ನವ ದೆಹಲಿ: ಭಾರತದಲ್ಲಿ ಬಿಡುಗಡೆಯಾಗಿ ಭಾರೀ ಜನಪ್ರಿಯತೆಯನ್ನು ಗಳಿಸಿಕೊಂಡಿರುವ ಆರ್‌ಆರ್‌ಆರ್ (RRR Cinema) ಚಿತ್ರವು ಈಗ ಪಶ್ಚಿಮ ರಾಷ್ಟ್ರಗಳಲ್ಲಿ ಅದೇ ಹವಾ ಸೃಷ್ಟಿಸುತ್ತಿದೆ. ಈ ಚಿತ್ರಕ್ಕೆ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಯಾಗಿದೆ. ವಿಶೇಷವಾಗಿ ಡಿಜಿಟಲ್ ವೇದಿಕೆಗಳಲ್ಲಿ ಬಿಡುಗಡೆಯಾದ ಬಳಿಕವಂತೂ ಆರ್ ಆರ್ ಆರ್ ಚಿತ್ರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಹಾಲಿವುಡ್ ಸೇರಿದಂತೆ ಹಲವು ಚಿತ್ರರಂಗದ ಪ್ರಮುಖರು ಎಸ್ ಎಸ್ ರಾಜಮೌಳಿ ನಿರ್ದೇಶನದ ಈ ಚಿತ್ರವನ್ನು ಮುಕ್ತ ಕಂಠದಿಂದ ಪ್ರಶಂಸಿಸುತ್ತಿದ್ದಾರೆ.
ಈ ಬಗ್ಗೆ ಮಾತನಾಡಿರುವ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರು, ನನಗೂ ಕೂಡ ಇದು ಆಶ್ಚರ್ಯವನ್ನುಂಟು ಮಾಡಿದೆ. ಜಗತ್ತಿನಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರಿದ್ದಾರೆ. ಹಾಗಾಗಿ, ಎಲ್ಲೆಲ್ಲಿ ಭಾರತೀಯರಿದ್ದಾರೆ ಅಲ್ಲೆಲ್ಲ ಸಿನಿಮಾ ಚೆನ್ನಾಗಿ ಹೋಗಬಹುದು ಎಂದುಕೊಂಡಿದ್ದೆ. ಆದರೆ, ಪಶ್ಚಿಮದ ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ಬರಲಾರಂಭಿಸಿದೆ. ನಿಜವಾಗಿಯೂ ನಾನು ಇದನ್ನು ನಿರೀಕ್ಷಿಸರಲಿಲ್ಲ ಎಂದು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.
ಆರ್ ಆರ್ ಆರ್ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ಬಳಿಕ ಹಾಲಿವುಡ್ ಪ್ರಮುಖರಾದ ಜೇಮ್ಸ್ ಗನ್, ಡ್ಯಾನಿ ಡಿವೆಟೋ ಸೇರಿದಂತೆ ಜಗತ್ತಿನಾದ್ಯಂತ ಸಾಮಾನ್ಯ ಪ್ರೇಕ್ಷಕರು ಭಾರೀ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಅಮೆರಿಕ ಮತ್ತು ಕೆನಡಾದಲ್ಲಿ ವಿಶೇಷ ಪ್ರದರ್ಶನಗಳನ್ನು ಏರ್ಪಡಿಸಲಾಗಿತ್ತು. ಎಲ್ಲ ಟಿಕೆಟ್‌ಗಳು ಮಾರಾಟವಾಗಿವೆ. ಮತ್ತೊಂದೆಡೆ, ಆಸ್ಕರ್ ಬೆಸ್ಟ್ ಪಿಕ್ಚರ್ ಕೆಟಗರಿಯಲ್ಲಿ ಆರ್ ಆರ್ ಆರ್ ಚಿತ್ರಕ್ಕಾಗಿ ಕ್ಯಾಂಪೇನ್ ಕೂಡ ನಡೆಯುತ್ತಿದೆ.
ಸಿನಿಮಾದ ಜನಪ್ರಿಯತೆಯಲ್ಲಿ ಕೋವಿಡ್ ಸಾಂಕ್ರಾಮಿಕದ ಪಾತ್ರ ಇರಬಹುದು ಎಂದು ಅನಿಸಿಕೆ ಹಂಚಿಕೊಂಡಿರುವ ರಾಜಮೌಳಿ ಅವರು, ಎಲ್ಲವೂ ಸ್ಥಗಿತಗೊಂಡಾಗ. ಆಗ ಇಡೀ ಜಗತ್ತು ಬೇರೆ ಬೇರೆ ಭಾಷೆಗಳಲ್ಲಿನ ಭಿನ್ನ ಸಂಸ್ಕೃತಿಗಳನ್ನು ಶೋಧಿಸಲಾರಂಭಿಸಿದೆ. ಆರ್‌ಆರ್‌ಆರ್ ಸಿನಿಮಾದಲ್ಲಿನ ಆ್ಯಕ್ಷನ್ ದೃಶ್ಯಗಳು, ಅದರ ನಿಷ್ಪಕ್ಷಪಾತ ಹೀರೋಯಿಂಸ್ ಪ್ರೇಕ್ಷಕರಿಗೆ ಇಷ್ಟವಾಗಿರಬಹುದು. ಇದೇ ಪಶ್ಚಿಮ ರಾಷ್ಟ್ರಗಳಲ್ಲಿ ಸಿನಿಮಾದ ಯಶಸ್ಸಿಗೆ ಕಾರಣವಾಗಿರಬಹುದು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ | Chhello Show | ಆಸ್ಕರ್ ಸ್ಪರ್ಧೆಗೆ ಭಾರತದ ಯಾವ ಚಿತ್ರ ಆಯ್ಕೆ? ಆರ್‌ಆರ್‌ಆರ್, ಕಾಶ್ಮೀರ್ ಫೈಲ್ಸ್ ಅಲ್ಲವೇ ಅಲ್ಲ!