ಇನ್ನೇನು 2022 ಮುಗಿದು 2023ಕ್ಕೆ ನಾವೆಲ್ಲ ಕಾಲಿಡಲಿದ್ದೇವೆ. ಹೊಸ ವರ್ಷದಲ್ಲಿ ಹೊಸ ನಿರೀಕ್ಷೆಗಳು ಸಹಜ. ಆದರೆ, ಕಳೆದ ವರ್ಷದಲ್ಲಾದ ಬೆಳವಣಿಗೆಗಳ ಮೇಲೆ ಕಣ್ಣಾಡಿಸಿದರೆ, ನಿರಾಸೆ ಕಾಣುತ್ತದೆ. ಅದರಲ್ಲೂ ಬಾಲಿವುಡ್ ಎಂದು ಕರೆಯಲಾಗುವ ಹಿಂದಿ ಚಿತ್ರರಂಗ ಅಕ್ಷರಶಃ ಯಶಸ್ಸಿನ ಕ್ಷಾಮವನ್ನು ಎದುರಿಸಿದ ವರ್ಷವಿದು. ಒಂದೆಡೆ, ದಕ್ಷಿಣ ಭಾರತದ ಚಿತ್ರಗಳು ದಿಗ್ವಿಜಯ ಸಾಧಿಸುತ್ತಿದ್ದರೆ, ಮತ್ತೊಂದೆಡೆ ಹಿಂದಿ ಚಿತ್ರಗಳು ಬಾಕ್ಸ್‌ಆಫೀಸ್‌ನಲ್ಲಿ ಮಕಾಡೆ ಮಲಗುತ್ತಿದ್ದವು. ಹೆಸರಾಂತ ನಿರ್ದೇಶಕರು, ಸ್ಟಾರ್ ನಟರ ಸಿನಿಮಾಗಳು ಸೋತಿವೆ. ಮತ್ತೊಂದೆಡೆ, ಅನಿರೀಕ್ಷಿತವಾಗಿ ಕೆಲವೇ ಕೆಲವು ಚಿತ್ರಗಳು ಗೆದ್ದಿವೆ. ಆದರೆ, ವರ್ಷದ ಕೊನೆಯಲ್ಲಿ ಅಜಯ್ ದೇವಗನ್ ಅಭಿನಯದ ದೃಶ್ಯಂ-2 ಚಿತ್ರ ಬಾಕ್ಸ್‌ಆಫೀಸ್‌ನಲ್ಲಿ ನಾಗಾಲೋಟದಲ್ಲಿ ಸಾಗುತ್ತಿರುವುದು, ಬಾಲಿವುಡ್‌ಗೆ 2023 ಆಶಾದಾಯಕವಾಗುವಂತೆ ಮಾಡಿದೆ. ಮುಂದಿನ ವರ್ಷ ಕನಿಷ್ಠ 2 ಸಾವಿರ ಕೋಟಿ ರೂ. ವ್ಯವಹಾರದ ಸಿನಿಮಾಗಳು ತೆರೆಗೆ ಬರಲಿವೆ!(ವಿಸ್ತಾರ Explainer)
2022ರಲ್ಲಿ ಏನಾಯಿತು?
ಬಾಲಿವುಡ್ ಪಾಲಿಗೆ 2022 ಅಕ್ಷರಶಃ ದುಸ್ವಪ್ನವಾಗಿದೆ. ಬಚ್ಚನ್ ಪಾಂಡೆ, ಜರ್ಸಿ, ರನ್‌ವೇ 34, ಹೀರೋಪಂತಿ 2, ಧಾಕಡ್, ಸಾಮ್ರಾಟ ಪೃಥ್ವಿರಾಜ್, ಶಮ್ಷೇರ್, ಲಾಲ್ ಸಿಂಗ್ ಛಡ್ಡಾ ಸೇರಿದಂತೆ ಘಟಾನುಘಟಿಗಳ ಸಿನಿಮಾ ಫ್ಲಾಪ್ ಆದವು. ಇವೆಲ್ಲವೂ ಭಾರೀ ನಿರೀಕ್ಷೆಗಳನ್ನು ಹುಟ್ಟು ಹಾಕಿದ ಸಿನಿಮಾಗಳಾಗಿದ್ದವು. ಇನ್ನು ಭೂಲ್ ಭುಲಯ್ಯಾ 2, ದಿ ಕಾಶ್ಮೀರ್ ಫೈಲ್ಸ್, ಬ್ರಹ್ಮಾಸ್ತ್ರ, ಉಂಚಾಯಿ ಮತ್ತು ದೃಶ್ಯಂ 2 ಚಿತ್ರಗಳು ಮಾತ್ರವೇ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿವೆ. ಈ ಪೈಕಿ ದಿ ಕಾಶ್ಮೀರ್ ಫೈಲ್ಸ್ ನಿರೀಕ್ಷೆ ಮೀರಿ ಸಕ್ಸೆಸ್ ಆಗಿದೆ. ಕೆಲವು ರಾಜಕೀಯ ಪಕ್ಷಗಳು ಇದಕ್ಕೆ ಬೆಂಬಲ ವ್ಯಕ್ತಪಡಿಸಿ, ಹಲವು ಕಡೆ ಸಿನಿಮಾಗಳನ್ನು ಪ್ರದರ್ಶನದ ವ್ಯವಸ್ಥೆ ಮಾಡಿದ್ದವು ಎಂಬುದು ಇಲ್ಲಿ ಉಲ್ಲೇಖಾರ್ಹ.
‘ಸ್ಟಾರ್’ ವ್ಯಾಲ್ಯೂ ಇಳಿಕೆ?
ಅದೊಂದು ಕಾಲವಿತ್ತು. ಸ್ಟಾರ್ ಹೆಸರ ಮೂಲಕವೇ ಸಿನಿಮಾ ಓಡುತ್ತಿತ್ತು. ಆದರೆ, ಆ ಪರಿಸ್ಥಿತಿ ಈಗಿಲ್ಲ. ಸ್ಟಾರ್ ವ್ಯಾಲ್ಯೂ ಕಳೆದುಕೊಂಡಿದೆ ಎನ್ನುವುದಕ್ಕೆ ಲಾಲ್ ಸಿಂಗ್ ಛಡ್ಡಾ, ಸಾಮ್ರಾಟ ಪೃಥ್ವಿರಾಜ್, ಹೀರೋಪಂತಿ 2, ಶಮ್ಷೇರ್ ಇದಕ್ಕೆ ಕೆಲವು ಸಿನಿಮಾಗಳನ್ನು ಉದಾಹರಣೆಯಾಗಿ ನೀಡಬಹುದು. ಈ ಸಿನಿಮಾಗಳು ದೊಡ್ಡ ಸ್ಟಾರ್ ಕಾಸ್ಟ್ ಹೊಂದಿದ್ದವು. ಸ್ಟಾರ್ ಮುಖವನ್ನೇ ನೋಡಿ ಜನ ಥಿಯೇಟರ್‌ಗೆ ಬರುವುದಿದ್ದರೆ ಈ ಚಿತ್ರಗಳು ಸೋಲುತ್ತಿರಲಿಲ್ಲ.
ಬಾಯ್ಕಾಟ್ ಎಫೆಕ್ಟ್ ಆಯ್ತಾ?
ಬಹುಶಃ ಈ ವರ್ಷ ಎದುರಿಸಿದ ಮತ್ತೊಂದು ಸಮಸ್ಯೆ ಬಾಯ್ಕಾಟ್ ಹ್ಯಾಷ್‌ಟ್ಯಾಗ್. ಲಾಲ್ ಸಿಂಗ್ ಛಡ್ಡಾ ಬಿಡುಗಡೆಯ ಮುಂಚೆಯೇ ಆನ್‌ಲೈನ್‌ನಲ್ಲಿ ಬಾಯ್ಕಾಟ್ ಕ್ಯಾಂಪೇನ್ ಜೋರಾಗಿತ್ತು. ಬ್ರಹ್ಮಾಸ್ತ್ರ ಬಿಡುಗಡೆಯಾದ ಬಳಿಕ ಬಾಯ್ಕಾಟ್ ಕ್ಯಾಂಪೇನ್ ಎದುರಿಸಬೇಕಾಯಿತು. ಆದಿಪುರುಷ್ ಟೀಸರ್‌ಗೆ ಬಾಯ್ಕಾಟ್ ಶುರುವಾಯಿತು. ಆನ್‌ಲೈನ್ ಬಾಯ್ಕಾಟ್ ಕ್ಯಾಂಪೇನ್ ಸರಿಯೋ ತಪ್ಪೋ ಎನ್ನುವುದಕ್ಕಿಂತ ಅದು ಎಷ್ಟರ ಮಟ್ಟಿಗೆ ಪರಿಣಾಮ ಬೀರಿದೆ ಎಂಬುದು ಮುಖ್ಯ. ಆದರೆ, ಚಿತ್ರವೊಂದಕ್ಕೆ ನೆಗೆಟಿವ್ ಪ್ರಚಾರಕ್ಕೆ ಈ ಬಾಯ್ಕಾಟ್ ಖಂಡಿತವಾಗಿ ಬಳಕೆಯಾಗುತ್ತಿದೆ. ಈ ನಿಟ್ಟಿನಲ್ಲಿ ಬಾಲಿವುಡ್ ಯೋಚಿಸಬೇಕಿದೆ.
ಹೊಸತನಕ್ಕೆ ತೆರೆದುಕೊಳ್ಳಬೇಕು
ಶಾರುಖ್ ಖಾನ್, ಸಲ್ಮಾನ್ ಖಾನ್‌ರಂಥ ಸ್ಟಾರ್‌ಗಳು ಕಾಲದ ಜತೆಗೆ ಬದಲಾಗಬೇಕಿದೆ. ಹೊಸ ನಿರ್ದೇಶಕರು, ಹೊಸ ಕತೆಗಳು, ಹೊಸ ಸಿನಿಮಾಗಳು ಮಾಡಬೇಕು. ಆಗ ಮಾತ್ರ ಭವಿಷ್ಯ. ಇಲ್ಲದಿದ್ದರೆ ಅವರು ಕಾಲದ ಜತೆಗೇ ಅವರ ಚರಿಷ್ಮಾ ಕೂಡ ಕಳೆದು ಹೋಗಲಿದೆ. ಸ್ಟಾರ್ ನಟರು ಹೊಸ ಪ್ರಯತ್ನಗಳಿಗೆ ತೆರೆದುಕೊಳ್ಳಬೇಕು. ಹಳೆಯ ಫಾರ್ಮುಲಾಗೆ ಅಂಟಿಕೊಂಡು ಕುಳಿತರೆ ಸಾಲದು. ನಿನ್ನೆಯ ಸಕ್ಸೆಸ್ ಆದ ಫಾರ್ಮುಲಾ ನಾಳೆಗೆ ವೈಫಲ್ಯ ಕಾಣಬಹುದು. ಅದರರ್ಥ ನಿತ್ಯವೂ ಹೊಸ ಗೆಲುವಿನ ಸೂತ್ರವನ್ನು ಶೋಧಿಸುತ್ತಲೇ ಇರಬೇಕು. ಸೃಜನ ವಲಯವು ನಿತ್ಯ ನೂತನ.
ಗಟ್ಟಿ ಕತೆ ಬೇಕು
ಕಂಟೆಂಟ್ ಕಿಂಗ್ ಎಂಬ ಮಾತಿದೆ. ಸ್ಟಾರ್ ನಟರು, ಪ್ರಚಾರ, ಗಿಮಿಕ್‌ಗಳಿಂದ ಮಾತ್ರವೇ ಸಿನಿಮಾ ಓಡುವುದಿಲ್ಲ. ಕತೆ ಗಟ್ಟಿಯಾಗಿರಬೇಕು, ಅದನ್ನು ಅಷ್ಟೇ ಸಶಕ್ತವಾಗಿ ತೆರೆಯ ಮೇಲೆ ತರಬೇಕು. ಆಗ ಪ್ರೇಕ್ಷಕರಿಗೆ ಇಷ್ಟವಾಗಬಹುದು. ವರ್ಷದ ಅಂತ್ಯದಲ್ಲಿ ಬಾಲಿವುಡ್‌ನಲ್ಲಿ ನಿರೀಕ್ಷೆ ಮೂಡಿಸಿರುವ ದೃಶ್ಯಂ 2 ಚಿತ್ರವನ್ನು ಇದಕ್ಕೆ ಉದಾಹರಿಸಬಹುದು. ಈ ಸಿನಿಮಾದಲ್ಲಿ ಯಾವುದೇ ಸಿದ್ಧಸೂತ್ರಗಳಿಲ್ಲ. ಎಲ್ಲವೂ ಹೊಸತನದಿಂದ ಕೂಡಿದೆ. ಹಾಗಾಗಿ, ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ. ಈ ಸಿನಿಮಾ ರಿಮೇಕ್ ಆದರೂ ಉತ್ತರ ಭಾರತದ ಪ್ರೇಕ್ಷಕರಿಗೆ ಮೆಚ್ಚುಗೆಯಾಗುತ್ತಿದೆ.
2022ರಲ್ಲಿ ಬಾಲಿವುಡ್‌ನಲ್ಲಿ ಧೂಳೆಬ್ಬಿಸಿದ್ದು ದಕ್ಷಿಣ ಭಾರತ ಚಿತ್ರಗಳೇ. ಹಾಗೆ ನೋಡಿದರೆ, ಈ ಚಿತ್ರಗಳಲ್ಲಿ ಕಲಾವಿದರು ಉತ್ತರ ಭಾರತದ ಪ್ರೇಕ್ಷಕರಿಗೆ ಸ್ಟಾರ್‌ಗಳೇನಿಲ್ಲ. ಸಿನಿಮಾ ಸಕ್ಸೆಸ್ ಆದ ಮೇಲೆ ಅವರು ಪ್ರೇಕ್ಷಕರಿಗೆ ಪರಿಚಯವಾಗಿದ್ದಾರೆ. ಪುಷ್ಪಾ, ಆರ್‌ಆರ್‌ಆರ್, ಕೆಜಿಎಫ್, ಸೀತಾ ರಾಮಮ್, ವಿಕ್ರಮ್ ರೋಣ, ಪೊನ್ನಿಯನ್ ಸೆಲ್ವನ್, ಲವ್ ಟುಡೇ, ಕಾಂತಾರ ಸಿನಿಮಾಗಳೆಲ್ಲವೂ ತಮ್ಮ ಕಂಟೆಂಟ್ ಮತ್ತು ಜನರಿಗೆ ಹತ್ತಿರವಾದ ಅಂಶಗಳನ್ನು ಹೊಂದಿರುವುದರಿಂದಲೇ ಗೆದ್ದಿವೆ. ಈ ಸಂಗತಿ ಬಾಲಿವುಡ್ ಅರ್ಥ ಮಾಡಿಕೊಳ್ಳಬೇಕಿದೆ. ಹಾಗಂತ, ಬಾಲಿವುಡ್ ಸಂಪೂರ್ಣವಾಗಿ ಖಾಲಿಯಾಗಿದೆ ಎಂದರ್ಥವಲ್ಲ. 2022 ಅವರ ಪಾಲಿಗೆ ಅಷ್ಟೊಂದು ಸಕ್ಸೆಸ್ ನೀಡಲಿಲ್ಲಷ್ಟೇ.
ಮುಂದಿನ ವರ್ಷ ಹೇಗಿದೆ?
2023 ಬಾಲಿವುಡ್‌ಗೆ ಸಕ್ಸೆಸ್ ತಂದುಕೊಡುವ ನಿರೀಕ್ಷೆಗಳಿವೆ. ಯಾಕೆಂದರೆ, ಸುಮಾರು 2000 ಕೋಟಿ ರೂ. ವ್ಯವಹಾರದ ಸಿನಿಮಾಗಳು ಈಗಾಗಲೇ ಬಿಡುಗಡೆಗೆ ಸಿದ್ಧವಾಗಿವೆ. ಈ ಪೈಕಿ ಶಾರುಖ್ ಮತ್ತು ಸಲ್ಮಾನ್ ಅವರಂಥ ಸ್ಟಾರ್ ನಟರ ಚಿತ್ರಗಳೂ ಇವೆ. ಶಾರುಖ್ ಖಾನ್ ಅವರಂತೂ ಕಳೆದ 5 ವರ್ಷಗಳಿಂದ ತೆರೆಗ ಬಂದಿಲ್ಲ. ಮುಂದಿನ ವರ್ಷ ವಿಭಿನ್ನ ಕತೆಗಳು ಇರುವ ಮೂರು ಚಿತ್ರಗಳು ಬರಲಿವೆ. ಹಾಗಾಗಿ, ಸಹಜವಾಗಿಯೇ ನಿರೀಕ್ಷೆ ಜೋರಾಗಿದೆ.
ಪಠಾಣ(175 ಕೋಟಿ ರೂ.), ಮೈದಾನ್ (100 ಕೋಟಿ), ಸೆಲ್ಫೀ(70 ಕೋಟಿ ರೂ.), ಲವ್ ರಂಜನ್ ನಿರ್ದೇಶನದ ಚಿತ್ರ(90 ಕೋಟಿ), ಕಿಸ್ಸಿಕಾ ಭಾಯಿ ಕಿಸ್ಸಿಕಾ ಜಾನ್(120 ಕೋಟಿ ರೂ.), ಜವಾನ್ (120 ಕೋಟಿ ರೂ.), ಆದಿ ಪುರುಷ(600 ಕೋಟಿ ರೂ.), ಅನಿಮಲ್(90 ಕೋಟಿ), ಟೈಗರ್ -3 (300 ಕೋಟಿ ರೂ.), ಬಡೇ ಮಿಯಾ ಛೋಟೆ ಮಿಯಾ(115 ಕೋಟಿ ರೂ.), ಡಂಕಿ(125 ಕೋಟಿ ರೂ.), ಸೂರರೈ ಪೋಟ್ರು ರಿಮೇಕ್(80 ಕೋಟಿ ರೂ.) ಸೇರಿ ಅನೇಕ ಬಿಗ್ ಬಜೆಟ್‌ಗಳು ಮುಂದಿನ ವರ್ಷ ತೆರಿಗೆ ಬರಲಿವೆ. ಇವೆಲ್ಲವೂ ಈಗಾಗಲೇ ಭಾರೀ ನಿರೀಕ್ಷೆ ಹುಟ್ಟು ಹಾಕಿರುವ ಚಿತ್ರಗಳೇ ಆಗಿವೆ. ಒಟ್ಟಾರೆ ಮುಂದಿನ ವರ್ಷಕ್ಕೆ 2 ಸಾವಿರ ಕೋಟಿ ರೂ. ಬಂಡವಾಳ ಹಾಕಿರುವ ಚಿತ್ರಕರ್ಮಿಗಳು, ಒಳ್ಳೆಯ ದಿನಗಳ ಬರಲಿ ಎಂದು ಕಾಯುತ್ತಿದ್ದಾರೆ.
ಗೆಲ್ಲುವ ಹಾದಿ ಯಾವುದು?
ಇಡೀ ಬಾಲಿವುಡ್ ಮುಂದಿನ ವರ್ಷ ಹೆಚ್ಚು ಆಶಾದಾಯಕವಾಗಿದೆ. ಅದರಲ್ಲೇನೂ ಅನುಮಾನವಿಲ್ಲ. ಸತತ ಸೋಲು ಅನುಭವಿಸಿದ ಬಾಲಿವುಡ್‌ಗೆ ಗೆಲ್ಲುವ ಅನಿವಾರ್ಯತೆಯಂತೂ ಇದೆ. ಹಿಂದಿ ಚಿತ್ರರಂಗದ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಈ ಒತ್ತಡ ಹೆಚ್ಚಿದ್ದರೆ, ಸ್ಟಾರ್ ನಟರು ತಮ್ಮ ಸ್ಟಾರ್‌ಡಂ ಕಾಪಾಡಿಕೊಳ್ಳಲು ಮತ್ತು ಹೊಸ ತಲೆಮಾರಿನ ಪ್ರೇಕ್ಷಕರನ್ನು ಸೆಳೆಯುವ ಒತ್ತಡದಲ್ಲಿದ್ದಾರೆ.
ಸೋಲು ಅನಾಥ ಎಂಬ ಮಾತಿದೆ. ಬಾಲಿವುಡ್ ಸತತ ಸೋಲಿನಿಂದ ಕಂಗೆಟ್ಟ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ದೂಷಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಅದೇ ಬಾಲಿವುಡ್ ಗೆಲುವಿನ ಹಳಿಗೆ ಮರಳಿದರೆ, ಎಲ್ಲ ಕೊರತೆಗಳು ಕಣ್ಣಿಗೆ ಕಾಣದ ಹಾಗೆ ಹೋಗುತ್ತವೆ! ಚಿತ್ರಕರ್ಮಿಗಳು ಹಾಕಿದ ಬಂಡವಾಳನ್ನಾದರೂ ವಾಪಸ್ ಪಡೆಯಲೇಬೇಕಾದ ಅನಿವಾರ್ಯದ ಒತ್ತಡದಲ್ಲಿದ್ದಾರೆ. ವರ್ಷಾಂತ್ಯದಲ್ಲಿ ದೃಶ್ಯಂ 2 ಚಿತ್ರವೂ ಗಲ್ಲಾಪೆಟ್ಟಿಗೆ ಗೆಲುವಿನ ಓಟ ದಾಖಲಿಸುತ್ತಿದ್ದಂತೆ ಈ ಒತ್ತಡ ಉಳಿದ ಚಿತ್ರಕರ್ಮಿಗಳ ಮೇಲೂ ಹೆಚ್ಚಾಗಿದೆ. ಎಲ್ಲರಿಗೂ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಸಕ್ಸೆಸ್ ಬೇಕು ಎಂದಾದರೆ ಒತ್ತಡವನ್ನು ಸಹಿಸಿಕೊಳ್ಳಬೇಕು. ಆಗಲೇ ಯಶಸ್ಸು ಸಾಧಿಸಲು ಸಾಧ್ಯ. ಜತೆಗೆ, ಸಹ ಚಿತ್ರರಂಗಳು ಯಶಸ್ಸಿನಲ್ಲಿದ್ದಾಗ ಸಹಜವಾಗಿಯೇ ಹಿಂದಿ ಚಿತ್ರರಂಗದ ಮೇಲೆ ಒತ್ತಡ ಇನ್ನಷ್ಟು ಹೆಚ್ಚಾಗುತ್ತದೇ. ಈಗಲೂ ಅದೇ ಪರಿಸ್ಥಿತಿ ಇದೆ.
2023ರ ಮೇಲೆ ನಿರೀಕ್ಷೆಯ ಬೆಟ್ಟ
ಸಹಜವಾಗಿಯೇ ಸ್ಟಾರ್ ನಟರು, ಸೃಜನಶೀಲ ನಿರ್ದೇಶಕರು, ದೊಡ್ಡ ದೊಡ್ಡ ಬ್ಯಾನರ್ ಚಿತ್ರಗಳು ಮುಂದಿನ ವರ್ಷ ತೆರೆಗೆ ಬರಲಿವೆ. ಹಾಗಾಗಿ, ನಿರೀಕ್ಷೆಯ ಭಾರವಂತೂ ತುಸು ಹೆಚ್ಚೇ ಆಗಿದೆ. ಮತ್ತೆ ಮುಂಬರುವ ಚಿತ್ರಗಳೆಲ್ಲವೂ ಭಿನ್ನ, ವಿಭಿನ್ನವಾಗಿವೆ. ಕತೆಯಾಗಲೀ, ಮೇಕಿಂಗ್ ಆಗಲೀ ಎಲ್ಲವೂ ಹೊಸದಾಗಿದೆ. ಹೊಸ ಹೊಸ ಪ್ರಯತ್ನಗಳು ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಿವೆ. ಆದರೆ, ಪ್ರೇಕ್ಷಕರು ಎಷ್ಟರ ಮಟ್ಟಿಗೆ ಬೆನ್ನುತಟ್ಟುತ್ತಾರೆ ಕಾದು ನೋಡಬೇಕು.
ಬಾಲಿವುಡ್ ಒಂದು ಉದ್ಯಮವಾಗಿ ಒಂದೇ ದಿಕ್ಕಿನಲ್ಲಿ ಸಾಗಬಾರದು. ಆಗ ಸಕ್ಸೆಸ್ ರೇಟ್ ಕಡಿಮೆಯಾಗುತ್ತದೆ. ಬಿ ಮತ್ತು ಸಿ ಸೆಂಟರ್‌ಗಳು, ಸಣ್ಣ ನಗರ ಪಟ್ಟಣ ಹಾಗೂ ಗ್ರಾಮೀಣ ಭಾರತದ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡಿದರೆ, ಅವರ ಕತೆಗಳು ಸಿನಿಮಾ ಪರದೆ ಮೇಲೆ ಒಡಮೂಡಿದರೆ ಸಕ್ಸೆಸ್ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ ಹಲವರದು. ಮುಂಬರುವ ಸಿನಿಮಾಗಳು ಇದೇ ದಾಟಿಯಲ್ಲಿರುವುದರಿಂದ ನಿರೀಕ್ಷೆಗಳು ಬೆಟ್ಟದಷ್ಟಿವೆ.
ಇದನ್ನೂ ಓದಿ | ಬಾಲಿವುಡ್‌ನ ಟಾಪ್ 10 ಗ್ಲಾಮರಸ್ ಗಾಯಕಿಯರು