ಬಾಲಿವುಡ್ ಖ್ಯಾತ ನಟ ಅಮಿತಾಭ್ ಬಚ್ಚನ್ (Amitabh Bachchan) ಮತ್ತು ನಟಿ ಅನುಷ್ಕಾ ಶರ್ಮಾ (Anushka Sharma) ಅವರು ಬೈಕ್ನಲ್ಲಿ ಹಿಂಬದಿಗೆ ಕುಳಿತು ರೈಡ್ ಮಾಡುತ್ತಿರುವ ಫೋಟೋ-ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಅದರ ಬೆನ್ನಲ್ಲೇ ಈಗ ಮುಂಬಯಿ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ಅಮಿತಾಭ್ ಬಚ್ಚನ್ ಅವರು ಸೋಮವಾರ ಶೂಟಿಂಗ್ ಸ್ಥಳಕ್ಕೆ ಹೋಗುವಾಗ ತಮ್ಮ ಅಭಿಮಾನಿಯೊಬ್ಬರ ಬೈಕ್ನಲ್ಲಿ ಡ್ರಾಪ್ ಪಡೆದಿದ್ದರು. ವಿಪರೀತ ಟ್ರಾಫಿಕ್ ಇದ್ದ ಕಾರಣ, ಕಾರಿನಲ್ಲಿ ಹೋದರೆ ತಡವಾಗುತ್ತದೆ ಎಂಬ ಕಾರಣಕ್ಕೆ ಬೈಕ್ ಏರಿದ್ದರು. ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡು, ತಮ್ಮನ್ನು ಶೂಟಿಂಗ್ ಸ್ಥಳಕ್ಕೆ ಸರಿಯಾದ ಸಮಯಕ್ಕೆ ತಲುಪಿಸಿದ್ದಕ್ಕೆ ಅಭಿಮಾನಿಗೆ ಧನ್ಯವಾದ ಸಲ್ಲಿಸಿದ್ದರು.
ಅದೇ ದಿನ ಅನುಷ್ಕಾ ಶರ್ಮಾ ಅವರೂ ಕೂಡ ತಮ್ಮ ಬಾಡಿಗಾರ್ಡ್ ಜತೆ ಬೈಕ್ನಲ್ಲಿ ಹೋಗಿದ್ದರು. ಅನುಷ್ಕಾ ಅವರು ಜುಹು ಬಳಿ ಎಲ್ಲಿಯೋ ಹೋಗಬೇಕಿತ್ತು. ಆದರೆ ಅವರು ಹೋಗುವ ಮಾರ್ಗದಲ್ಲಿ ಮರ ಬಿದ್ದು, ರಸ್ತೆ ಬ್ಲಾಕ್ ಆಗಿ, ಕಾರಿನಲ್ಲಿ ಹೋಗಲು ಸಾಧ್ಯವಿರಲಿಲ್ಲ. ಹೀಗಾಗಿ ಅನುಷ್ಕಾ ತಮ್ಮ ಬಾಡಿಗಾರ್ಡ್ ಜತೆ ಬೈಕ್ನಲ್ಲಿ ತೆರಳಿದ್ದರು. ಈ ವಿಡಿಯೊ-ಫೋಟೋಗಳು ಕೂಡ ವೈರಲ್ ಆಗಿದ್ದವು.
ಆದರೆ ಈ ಇಬ್ಬರೂ ಸೆಲೆಬ್ರಿಟಿಗಳ ವಿಡಿಯೊಕ್ಕೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ಕೊಟ್ಟಿದ್ದರು. ಇಬ್ಬರ ಸರಳತೆಯನ್ನು ಹೊಗಳಿದ್ದು ಕೆಲವೇ ಮಂದಿ ಆದರೆ, ಅನೇಕರು ಕ್ಯಾತೆ ತೆಗೆದಿದ್ದರು. ಇಷ್ಟು ದೊಡ್ಡ ವ್ಯಕ್ತಿಗಳು, ಇಬ್ಬರೂ ಹೆಲ್ಮೆಟ್ ಧರಿಸದೆ ಬೈಕ್ನಲ್ಲಿ ಹೋಗಿದ್ದಾರೆ. ಅಮಿತಾಬ್ ಬಚ್ಚನ್, ಅನಿಷ್ಕಾ ಶರ್ಮಾ ಮಾತ್ರವಲ್ಲ ಅವರನ್ನು ಬೈಕ್ನಲ್ಲಿ ಕರೆದುಕೊಂಡು ಹೋದವರೂ ಹೆಲ್ಮೆಟ್ ಹಾಕಲಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೊಗಳಿಗೆ ಕಮೆಂಟ್ ಹಾಕಿದ್ದರು. ಕೆಲವರಂತೂ ವಿಡಿಯೊಗಳಿಗೆ ಮುಂಬಯಿ ಟ್ರಾಫಿಕ್ ಪೊಲೀಸ್ರನ್ನು ಟ್ಯಾಗ್ ಮಾಡಿ, ಗಮನ ಸೆಳೆದಿದ್ದರು.
ಇದನ್ನೂ ಓದಿ: Cannes Film Festival: ಇದೆ ಮೊದಲ ಬಾರಿಗೆ ಕಾನ್ ಚಿತ್ರೋತ್ಸವದಲ್ಲಿ ಅನುಷ್ಕಾ ಶರ್ಮಾ; ಇಲ್ಲಿದೆ ಫುಲ್ ಡಿಟೇಲ್ಸ್
ಅನುಷ್ಕಾ ಶರ್ಮಾ ಮತ್ತು ಅಮಿತಾಭ್ ಬಚ್ಚನ್ ಇಬ್ಬರೂ ತಮ್ಮ ತಮ್ಮ ಪ್ರಾಜೆಕ್ಟ್ಗಳಲ್ಲಿ ಬ್ಯೂಸಿಯಾಗಿದ್ದಾರೆ. ಅನುಷ್ಕಾ ಶರ್ಮಾ ಅವರು ತಮ್ಮ ಮುಂದಿನ ಸಿನಿಮಾ ಚಕ್ಡಾ ಎಕ್ಸ್‌ಪ್ರೆಸ್ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಸಿಕೊಂಡಿದ್ದರೆ, ಅಮಿತಾಬ್ ಬಚ್ಚನ್ ಅವರು ಪ್ರಾಜೆಕ್ಟ್ ಕೆ ಸಿನಿಮಾದಲ್ಲಿ ಬ್ಯೂಸಿ. ಈ ಸಿನಿಮಾ ಮುಂದಿನ ವರ್ಷ ಬಿಡುಗಡೆಯಾಗಲಿದ್ದು, ಅಮಿತಾಬ್ ಬಚ್ಚನ್ ಜತೆ ಪ್ರಭಾಸ್, ದೀಪಿಕಾ ಪಡುಕೋಣೆ ಕೂಡ ಸಿನಿಮಾದಲ್ಲಿದ್ದಾರೆ. ಆದರೆ ಇವರಿಬ್ಬರ ವರ್ತನೆ ಸದ್ಯ ನೆಟ್ಟಿಗರಿಗೆ ಖುಷಿಯಾಗಲಿಲ್ಲ.