Site icon Vistara News

Adnan Sami | ಅಮೆರಿಕದ ಏರ್‌ಪೋರ್ಟ್‌ನಲ್ಲಿ ಗಾಯಕ ಅದ್ನಾನ್ ಸಾಮಿಯನ್ನು ತಡೆದಿದ್ದೇಕೆ?

ನವದೆಹಲಿ: ಈಗ ಭಾರತೀಯ ಪ್ರಜೆಯಾಗಿರುವ ಪಾಕಿಸ್ತಾನ ಮೂಲದ ಗಾಯಕ ಮತ್ತು ಸಂಗೀತ ನಿರ್ದೇಶಕ ಅದ್ನಾನ್ ಸಾಮಿ (Adnan Sami) ಅಮೆರಿಕದ ವಿಮಾನ ನಿಲ್ದಾಣದಲ್ಲಿ ವಿಚಿತ್ರ ಪೇಚಿನ ಪ್ರಸಂಗವೊಂದನ್ನು ಎದುರಿಸಿದ್ದಾರೆ. ತಮ್ಮ ದಢೂತಿ ದೇಹದಿಂದಲೇ ಹೆಚ್ಚು ಗುರುತಿಸಿಕೊಂಡಿದ್ದ ಸಾಮಿ, 130 ಕೆ.ಜಿ. ತೂಕವನ್ನು ಇಳಿಸಿಕೊಂಡಿದ್ದರು. ಈ ತೂಕ ಇಳಿಸಿಕೊಂಡಿದ್ದೇ ಅವರಿಗೆ ಅಮೆರಿಕದಲ್ಲಿ ಸಮಸ್ಯೆಯನ್ನು ತಂದೊಡ್ಡಿತು ಎಂದರೆ ನೀವು ನಂಬಲೇಬೇಕು!

ಏನಾಗಿತ್ತು ಎಂದರೆ, ಸಾಮಿ ಪಾಸ್‌ಪೋರ್ಟ್‌ನಲ್ಲಿ ಅವರ ದಢೂತಿ ಇದ್ದಾಗಿನ ಫೋಟೋ ಇತ್ತು. ಆದರೆ, ಇವರು 130 ಕೆ.ಜಿ. ತೂಕ ಇಳಿಸಿಕೊಂಡು ಸಪೂರ ಆಗಿದ್ದರು. ಈ ಹಂತದಲ್ಲಿ ಅವರು ಅಮೆರಿಕ ಪ್ರಯಾಣ ಕೈಗೊಂಡಿದ್ದರು. ಅಲ್ಲಿನ ಏರ್‌ಪೋರ್ಟ್‌ನಲ್ಲಿ ವಲಸೆ ಅಧಿಕಾರಿ ಸಾಮಿಯನ್ನು ಹೊರಗೆ ಬಿಡಲು ತಯಾರೇ ಇರಲಿಲ್ಲ. ಯಾಕೆಂದರೆ, ಫೋಟೋದಲ್ಲಿರುವ ಅದ್ನಾನ್ ಸಾಮಿಗೂ ಮತ್ತು ಅಧಿಕಾರಿಯ ಮುಂದೆ ಇದ್ದ ಸಾಮಿಗೂ ಅಜಗಜಾಂತರವಿತ್ತು. ಈ ಘಟನೆ ನಡೆದಿದ್ದು ಕೆಲವು ವರ್ಷಗಳ ಹಿಂದೆ. ಸ್ವತಃ ಅದ್ನಾನ್ ಸಾಮಿಯೇ ಈ ಘಟನೆಯನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.

ನನಗೆ ನೆನಪಿದೆ ಕೆಲವು ವರ್ಷಗಳ ಹಿಂದೆ ಅಮೆರಿಕಕ್ಕೆ ಹೋದಾಗ ತೊಂದರೆಯಾಗಿತ್ತು. ಗೂಗಲ್ ಮಾಡಿ ಅಲ್ಲಿನ ವಿಮಾನನಿಲ್ದಾಣದ ಅಧಿಕಾರಿಗೆ ತೋರಿಸಬೇಕಾಯಿತು. ಗೂಗಲ್‌ನಲ್ಲಿ ನಾನು ತೂಕ ಇಳಿಸಿಕೊಂಡ ಬಗ್ಗೆ ಆರ್ಟಿಕಲ್‌ಗಳಿದ್ದವು. ಬಳಿಕ ಅವರು ತೂಕ ಇಳಿಸಿಕೊಳ್ಳುವ ಮುಂಚೆ ಮತ್ತು ನಂತರದ ಫೋಟೋಗಳನ್ನು ನೋಡಿ, ನಾನು ಅದೇ ವ್ಯಕ್ತಿ ಎಂದು ಖಚಿತಪಡಿಸಿಕೊಂಡರು ಎಂದು ಅದ್ನಾನ್ ಸಾಮಿ ಹೇಳಿಕೊಂಡಿದ್ದಾರೆ.

ದಢೂತಿಯಾಗಿದ್ದ ಅದ್ನಾನಿ ಸಾಮಿ ಅವರು ತೂಕ ಇಳಿಸಿಕೊಂಡು, ಫಿಟ್ ಆಗಿರುವ ರೂಪಾಂತರದ ಬಗ್ಗೆ ಅವರ ಅಭಿಮಾನಿಗಳಲ್ಲಿ ಅಚ್ಚರಿಯುಂಟು ಮಾಡಿದೆ. ತಮ್ಮ ದೇಹ ರೂಪಾಂತರದ ಅನೇಕ ಫೋಟೋಗಳನ್ನು ಅದ್ನಾನ್ ಸಾಮಿ ಅವರು ಇನ್‌ಸ್ಟಾಗ್ರಾಮ್‌ದಲ್ಲಿ ಷೇರ್ ಮಾಡಿಕೊಂಡು, ಅಭಿಮಾನಿಗಳಿಗೆ ಪ್ರೇರಣೆ ಒದಗಿಸಿದ್ದಾರೆ.

ಇದನ್ನೂ ಓದಿ | ದಿಢೀರನೆ ತೂಕ ಏರಿಕೆ ಸಮಸ್ಯೆ ನಿಮ್ಮದೂ ಹೌದೇ? ಇಲ್ಲಿದೆ ನೋಡಿ ಪರಿಹಾರ!

Exit mobile version