ಬೆಂಗಳೂರು: ಈ ಮುಂಚೆ ವಿನೋದ್ ರಾಜ್ (Actress Leelavathi) ಅವರ ಮದುವೆ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ವಿನೋದ್ ರಾಜ್ ಅವರಿಗೆ ಈಗಾಗಲೇ ಮದುವೆಯಾಗಿದೆ ಮತ್ತು ಎದೆಯೆತ್ತರಕ್ಕೆ ಬೆಳೆದಿರುವ ಒಬ್ಬ ಮಗನೂ ಇದ್ದಾನೆ ಎಂದು ಸೋಷಿಯಲ್ ಮೀಡಿಯಾದಲ್ಲಿ ನಿರ್ದೇಶಕ ಪ್ರಕಾಶ್ ರಾಜ್ ಮೆಹು ಪೋಸ್ಟ್ ಹಂಚಿಕೊಂಡಿದ್ದರು. ಇದು ಸಾಕಷ್ಟು ವಿವಾದಕ್ಕೂ ಕಾರಣವಾಗಿತ್ತು. ಲೀಲಾವತಿ ಅವರು ಅವರ ಮೊಮ್ಮಗ ಯುವರಾಜ್ (Leelavathi Grandson Yuvaraj) ಕೂಡ ಚೆನ್ನೈನಿಂದ ಬಂದು ಅಜ್ಜಿಯ ಅಂತ್ಯ ಸಂಸ್ಕಾರದಲ್ಲಿ ಭಾಗಿ ಆಗಿದ್ದಾರೆ. ಇದೀಗ ವಿಸ್ತಾರದೊಂದಿಗೆ ಯುವರಾಜ್ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ʻʻಅಜ್ಜಿ ನನಗೆ ಕನ್ನಡ ಹೇಳಿಕೊಟ್ಟಿದ್ದು. ನನಗೆ ಅಷ್ಟಾಗಿ ಮಾತನಾಡಲು ಬರುವುದಿಲ್ಲ. ಅವರು ಇದ್ದಿದ್ದರೆ ಇನ್ನೂ ಕನ್ನಡ ಕಲಿತಾ ಇದ್ದೆ. ಜೀವನದಲ್ಲಿ ಹೇಗೆ ಇರಬೇಕು ಎಂಬುದು ಅಜ್ಜಿ ನನಗೆ ಕಲಿಸಿದ್ದಾರೆ. ತಂದೆ ಅವರು ಕಲಾವಿದರು. ನಾನು ಐಟಿ ಫೀಲ್ಡ್‌ನಲ್ಲಿ ಇದ್ದೇನೆ. ನನ್ನ ಫೇವರೇಟ್ ಹೀರೊ ಕೂಡ ನನ್ನ ತಂದೆನೆ’ ಎಂದರು. ಮೊಮ್ಮಗನಿಗೆ ಯುವರಾಜ್ ಎಂದು ಲೀಲಾವತಿ ಅವರೇ ನಾಮಕರಣ ಮಾಡಿದ್ದರು. ಆ ಎಲ್ಲ ವಿಷಯಗಳನ್ನು ಯುವರಾಜ್ ಮೆಲುಕು ಹಾಕಿದ್ದಾರೆ. ‘ಅಂದು ನಾನು ಬಂದು ಅಜ್ಜಿ ಎಂದು ಕರೆದಾಗ ಕಣ್ಣು ಬಿಟ್ಟಿದ್ದರು. ಯುವರಾಜಾ ಎಂದು ನನ್ನನ್ನು ಕರೆದಿದ್ದರು. ಅದು ನನಗೆ ತುಂಬ ಫೀಲ್ ಆಗುತ್ತಿದೆ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Actress Leelavathi: ಇಂದು ಹಾಲು, ತುಪ್ಪ ಕಾರ್ಯ; ಲೀಲಾವತಿ ಆಪ್ತರು ಮಾತ್ರ ಭಾಗಿ
ಪುತ್ರನ ಬಗ್ಗೆಯೂ ಮಾತನಾಡಿದ ವಿನೋದ್ ರಾಜ್, ‘‘ನನ್ನ ಪುತ್ರ ಯುವರಾಜ್ ಎಂದರೆ ಅಮ್ಮನಿಗೆ ಬಹಳ ಪ್ರೀತಿ. ಕಳೆದ ಬಾರಿ ಬಂದಿದ್ದಾಗ ಅಜ್ಜಿ ಎಂದು ಕರೆದಾಗ ಕಣ್ಣು ಬಿಟ್ಟು ನೋಡಿದ್ದರು. ಅವನನ್ನು ಚಿತ್ರರಂಗಕ್ಕೆ ತರಬೇಕೆಂಬ ಆಸೆ ಅಮ್ಮನಿಗೆ ಇರಲಿಲ್ಲ. ಆದರೆ ವಿದ್ಯಾಭ್ಯಾಸ ಮಾಡಬೇಕು ಎಂಬ ಆಸೆಯಿತ್ತು, ಹಾಗೆಯೇ ಅವನು ಒಳ್ಳೆಯ ವಿಧ್ಯಾಭ್ಯಾಸ ಮಾಡಿದ್ದಾನೆ. ಸಾಫ್ಟ್ವೇರ್ ಉದ್ಯೋಗ ಮಾಡುತ್ತಿದ್ದಾನೆ’’ ಎಂದಿದ್ದಾರೆ.
ಹಿರಿಯ ನಟಿ ಲೀಲಾವತಿ ಅವರ (Actress Leelavathi) ಅಂತ್ಯ ಸಂಸ್ಕಾರ ನೆಲಮಂಗಲದ ಸೋಲದೇವನಹಳ್ಳಿಯ ತೋಟದ ಮನೆ ಬಳಿ ಕುಟುಂಬಸ್ಥರು ಸೇರಿ ಸಾವಿರಾರು ಜನರ ಸಮ್ಮುಖದಲ್ಲಿ ಶನಿವಾರ(ಡಿ.9) ಸಂಜೆ ನೆರವೇರಿತು. ಸಕಲ ಸರ್ಕಾರಿ ಗೌರವದೊಂದಿಗೆ ಹಿಂದು ಸಂಪ್ರದಾಯದಂತೆ ಅವರ ಅಂತ್ಯಕ್ರಿಯೆ ನಡೆಯಿತು.
ಇದನ್ನೂ ಓದಿ: Actress Leelavathi: ಮಣ್ಣಲ್ಲಿ ಮಣ್ಣಾದ ಲೀಲಾವತಿ; ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ
ಬಂಟ ಸಮುದಾಯದ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ
ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನದ ಬಳಿಕ ಪಾರ್ಥಿವ ಶರೀರವನ್ನು ಸೋಲದೇವನಹಳ್ಳಿಗೆ ಆಂಬ್ಯುಲೆನ್ಸ್‌ನಲ್ಲಿ ತರಲಾಯಿತು. ನಂತರ ವಿನೋದ್ ರಾಜ್ ಕುಟುಂಬಸ್ಥರು ಪೂಜೆ ಸಲ್ಲಿಸಿದರು. ನಂತರ ಪೊಲೀಸರು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ಸಲ್ಲಿಸಿದರು. ಸರ್ಕಾರದ ಪರವಾಗಿ ಸಚಿವ ಕೆ.ಎಚ್.ಮುನಿಯಪ್ಪ ಪುಷ್ಪಗುಚ್ಛ ಸಮರ್ಪಿಸಿದರು. ಬಳಿಕ ಹಿಂದು ಧರ್ಮದ ಬಂಟ ಸಮುದಾಯದ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನಡೆಸಲಾಯಿತು.