ಬೆಂಗಳೂರು: ಬಿಗ್‌ಬಾಸ್ ಕನ್ನಡ 10ನೇ ಸೀಸನ್ (BBK SEASON 10) ಅಂತಿಮ ಹಂತಕ್ಕೆ ತಲುಪಿದೆ. ಫಿನಾಲೆ ಹಂತಕ್ಕೆ ತಲುಪಿರುವ ಆರು ಮಂದಿಯಲ್ಲಿ ಇಬ್ಬರು ಶನಿವಾರವೇ ಮನೆಯಿಂದ ಹೊರ ಹೋಗುತ್ತಾರೆ ಎನ್ನಲಾಗಿತ್ತು. ಇದೀಗ ಸ್ಪರ್ಧೆಯಿಂದ ಮೊದಲು ತುಕಾಲಿ ಸಂತೋಷ್ ಎಲಿಮಿನೇಟ್ ಆಗಿರುವುದು ಕಂಡುಬಂದಿದೆ.
6 ಸ್ಪರ್ಧಿಗಳಲ್ಲಿ ಮೊದಲು ತುಕಾಲಿ ಸಂತೋಷ್ ಹೊರಬಂದಿರುವುದರಿಂದ ಭಾನುವಾರ, ಉಳಿದ 5 ಸ್ಪರ್ಧಿಗಳ ನಡುವೆ ಪೈಪೋಟಿ ನಡೆಯಲಿದೆ. ವೋಟಿಂಗ್‌ನಲ್ಲಿ ತುಕಾಲಿ ಸಂತೋಷ್ ಅವರು 6 ಸ್ಪರ್ಧಿಗಳ ಪೈಕಿ ಕೊನೆಯಲ್ಲಿ ನಿಂತಿದ್ದರಿಂದ ಅವರು ಎಲಿಮಿನೇಟ್ ಆದರು. ತುಕಾಲಿ ಅವರಿಗೆ 26,20,749 ವೋಟ್ ಬಿದ್ದಿವೆ. ಇನ್ನುಳಿದ ಸ್ಪರ್ಧಿಗಳು ತಲಾ 35,00,000 ವೋಟ್‌ಗಳನ್ನು ಪಡೆದಿದ್ದಾರೆ.
ವೋಟಿಂಗ್‌ನಲ್ಲಿ ಕೊನೆಯ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಈ ಬಾರಿಯ ಬಿಗ್‌ಬಾಸ್ ಸೀಸನ್ ಉದ್ದಕ್ಕೂ ತಮ್ಮ ವಿಭಿನ್ನ ಅಭಿನಯ, ಕಾಮಿಡಿ ಡೈಲಾಗ್‌ಗಳ ಮೂಲಕ ಪ್ರೇಕ್ಷಕರನ್ನು ನಕ್ಕು ನಗಿಸಿದ್ದ ತುಕಾಲಿ ಸಂತೋಷ್ ಇದೀಗ ಬಿಗ್ ಬಾಸ್ ಪ್ರಯಾಣ ಮುಗಿಸಿದ್ದಾರೆ.
ಎಲಿಮಿನೇಷನ್ ವೇಳೆ ಮಾತನಾಡಿದ ತುಕಾಲಿ ಸಂತೋಷ್ ಅವರು, ಇಲ್ಲಿವರೆಗೂ ಆಟ ಚೆನ್ನಾಗಿ ಆಡಬೇಕು. ಕೊನೆಯವರೆಗೂ ಉತ್ತಮವಾಗಿ ಪೈಪೋಟಿ ನೀಡಬೇಕು ಎಂದುಕೊಂಡಿದ್ದೆ. ಬದುಕನ್ನು ಯಾವ ರೀತಿ ಬ್ಯಾಲೆನ್ಸ್ ಮಾಡಬೇಕು ಎಂಬುವುದನ್ನು ಬಿಗ್‌ಬಾಸ್‌ನಲ್ಲಿ ಕಲಿತಿದ್ದೇನೆ. ಒಂದು ದೊಡ್ಡ ರಿಯಾಲಿಟಿ ಶೋನಲ್ಲಿ ಆಡಿರುವುದು ಖುಷಿ ತಂದಿದೆ ಎಂದು ಹೇಳಿದರು.
ಕಾಮಿಡಿ ಶೋಗಳ ಮೂಲಕ ಗುರುತಿಸಿಕೊಂಡಿರುವ ತುಕಾಲಿ ಸಂತೋಷ್ ಅವರು ಬಿಗ್ ಬಾಸ್ ಮನೆ ಒಳಗೆ ಕಾಲಿಡುವ ಮೂಲಕ ಗಮನ ಸೆಳೆದಿದ್ದರು. ಒಂದು ಸ್ಕಿಟ್ನಲ್ಲಿ ತುಕಾಲಿ ಎಂಬ ಹೆಸರು ಇಟ್ಟುಕೊಂಡಿದ್ದ ಹಿನ್ನೆಲೆಯಲ್ಲಿ ನಂತರದ ದಿನಗಳಲ್ಲಿ ತುಕಾಲಿ ಸಂತು ಎಂದೇ ಅವರು ಫೇಮಸ್ ಆದರು. ಆ ಬಗ್ಗೆ ಸಂತೋಷ್ ಅವರಿಗೂ ಖುಷಿ ಇದೆ.
ಇದನ್ನೂ ಓದಿ | BBK Season 10: ʻಬಿಗ್ ಬಾಸ್ ಸೀಸನ್ 10ʼರಲ್ಲಿ ನಡೆದ ಚಿತ್ರ ವಿಚಿತ್ರ ವಿವಾದಾತ್ಮಕ ಘಟನೆಗಳಿವು!
ಈ ಬಾರಿಯ ಬಿಗ್ ಬಾಸ್ ಸೀಸನ್ 10 ವೇದಿಕೆಗೆ 17 ಮಂದಿ ಪ್ರವೇಶ ಪಡೆದಿದ್ದರು. ಅವರಲ್ಲಿ ಈಗಾಗಲೇ ಆರು ಸ್ಪರ್ಧಿಗಳು ಫಿನಾಲೆಗೆ ತಲುಪಿದ್ದರು. ಸಂಗೀತಾ, ತುಕಾಲಿ, ವರ್ತೂರ್, ಪ್ರತಾಪ್, ವಿನಯ್, ಕಾರ್ತಿಕ್ ಅವರಲ್ಲಿ ಯಾರು ಟ್ರೋಫಿ ಎತ್ತಿ ಹಿಡಿಯುತ್ತಾರೆ ಎಂಬುದು ವೀಕ್ಷಕರಲ್ಲಿ ಇದೆ ಕುತೂಹಲವಿತ್ತು. ನಾಲ್ಕು ತಿಂಗಳ ಕಾಲ ನಡೆದ ಈ ಕಾರ್ಯಕ್ರಮದ ವಿಜೇತರನ್ನು ಗ್ರ್ಯಾಂಡ್ ಫಿನಾಲೆಯಲ್ಲಿ ಭಾನುವಾರ ಘೋಷಿಸಲಾಗುತ್ತದೆ. ಶನಿವಾರ ತುಕಾಲಿ ಸಂತೋಷ್ ಮನೆಯಿಂದ ಹೊರಗೆ ಹೋಗಿದ್ದರಿಂದ ಫಿನಾಲೆ ದಿನ ಐವರು ಒಳಗಿರುತ್ತಾರೆ.
ಹಲವು ವಿವಾದಗಳಿಂದ ಈ ಬಾರಿ ʻಬಿಗ್ ಬಾಸ್ʼ ಕನ್ನಡ ಸಾಕಷ್ಟು ಸುದ್ದಿಯಲ್ಲಿತ್ತು. ಇದೀಗ ವಿಜೇತರಿಗೆ ಬಹುಮಾನ ಏನೆಲ್ಲ ಇರಬಹುದು ಎಂಬುದು ವೀಕ್ಷಕರಿಗೆ ಕುತೂಹಲ. ಬಿಗ್ ಬಾಸ್‌ನ ಟ್ರೋಫಿಯ ಹೊರತಾಗಿ, ಬಿಗ್ ಬಾಸ್ 10 ವಿಜೇತರು ನಗದು ಬಹುಮಾನದ ಹಣದ ಜತೆಗೆ ಹೊಚ್ಚ ಹೊಸ ಕಾರನ್ನು ಸಹ ಪಡೆಯುತ್ತಾರೆ. ಬಿಗ್ ಬಾಸ್ ಕನ್ನಡ ಸೀಸನ್ 10 ರ ವಿಜೇತರಿಗೆ ಶೋ ಗೆದ್ದ ನಂತರ 50 ಲಕ್ಷ ರೂಪಾಯಿ, ಅದ್ದೂರಿ ಕಾರು ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಹುಮಾನವಾಗಿ ನೀಡಲಾಗುತ್ತಿದೆ.