ಮುಂಬೈ: ಹಿಂದಿ ಕಿರುತೆರೆ ನಟಿ ಉರ್ಫಿ ಜಾವೇದ್ (Uorfi Javed) ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸುದ್ದಿಯಲ್ಲಿರುವ ಬೆಡಗಿ. ವಸ್ತ್ರ ವಿನ್ಯಾಸಕಿ ಎಂದೂ ಗುರುತಿಸಿಕೊಳ್ಳುವ ಅವರು ಬಟ್ಟೆಯೇ ಇಲ್ಲದೆ ಬೇರೆ ಬೇರೆ ವಸ್ತುಗಳನ್ನೇ ಬಳಸಿಕೊಂಡು ಬಟ್ಟೆ ತಯಾರಿಸಿಕೊಳ್ಳುವುದರಲ್ಲಿ ನಿಸ್ಸೀಮರು. ಈಗಾಗಲೇ ವೈರ್, ಬ್ಲೇಡ್, ಪಿನ್ ಸೇರಿದಂತೆ ಅನೇಕ ವಸ್ತುಗಳಿಂದ ಉಡುಗೆ ಸಿದ್ಧಪಡಿಸಿಕೊಂಡಿರುವ ಉರ್ಫಿ ಇದೀಗ ಮತ್ತೊಂದು ವಸ್ತುವನ್ನು ಉಡುಗೆಯಾಗಿ ಮಾಡಿಕೊಂಡಿದ್ದಾರೆ. ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗುತ್ತಿದೆ.
ಹ್ಯಾಂಡ್‌ಬ್ಯಾಗ್ ಅನ್ನು ಹೆಣ್ಣು ಮಕ್ಕಳು ಏಕೆ ಬಳಸುತ್ತಾರೆ? ಮನೆಯಿಂದ ಹೊರಹೋಗುವಾಗ ತಮ್ಮ ಹಣ, ಅಗತ್ಯ ವಸ್ತುಗಳನ್ನು ಇರಿಸಿಕೊಳ್ಳಲೆಂದು ಬಳಸುತ್ತಾರೆ. ಆದರೆ ಈ ಉರ್ಫಿ ಜಾವೇದ್ ಅದೇ ಹ್ಯಾಂಡ್ ಬ್ಯಾಗ್ ಅನ್ನೇ ತಮ್ಮ ಉಡುಪನ್ನಾಗಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Video Viral: ಇದು ನಾರಿ ಶಕ್ತಿಯ ಸೈಡ್ ಎಫೆಕ್ಟ್; ಸೀಟ್‌ಗಾಗಿ ಬಸ್ಸಿನಲ್ಲೇ ಬಡಿದಾಡಿಕೊಂಡ ನಾರಿಯರು!
ಮೊದಲಿಗೆ ಉರ್ಫಿ ಕಂದು ಬಣ್ಣದ ಬ್ಯಾಗ್ ಒಂದನ್ನು ಹಿಡಿದುಕೊಂಡು ಕ್ಯಾಮೆರಾದೆದುರು ಬರುತ್ತಾರೆ. ಅದಾದ ಕೆಲವೇ ಸೆಕೆಂಡುಗಳಲ್ಲಿ ಅವರು ಆ ಬ್ಯಾಗ್ ಅನ್ನು ಉಡುಗೆಯಾಗಿ ಮಾಡಿ ತಾವೇ ತೊಟ್ಟಿಕೊಂಡಿರುವ ವಿಡಿಯೊ ಬರುತ್ತದೆ. ಆ ಉಡುಗೆಯಲ್ಲಿ ಸಣ್ಣದೊಂದು ಜಿಪ್ ಇರುವ ಪರ್ಸ್ ಅನ್ನೂ ನಟಿ ಬಿಟ್ಟಿದ್ದಾರೆ.
ಈ ವಿಡಿಯೊವನ್ನು ನಟಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸೋಮವಾರ ಹಂಚಿಕೊಂಡಿದ್ದಾರೆ. “ಬ್ಯಾಗ್‌ನಿಂದ ಈ ಉಡುಗೆ ತಯಾರಿಸಿದೆ. ಇದು ನಿಜಕ್ಕೂ ತುಂಬಾ ಸುಂದರವಾಗಿದೆ. ಇದನ್ನು ಪಾರ್ಟಿಗೆ ಹಾಕಿಕೊಳ್ಳಲು ಕಾಯುತ್ತಿದ್ದೇನೆ” ಎಂದು ನಟಿ ವಿಡಿಯೊಗೆ ಕ್ಯಾಪ್ಶನ್ ಕೊಟ್ಟಿದ್ದಾರೆ. ಈ ವಿಡಿಯೊವನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. 1.3 ಲಕ್ಷಕ್ಕೂ ಅಧಿಕ ಮಂದಿ ವಿಡಿಯೊಗೆ ಲೈಕ್ ಕೊಟ್ಟಿದ್ದಾರೆ.
ವಿಡಿಯೊಗೆ ಹಲವಾರು ರೀತಿಯ ಕಮೆಂಟ್‌ಗಳ ಸುರಿಮಳೆ ಬರುತ್ತಿದೆ. ಹಲವರು ಉರ್ಫಿ ಅವರ ಪ್ರತಿಭೆಯನ್ನು ಮೆಚ್ಚಿ ಮೆಚ್ಚುಗೆಯ ಮಾತನ್ನು ಆಡುತ್ತಿದ್ದಾರೆ. ಇನ್ನೂ ಅನೇಕರು ಉರ್ಫಿಯ ಕಾಲೆಳೆಯಲು ಆರಂಭಿಸಿದ್ದಾರೆ. “ಮನೆಯ ಯಾವ ಸಾಮಾಗ್ರಿಯನ್ನೂ ಈ ಉರ್ಫಿ ಬಿಡುವುದಿಲ್ಲ. ಹೆಣ್ಣು ಮಕ್ಕಳು ನಿಮ್ಮ ಬ್ಯಾಗ್ ಬಗ್ಗೆ ಎಚ್ಚರಿಕೆಯಿಂದಿರಿ. ಉರ್ಫಿ ಕೈಗೆ ಸಿಗದಂತೆ ನೋಡಿಕೊಳ್ಳಿ” ಎನ್ನುವಂತಹ ಕಾಮೆಂಟ್‌ಗಳು ವಿಡಿಯೊಗೆ ಬಂದಿವೆ.