Site icon Vistara News

Upcoming Kannada Movie | ಕನ್ನಡದ ಎಂಟು ಸಿನಿಮಾಗಳು ತೆರೆಗೆ: ಇದು ಸಿನಿ ರಸಿಕರ ವಾರ

Upcoming Kannada Movie

ಬೆಂಗಳೂರು : ಸ್ಯಾಂಡಲ್​ವುಡ್​ನಲ್ಲಿ ಈ ವಾರ ಸಿನಿಮಾಗಳ ಹಬ್ಬ. ಸಾಲು ಸಾಲು ಸಿನಿಮಾಗಳು ತೆರೆ ಕಾಣುತ್ತಿವೆ. ಎಂಟು ಸಿನಿಮಾಗಳು (Upcoming Kannada Movie) (ಜು.15) ಬಿಡುಗಡೆಗೊಳ್ಳುತ್ತಿವೆ. ಇದರಲ್ಲಿ ಆರು ಕನ್ನಡದ ಚಿತ್ರಗಳಾದರೆ ಉಳಿದ ಎರಡು ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ಬರುತ್ತಿವೆ.

1. ಚೇಜ್‌ (Chase)

ವಿಲೋಕ್‌ ಶೆಟ್ಟಿ ಶೆಟ್ಟಿ ನಿರ್ದೇಶನದ “ಚೇಜ್‌ʼ ಸಿನಿಮಾ ಜು.15ರಂದು ಬಿಡುಗಡೆಗೊಳ್ಳಲಿದೆ. ಮನೋಹರ್‌ ಸುವರ್ಣ ನಿರ್ಮಾಣ ಮಾಡಿದ್ದಾರೆ. ಮ್ಯಾಕ್ಸ್‌ ಎಂಬ ಶ್ವಾನ ಕೂಡ ಈ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸಿದೆ. ಅನಂತ್‌ ರಾಜ್‌ ಅರಸ್‌ ಛಾಯಾಗ್ರಹಣ, ಕಾರ್ತಿಕ್‌ ಆಚಾರ್ಯ ಹಿನ್ನೆಲೆ ಸಂಗೀತ ಮತ್ತು ಸಂಗೀತ ನಿರ್ದೇಶನ ಮಾಡಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಸಿನಿಮಾ ಸ್ಟ್ರೀಮಿಂಗ್‌ ಹಾಗೂ ಡಿಸ್ಟ್ರಿಬ್ಯೂಷನ್‌ ಮಾರುಕಟ್ಟೆ ಸೃಷ್ಟಿಸಿರುವ ಯುಎಫ್‌ಒ ಸಂಸ್ಥೆ, ಇದೀಗ ʻಚೇಜ್‌ʼ ಚಿತ್ರದ ವಿತರಣೆ ಹಕ್ಕನ್ನು ಪಡೆದುಕೊಂಡಿದೆ.

ಇದನ್ನೂ ಓದಿ | Kummatty Film | ಮಲಯಾಳಂನ ಕ್ಲಾಸಿಕ್‌ ಕುಮ್ಮಟ್ಟಿ ಸಿನಿಮಾ TFFನಲ್ಲಿ ಪ್ರದರ್ಶನ

2. Oh My love

ಹಿರಿಯ ನಟ ಶಶಿಕುಮಾರ್‌ ಅವರ ಪುತ್ರ ಅಕ್ಷಿತ್‌ ನಟನೆಯ ಚೊಚ್ಚಲ ಸಿನಿಮಾ ʻಓ ಮೈ ಲವ್‌ʼ ಚಿತ್ರ ಇದೇ ಜು. ೧೫ರಂದು ತೆರೆಗೆ ಬರಲಿದೆ. ಕೀರ್ತಿ ಕಲ್ಕೆರೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಸ್ಮೈಲ್ ಶ್ರೀನು ನಿರ್ದೇಶನದಲ್ಲಿ ಚಿತ್ರ ಮೂಡಿಬರುತ್ತಿದೆ.

3. ಕರ್ಮಣ್ಯೇ ವಾಧಿಕಾರಸ್ತೇ ( karmanye vadhikaraste)

ಯುವ ನಟ‌ ಪ್ರತೀಕ್ ಸುಬ್ರಮಣಿ ಈ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡುತ್ತಿದ್ದಾರೆ. ನಿರ್ದೇಶಕ ಶ್ರೀಹರಿ ಆನಂದ್ ಈ ಚಿತ್ರವನ್ನು ನಿರ್ದೆಶಿಸಿದ್ದಾರೆ.

4. ಪದ್ಮಾವತಿ ( Padmavathi )

ಮಿಥುನ್‌ ಚಂದ್ರಶೇಖರ್ ಚಿತ್ರಕತೆ, ಸಂಭಾಷಣೆ ಬರೆದು ಮೊದಲ ಬಾರಿ ನಿರ್ದೇಶನ ಮಾಡಿರುವ ಪದ್ಮಾವತಿ ತೆರೆಗೆ ಬರಲಿದೆ. ಮೂರು ಶೇಡ್‌ಗಳಲ್ಲಿ ನಾಯಕಿ ಸಾಕ್ಷಿಮೇಘನಾ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದ್ಧೂರಿಯಾಗಿ ರಾಜ್ಯಾದ್ಯಂತ ಬಿಡುಗಡೆ ಮಾಡಲು ಚಿತ್ರತಂಡ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

5. ‘ಪೆಟ್ರೋಮ್ಯಾಕ್ಸ್’ (Petromax)

ಸತೀಶ್‌ ನೀನಾಸಂ ನಟನೆಯ ಪೆಟ್ರೋಮ್ಯಾಕ್ಸ್‌ ಸಿನಿಮಾ ಟ್ರೈಲರ್‌ ಮೂಲಕ ಭಾರಿ ಸದ್ದು ಮಾಡಿತ್ತು. ವಿಜಯ್‌ ಪ್ರಸಾದ್‌ ನಿರ್ದೇಶನದ ಈ ಸಿನಿಮಾ ಬೋಲ್ಡ್‌ ಡೈಲಾಗ್‌ಗಳ ಮೂಲಕ ಉತ್ತಮ ಕಥೆಯನ್ನು ಹೇಳಲಿದೆ. ಈ ಚಿತ್ರದಲ್ಲಿ ನಟಿ ಹರಿಪ್ರಿಯಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ನಾಗಭೂಷಣ್‌, ಕಾರುಣ್ಯಾ ರಾಮ್‌, ಗೊಂಬೆಗಳ ಲವ್‌ ಅರುಣ್‌, ವಿಜಯಲಕ್ಷ್ಮಿ ಸಿಂಗ್‌ ನಟಿಸಿದ್ದಾರೆ. ಜುಲೈ 15ರಂದು ಈ ಸಿನಿಮಾ ಬಿಡುಗಡೆಯಾಗುತ್ತಿದೆ.

6. ಬೆಂಕಿ (Benki)

ಅನೀಶ್‌ ತೇಜೇಶ್ವರ್‌ ಮಾಸ್‌ ಹೀರೋ ಎಂತಲೇ ಖ್ಯಾತಿ ಪಡೆದಿದ್ದಾರೆ. ಈ ಬಾರಿ ಅಣ್ಣ ತಂಗಿ ಬಾಂಧವ್ಯದ ಸಿನಿಮಾದೊಂದಿಗೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಎ ಆರ್‌ ಶ್ಯಾನ್‌ ನಿರ್ದೇಶನದ ಈ ಸಿನಿಮಾವನ್ನು ಅನೀಶ್‌ ಅವರೇ ನಿರ್ಮಿಸಿರುವುದು ವಿಶೇಷ. ಚಿತ್ರ ಜು. 15ಕ್ಕೆ ಬಿಡುಗಡೆಗೊಳ್ಳುತ್ತಿದೆ. ಮತ್ತು 120ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ ಎಂದು ಚಿತ್ರತಂಡ ಹೇಳಿದೆ.

7. ಹುಡುಗಿ (ladki)

ಖ್ಯಾತ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ವಿಭಿನ್ನ ಸಿನಿಮಾಗಳನ್ನು ನೀಡುವುದರಲ್ಲಿ ಎತ್ತಿದ ಕೈ. ತಮಗೆ ಅನ್ನಿಸಿದ್ದನ್ನು ಅಂದುಕೊಂಡಂತೆಯೇ ಸಿನಿಪ್ರಿಯರ ಮುಂದೆ ತರುವಲ್ಲಿ ನಿಸ್ಸೀಮ. ಹೊಸತನಕ್ಕೆ ಮಿಡಿಯುವ, ಹೊಸತನವನ್ನು ಬಿಂಬಿಸುವ ಆರ್‌ಜಿವಿ ಈಗ ಪ್ಯಾನ್ ಇಂಡಿಯಾ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಜುಲೈ ೧೫ಕ್ಕೆ ದೇಶ ಸೇರಿದಂತೆ ವಿದೇಶದಲ್ಲೂ ತೆರೆಗೆ ಬರಲಿದೆ.

ಅಂದಹಾಗೆ ಈ ಸಿನಿಮಾ ಹೆಸರು “ಲಡ್ಕಿ” (Ladki Film). ಕನ್ನಡದಲ್ಲಿ “ಹುಡುಗಿ” ಎಂದು ನಾಮಕರಣ ಮಾಡಲಾಗಿದೆ. ಈ ಸಿನಿಮಾ ಮಹಿಳಾ ಪ್ರಧಾನವಾಗಿದ್ದು, ಮಾರ್ಷಲ್‌ ಆರ್ಟ್ಸ್ ಕೇಂದ್ರಿತವಾಗಿ ಚಿತ್ರಿಸಲಾಗಿದೆ.

8. ಗಾರ್ಗಿ (gargi)

ಖ್ಯಾತ ನಟಿ ಸಾಯಿ‌ ಪಲ್ಲವಿ ಅಭಿನಯದ ‘ಗಾರ್ಗಿ’ ಚಿತ್ರ (Gargi Film) ಬಿಡುಗಡೆಯಾಗುತ್ತಿದೆ. ಗೌತಮ್ ರಾಮಚಂದ್ರನ್ ನಿರ್ದೇಶನದ ತಮಿಳಿನ ಈ ಚಿತ್ರವನ್ನು ಕನ್ನಡ ಮತ್ತು ತೆಲುಗಿಗೆ ಡಬ್‌ ಮಾಡಲಾಗಿದ್ದು, ಕನ್ನಡದಲ್ಲಿ ತಮ್ಮ ಪಾತ್ರಕ್ಕೆ ಸಾಯಿ ಪಲ್ಲವಿಯೇ ಧ್ವನಿ ನೀಡಿದ್ದಾರೆ. ಕನ್ನಡಕ್ಕೆ ಡಬ್‌ ಆದ ಈ ಚಿತ್ರದ ವಿತರಣೆಯ ಹಕ್ಕನ್ನು ನಟ ಸಿಂಪಲ್‌ ಸ್ಟಾರ್‌ ರಕ್ಷಿತ್ ಶೆಟ್ಟಿ ಪಡೆದಿದ್ದಾರೆ. ಅವರು ತಮ್ಮ ʼಪರಂವಃ ಸ್ಟುಡಿಯೋಸ್‌ʼ ಮೂಲಕ ವಿತರಣೆ ಮಾಡಲಿದ್ದಾರೆ.

ಇದನ್ನೂ ಓದಿ | Upcoming Kannada Movie | ಒಂದೇ ದಿನ ತೆರೆಗೆ ಅಪ್ಪಳಿಸಲಿವೆ ಆರು ಸಿನಿಮಾಗಳು: ನಿಮ್ಮ ಆಯ್ಕೆ ಯಾವುದು?

Exit mobile version