ಬೆಂಗಳೂರು: ಅನುರೂಪ ದಾಂಪತ್ಯಕ್ಕೆ ಮತ್ತೊಂದು ಹೆಸರಾಗಿದ್ದ ವಿಜಯ ರಾಘವೇಂದ್ರ ಮತ್ತು ಸ್ಪಂದನಾ (Spandana Vijay Raghavendra) ಅವರನ್ನು ವಿಧಿ ಬೇರ್ಪಡಿಸಿದೆ. ಸ್ಪಂದನಾ ಇಲ್ಲದ ವಿಜಯ ರಾಘವೇಂದ್ರನನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲದಷ್ಟು ಗಾಢವಾದ ಬಾಂಧವ್ಯಕ್ಕೆ ಈಗ ಅಂತಿಮ ಕ್ಷಣ ಬಂದಿದೆ. ಈಡಿಗ ಸಮುದಾಯದಂತೆ ಅಂತಿಮ ವಿಧಿ ವಿಧಾನಗಳನ್ನು ಕುಟುಂಬಸ್ಥರು ಮುಗಿಸಿದ್ದಾರೆ. ಇದೀಗ ಶ್ರೀರಾಂಪುರದ ಹರಿಶ್ಚಂದ್ರ ಘಾಟ್‌ವರೆಗೆ ಅಂತಿಮಯಾತ್ರೆ ಪ್ರಾರಂಭಗೊಂಡಿದೆ.
ಪ್ರೀತಿಯ ಮಡದಿಯನ್ನು ನೋಡುತ್ತ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ ವಿಜಯ್ ರಾಘವೇಂದ್ರ. ಅಪ್ಪನನ್ನ ಅಪ್ಪಿಕೊಂಡು ಕೊನೆಯ ಬಾರಿ ಅಮ್ಮನ ಮುಖ ನೋಡುತ್ತಿದ್ದಾನೆ ಮಗ. ಎಲ್ಲ ವಿಧಿ ವಿಧಾನಗಳನ್ನು ಮುಂದೆ ನಿಂತು ನಟ ಶ್ರೀಮುರಳಿ ಪೂರೈಸುತ್ತಿದ್ದಾರೆ. ಗೋವಿಂದನ ಸ್ಮೃತಿ ಸ್ಮರಿಸುತ್ತಾ ಅಂತಿಮ ವಿಧಿ ವಿಧಾನಗಳನ್ನು ಪೂರೈಸಿದ್ದಾರೆ ಕುಟುಂಬಸ್ಥರು.
ಬ್ಯಾಂಕಾಕ್‌ನಲ್ಲಿ ಕುಸಿದುಬಿದ್ದು ಮೃತಪಟ್ಟ ಸ್ಪಂದನಾ ಅವರ ಪಾರ್ಥಿವ ಶರೀರವನ್ನು ಮಂಗಳವಾರ ರಾತ್ರಿ ವಿಮಾನದಲ್ಲಿ ಹೊತ್ತುಕೊಂಡು ಬಂದ ವಿಜಯ ರಾಘವೇಂದ್ರ ಅವರು ಬುಧವಾರ ಬೆಳಗ್ಗಿನಿಂದ ಪತ್ನಿಯ ಪಾರ್ಥಿವ ಶರೀರದ ಪಕ್ಕದಲ್ಲೇ ನಿಂತಿದ್ದರು.
ಇದನ್ನೂ ಓದಿ: Spandana Vijay Raghavendra : ಒಳಗೆ ಅವಳು ಶಾಂತಮೂರ್ತಿ, ಹೊರಗೆ ಇವನು ಕಲ್ಲುಬಂಡೆ!
ಅಂತಿಮ ನಮನ ಸಲ್ಲಿಸಲು ಬಂದ ಪ್ರತಿಯೊಬ್ಬರೂ ವಿಜಯ ರಾಘವೇಂದ್ರ ಅವರಿಗೆ ಸಾಂತ್ವನ ಹೇಳಿದ್ದಾರೆ. ಹೆಚ್ಚಿನವರು ವಿಜಯ ರಾಘವೇಂದ್ರ ಅವರ ಹತ್ತಿರಕ್ಕೆ ಬರುತ್ತಿದ್ದಂತೆಯೇ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ಯಾವತ್ತೂ ಭಾವನೆಗಳೇ ತುಂಬಿರುವ, ಸಣ್ಣ ಸಣ್ಣ ಸಂಗತಿಗಳಿಗೂ ಮುಖ, ಕಣ್ಣರಳಸಿ ಪ್ರತಿಕ್ರಿಯಿಸುವ ವಿಜಯ್ ಬರಿದೆ ಮೌನಕ್ಕೆ ಜಾರಿದ್ದಾರೆ. ಅಚ್ಚರಿ ಎಂದರೆ ಅಮ್ಮನನ್ನು ಅತಿಯಾಗಿ ಪ್ರೀತಿಸುವ ಮುದ್ದಿನ ಶೌರ್ಯನೂ ಎದೆ ಗಟ್ಟಿ ಮಾಡಿಕೊಂಡು ನಿಂತಿದ್ದಾನೆ.