ಬೆಂಗಳೂರು: 43 ಮಲಯಾಳಂ ಚಲನಚಿತ್ರಗಳಲ್ಲಿ ನಟಿಸಿ 14 ಚಲನಚಿತ್ರಗಳನ್ನು ನಿರ್ಮಾಣ ಮಾಡಿದ್ದ ರಾಜ್ಯ ಪ್ರಶಸ್ತಿ ವಿಜೇತ ನಟ ವಿಜಯ್ ಬಾಬು ವಿರುದ್ಧ Me Too ಆರೋಪ ಕೇಳಿಬಂದಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆಡು ಸಿನಿಮಾದ ಶರಬತ್ ಶಮೀರ್ ಪಾತ್ರದ ಮೂಲಕ ಕೇರಳದಲ್ಲಿ ಮನೆಮಾತಾಗಿರುವ 45 ವರ್ಷದ ನಟ ತನ್ನ ಮೇಲೆ ಒಂದೂವರೆ ತಿಂಗಳು ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಎಸಗಿದ್ದಾರೆ ಎಂದು ನಟಿಯೊಬ್ಬರು ಆರೋಪಿಸಿದ್ದಾರೆ. ಈ ಸಂಬಂಧ ಎರ್ನಾಕುಲಂ ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದು, ಸದ್ಯ ನಟ ತಲೆಮರೆಸಿಕೊಂಡಿದ್ದಾರೆ.
ಸಹ ನಟಿಯೊಬ್ಬರ ಆರೋಪದ ಪ್ರಕಾರ, ಅನೇಕ ದಿನಗಳಿಂದ ಹಿರಿಯ ನಟನೊಂದಿಕೆ ಕೆಲಸ ಮಾಡುತ್ತಿದ್ದರು. ಈ ವೇಳೆ ನನಗೆ ಅನೇಕ ಸಮಸ್ಯೆಗಳು ಎದುರಾದವು. ಅವರುಗಳನ್ನು ಪರಿಹರಿಸುವ ರೀತಿಯಲ್ಲಿ ವಿಜಯ್ ಆಗಮಿಸಿದರು. ತನ್ನನ್ನು ಸಂಕಷ್ಟದಿಂದ ಹೊರತರುವ ಸೋಗಿನಲ್ಲಿ ದೈಹಿಕವಾಗಿ ಬಳಕೆ ಮಾಡಿಕೊಂಡರು.
ಅನೇಕ ಬಾರಿ ಆಲ್ಕೊಹಾಲ್ ಹಾಗೂ ಇನ್ನಿತರೆ ಮತ್ತು ಬರುವ ವಸ್ತುಗಳನ್ನು ನೀಡಿ ಬಲವಂತವಾಗಿ ಹಾಗೂ ಅರೆ ಪ್ರಜ್ಞಾವಸ್ಥೆಯಲ್ಲಿದ್ದಾಗಲೂ ಅತ್ಯಾಚಾರ ಮಾಡಿದ್ದಾರೆ. ಇದರಿಂದ ಹೊರಬರಬೇಕೆಂದು ಪ್ರಯತ್ನಿಸಿದಾಗ, ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿದರು. ಮುಂದಿನ ಸಿನಿಮಾಗಳಲ್ಲಿ ಅವಕಾಶ ಕೊಡಿಸುವುದಾಗಿ ತಿಳಿಸಿದರು ಎಂದು ಆರೋಪಿಸಿದ್ದಾರೆ.
2006ರಿಂದಲೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶೇಷವಾಗಿ ಹಾಲಿವುಡ್ ಸಿನಿಮಾ ಜಗತ್ತಿನಲ್ಲಿ ಮಿ ಟೂ ಆರೋಪ ಕೇಳಿಬರುತ್ತಿತ್ತು. ನಟಿಯರು ಸಹ ನಟರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳ ಮೂಲಕ ಹಂಚಿಕೊಳ್ಳುತ್ತಿದ್ದರು. 2018ರಲ್ಲಿ ಭಾರತದಲ್ಲಿ ನಟಿ ತನುಶ್ರೀ ದತ್ತ ಅವರು ನಟ ನಾನಾ ಪಾಟೇಕರ್ ವಿರುದ್ಧ ಇದೇ ಆರೋಪ ಮಾಡುವ ಮೂಲಕ ಭಾರತದಲ್ಲೂ ವ್ಯಾಪಕ ಸ್ವರೂಪ ಪಡೆಯಿತು. ನಂತರ ಕನ್ನಡದಲ್ಲಿ ಹಿರಿಯ ನಟ ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಆರೋಪ ಮಾಡುವವರೆಗೆ 30ಕ್ಕೂ ಹೆಚ್ಚು ನಟಿಯರು ಇಂತಹ ಆರೊಪಗಳನ್ನು ಮಾಡಿದರು. ಅನೇಕ ಪ್ರಕರಣಗಳಲ್ಲಿ ವಿಚಾರಣೆ ನಡೆಯುತ್ತಿದೆ.
ಫ್ರೈಡೇ ಫಿಲಂ ಹೌಸ್ ಎಂಬ ನಿರ್ಮಾಣ ಸಂಸ್ಥೆಯ ಮೂಲಕ ಅನೇಕ ಚಲನಚಿತ್ರಗಳನ್ನು ನಿರ್ಮಿಸಿರುವ ವಿಜಯ್ ಬಾಬು, ಫಿಲಿಪ್ಸ್ & ದಿ ಮಂಕಿ ಪೆನ್ ಚಲನಚಿತ್ರಕ್ಕೆ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯಲ್ಲಿ ಉತ್ತಮ ಮಕ್ಕಳ ಚಲನಚಿತ್ರ ಗೌರವ ಲಭಿಸಿತ್ತು. ಆಡು ಸಿನಿಮಾದಲ್ಲಿ ವಿಜಯ್ ಬಾಬು ನಿರ್ವಹಿಸಿದ ಶರಬರ್ ಶಮೀರ್ ಪಾತ್ರ ಸಾಕಷ್ಟು ಜನಪ್ರಿಯವಾಗಿತ್ತು.
ಇದೀಗ ಮಲಯಾಳಂ ನಟ ವಿಜಯ್ ಬಾಬು ವಿರುದ್ಧ ಲೈಂಗಿಕ ಅತ್ಯಾಚಾರ(376), ಅಪರಾಧಕ್ಕೆ ಕುಮ್ಮಕ್ಕು(506) ಹಾಗೂ ಸ್ವಯಂಪ್ರೇರಿತವಾಗಿ ಘಾಸಿ ಮಾಡುವುದು(323) ಆರೋಪಗಳಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.
ಈ ಆರೋಪದ ಹಿನ್ನೆಲೆಯಲ್ಲಿ ಸದ್ಯಕ್ಕೆ ತಲೆಮರೆಸಿಕೊಂಡಿರುವ ನಟ ಫೇಸ್‌ಬುಕ್ ಲೈವ್‌ನಲ್ಲಿ ಆಗಮಿಸಿ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಂಗಳವಾರ ಫೇಸ್‌ಬುಕ್ ಲೈವ್ ಆಗಮಿಸಿದ ವಿಜಯ್ ಬಾಬು, ತಾನು ನಿರಪರಾಧಿ, ಇದರಲ್ಲಿ ಸಿಲುಕಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದಿದ್ದಾರೆ. ಮಿ ಟೂ ಅಭಿಯಾನ ಇಲ್ಲಿಗೇ ಕೊನೆಯಾಗಲಿ ಎಂದಿದ್ದಾರೆ. ಇದಷ್ಟೆ ಅಲ್ಲದೆ, ತಪ್ಪು ಮಾಡದ ತಮ್ಮ ಹೆಸರು ಬಹಿರಂಗಗೊಂಡಿರುವಾಗ, ಸುಳ್ಳು ಆರೋಪ ಮಾಡಿದ ಆಕೆಗೆ ಏಕೆ ರಕ್ಷಣೆ ಎಂದು, ತಮ್ಮ ವಿರುದ್ಧ ಆರೋಪ ಮಾಡಿರುವ ನಟಿಯ ಹೆಸರನ್ನು ಬಹಿರಂಗಪಡಿಸಿದ್ದಾರೆ. ಅತ್ಯಾಚಾರ ವಿರೋಧಿ ಕಾನೂನಿನ ಪ್ರಕಾರ, ಆರೋಪ ಮಾಡಿದ ಮಹಿಳೆಯರ ಹೆಸರನ್ನು ಬಹಿರಂಗಪಡಿಸುವಂತಿಲ್ಲ. ಇದೀಗ ನಟಿಯ ಹೆಸರನ್ನು ಬಹಿರಂಗಪಡಿಸಿದ ಆರೋಪವೂ ವಿಜಯ್ ಬಾಬು ಮೇಲೆ ದಾಖಲಾಗುವ ಸಾಧ್ಯತೆ ಇದೆ.