Site icon Vistara News

Yash as Ravan : ರಾವಣನಾಗಿ ತೆರೆ ಮೇಲೆ ಬರ್ತಾರಾ ಯಶ್‌? ರಾಮನಾದ ರಣಬೀರ್‌ ಜತೆ ಕದನಕ್ಕೆ ಬೀಳ್ತಾರಾ?

yash to act as ravan

#image_title

ಬೆಂಗಳೂರು: ಯಶ್‌ ಕನ್ನಡ ಚಿತ್ರರಂಗವನ್ನು ಪ್ಯಾನ್‌ ಇಂಡಿಯಾ ಮಟ್ಟಕ್ಕೆ ತೆಗೆದುಕೊಂಡು ಹೋಗಿರುವ ಯಶಸ್ವಿ ನಟ. ಕೆಜಿಎಫ್‌ 2 ಸಿನಿಮಾ ಆದನಂತರ ಅವರು ಮತ್ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವುದು ಇದುವರೆಗೂ ತಿಳಿದುಬಂದಿಲ್ಲ. ಅವರ ಮುಂದಿನ ಸಿನಿಮಾಕ್ಕಾಗಿ ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿರುವುದಂತೂ ಸತ್ಯ. ಈ ಕುತೂಹಲದ ನಡುವೆಯೇ ಯಶ್‌ ಅವರು ಬಾಲಿವುಡ್‌ನ ರಣಬೀರ್‌ ಮತ್ತು ಆಲಿಯಾ ಭಟ್‌ ರಾಮ-ಸೀತೆಯಾಗಿ ನಟಿಸಲಿರುವ ರಾಮಾಯಣ ಸಿನಿಮಾದಲ್ಲಿ ರಾವಣನ ಪಾತ್ರದಲ್ಲಿ (Yash as Ravan) ನಟಿಸಲಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿವೆ.

ಹೌದು. ಯಶ್‌ ರಾವಣನ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಎಂದು ಕೆಲವು ಕಡೆ ಸುದ್ದಿಗಳು ಹರಿದಾಡಿದೆ. ಈ ಬಗ್ಗೆ ಕೆಲವು ಮೂಲಗಳು ಮಾಹಿತಿ ಕೊಟ್ಟಿದ್ದು, ಕೆಲವರು ಇದು ವದಂತಿ ಎನ್ನುತ್ತಿದ್ದಾರೆ. ಸದ್ಯ ಯಶ್‌ ಅವರು ತಮ್ಮ ಅಭಿಮಾನಿಗಳ ಸದಭಿರುಚಿಗೆ ತಕ್ಕಂತಹ ಸಿನಿಮಾಗಳನ್ನು ಮಾತ್ರವೇ ಮಾಡಲು ಬಯಸುತ್ತಿದ್ದಾರೆ. ಅವರನ್ನು ಅಭಿಮಾನಿಗಳು ಹೀರೋ ಆಗಿಯೇ ನೋಡಲು ಬಯಸುತ್ತಾರೆ. ಖಳನಟನಾಗಿ ನೋಡಲುಬಯಸುವುದಿಲ್ಲ. ಹಾಗಾಗಿ ಯಶ್‌ ರಾಮಾಯಣ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿಲ್ಲ ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ: Actor Yash: ರಾಮಾಯಣ ಆಧರಿಸಿದ ಸಿನಿಮಾದಲ್ಲಿ ರಣಬೀರ್‌, ಆಲಿಯಾ; ರಾಕಿಂಗ್‌ ಸ್ಟಾರ್‌ ಯಶ್‌ ಪಾತ್ರವೇನು?
ಇನ್ನೊಂದೆಡೆ ಯಶ್‌ “19ʼ ಸಿನಿಮಾದ ಬಗ್ಗೆಯೂ ಮಾತುಕತೆ ಜೋರಾಗಿಯೇ ನಡೆಯುತ್ತಿದೆ. ಆದರೆ ಈ ಸಿನಿಮಾದ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಂದಿಲ್ಲ. ನಿರ್ದೇಶಕ ನರ್ತನ್‌ ಅವರು ಈ ಸಿನಿಮಾ ನಿರ್ದೇಶಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಸದ್ಯ ನರ್ತನ್‌ ಅವರು ಶಿವರಾಜ್‌ ಕುಮಾರ್‌ ಅವರೊಂದಿಗೆ ಸಿನಿಮಾವೊಂದರಲ್ಲಿ ಬಿಜಿ ಇದ್ದಾರೆ. “19ʼ ಸಿನಿಮಾದ ಸ್ಕ್ರಿಪ್ಟ್‌ ಕೂಡ ಅಂತಿಮ ಹಂತಕ್ಕೆ ತಲುಪಿದೆ ಎನ್ನಲಾಗುತ್ತಿತ್ತು. ಆದರೆ ಅದೇ ಕಥಾಹಂದರವಿರುವ ಮತ್ತೊಂದು ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿರುವುದರಿಂದ ಸಿನಿಮಾ ಸ್ಕ್ರಿಪ್ಟ್‌ ಅನ್ನೇ ಬದಲಿಸಲಾಗುತ್ತಿದೆ ಎಂದೂ ಸುದ್ದಿಗಳಿವೆ.‌

ಇದರ ಮಧ್ಯದಲ್ಲೇ ಯಶ್‌ ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್‌ ಅವರ ಗ್ಯಾಂಗ್‌ಸ್ಟರ್‌ ಸಿನಿಮಾವೊಂದರಲ್ಲಿ ನಟಿಸಲಿದ್ದಾರೆ ಎಂದೂ ಸುದ್ದಿಗಳಿವೆ. ಈ ಬಗ್ಗೆ ಕೂಡ ಎಲ್ಲಿಯೂ ಅಧಿಕೃತ ಮಾಹಿತಿ ಸಿಕ್ಕಿಲ್ಲ. ನಟಿ ರೀಮಾ ಕಲ್ಲಿಂಗಲ್‌ ಅವರು ಮಾತ್ರವೇ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಯಶ್‌ ಅವರೊಂದಿಗೆ ಕೆಲಸ ಮಾಡಲು ಉತ್ಸುಕರಾಗಿರುವುದಾಗಿ ಹೇಳಿಕೊಂಡಿದ್ದರು.

ಕೆಜಿಎಫ್‌ 2 ಚಿತ್ರದ ದೃಶ್ಯ

ಯಶ್‌ ಅವರು ಕೊನೆಯದಾಗಿ ನಟಿಸಿದ ಕೆಜಿಎಫ್‌ 2 ಸಿನಿಮಾದ ದೊಡ್ಡ ಹಿಟ್‌ ಆಗಿತ್ತು. ಆ ಸಿನಿಮಾ ಜಾಗತಿಕವಾಗಿ 1000 ಕೋಟಿ ರೂ.ಗಳನ್ನು ಗಳಿಸಿತು. ಪ್ರಪಂಚದಾದ್ಯಂತ 10,000 ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿತ್ತು. ಸಿನಿಮಾ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಡಬ್‌ ಆಗಿ ಹಿಟ್‌ ಆಯಿತು. ಹಲವು ದಾಖಲೆಗಳನ್ನು ಬರೆಯಿತು.

Exit mobile version