ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಚಿನ್ನಾರಿ ಮುತ್ತ ಎಂದು ಫೇಮಸ್ ಆಗಿರುವ ವಿಜಯ್ ರಾಘವೇಂದ್ರ ಅವರ ಪತ್ನಿ (Vijay Raghavendra wife) ಸ್ಪಂದನಾ ರಾಘವೇಂದ್ರ ನಿಧನರಾಗಿದ್ದಾರೆ. 16ನೇ ವಿವಾಹ ವಾರ್ಷಿಕೋತ್ಸವಕ್ಕೆ ಕೇವಲ 19 ದಿನಗಳು ಬಾಕಿ ಇರುವಂತೆ ಈ ದುರಂತ ನಡೆದಿದೆ. ಬ್ಯಾಂಕಾಕ್‌ಗೆ ವಿಜಯ ರಾಘವೇಂದ್ರ (Vijay Raghavendra) ಮತ್ತು ಪತ್ನಿ ಸ್ಪಂದನಾ ಟ್ರಿಪ್‌ಗೆ ಹೋಗಿದ್ದರು. ಅಲ್ಲಿಯೇ ಸ್ಪಂದನಾ ಅವರಿಗೆ ಹೃದಯಾಘಾತ (heart attack) ಸಂಭವಿಸಿದೆ. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯ ಲೋ ಬಿಪಿ ಹಾಗು ಹೃದಯಾಘಾತ ಆಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ. ಹೃದಯಾಘಾತ ಉಂಟಾದ ಸಂದರ್ಭದಲ್ಲಿ ಸ್ಪಂದನಾ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ, ಯಾವುದೇ ಪ್ರಯೋಜನ ಆಗಿಲ್ಲ.
ಇದನ್ನೂ ಓದಿ: Vijay Raghavendra: ವಿಜಯ ರಾಘವೇಂದ್ರ ʻಕದ್ದ ಚಿತ್ರʼಕ್ಕೆ ಶಿವಣ್ಣನ ಕ್ಲಾಸ್!
ದಕ್ಷ ಎಸಿಪಿಯಾಗಿದ್ದ ʻಬಿಕೆ’ ಶಿವರಾಮ್ ಅವರ ಮಗಳು ಸ್ಪಂದನಾ. ಸ್ಪ೦ದನಾ ಮೂಲತಃ ಮ೦ಗಳೂರಿನ ಬೆಳ್ತಂಗಡಿಯವರು. 2004ರಲ್ಲಿ ಬೆಂಗಳೂರಿನ ಮಲ್ಲೇಶ್ವರದ ಕಾಫಿಡೇಯಲ್ಲಿ ವಿಜಯ್ ಹಾಗೂ ಸ್ಪಂದನಾ ಅವರ ಮೊದಲ ಭೇಟಿಯಾಗಿತ್ತು. ಆ ನಂತರ 2007ರಲ್ಲಿ ಇವರಿಬ್ಬರು ಮತ್ತೆ ಭೇಟಿಯಾದರು. ವಿಜಯ್‌ಗೆ ಸ್ಪಂದನಾ (Vijay Raghavendra wife) ಮೇಲೆ ಪ್ರೀತಿ ಹುಟ್ಟಿತು. ಸ್ನೇಹ ಬೆಳೆದು 2007 ಆಗಸ್ಟ್ 26ರಂದು ಮದುವೆಯಾದರು. ‘ಚಲಿಸುವ ಮೋಡಗಳು’ ಚಿತ್ರದಲ್ಲಿ ನಟಿಸುವ ಮೂಲಕ ಬಾಲ ನಟನಾಗಿ ಸ್ಯಾಂಡಲ್ವುಡ್ಗೆ ಎಂಟ್ರಿಕೊಟ್ಟ ವಿಜಯ್ ರಾಘವೇಂದ್ರ ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪತಿಗೆ ಸ್ಪಂದನಾ ರಾಘವೇಂದ್ರ ಪ್ರತಿಯೊಂದು ಹೆಜ್ಜೆಯಲ್ಲಿ ಜತೆಯಾಗಿ ನಿಂತಿದ್ದರು.
ಸ್ಪಂದನಾ ತುಂಬ ಸೈಲೆಂಟ್ ಸ್ವಭಾವದವರು ಎಂದು ಅದೆಷ್ಟೋ ಬಾರಿ ವಿಜಯ್ ಅವರು ಹೇಳಿಕೊಂಡಿದ್ದರು. ಇನ್ನು ಸ್ಪಂದನಾ ಅವರಿಗೆ ಸರ್‌ಪ್ರೈಸ್ ಕೊಡುವುದು ತುಂಬ ಇಷ್ಟವಂತೆ. ಈ ಜೋಡಿಗೆ ಮುದ್ದಾದ ಮಗ ಇದ್ದಾನೆ. ಪುತ್ರನಿಗೆ ಶೌರ್ಯ ಎಂದು ಹೆಸರಿಟ್ಟಿದ್ದಾರೆ. ನಾಳೆ ಪಾರ್ಥೀವ ಶರೀರ ಬೆಂಗಳೂರಿಗೆ ರವಾನೆ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.