ಬೆಂಗಳೂರು: ವಿಜಯ್ ಸೇತುಪತಿ ಮತ್ತು ಸೂರಿ ನಟಿಸುತ್ತಿರುವ ತಮಿಳು ಚಿತ್ರ ‘ವಿಡುತಲೈ’ (Viduthalai) ಇದೀಗ ಎರಡು ಭಾಗಗಳಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಕಾಲಿವುಡ್‌ನ ಹೆಸರಾಂತ ನಿರ್ದೇಶಕ ವೆಟ್ರಿಮಾರನ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಇತ್ತು. ಕ್ರಮೇಣ ಜನಪ್ರಿಯ ಕಲಾವಿದರು ಮತ್ತು ತಂತ್ರಜ್ಞರು ಚಿತ್ರತಂಡಕ್ಕೆ ಸೇರ್ಪಡೆಯಾಗುತ್ತಿದ್ದಂತೆಯೇ ಈ ಚಿತ್ರದ ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿವೆ.
ʻವಿಡುತಲೈʼ ಚಿತ್ರದ ಭಾಗ ಒಂದರ ಚಿತ್ರೀಕರಣ ಸಂಪೂರ್ಣವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪ್ರಗತಿಯಲ್ಲಿವೆ. ಎರಡನೆಯ ಭಾಗದ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದ್ದು ಸಿರುಮಲೈ, ಕೊಡೈಕೆನಾಲ್ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ದೊಡ್ಡ ಬಜೆಟ್ ಸಿನಿಮಾ ʻವಿಡುತಲೈʼ!
ಎರಡು ಭಾಗಗಳಲ್ಲಿ ಬಿಡುಗಡೆಯಾಗುವ ಈ ಚಿತ್ರ ದೊಡ್ಡ ಬಜೆಟ್ನಲ್ಲಿ ನಿರ್ಮಾಣವಾಗುತ್ತಿದೆ. ತಮಿಳಿನ ದುಬಾರಿ ಚಿತ್ರಗಳ ಪೈಕಿಗೆ ‘ವಿಡುತಲೈ’ ಸೇರ್ಪಡೆಯಾಗಲಿದೆ. ಈ ಚಿತ್ರವನ್ನು ಕೋಟ್ಯಂತರ ವೆಚ್ಚದಲ್ಲಿ ಅದ್ಧೂರಿಯಾಗಿ ನಿರ್ಮಿಸಲಾಗಿದ್ದು, ಚಿತ್ರಕ್ಕಾಗಿ ವಿಶೇಷವಾಗಿ 10 ಕೋಟಿ ರೂ. ವೆಚ್ಚದ ರೈಲು ಮತ್ತು ರೈಲ್ವೇ ಸೇತುವೆಯ ಸೆಟ್ ನಿರ್ಮಾಣ ಮಾಡಲಾಗಿದೆ ಎಂದು ವರದಿ ಆಗಿತ್ತು. ನಿಜವಾದ ರೈಲ್ವೆ ಬೋಗಿಗಳು ಮತ್ತು ಸೇತುವೆಯನ್ನು ನಿರ್ಮಿಸುವುದಕ್ಕೆ ಬಳಸಲಾಗುವ ಪರಿಕರಗಳನ್ನೇ ಈ ಸೆಟ್ ನಿರ್ಮಾಣಕ್ಕೂ ಬಳಸಲಾಗಿದೆ ಎನ್ನಲಾಗಿದೆ.
ಕೊಡೈಕೆನಾಲ್ನಲ್ಲಿ ಪೀಟರ್ ಹೇನ್ಸ್ ನಿರ್ದೇಶನದಲ್ಲಿ ಸಾಹಸಮಯ ದೃಶ್ಯಗಳನ್ನು ಚಿತ್ರೀಕರಿಸುವುದಕ್ಕೆ ತಯಾರಿ ನಡೆಸಲಾಗಿದ್ದು, ಇದಕ್ಕಾಗಿ ಬಲ್ಗೇರಿಯಾದಿಂದ ಸಾಹಸ ಕಲಾವಿದರನ್ನು ಕರೆಸಲಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ಇದನ್ನೂ ಓದಿ | ಕಮಲ್ ಹಾಸನ್ ನಟನೆಯ ವಿಕ್ರಮ್ ಚಿತ್ರಕ್ಕೆ ಸಿಕ್ಕಿತು ಪ್ರಮಾಣ ಪತ್ರ
”ವಿಡುತಲೈ’ ಚಿತ್ರದಲ್ಲಿ ವಿಜಯ್ ಸೇತುಪತಿ, ಸೂರಿ, ಭವಾನಿ ಶ್ರೀ, ಪ್ರಕಾಶ್ ರಾಜ್, ಗೌತಮ್ ವಾಸುದೇವ ಮೆನನ್, ರಾಜೀವ್ ಮೆನನ್ ಮುಂತಾದವರು ನಟಿಸುತ್ತಿದ್ದಾರೆ. ಸಾವಿರಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ಇಳಯರಾಜ ಅವರು ಈ ಚಿತ್ರದ ಸಂಗೀತದ ಜವಾಬ್ದಾರಿ ಹೊತ್ತಿದ್ದಾರೆ. ವೇಲ್ರಾಜ್ ಛಾಯಾಗ್ರಹಣ ಮಾಡುತ್ತಿದ್ದಾರೆ.
ಈ ಚಿತ್ರದ ವಿತರಣೆಯ ಜವಾಬ್ದಾರಿಯನ್ನು ರೆಡ್ ಜೈಂಟ್ ಮೂವೀಸ್ ವಹಿಸಿಕೊಂಡಿದ್ದು, ಸದ್ಯದಲ್ಲೇ ‘ವಿಡುತಲೈ’ ಮೊದಲ ಭಾಗದ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ಇದನ್ನೂ ಓದಿ | ಕಾಲಿವುಡ್ ನಿರ್ಮಾಪಕರಿಗೆ ಸೇರಿದ ಸ್ಥಳಗಳಲ್ಲಿ ಐಟಿ ರೇಡ್; 200 ಕೋಟಿ ರೂ ಅಕ್ರಮ ಆದಾಯ ಪತ್ತೆ