ಟೋಕಿಯೊ: ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಸಿನಿಮಾ ವಿಶ್ವಾದ್ಯಂತ ಭಾರಿ ಸದ್ದು ಮಾಡಿದೆ. ಅದರಲ್ಲೂ ಸಿನಿಮಾದ ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿ ಗೆದ್ದ ಮೇಲಂತೂ ಸಿನಿಮಾದ ಖ್ಯಾತಿ ಇನ್ನಷ್ಟು ಹೆಚ್ಚಿದೆ ಎಂದೇ ಹೇಳಬಹುದು. ವಿದೇಶಗಳಲ್ಲೂ ಆರ್‌ಆರ್‌ಆರ್ ಹವಾ ಭಾರಿ ಪ್ರಮಾಣದಲ್ಲಿದೆ. ವಿದೇಶದಲ್ಲಿನ ಆರ್‌ಆರ್‌ಆರ್ ಪ್ರೀತಿಯನ್ನು ಬಿಂಬಿಸುವಂತಹ ವಿಡಿಯೊವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ.
ಇದನ್ನೂ ಓದಿ: Viral News: ತನ್ನ ಶಿಕ್ಷಣಕ್ಕೆ ಕೂಡಿಟ್ಟಿದ್ದ ಹಣ ಅಣ್ಣನ ಮದುವೆಗೆ ಬಳಕೆ; ಅಪ್ಪ-ಅಮ್ಮನ ವಿರುದ್ಧವೇ ಕೇಸ್ ದಾಖಲಿಸಿದ ಪುತ್ರಿ!
ಜಪಾನ್‌ನಲ್ಲಿ ಆರ್‌ಆರ್‌ಆರ್ ಸಿನಿಮಾ ಬಿಡುಗಡೆಯಾಗಿ ಇಂದಿಗೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಅಲ್ಲಿನ ಅನೇಕರು ಅವರದ್ದೇ ಭಾಷೆಯಲ್ಲಿ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಹಾಗೆಯೇ ಅಲ್ಲಿ ಏಳು ವರ್ಷದ ಮಗನ ತಾಯಿಯೊಬ್ಬರು ಕೂಡ ವಿಶೇಷ ರೀತಿಯಲ್ಲಿ ಮಗನಿಗೆ ಆರ್‌ಆರ್‌ಆರ್ ಕಥೆ ಹೇಳಿದ್ದಾರೆ. ಮಗನಿಗೆ ಮೂರು ತಾಸು ಕುಳಿತು ಸಿನಿಮಾ ನೋಡುವುದು ಕಷ್ಟವೆನ್ನುವ ಕಾರಣಕ್ಕೆ ಅವರು ಆರ್‌ಆರ್‌ಆರ್ ಸಿನಿಮಾ ಕಥೆಯ ಪುಸ್ತಕವನ್ನೇ ಸಿದ್ಧ ಮಾಡಿದ್ದಾರೆ. ಅದರಲ್ಲಿ ಸಿನಿಮಾದ ದೃಶ್ಯಗಳನ್ನೂ ಕೂಡ ಚಿತ್ರವಾಗಿ ಬಳಸಿಕೊಳ್ಳಲಾಗಿದೆ.
ಈ ಪುಸ್ತಕದ ವಿಡಿಯೊವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಎರಡು ತಿಂಗಳ ಹಿಂದೆಯೇ ಈ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೊವನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದು, ಲೈಕ್ ಮಾಡಿದ್ದಾರೆ. “ನಮ್ಮ ದಕ್ಷಿಣ ಭಾರತದ ಸಿನಿಮಾಗಳು ವಿದೇಶದಲ್ಲೂ ರಾರಾಜಿಸುತ್ತಿವೆ” ಎಂದು ಅನೇಕರು ಕಾಮೆಂಟ್ ಮೂಲಕ ಹೇಳಿಕೊಂಡಿದ್ದಾರೆ. ಮಗನಿಗೆ ಕಥೆ ಹೇಳಿಕೊಡಲು ತಾಯಿ ಮಾಡಿದ ಪ್ರಯತ್ನದ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗಿದೆ.