ಪಾತ್ರಗಳನ್ನು ಮಮ್ಮುಟಿ, ಜೀವಾ ಲುಕ್ ನೋಡಬಹುದಾಗಿದೆ. ಈ ಪೊಲಿಟಿಕಲ್ ಡ್ರಾಮಾ ಚಿತ್ರಕ್ಕೆ ಮಹಿ ರಾಘವ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. 2024ರ ಫೆಬ್ರವರಿ 8ರಂದು ಸಿನಿಮಾ ತೆರೆಗೆ ಬರುತ್ತಿದೆ.
ಇದನ್ನೂ ಓದಿ: Year Ender 2023: ಗೂಗಲ್‌ನಲ್ಲಿ ಪ್ರವಾಸಿಗರು ಹುಡುಕಿದ ಜಾಗತಿಕ ಟಾಪ್ 10 ಪಟ್ಟಿಯಲ್ಲಿ ಕರ್ನಾಟಕದ ಸ್ಥಳವೂ ಇದೆ!
ಇಂಡಿಯನ್ 2
ಕಮಲ್ ಹಾಸನ್ ಅಭಿಮಾನಿಗಳು ಇಂಡಿಯನ್-2 ಸಿನಿಮಾಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಚಿತ್ರದ ಶೂಟಿಂಗ್ ಪ್ರಾರಂಭವಾಗಿತ್ತು. ಕಾರಣಾಂತರಗಳಿಂದ ಚಿತ್ರೀಕರಣ ವಿಳಂಬವಾಗಿತ್ತು. ಶಂಕರ್ ನಿರ್ದೇಶನದ ಇಂಡಿಯನ್ 2ನಲ್ಲಿ ಸಿದ್ಧಾರ್ಥ್, ಗುಲ್ಶನ್ ಗ್ರೋವರ್, ದಿವಂಗತ ನೆಡುಮುಡಿ ವೇಣು, ದೆಹಲಿ ಗಣೇಶ್, ಸಮುದ್ರಕನಿ, ಬಾಬಿ ಸಿಂಹ, ಪ್ರಿಯಾ ಭವಾನಿ ಶಂಕರ್ ಮತ್ತು ಇತರರು ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ಮತ್ತು ರೆಡ್ ಜೈಂಟ್ ಮೂವೀಸ್ ಜಂಟಿಯಾಗಿ ನಿರ್ಮಿಸುತ್ತಿದೆ. ಚಿತ್ರದ ಹಾಡುಗಳು ಮತ್ತು ಮೂಲ ಸಂಗೀತವನ್ನು ಅನಿರುದ್ಧ್ ರವಿಚಂದರ್ ಸಂಯೋಜಿಸಿದ್ದಾರೆ.
ಇಂಡಿಯನ್ 2’ ಚಿತ್ರ 1996ರಲ್ಲಿ ಮೂಡಿಬಂದ ‘ಇಂಡಿಯನ್’ನ ಮುಂದುವರಿದ ಭಾಗ. ಸೌತ್ ಸಿನಿಮಾ ಇಂಡಸ್ಟ್ರಿಯ ಸೂಪರ್ ಸ್ಟಾರ್ ಕಮಲ್ ಹಾಸನ್ ಅವರು ಸೇನಾಪತಿ ಪಾತ್ರದಲ್ಲಿ ಮಿಂಚಿದ್ದರು. ಅದರ ಮುಂದುವರಿದ ಭಾಗ ಇಂಡಿಯನ್-2.
ಕಾಂತಾರ-1
ಕಳೆದ ವರ್ಷ ತೆರೆಕಂಡು ದೇಶಾದ್ಯಂತ ಸಂಚಲನ ಮೂಡಿಸಿದ್ದ ʼಕಾಂತಾರʼ ಚಿತ್ರದ ಮೊದಲ ಭಾಗದ (Kantara Movie) ಫಸ್ಟ್ ಲುಕ್ ಈಗಾಗಲೇ ಬಿಡುಗಡೆಗೊಂಡಿದೆ. ʼಕಾಂತಾರʼ ಕೇವಲ 16 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿತ್ತು. ಅದು ವಿಶ್ವಾದ್ಯಂತ 400 ಕೋಟಿ ರೂ.ಗಳನ್ನು ಗಳಿಸಿ ಸಾರ್ವಕಾಲಿಕ ಕಲೆಕ್ಷನ್ ಮಾಡಿದ ಕನ್ನಡದ ಎರಡನೇ ಚಿತ್ರವಾಗಿ ಹೊರಹೊಮ್ಮಿತ್ತು. ಇದೀಗ ಈ ಚಿತ್ರದ ಪ್ರೀಕ್ವೆಲ್ ಆಗಿ ʼಕಾಂತಾರ -1ʼ ತೆರೆಗೆ ಬರಲಿದೆ. ಅಂದರೆ ʼಕಾಂತಾರʼ ಕಥೆ ನಡೆಯುವುದಕ್ಕೆ ಮುನ್ನ ಏನಾಗಿತ್ತು ಎನ್ನುವುದನ್ನು ರಿಷಬ್ ಶೆಟ್ಟಿ ಈ ಭಾಗದಲ್ಲಿ ವಿವರಿಸಲಿದ್ದಾರೆ. ಕ್ರಿ.ಶ. 301-400ರ ಕಾಲಘಟ್ಟದ ಕಥೆ ತೆರೆ ಮೇಲೆ ಅನಾವರಣಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಟಿಲ್ಲು ಸ್ಕ್ವೇರ್
ಮಲ್ಲಿಕ್ ರಾಮ್ ನಿರ್ದೇಶನದ ಟಿಲ್ಲು ಸ್ಕ್ವೇರ್ ರೊಮ್ಯಾಂಟಿಕ್ ಕ್ರೈಮ್ ಜತೆಗೆ ಹಾಸ್ಯ ಭರಿತ ಚಿತ್ರವಾಗಿದೆ. ಈ ಚಿತ್ರವು 2022ರಲ್ಲಿ ವಿಮಲ್ ಕೃಷ್ಣ ಅವರ ನಿರ್ದೇಶನದ ಡಿಜೆ ಟಿಲ್ಲು ಚಿತ್ರದ ಮುಂದುವರಿದ ಭಾಗವಾಗಿದೆ. ಎರಡೂ ಚಿತ್ರಗಳನ್ನು ಸಿದ್ದು ಜೊನ್ನಲಗಡ್ಡ ಬರೆದಿದ್ದಾರೆ. ಅನುಪಮಾ ಪರಮೇಶ್ವರನ್, ಮುರಳೀಧರ್ ಗೌಡ್, ಪ್ರಣೀತ್ ರೆಡ್ಡಿ ಕಲ್ಲೆಂ ಹೀಗೆ ಪ್ರಮುಖ ತಾರಾಗಣ ಸಿನಿಮಾದಲ್ಲಿದೆ. 2024ರ ಫೆಬ್ರವರಿ 9ರಂದು ಚಿತ್ರ ತೆರೆ ಕಾಣಲಿದೆ.